ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಫ್ರಿನಿಕಸ್

ವಿಕಿಸೋರ್ಸ್ದಿಂದ

ಫ್ರಿನಿಕಸ್ - ಪ್ರಾಚೀನ ಗ್ರೀಕ್ ಸಾಹಿತ್ಯ ಚರಿತ್ರೆಯಲ್ಲಿ ಈ ಹೆಸರಿನ ಮೂರು ಜನರಿದ್ದಾರೆ.

1 ಕ್ರಿ.ಪೂ. 5ನೆಯ ಶತಮಾನದ ಮೊದಲ ಭಾಗದಲ್ಲಿದ್ದ ದುರಂತ ನಾಟಕಗಳ ಕರ್ತೃವೆಂದು ಪ್ರಸಿದ್ದನಾಗಿದ್ದ ನಾಟಕಕಾರ. ಈಸ್ಕೈಲಸ್ನ ಸಮಕಾಲೀನ. ಅಥೆನ್ಸ್ ನಗರದವ. ನಾಟಕಗಳ ಪ್ರಯೋಗದಲ್ಲಿ ಅನೇಕ ನವೀನ ತಂತ್ರಗಳನ್ನು ಅಳವಡಿಸಿ ಮಹತ್ತರವಾದ ಸುಧಾರಣೆಗಳನ್ನೂ ಮಾಡಿದವ. ಸ್ತ್ರೀ ಪಾತ್ರಗಳನ್ನೂ ಸ್ತ್ರೀ ಮುಖವಾಡಗಳನ್ನೂ ನಾಟಕಗಳಲ್ಲಿ ತಂದ ಮೊದಲಿಗ. ಕ್ಯಾಪ್ಚರ್ ಆಫ್ ಮಿಲಿಟಸ್; ಫಿನಿಸ್ಸೆ ಎಂಬುವು ಈತನ ಎರಡು ಪ್ರಸಿದ್ಧ ರುದ್ರ ನಾಟಕಗಳು. ಡಾನೇಯ್ಡಿಸ್, ಈಜಿಪ್ಟೈ ಎಂಬ ನಾಟಕಗಳು ಈಸ್ಕೈಲಸ್‍ನ ನಾಟಕದ ಮಾದರಿಯಲ್ಲೇ ಇವೆ. ಆಲ್ಸಿಟಿಸ್ ಎಂಬ ನಾಟಕ ಯೋರಿಪಿಡೀಸ್‍ನ ನಾಟಕಗಳ ಮುನ್ಸೂಚನೆಯಂತಿದೆ. ಮಿಲಿಟಸ್‍ನ ಪತನದ (ಕ್ರಿ.ಪೂ. 496) ಅನಂತರ ಅದೇ ವಸ್ತುವನ್ನು ಬಳಸಿಕೊಂಡು ಕ್ಯಾಪ್ಚರ್ ಆಫ್ ಮಿಲಿಟಸ್ ಎಂಬ ನಾಟಕವನ್ನು ರಚಿಸಿದ. ಅದಕ್ಕಾಗಿ ಒಂದು ಸಾವಿರ ಡಾಕ್ಮಾಗಳ ದಂಡ ತೆರಬೇಕಾಯಿತು. 476ರಲ್ಲಿ ಈತನ ಫೀನಿಸ್ಸೆ ನಾಟಕಕ್ಕೆ ಬಹುಮಾನ ದೊರಕಿತು. ಇದರ ವಸ್ತು ಸಾಲಾಮಿಸ್ ಕದನದ ವಾರ್ತೆ. ಅರಿಸ್ಟೋಫೇನಸ್ ತನ್ನ ವಾಸ್ಟ್ ಅಂಡ್ ಬಡ್ರ್ಸ್‍ನಲ್ಲಿ ಫ್ರಿನಿಕಸ್‍ನ ಗೀತೆಗಳನ್ನು ನೆನೆದಿದ್ದಾನೆ.

