ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಫ್ರೀಡ್ರೀಚ್, ನಿಕೊಲಾಸ್

ವಿಕಿಸೋರ್ಸ್ದಿಂದ

ಫ್ರೀಡ್ರೀಚ್, ನಿಕೊಲಾಸ್ 1825-82. ಜರ್ಮನಿಯ ನರವಿಜ್ಞಾನಿ. ಐಚ್ಛಿಕ ಸ್ನಾಯುಗಳ ಸಹವರ್ತನ ಲೋಪದಿಂದ (ಇನ್‍ಕೋಆರ್ಡಿನೇಷನ್) ಉದ್ಭವಿಸುವ ತೊದಲುಮಾತು, ಕಾಲುಗಳ ನಿಷ್ಪ್ರಯೋಜಕತೆ, ಬೆನ್ನಿನ ಪಕ್ಕಡೊಂಕು ಬಾಗು ಇತ್ಯಾದಿ ಲಕ್ಷಣಕೂಟ ಉಳ್ಳ ವಂಶಾನುಗತ ರೋಗವನ್ನು ಮೊತ್ತಮೊದಲಿಗೆ ವಿವರಿಸಿದ. ಈ ರೋಗಕ್ಕೆ ಮುಂದೆ ಫ್ರೀಡ್ರೀಚಿನ ಅಟಾಕ್ಸಿಯ ಎಂಬ ಹೆಸರಿತ್ತರು. ಕಾರಣಾಂತರದಿಂದ ಮಿದುಳುಬಳ್ಳಿ ಭಾಗಶಃ ಶಿಥಿಲಗೊಳ್ಳವುದರಿಂದ ಈ ಲಕ್ಷಣ ಕೂಟ ಉಂಟಾಗುತ್ತದೆ ಎಂದು ತಿಳಿದಿದೆ. ಶ್ವಾಸಕೋಶ ಡೊಗರುಬಿದ್ದಿರುವ ಸಂದರ್ಭಗಳಲ್ಲಿ ವ್ಯಕ್ತಿ ಉಸಿರಾಡುವಾಗ ಎದೆಯ ಮೇಲೆ ಬೆರಳಿಟ್ಟು ಇನ್ನೊಂದು ಕೈ ಬೆರಳಿನಿಂದ ಮೆಲ್ಲಗೆ ಅದನ್ನು ಸಂಘಟ್ಟಿಸಿದರೆ ಕೇಳಿಬರುವ ಶಬ್ದದ ವ್ಯತ್ಯಾಸವನ್ನೂ ಫ್ರೀಡ್ರೀಚ್ ಮೊತ್ತಮೊದಲಾಗಿ ತಿಳಿಯಪಡಿಸಿದ. ಇದಕ್ಕೆ ಫ್ರೀಡ್ರೀಚಿನ ಚಿಹ್ನೆ (ಸೈನ್) ಎಂದು ಹೆಸರು. ಇವನು ಹೃದ್ರೋಗತಜ್ಞನೆಂದೂ ಹೆಸರು ಗಳಿಸಿದ್ದ. (ಎಸ್.ಆರ್.ಆರ್.)