ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಫುಲೆ, ಜ್ಯೋತಿರಾವ್
ಫುಲೆ, ಜ್ಯೋತಿರಾವ್ 1827-90. ಮಹಾತ್ಮ ಎಂದು ಕರೆಯಲ್ಪಟ್ಟ ಮಹಾರಾಷ್ಟ್ರದ ಒಬ್ಬ ಪ್ರಮುಖ ಸಮಾಜಸುಧಾರಕ. ಹುಟ್ಟಿದ್ದು ಪುಣೆಯಲ್ಲಿ. ತಂದೆ ಗೋವಿಂದರಾವ್. ಪೂರ್ವಜರು ಸಾತಾರಾ ಜಿಲ್ಲೆಯ ಕಟಗುಣಿ ಗ್ರಾಮದವರು. ಜಾತಿ ಮಾಲೀ ಕ್ಷತ್ರಿಯ ಜನಾಂಗ. ಮನೆತನದ ಹೆಸರು ಗೋರ್ಹೆ, ಹೂವಿನ ವ್ಯಾಪಾರ ಮಾಡುತ್ತಿದ್ದರಿಂದ ಫುಲೆ ಎಂಬ ಅಡ್ಡ ಹೆಸರು ಬಂತು. ಈತ ಹುಟ್ಟಿದ ಒಂದು ವರ್ಷದಲ್ಲಿಯೆ ತಾಯಿ ಚಿಮಣಾಬಾಯಿ ತೀರಿಕೊಂಡಳು. ಆರಂಭ ವಿದ್ಯಾಭ್ಯಾಸ ಗಾಂವಟೀ (ಪಂತೋಜೀ) ಶಾಲೆಯಲ್ಲಿ ಆಯಿತು. ಮೇಧಾವಿ ಆಗುತ್ತಿರುವುದನ್ನು ಕಂಡು, ಸಹಿಸದ ಕೆಲ ಜನ, ತಂದೆಯಲ್ಲಿ ದೂರಿತ್ತು ಶಾಲೆ ಬಿಡಿಸಿದರು. ಹೀಗಾಗಿ ಕೆಲಕಾಲ ತೋಟದ ಕೆಲಸ ಮಾಡಬೇಕಾಯಿತು. ಇಷ್ಟರಲ್ಲೇ ನೆರೆಹೊರೆಯಲ್ಲಿದ್ದ ಗಫೂರ್ ಬೇಗ್ ಮತ್ತು ಲೆಗಿಟ್ ಎಂಬ ಇಬ್ಬರು ತಂದೆಗೆ ತಿಳಿವಳಿಕೆ ನೀಡಿ ಈತ ಸ್ಕಾಟಿಷ್ ಮಿಷನ್ ಶಾಲೆಗೆ ಸೇರುವಂತೆ ಮಾಡಿದರು. ಶಾಲೆಯಲ್ಲಿ ಸದಾಶಿವ ಬಲ್ಲಾಳಗೊವಂದೆ, ಮೋರೋ ವಿಠ್ಠಲ ವಾಳ್ವೇಕರ್ ಮತ್ತು ಸಖಾರಾಮ ಯಶವಂತಪರಾಂಜಪೆ ಎಂಬುವರು ಸ್ನೇಹಿತರಾಗಿ ಈತನಿಗೆ ನೆರವು ನೀಡಿದರು. ವಿದ್ಯಾಭ್ಯಾಸದ ಕಾಲದಲ್ಲಿ ಶಿವಾಜಿ, ವಾಷಿಂಗ್‍ಟನ್ ಮತ್ತು ತಾಮಸ್ ಪೇನ್ ಇವರ ಪ್ರಭಾವ ಇವನ ಮೇಲೆ ಗಾಢವಾಗಿ ಆಯಿತು. ಪೇನನ ರೈಟ್ಸ್ ಆಫ್ ಮ್ಯಾನ್ ಈತನ ಅತ್ಯಂತ ಮೆಚ್ಚುಗೆಯ ಪುಸ್ತಕ. ದೇವರ ಮಕ್ಕಳಾದ ನಾವೆಲ್ಲರೂ ಜಾತಿಮತ ಭೇದಗಳಿಲ್ಲದೆಯೆ ಸಮಾನರು ಎಂಬ ತತ್ತ್ವ ಈತನನ್ನು ಪ್ರಬಲವಾಗಿ ಆಕರ್ಷಿಸಿತು. ಶಾಲೆಗೆ ಸೇರಿದ 5-6ವರ್ಷಗಳಲ್ಲೆ ಕಾರಣಾಂತರಗಳಿಂದ ವಿದ್ಯಾಭ್ಯಾಸವನ್ನು ಕೈಬಿಡಬೇಕಾದ ಪರಿಸ್ಥಿತಿ ಒದಗಿತು.
ಗುಲಾಮಗಿರಿ, ಅಸ್ಪøಶ್ಯತೆ ಇತ್ಯಾದಿಗಳು ಜ್ಯೋತಿಗೆ ಬಾಲ್ಯದಿಂದಲೇ ನೋವನ್ನು ಉಂಟುಮಾಡುವ ಸಂಗತಿಗಳಾಗಿದ್ದವು. ನಿಮ್ನವರ್ಗದ ತನಗೆ ಶಿಕ್ಷಣ ಪಡೆಯುವಲ್ಲಿ ಉಂಟಾದ ಕಷ್ಟಕಾರ್ಪಣ್ಯಗಳು ಪ್ರತಿಕೂಲ ಪರಿಸ್ಥಿತಿಗಳು ಇವನ ಮೇಲೆ ಅಚ್ಚಳಿಯದ ಬರೆ ಎಳೆದಿದ್ದುವು. ಶೂದ್ರ—ಅತಿಶೂದ್ರ ಪ್ರಶ್ನೆ ಮನಸ್ಸಿಗೆ ನಾಟಿ, ಭಾರತದಲ್ಲಿ ಯುಗಯುಗಗಳಿಂದ ಜನತೆಯಲ್ಲಿ ಮಾನಸಿಕ ಗುಲಾಮಗಿರಿಯ ವ್ಯವಸ್ಥೆ ಬ್ರಾಹ್ಮಣ ಸಮಾಜದಿಂದ ಆಯಿತು ಎಂಬುದಾಗಿ ಮತ್ತು ಪುರೋಹಿತಶಾಹಿಯೆ ಅವರ ಸಾಮಾಜಿಕವಾದ ಅಧಃಪತನಕ್ಕೂ ಹಾಗೂ ದೈನ್ಯ-ದುಃಖಗಳಿಗೂ ಕಾರಣ ಎಂಬುದಾಗಿಯೂ ತೋರಿತು. ಇವುಗಳ ವಿರುದ್ಧ ಜ್ಯೋತಿ ಪ್ರಬಲ ಚಳವಳಿಯನ್ನೇ ಆರಂಭಿಸಿದ. ಸಮಾಜಸುಧಾರಣೆಯನ್ನೊಪ್ಪಿದ ಬ್ರಾಹ್ಮಣರೆಲ್ಲರೂ ಈತನ ಸ್ನೇಹಿತರಾದರು. ಆರ್.ಜಿ.ಭಂಡಾರಕರ್, ನ್ಯಾಯಮೂರ್ತಿ ರಾನಡೆ ಮೊದಲಾದವರು ಇವನ ಕೆಲಸವನ್ನು ವಿಶೇಷವಾಗಿ ಪ್ರಶಂಸಿಸಿದರು.
ಶಿಕ್ಷಣ ಪ್ರಸಾರದ ವಿನಾ ಭಾರತೀಯ ಸ್ತ್ರೀಯರ ಹಾಗೂ ನಿಮ್ನವರ್ಗಗಳ ಜನರ ಉದ್ಧಾರ ಅಶಕ್ಯ ಎಂಬುದನ್ನು ಕಂಡುಕೊಂಡ ಜ್ಯೋತಿ 1848ರಲ್ಲಿ ಪುಣೆಯ ಬುಧವಾರ ಪೇಟೆಯಲ್ಲಿ ಹೆಣ್ಣು ಮಕ್ಕಳ ಶಾಲೆಯೊಂದನ್ನು ಸ್ಥಾಪಿಸಿದ. ಸ್ತ್ರೀಶಿಕ್ಷಕರ ಕೊರತೆಯನ್ನು ನಿವಾರಿಸಲು ಮೊದಲು ತನ್ನ ಹೆಂಡತಿ ಸಾವಿತ್ರಿಬಾಯಿಗೇ ತರಬೇತಿ ನೀಡಿದ. ಹೆಣ್ಣು ಮಕ್ಕಳಿಗೆ ಅಭ್ಯಾಸ ಮಾಡಿಸುವುದು ಆಗಿನ ಪರಿಸರದಲ್ಲಿ ದೊಡ್ಡ ಅಪರಾಧವೇ ಆಗಿತ್ತು. ಮೇಲಿನ ವರ್ಗದ ಪ್ರತಿಷ್ಠಿತ ಜನ ಈತನ ಕಾರ್ಯದ ಬಗ್ಗೆ ಸಿಟ್ಟಿಗೆದ್ದು ತಂದೆಗೆ ದೂರಿತ್ತರು. ಇದರಿಂದಾಗಿ ಈತ ಮನೆ ಬಿಡಬೇಕಾಯಿತು. 