2 ಇನ್ನೊಬ್ಬ ಕ್ರಿ.ಪೂ. 5ನೆಯ ಶತಮಾನದ ಕೊನೆಯಲ್ಲಿದ್ದ ಹರ್ಷನಾಟಕಗಳನ್ನು ಬರೆದ ಕರ್ತೃ. ಅರಿಸ್ಟೋಫೆನಸ್‍ನ ಸಮಕಾಲೀನ. ಎರಡು ಯುದ್ಧಗಳಲ್ಲಿ ಭಾಗವಹಿಸಿ ಗೆದ್ದು ಬಂದಿದ್ದ. ಈತನ ಅತ್ಯಂತ ಶ್ರೇಷ್ಠ ನಾಟಕ ಮ್ಯೂಜಸ್ ಅರಿಸ್ಟೋಫೇನಸ್‍ನ ಫ್ರಾಗ್ಸ್ ಎಂಬ ಲೋಕ ಪ್ರಸಿದ್ಧವಾದ ನಾಟಕಕ್ಕೆ ದ್ವಿತೀಯವಾದುದು. ಈತನ ಇತರ ಕೃತಿಗಳಲ್ಲಿ ಬಡ್ರ್ಸ್ ಮತ್ತು ಮಾನೊ ಟ್ರೊಪೊಸ್ (ದಿ ಸಾಲಿಟರಿ) ಮುಖ್ಯವಾದವು. ಸಾಫೋಕ್ಲಿಸ್ ಮತ್ತು ಯೂರಿಪಿಡೀಸರ ನಾಟಕಗಳ ಸ್ಪರ್ಧೆಯಲ್ಲಿ ಈತ ಅಧ್ಯಕ್ಷನಾಗಿದ್ದ. ಈತ ಕೇವಲ ನಗಿಸುವ ಉದ್ದೇಶದಿಂದ ಕೀಳ್ಮಟ್ಟದ ತಂತ್ರಗಳನ್ನು ಬಳಸುತ್ತಾನೆಂದೂ ಕೃತಿಚೋರನೆಂದೂ ಕೆಟ್ಟ ಪದ್ಯ ಬರೆದವನೆಂದೂ ಅರಿಸ್ಟೋಫೇನಸ್ ತನ್ನ ಫ್ರಾಗ್ಸ್ ನಾಟಕದಲ್ಲಿ ಲೇವಡಿ ಮಾಡಿದ್ದಾನೆ.

3 ಮೂರನೆಯ ಬಿತೀನಿಯದವ. ಕ್ರಿ.ಶ. ಎರಡನೆಯ ಶತಮಾನಕ್ಕೆ ಸೇರಿದ ವೈಯಾಕರಣಿ. ಈತನ ಪೂರ್ಣ ಹೆಸರು ಫ್ರಿನಿಕಸ್ ಅರೇಬಿಯಸ್. ಸೋಫಿಸ್ಟಿಕ್ ಪ್ಯೆರಾಸ್ಕ್ಯೊ ಅಲಂಕಾರಶಾಸ್ತ್ರದ ಭದ್ರವಾದ ತಳಹದಿ ಹಾಕುವ ಪ್ರಥಮ ಪಾಠಗಳ ಗ್ರಂಥ. ಇದರ ಕೆಲವು ಭಾಗಗಳು ಮಾತ್ರ ದೊರತಿವೆ. ಎಕ್‍ಲೋಗೆ ಎಂಬ ಹೆಸರಿನಲ್ಲಿ ಪ್ರಾಚೀನ ಅಟ್ಟಿಕ್‍ನಿಂದ ಬೇರೆಯಾದ ಸಮಕಾಲೀನ ಶಬ್ದಗಳ ಬಳಕೆಯನ್ನು ಟೀಕಿಸಿದ್ದಾನೆ. ಈತನದು ಆಡಂಬರದ ಶೈಲಿ. ಆದರೆ ವಿಮರ್ಶಾ ಪ್ರಜ್ಞೆ ಖಚಿತವಾದದು, ವಿದ್ವತ್ಪೂರ್ಣವಾದುದು. ತನ್ನ ಕಾಲದ ಬಳಕೆ ಭಾಷೆಯನ್ನು ಕುರಿತು ಈತನ ವಿವರಣೆ ವ್ಯಾಖ್ಯಾನಗಳು ತುಂಬಾ ಉಪಯುಕ್ತವಾದುವುಗಳು. ಈತನ ಬರೆಹಗಳ ಪೂರ್ಣಪಾಠಗಳು ಲಭ್ಯವಾಗಿಲ್ಲ. (ಕೆ.ಬಿ.ಪಿ.)