ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಫ್ರಿಯರ್, ಜಾನ್

ವಿಕಿಸೋರ್ಸ್ದಿಂದ

ಫ್ರಿಯರ್, ಜಾನ್ 1740-1807. ಇಂಗ್ಲೆಂಡಿನ ಪ್ರಾಚೀನಾನ್ವೇಷಕ. ಪ್ರಾಗೈತಿಹಾಸಿಕ ಪುರಾತತ್ವದ ಒಬ್ಬ ಪ್ರವರ್ತಕ. ಇಂಗ್ಲೆಂಡಿನ ಉತ್ತರ ಸಫಕ್‍ನ ಹಾಕ್ಸನ್‍ನಲ್ಲಿಯ ಪೂರ್ವಶಿಲಾಯುಗ ನಿವೇಶನವನ್ನು ಕಂಡುಹಿಡಿದ. 1790ರಲ್ಲಿ ಆ ನಿವೇಶನದಲ್ಲಿ ಅನೇಕ ಶಿಲಾಯುಧಗಳನ್ನೂ ನಿರ್ವಂಶಿ ಪ್ರಾಣಿಗಳ ಮೂಳೆಗಳನ್ನೂ ಮೊದಲ ಬಾರಿಗೆ ಸಂಶೋಧಿಸಿ ಹೊರತೆಗೆದವನು. ಈತ ಸಫಕ್‍ನ ನಾರ್ಫಕ್‍ನ ರಾಯಡನ್ ಹಾಲ್‍ನಲ್ಲಿ 1740ರ ಆಗಸ್ಟ್ 10ರಂದು ಜನಿಸಿದ. 1799ರಲ್ಲಿ ಇಂಗ್ಲೆಂಡಿನ ಪಾರ್ಲಿಮೆಂಟಿನಲ್ಲಿ ಈತ ನಾರ್ವಿಟಾನ್ ಪ್ರತಿನಿಧಿಯಾಗಿದ್ದ. ಪುರಾತತ್ವದಲ್ಲಿ ಅಪಾರ ಆಸಕ್ತಿಯುಳ್ಳವನಾಗಿದ್ದ ಈತ 1771ರಲ್ಲಿ ರಾಯಲ್ ಸೊಸೈಟಿ ಆಫ್ ಆಂಟಿಕ್ವರೀಸ್‍ನ ಸಕ್ರಿಯ ಸದಸ್ಯನಾದ. 1790ರಲ್ಲಿ ಹ್ಯಾಕ್ಸನ್‍ನಲ್ಲಿ ಉತ್ಖನನ ನಡೆಸಿದಾಗ ಇವನಿಗೆ ನಿರ್ವಂಶಿ ಪ್ರಾಣಿಗಳ ಮೂಳೆಗಳ ಜೊತೆಗೆ ಚಕ್ಕೆಕಲ್ಲಿನ ಆಯುಧಗಳೂ ದೊರಕಿದುವು. ಮುಂದೆ ಪುರಾತತ್ವ ವಿಧಾನದಲ್ಲಿ ಆಗಬಹುದಾದ ಬದಲಾವಣೆಗಳನ್ನು ನಿರೀಕ್ಷಿಸಿ ಈತ ನೆಲದಲ್ಲಿ ಇವುಗಳು ಇದ್ದ ಪದರಗಳ ವಿವರಗಳನ್ನು ಎಚ್ಚರಿಕೆಯಿಂದ ಬರೆದಿಟ್ಟುಕೊಂಡ, ಈ ಸ್ಥಳ ಬ್ರಿಟನ್ನಿನ ಪ್ಲೀಸ್ಟೋಸೀನ್ ಯುಗದ ಅಧ್ಯಯನಕ್ಕೆ ಪ್ರಮುಖ ನೆಲೆಯಾಗಿದೆ.

ಈ ಶೋಧನೆ ಬ್ರಿಟನ್ನಿನ ಪ್ಲೀಸ್ಟೋಸೀನ್ ಕಾಲ ಪರಿಗಣನೆಗೆ ಬಹು ಸಹಾಯಕಾರಿಯಾಯಿತು. ಅಲ್ಲದೆ ಈ ಪ್ರಾಚೀನ ಶಿಲಾಯುಧಗಳ ಶೋಧದಿಂದ ಬ್ರಿಟಿಷ್ ಪುರಾತತ್ವದ ಪ್ರಾಚೀನತೆಯ ಮೇಲೂ ವಿಶೇಷ ಬೆಳಕು ಚೆಲ್ಲಿದಂತಾಯಿತು. ಭೂಮಿ ಕ್ರಿ.ಪೂ 4004ರಲ್ಲಿ ಸೃಷ್ಟಿಯಾಯಿತೆಂಬುದು ಆಗಿನ ನಂಬಿಕೆಯಾಗಿತ್ತು. ಈ ಉತ್ಖನನದ ಬಗ್ಗೆ 1797ರಲ್ಲಿ ವರದಿ ಮಾಡುವಾಗ ಈತ ಈ ವಸ್ತುಗಳು ಕ್ರಿ.ಪೂ. 4004ಕ್ಕಿಂತ ಹಿಂದಿನವಿರಬಹುದೆಂದು ಹೇಳಿದ. ಇವನ ಅಭಿಪ್ರಾಯವನ್ನು ಯಾರೂ ತೀವ್ರವಾಗಿ ಗಮನಿಸಿಲ್ಲ. ಸುಮಾರು 60 ವರ್ಷಗಳಾದ ಮೇಲೆ ಇವನ ಅಭಿಪ್ರಾಯಕ್ಕೆ ಮನ್ನಣೆ ದೊರಕಿತು. ಪುರಾತತ್ವ ಪ್ರಪಂಚದಲ್ಲಿ ಇವನಿಗೆ ವಿಶೇಷ ಮರ್ಯಾದೆಯ ಸ್ಥಾನ ಪ್ರಾಪ್ತವಾಯಿತು. (ಎಚ್.ಆರ್.ಆರ್.ಬಿ.)