ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಫ್ರೆಂಕೆಲ್ - ಕೊನ್ರಾಟ್, ಹೈನ್ಝ್‌

ವಿಕಿಸೋರ್ಸ್ದಿಂದ

ಫ್ರೆಂಕೆಲ್ - ಕೊನ್ರಾಟ್, ಹೈನ್ಝ್ 1910_. ಆರ್ಮನ್-ಅಮೆರಿಕನ್ ಜೀವರಸಾಯನವಿಜ್ಞಾನಿ. ಆನನ 29-7-1910. 1934ರಲ್ಲಿ ಎಂ.ಡಿ. ಪದವಿ ಪಡೆದ ಅನಂತರ ಬ್ರಿಟನ್ನಿನ ಪ್ರಖ್ಯಾತ ಎಡಿನ್ಬರೋ ವಿಶ್ವವಿದ್ಯಾಲಯದಲ್ಲಿ ಜೀವರಸಾಯನವಿಜ್ಞಾನದಲ್ಲಿ ಸಂಶೋಧನೆ ಮಾಡಿ ಪಿಎಚ್.ಡಿ. ಪದವಿ ಗಳಿಸಿದರು. ನಾಟ್ಸೀ ಜರ್ಮನಿಯನ್ನು ತೊರೆದ ಫ್ರೆಂಕೆಲ್-ಕೊನ್ರಾಟ್ ಅವರ ಮುಂದಿನ ಬದುಕೆಲ್ಲ ಹೆಚ್ಚು ಕಡಿಮೆ ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಸಾಗಿದೆ. ಈಗ ಅವರು ಕ್ಯಾಲಿಫೋರ್ನಿಯ ವಿಶ್ವವಿದ್ಯಾಲಯ, ಬಕ್ರ್ಲೆಯಲ್ಲಿ ಆಣವಿಕ ಜೀವ ವಿಜ್ಞಾನ ವಿಭಾಗದಲ್ಲಿ ಪ್ರೊಫೆಸರ್ ಆಗಿದ್ದಾರೆ.

ಜೀವಿಗಳಲ್ಲಿರುವ ಬೃಹದಣುಗಳ ರಚನೆಗೂ ಅವು ನಿರ್ವಹಿಸುವ ಕಾರ್ಯಗಳಿಗೂ ಇರುವ ಸಂಬಂಧ ಅರಿಯಲು ಪ್ರಯತ್ನಿಸಿರುವ ಫ್ರೆಂಕೆಲ್-ಕೊನ್ರಾಟ್ ಆ ದಿಶೆಯಲ್ಲಿ ಗಣನೀಯ ಪ್ರಗತಿ ಸಾಧಿಸಿದ್ದಾರೆ. ಜೀವಿಗಳು ಸಂತಾನ ಉತ್ಪತ್ತಿಮಾಡುವ ಸಾಮಥ್ಯವನ್ನು ಪಡೆದಿವೆ. ಅನುವಂಶಿಕತೆಯ ಗುಟ್ಟನ್ನು ಆಣವಿಕ ಮಟ್ಟದಲ್ಲಿ ಅರಿಯುವ ಸಾಧನೆಯನ್ನು ಪ್ರಾರಂಭಿಸಿದವರಲ್ಲಿ ಫ್ರೆಂಕೆಲ್-ಕೊನ್ರಾಟ್ ಒಬ್ಬರು. ಇವು ಕೇವಲ ಪ್ರೋಟೀನ್ ಮತ್ತು ರೈಬೊನ್ಯೂಕ್ಲಿಯಿಕ್ ಆಮ್ಲಗಳಿಂದ (ಆರ್‍ಎನ್‍ಎ) ಸಂಘಟಿತವಾಗಿವೆ. ವೈರಸ್ಯಗಳು ಸಾಮಾನ್ಯವಾಗಿ ಪ್ರಾಣಿ ಅಥವಾ ಸಸ್ಯಗಳ ಕೋಶಗಳ ಒಳಹೊಕ್ಕು ಅವುಗಳಲ್ಲಿರುವ ಪ್ರೋಟೀನ್ ಮತ್ತು ನ್ಯೂಕ್ಲಿಯಿಕ್ ಆಮ್ಲಗಳನ್ನು ತಮ್ಮ ಸಂತಾನಾಭಿವೃದ್ಧಿಗೆ ಬಳಸಿಕೊಳ್ಳುತ್ತವೆ. ಇದನ್ನೇ ನಾವು ಸೋಂಕು ಎಂದು ಕರೆಯುವುದಾಗಿದೆ. ಸೋಂಕನ್ನು ಉಂಟುಮಾಡಲು ಪ್ರೋಟೀನ್ ಬೇಕೇ ಆರ್‍ಎನ್‍ಎಸಾಕೇ ಎಂಬ ಪ್ರಶ್ನೆ ನಿರ್ಧರಿಸಲು ಫ್ರಂಕೆಲ್-ಕೊನ್ರಾಟ್ ಹೊಗೆಸೊಪ್ಪಿನ ಎಲೆಗೆ ಸೋಂಕು ಉಂಟುಮಾಡುವ ಟೊಬ್ಯಾಕೋ ಮೊಸಾಯಿಕ್ ವೈರಸ್ಸನ್ನು ಪರೀಕ್ಷಾ ವಸ್ತುವಾಗಿ ಆಯ್ದರು. ಇದನ್ನು ರಾಸಾಯನಿಕ ವಿಧಾನಗಳಿಂದ ವಿಭಜಿಸಿ ಪ್ರೋಟೀನ್ ಮತ್ತು ಆರ್‍ಎನ್‍ಎ ಬೃಹದಣುಗಳನ್ನು ಪ್ರತ್ಯೇಕಿಸಿದರು. ಪ್ರೋಟೀನಿಗೆ ಸೋಂಕು ಉಂಟುಮಾಡುವ ಸಾಮಥ್ರ್ಯವಿಲ್ಲ. ಆರ್‍ಎನ್‍ಎ ಅಣು ಸ್ವಲ್ಪ ಮಟ್ಟಿಗೆ ಈ ಸಾಮಥ್ರ್ಯ ಉಳಿಸಿಕೊಂಡಿರುತ್ತದೆ. ಪ್ರತ್ಯೇಕಿಸಿದ ಇವೆರಡು ಅಣುಗಳನ್ನು ಮತ್ತೆ ಒಂದುಗೂಡಿಸಿ ಸೋಂಕು ಉಂಟುಮಾಡುವ ಸಾಮಥ್ರ್ಯವುಳ್ಳ ವೈರಸ್ಸನ್ನು ಪುನರುಜ್ಜೀವಿಸಬಹುದು.

ಈ ಸಂಶೋಧನೆ ತಳಿವಿಜ್ಞಾನವನ್ನು ಆಣವಿಕ ಮಟ್ಟದಲ್ಲಿ ಅನ್ವೇಷಿಸಲು ಎಡೆಮಾಡಿಕೊಟ್ಟಿತು. ಮಹತ್ತರವಾದ ಈ ಕಾರ್ಯಕ್ಕೆ ಫ್ರೆಂಕೆಲ್-ಕೋನ್ರಾಟ್ ಅವರಿಗೆ ಲಾಸ್ಕರ್ ಬಹುಮಾನ ದೊರೆಯಿತು.