1851ರಲ್ಲಿ ಡೆಕ್ಕನ್ ಪ್ರೈಜ್ ಕಮಿಟಿ ಮತ್ತು ಕೆಲ ಇಂಗ್ಲಿಷ್ ಹಾಗೂ ಭಾರತೀಯರ ಸಹಾಯ ಪಡೆದು ಬುಧವಾರಪೇಟೆ ಹಾಗೂ ರಾಸ್ತಾಪೇಟೆಗಳಲ್ಲಿ ಹೆಣ್ಣು ಮಕ್ಕಳ ಶಾಲೆಗಳನ್ನು ಸ್ಥಾಪಿಸಿದ. 1852ರಲ್ಲಿ ವಿಠ್ಠಲ ಪೇಟೆಯಲ್ಲಿ ಇನ್ನೊಂದು ಶಾಲೆ ಪ್ರಾರಂಭವಾಯಿತು. ಇದೇ ಸಮಯಕ್ಕೆ ವೇತಾಲಪೇಟೆಯಲ್ಲಿ ಅಸ್ಪøಶ್ಯರ ಹಾಗೂ ಎಲ್ಲ ಬಗೆಯ ಅತಿಶೂದ್ರವರ್ಗದ ಜನರಿಗೆಂದು ಒಂದು ಶಾಲೆ ಏರ್ಪಟ್ಟಿತು. ಈ ಶಾಲೆಗಳ ಉಸ್ತುವಾರಿಗೆಂದು ಕಾರ್ಯಕಾರಿ ಮಂಡಲವೊಂದು ಅಸ್ತಿತ್ವಕ್ಕೆ ಬಂತು.
ಜ್ಯೋತಿ, ಶಿಕ್ಷಣ ಕ್ಷೇತ್ರದಲ್ಲಿ ಸುಧಾರಣೆ ಕೆಲಸ ನಡೆಸಿದ್ದರ ಜೊತೆಗೆ ಸಮಾಜದಲ್ಲಿ ವಿಧವಾ ವಿವಾಹ, ಕೇಶವಪನ ನಿಷೇಧ, ಬಾಲಹತ್ಯಾ ಪ್ರತಿಬಂಧ, ದ್ವಿಭಾರ್ಯ ಪ್ರತಿಬಂಧ ಇತ್ಯಾದಿ ಸುಧಾರಣೆಯ ಕೆಲಸಗಳನ್ನೂ ಆರಂಭಿಸಿದ. ಅಸ್ಪøಶ್ಯರಿಗೆ ಕುಡಿಯುವ ನೀರಿನ ತೊಂದರೆಯುಂಟಾದಾಗ ತನ್ನ ಮನೆಯಲ್ಲಿನ ನೀರಿನ ತೊಟ್ಟಿಯನ್ನೇ ಬಿಟ್ಟುಕೊಟ್ಟ. ಸಮಗ್ರ ಹಿಂದೂಧರ್ಮದ ಆಚಾರವಿಚಾರಗಳ ಸಂಬಂಧದಲ್ಲಿ ಜ್ಯೋತಿಗೆ ಅತ್ಯಂತ ಕಟುವಾದ ದ್ವೇಷ ಮೂಡಿತ್ತು. ಅಂತೆಯೆ 1857ರಲ್ಲಿ ssಸ್ವಾತಂತ್ರ್ಯ ಸಂಗ್ರಾಮ ಅಯಶಸ್ವಿಯಾದಾಗ ಆನಂದಪಟ್ಟುದಲ್ಲದೆ ಆಂಗ್ಲರು ಸೋತಿದ್ದರೆ ಮತ್ತೆ ಬ್ರಾಹ್ಮಣ ಪೇಶ್ವೆಯವರ ರಾಜ್ಯ ಮತ್ತು ಶ್ರುತಿಸ್ಮøತಿ ಪುರಾಣಗಳಲ್ಲಿ ನಿರೂಪಣೆಗೊಂಡ ಧಾರ್ಮಿಕ ಸಂಸ್ಕøತಿಗಳ ಪುನರವತಾರದ ಮೂಲಕ ಬ್ರಿಟಿಷರ ಆಡಳಿತೆಯಲ್ಲಿ ಸಮಾಜದಲ್ಲಿ ಹುಟ್ಟಿದ ಸುಧಾರಣೆಯ ಶಿಶುವಿನ ಕೊಲೆ ಆಗುತ್ತಿತ್ತೆಂದು ಸಾರಿದ. ಸಮಾಜ ಸುಧಾರಣೆಗೆಂದು ಸತ್ಯಶೋಧಕ ಸಮಾಜ ಎಂಬ ಸಂಸ್ಥೆಯನ್ನು ಸ್ಥಾಪಿಸಿದ. ತನ್ನ ತತ್ತ್ವಪ್ರಚಾರಕ್ಕೆಂದು ಬ್ರಾಹ್ಮಣಾಚೆ ಕಸಬ, ಗುಲಾಮಗಿರಿ, ಇಶಾರಾ ಸಾರ್ವಜನಿಕ ಸತ್ಯಧರ್ಮ, ಶಿವಾಜಿಚಾ ಪವಾಡಾ, ಶೇತ್ಕರೀಚಾ ಆಸೂಡ, ಜಾತಿಭೇದ, ವಿವೇಕಸಾರ ಮತ್ತು ಅಸ್ಪøಶ್ಯಾಂಚಿ ಕೈಫಿಯತ್ ಮುಂತಾದ ದೊಡ್ಡ ದೊಡ್ಡ ಪುಸ್ತಕಗಳನ್ನು ಬರೆದು ಪ್ರಕಟಿಸಿದ.
ಕ್ರೈಸ್ತ ಹಾಗೂ ಇಸ್ಲಾಂ ಧರ್ಮಗಳನ್ನು ಅವುಗಳಲ್ಲಿರುವ ಸಾಮಾಜಿಕ ಸಮಾನತೆಯ ಗುಣಕ್ಕಾಗಿ ಈತ ವಿಶೇಷ ಪ್ರೀತಿಸುತ್ತಿದ್ದ. ಆದರೂ ಹಿಂದೂಧರ್ಮದಿಂದ ಮತಾಂತರ ಹೊಂದಲಿಲ್ಲ. ಈತನ ಷಷ್ಟ್ಯಬ್ದಿ ಸಮಾರಂಭದಲ್ಲಿ ಮುಂಬಯಿ ಸರ್ಕಾರ ಈತನಿಗೆ ಮಹಾತ್ಮ ಎಂಬ ಪದವಿಯನ್ನು ಕೊಟ್ಟು ಶಾಲು ಹೊದಿಸಿ ಗೌರವಿಸಿತು. (1) ಈಶ್ವರ ಸರ್ವವ್ಯಾಪಿಯಾದುದರಿಂದ ಎಲ್ಲ ಮನುಷ್ಯ ಪ್ರಾಣಿಗಳೂ ಆತನ ಪ್ರೇಮವನ್ನು ಪಡೆದೇ ಇರುತ್ತವೆ. (2) ಈಶ್ವರನಲ್ಲಿ ಎಲ್ಲರೂ ತಮ್ಮ ಭಕ್ತಿಯನ್ನು ಅರ್ಪಿಸಬಹುದಾದ್ದರಿಂದ ಎಲ್ಲರೂ ಉತ್ತಮರೆ ವಿನಾ ಮನುಷ್ಯ ಜಾತಿಯಲ್ಲಿ ಜಾತಿಯಿಂದ ಶ್ರೇಷ್ಠವೆಂಬುದಾಗಲಿ ಕನಿಷ್ಠವೆಂಬುದಾಗಲಿ ಇಲ್ಲ. (3) ಯಾವುದೆ ಗ್ರಂಥ ಸರ್ವರಿಗೂ ಪ್ರಮಾಣ ಗ್ರಂಥವಾಗಲಾರದು ಮತ್ತು ಅದು ಈಶ್ವರಪ್ರಣೀತ ಎಂಬುದೂ ಸರಿಯಲ್ಲ. (4) ಪುನರ್ಜನ್ಮ, ಕರ್ಮಕಾಂಡ, ಜಪತಪ ಮುಂತಾದವುಗಳೆಲ್ಲ ಅಜ್ಞಾನದ ಮೂಲಕ ಉಂಟಾದವು ಎಂಬ ನಾಲ್ಕು ತತ್ತ್ವಪ್ರಣಾಲಿಗಳನ್ನು ಈತ ಪ್ರತಿಪಾದಿಸಿದ. ಆಧುನಿಕ ಮಹಾರಾಷ್ಟ್ರದ ಸಾಮಾಜಿಕ ಜೀವನದಲ್ಲಿ ಕ್ರಾಂತಿಬೀಜ ಬಿತ್ತಿದ ಐತಿಹಾಸಿಕ ಪುರುಷರಲ್ಲಿ ಈತ ಶ್ರೇಷ್ಠ ಸ್ಥಾನವನ್ನು ಪಡೆದಿದ್ದಾನೆ. ಸ್ವತಃ ಸತ್ಯದ ಬಗೆಗೆ ಹೇಳಿದಂತೆ ಈತ ಆಚರಿಸಿದ ಕೂಡ. (ಎಸ್.ಎಸ್.ಜೆಎ.)