ಇವರ ಸಂಶೋಧನೆ ಬೇರೆ ಕ್ಷೇತ್ರಗಳಿಗೂ ವ್ಯಾಪಿಸಿತ್ತು. ಎಡಿನ್‍ಬರೋದಲ್ಲಿ ಇವರು ಎರ್ಗಟ್ ಆಲ್ಕೋಲಾಯ್ಡುಗಳು ಮತ್ತು ತಯಮೀನ್ ಇವನ್ನು ಕುರಿತು ಕೆಲಸ ಮಾಡಿದ್ದರು. ಪಪಾಯಿ ಗಿಡದಿಂದ ಪಡೆಯುವ ಪಪೇನ್ ಎಂಬ ಇಂಥ ಕಿಣ್ವ ಪಪ್ಟೈಡ್ ಬಂಧಗಳನ್ನು ಮುರಿಯುವುದು ಮಾತ್ರವಲ್ಲದೆ ನಿರೀಕ್ಷಣೆಗೆ ವಿರುದ್ಧವಾಗಿ ಇವೇ ಬಂಧನಗಳನ್ನು ಪುನಃ ಜೋಡಿಸುತ್ತದೆ ಕೂಡ ಎಂಬುದನ್ನು ಶೋಧಿಸಿದರು. ನರಗಳ ಪಟುತ್ವ ಕುಗ್ಗಿಸಬಲ್ಲ ಹಾಗೂ ಕೆಂಪು ರಕ್ತಕೋಶಗಳನ್ನು ಭೇದಿಸಬಲ್ಲ ಗುಣಗಳೆರಡನ್ನೂ ಪಡೆದಿರುವ ಪ್ರೋಟೀನನ್ನು ಇದೇ ಮೂಲದಿಂದ ಆಸವಿಸಿ ಶುದ್ಧ ಹರಳುರೂಪದಲ್ಲಿ ಪ್ರತ್ಯೇಕಿಸಿದರು.

ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಅಂಗ ಸಂಸ್ಥೆಯಾದ ಇವಾನ್ಸ್ ಇನ್‍ಸ್ಟಿಟ್ಯೂಟ್ ಆಫ್ ಎಕ್ಸ್‍ಪೆರಿಮೆಂಟಲ್ ಬಯಾಲಜಿಯಲ್ಲಿ ಫ್ರೆಂಕೆಲ್-ಕೊನ್ರಾಟ್ 1938ರಲ್ಲಿ ಸಂಶೋಧಕರಾಗಿ ಸೇರಿ ಪಿಟೂಯಿಟರಿಗ್ರಂಥಿ ಹೊರಸೂಸುವ ಅನೇಕ ಹಾರ್ಮೋನುಗಳನ್ನು ಶುದ್ಧರೂಪದಲ್ಲಿ ಪಡೆದರು ಇದರಿಂದ ಈ ಅಣುಗಳ ರಚನೆಗೂ ಜೈವಿಕ ಕ್ರಿಯೆಗೂ ಇರುವ ಸಂಬಂಧ ತಿಳಿಯಲು ಸಾಧ್ಯವಾಯಿತು. ಹತ್ತು ವರ್ಷಗಳ ಶ್ರಮದ ಫಲವಾಗಿ ಪ್ರೋಟೀನುಗಳಲ್ಲಿರುವ ಕ್ರಿಯಾಶೀಲ ಪುಂಜಗಳನ್ನು ರಾಸಾಯನಿಕವಾಗಿ ಮಾರ್ಪಡಿಸಿ. ಈ ತರಹೆಯ ಮಾರ್ಪಾಡಿನಿಂದ ಆ ಪ್ರೋಟೀನುಗಳ ಗುಣಗಳಲ್ಲಾಗುವ ಪರಿಣಾಮಗಳನ್ನು ವಿವರವಾಗಿ ಅಭ್ಯಸಿಸಲು ಸಾಧ್ಯವಾಯಿತು. ಇವರ ಪ್ರಾಯೋಗಿಕ ವಿಧಾನಗಳು ಈ ಕ್ಷೇತ್ರದಲ್ಲಿ ಶಿಷ್ಟ ಕ್ರಮಗಳೆಂದು ಅಂಗೀಕೃತವಾಗಿವೆ.

ಪ್ರೋಟೀನಿನ ರಚನೆಯನ್ನು ಶೋಧಿಸಲು ಬಳಸಿದ ಪ್ರಾಯೋಗಿಕ ವಿಧಾನಗಳನ್ನೇ ಫ್ರೆಂಕಲ್-ಕೊನ್ರಾಟ್ ವೈರಸ್ಸುಗಳ ಪ್ರೋಟೀನ್ ರಚನೆಯ ನಿರ್ಧಾರಕ್ಕೂ ಬಳಸಿದರು. ಟೊಬ್ಯಾಕೋ ಮೊಸಾಯಿಕ್ ವೈರಸ್ಸಿನ ಪ್ರೋಟೀನಿನ ಪರಿಪೂರ್ಣ ಅಮೈನೋ ಆಮ್ಲ ಘಟನೆ ಮತ್ತು ಅನುಕ್ರಮ ಕಂಡುಹಿಡಿದರು. ಈ ಸಂಶೋಧನೆ ನಡೆದದ್ದು ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಇನ್ನೊಂದು ಅಂಗಸಂಸ್ಥೆ ವೈರಸ್ ಪ್ರಯೋಗಶಾಲೆಯಲ್ಲಿ, ಸ್ಟಾನ್ಲೆಯ ನೇತೃತ್ವದಲ್ಲಿ. ವೈರಸ್ಸಿನ ಪ್ರೋಟೀನ್ ಎಂಬುದು 158 ಅಮೈನೋ ಆಮ್ಲಗಳನ್ನು ಒಳಗೊಂಡ ಬೃಹದಣು. ಅದರ ಪೂರ್ಣರಚನೆಯನ್ನು ನಿಧರಿಸಿದ್ದ ಆಗಿನ ಕಾಲಕ್ಕೆ ಒಂದು ವಿಕ್ರಮವೇ ಸರಿ.

ವೈರಸ್ಸಿನ ಘಟಕಗಳಾದ ಪ್ರೋಟೀನ್ ಮತ್ತು ಆರ್‍ಎನ್‍ಎಗಳನ್ನು ಹುಟ್ಟುರೂಪದಲ್ಲಿ ಬೇರ್ಪಡಿಸಿದ್ದ ಫ್ರೆಂಕೆಲ್-ಕೊನ್ರಾಟ್ ಅವರ ಇನ್ನೊಂದು ಸಾಧನೆ. ಇದರಿಂದ ಇವೆರಡು ಕಣಗಳನ್ನು ಮತ್ತೆ ಕೂಡಿಸಿ ವೈರಸ್ಸನ್ನು ಪುನರುಜ್ಜೀವಿಸಲು ಸಾಧ್ಯವಾಯಿತು ಮತ್ತು ಪೂರ್ಣ ಪುನರುಜ್ಜೀವನಕ್ಕೆ ಬೇಕಾದ ಪರಿಸ್ಥಿತಿಗಳನ್ನು ಅರಿಯಲು ಸಾಧ್ಯವಾಯಿತು. ಪೂರ್ಣ ಪುನರುಜ್ಜೀವನಕ್ಕೆ ಪ್ರೋಟೀನ್ ತನ್ನ ಅಖಂಡತೆಯನ್ನು (ಇಂಟೆಗ್ರಿಟಿ) ಉಳಿಸಿಕೊಂಡಿರಬೇಕೆಂಬುದು ಸ್ಪಷ್ಟವಾಯಿತು. ಆರ್‍ಎನ್‍ಎ ಸರಣಿ ಸಹ ವಿಕೃತಿಗೊಳ್ಳದೆ ಅಖಂಡವಾಗಿದ್ದರೆ ಅನುಕೂಲಸ್ಥಿತಿಗಳಲ್ಲಿ ಇವೆರಡು ಘಟಕಗಳು ತಾವಾಗಿಯೇ ಕೊಡಿಕೊಂಡು ಸೋಂಕನ್ನು ಉಂಟುಮಾಡಬಲ್ಲ ವೈರಸ್ಸನ್ನು ಕೊಡುತ್ತದೆ. ಆಶ್ವರ್ಯಸಂಗತಿ ಎಂದರೆ ಈ ಪುನುರುಜ್ಜೀವನ ನಿರ್ಜೀವ ವಸ್ತುಗಳಾದ ಕೋಆರ್ಡಿನೇಟ್ ಕ್ಲಿಷ್ಟ ಸಂಯುಕ್ತಗಳು ಹರಳಿನ ರೂಪದಲ್ಲಿ ಹೊರಬರುವುದನ್ನು ನೆನಪಿಗೆ ತರುತ್ತದೆ. ವೈರಸ್ಸಿನ ಪುನರುಜ್ಜೀವನವನ್ನು ಮತ್ತಷ್ಟು ಆಳವಾಗಿ ಅಧ್ಯಯನಮಾಡಿದ ಫ್ರೆಂಕೆಲ್-ಕೊನ್ರಾಟ್ ವೈರಸ್ಸಿನ ಆರ್‍ಎನ್‍ಎ ಸ್ವಯಂಸೋಂಕು ಉಂಟುಮಾಡಬಲ್ಲದು ಮತ್ತು ಅನುವಂಶಿಕತೆಗೆ ಬೇಕಾದ ಎಲ್ಲ ಪರಿಜ್ಞಾನವನ್ನು ತನ್ನಲ್ಲಿಯೇ ಶೇಖರಿಸಿಟ್ಟುಕೊಂಡಿರುವುದು ಎಂದು ಕಂಡು ಹಿಡಿದರು. ಆದರೆ ಪರಿಮಾಣಾತ್ಮಕ ದೃಷ್ಟಿಯಿಂದ ಆರ್‍ಎನ್‍ಎಯ ಕಾರ್ಯದಕ್ಷತೆ ಬಲುಮಟ್ಟಿಗೆ ಕುಗ್ಗುತ್ತದೆ. ಆರ್‍ಎನ್‍ಎ ಅಣುವನ್ನು ಛಿದ್ರಮಾಡಬಲ್ಲ ನ್ಯೂಕ್ಲಿಯೇಸ್ ಕಿಣ್ವಗಳ ಹೊಡೆತಕ್ಕೆ ಪ್ರೋಟೀನ್ ರಹಿತ ವೈರಸ್ ಆರ್‍ಎನ್‍ಎ ಸುಲಭವಾಗಿ ಬಲಿಬೀಳುವುದೇ ಇದರ ಕಾರಣ. ವೈರಸ್ಸಿನ ಪ್ರೋಟೀನ್ ಹೊದಿಕೆ ದೊರೆತದ್ದೇ ಆದರೆ ಆರ್‍ಎನ್‍ಎ ದಕ್ಷತೆ ಸಾವಿರಮಡಿ ಹೆಚ್ಚುತ್ತದೆ. ಬಿ ಸಿಂಗರ್ (ಈಗ ಫ್ರೆಂಕೆಲ್-ಕೊನ್ರಾಟ್ ಅವರ ಪತ್ನಿ) ಮತ್ತು ಇತರ ಸಹೋದ್ಯೋಗಿಗಳ ಒಡನೆ ನಡಸಿದ ಸಂಶೋಧನೆಗಳ ಫಲವಾಗಿ ಫ್ರೆಂಕೆಲ್-ಕೊನ್ರಾಟ್ ವೈರಸ್ಸಿನ ಆರ್‍ನ್‍ಎಯನ್ನು ಸ್ಥಿರಗೊಳಿಸುವ (ಎಂದರೆ ಕ್ರಿಯಾಶೀಲತೆ ಉಳಿಸುವ) ವಿಧಾನಗಳನ್ನು ಪರಿಷ್ಕರಿಸಿದರು. ಇದರಿಂದ ರೈಬೊನ್ಯೂಕ್ಲಿಯಿಕ್ ಆಮ್ಲದ ರಚನೆ ಮತ್ತು ಆದರಲ್ಲಿರುವ ಪ್ಯೂರೀನ್ ಪಿರಮಿಡಿನ್ ಪ್ರತ್ಯಾಮ್ಲಗಳ ಅನುಕ್ರಮ ಕಂಡುಹಿಡಿಯಲು ಸಾಧ್ಯವಾಯಿತು. ಯುಕ್ತ ರಾಸಾಯನಿಕ ಕ್ರಮಗಳಿಂದ ಆರ್‍ಎನ್‍ಎಯನ್ನು ಬೇಕೆನ್ನುವ ಕಡೆ ಮಾರ್ಪಡಿಸಲೂ ಅನುಕೂಲವಾಯಿತು. ಕೆಲವು ರಾಸಾಯನಿಕ ಮಾರ್ಪಾಡಿನ ಫಲವಾಗಿ, ಜೈವಿಕವಾಗಿ, ಮೂಲವೈರಸ್ಸಿನಿಂದ ಭಿನ್ನವಾದ ವಿಕೃತಿಗಳು (ಮ್ಯೂಟೆಂಟ್ಸ್) ದೊರೆತುವು. ಆರ್‍ಎನ್‍ಎಯಲ್ಲಿ ವ್ಯತ್ಯಾಸವಾದ್ದರಿಂದ ಅದರ ನೇತೃತ್ವದಲ್ಲಿ ತಯಾರಾದ ಪ್ರೋಟೀನುಗಳು ಸಹ ತಮ್ಮ ಅಮೈನೋ ಆಮ್ಲ ಘಟನೆಯಲ್ಲಿ ಮೂಲ ವೈರಸ್ಸಿನ ಪ್ರೋಟೀನಿನ ಅಮೈನೋ ಆಮ್ಲ ಘಟನೆಗೆ ಹೋಲಿಸಿದಂತೆ ಕೆಲವು ವ್ಯತ್ಯಾಸಗಳನ್ನು ತೋರಿಸಬೇಕು ಎಂದೂ ಊಹಿಸಲಾಯಿತು. ಒಂದೆರಡು ರಾಸಾಯನಿಕ ಮಾರ್ಪಾಡಿನಿಂದ ದೊರೆತ ವಿಕೃತಿಗಳು ತಪ್ಪದೆ ಒಂದೇ ಬಗೆಯ ಅಮೈನೋ ಆಮ್ಲದಲ್ಲಿ ವ್ಯತ್ಯಾಸ ತೋರಿಸತೊಡಗಿದುದರಿಂದ ಆರ್‍ಎನ್‍ಎ ಪ್ರತ್ಯಾಮ್ಲಗಳಲ್ಲಾಗುವ ಮಾರ್ಪಾಡಿಗೂ ಅಮೈನೋಆಮ್ಲದಲ್ಲಾಗುವ ವ್ಯತ್ಯಾಸಕ್ಕೂ ಸಂಬಂಧ ಕಲ್ಪಿಸಲು ಸಾಧ್ಯವಾಯಿತು. ಬೇರೆ ವಿಧದಲ್ಲಿ ಹೇಳಬೇಕೆಂದರೆ ಆರ್‍ಎನ್‍ಎ ಅನುವಂಶಿಕ ಸಂಕೇತವಾಹಕವಾದ್ದರಿಂದ ಈ ಸಂಕೇತದ ರಹಸ್ಯ ಬಯಲುಮಾಡಲು ಬಲುಮುಖ್ಯವಾದ ಸೂತ್ರವೊಂದು ದೊರಕಿದಂತಾಯಿತು. ಮುಂದೆ ನಿರೆನ್‍ಬರ್ಗ್ ಬೇರೆ ವಿಧಾನದಿಂದ ತ್ರಿವಳಿಸಂಕೇತಗಳನ್ನು ಬಯಲು ಮಾಡಿದರು. ಇವರಿಬ್ಬರ ಫಲಿತಾಂಶಗಳಿಗೆ ಪರಸ್ಪರ ಹೊಂದಾಣಿಕೆ ಇರುವುದು ಕಂಡು ಬಂದಿತು.

ವೈರಸ್ಸಿನ ಕ್ಷೇತ್ರದಲ್ಲಿ ಅಂತರಾಷ್ಟ್ರೀಯ ಮನ್ನಣೆಯನ್ನೂ ಅಧಿಕಾರವಾಣಿಯನ್ನೂ ಪಡೆದಿರುವ ಫ್ರೆಂಕೆಲ್-ಕೊನ್ರಾಟ್ ಈ ವಿಷಯವಾಗಿ ಸೊಗಸಾದ ಒಂದು ಪುಸ್ತಕ ಬರೆದಿದ್ದಾರೆ-ಡಿಸೈನ್ ಅಂಡ್ ಫಂಕ್ಷನ್ ಅಟ್ ಥ್ರೆಶೋಲ್ಡ್ ಆಫ್‍ಲೈಫ್-ದಿ ವೈರಸಸ್ (1962). (ಎಚ್.ಎಸ್.ಎಸ್.)