ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಫ್ರೆಂಚ್ ಕ್ರಾಂತಿ

ವಿಕಿಸೋರ್ಸ್ದಿಂದ

ಫ್ರೆಂಚ್ ಕ್ರಾಂತಿ -

	1789ರಲ್ಲಿ ಫ್ರಾನ್ಸಿನಲ್ಲಿ ಸಂಭವಿಸಿದ ಒಂದು ಮಹಾಘಟನೆ. ರಾಜನ ನಿರಂಕುಶ ಅಳ್ವಿಕೆಯ ಮತ್ತು ಸಮಾಜದಲ್ಲಿ ಕೆಲವು ವರ್ಗಗಳು ಅನುಭವಿಸುತ್ತಿದ್ದ ವಿಶೇಷಹಕ್ಕುಗಳ ವಿರುದ್ಧ ವ್ಯಕ್ತಗೊಂಡ ಮಹಾ ಪ್ರತಿಭಟನೆ. (ಫ್ರೆಂಚ್-ರೆವೊಲ್ಯೂಷನ್) ಇದು ಫ್ರಾನ್ಸಿನ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಜೀವನದ ಮೇಲೆ ಆಳವಾದ ಪ್ರಭಾವ ಬೀರಿತು. ಈ ಕ್ರಾಂತಿಯ, ಮಹಾ ತತ್ವಗಳಾದ ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಇವು ಯೂರೋಪಿನಲ್ಲೆಲ್ಲ ಹರಡಿ, ಅಲ್ಲಿ ಅಸ್ತಿತ್ವದಲ್ಲಿದ್ದ ನಿರಂಕುಶ ಪ್ರಭುತ್ವಗಳಿಗೆ ಗಂಡಾಂತರ ಉಂಟುಮಾಡಿ, ಹೊಸ ಸಮಾಜದ ಉದಯಕ್ಕೆ ನಾಂದಿ ಹಾಡಿದುವು. ಕಾಲಕ್ರಮದಲ್ಲಿ ಇವು ವಿಶ್ವವ್ಯಾಪಕವಾಗಿ ವಿಶ್ವ ಜನಜೀವನದಲ್ಲಿ ಮಹತ್ತರ ಪರಿಣಾಮ ಉಂಟುಮಾಡಿದುವು. ಈ ಕ್ರಾಂತಿ ಒಂದು ರೀತಿಯಲ್ಲಿ ಭಾವನೆಗಳ ಯುದ್ಧವಿದ್ದಂತೆ ಶಸ್ತ್ರಗಳ ಯುದ್ಧವೂ ಆಗಿತ್ತು. ಇದು ಸಂಭವಿಸಲು ಅನೇಕ ಅಂಶಗಳು ಕಾರಣವಾಗಿದ್ದುವು.

ರಾಜಕೀಯ ಪರಿಸ್ಥಿತಿ: 14ನೆಯ ಲೂಯಿ ಮೃತಿ ಹೊಂದಿದ ಮೇಲೆ ಫ್ರಾನ್ಸಿನ ರಾಜಪ್ರಭುತ್ವ ಅಧೋಗತಿಗಿಳಿದಿತ್ತು. ಅದು ಲಂಚಗುಳಿತನ, ಕ್ರ್ರೌರ್ಯ, ದರ್ಪ ಮತ್ತು ಅಧ್ಯಕ್ಷತೆಗಳ ತವರಾಗಿತ್ತು. 14ನೆಯ ಲೂಯಿ ತೀರಿಕೊಂಡಾಗ ಅವನ ಉತ್ತರಾಧಿಕಾರಿ 15ನೆಯ ಲೂಯಿ ಇನ್ನೂ ಬಾಲಕನಾಗಿದ್ದುದರಿಂದ ರಾಜ್ಯಾಡಳಿತ ಡ್ಯೂಕ್ ಆಫ್ ಆರ್ಲಿಯನ್ಸ್ ಎಂಬ ರೀಜೆಂಟನ ಕೈ ಸೇರಿತು. ಇವನು ಯಾವುದನ್ನೂ ಲೆಕ್ಕಿಸದೆ 14ನೇ ಲೂಯಿ ಮತ್ತು ಅವನ ಪೂರ್ವಜರು ಮಾಡಿದ್ದ ಜನಹಿತ ಕಾರ್ಯಗಳನ್ನು ಬುಡಮೇಲು ಮಾಡಿ ರಾಜ್ಯವನ್ನು ದುಃಸ್ಥಿತಿಗೆ ತಂದ. ಹಲವು ವರ್ಗಗಳು ಅನುಭವಿಸುತ್ತಿದ್ದ ವಿಶೇಷ ರಿಯಾಯಿತಿಗಳನ್ನು ಮಾನ್ಯಮಾಡಿ, ಅತಿ ಪುರಾತನವಾದ ಹಣಕಾಸಿನ ಪದ್ಧತಿಯನ್ನು ಜಾರಿಗೆ ತಂದು ಕೆಲವು ಸಂಸ್ಥೆಗಳಿಗೆ ಸ್ವಯಾಧಿಕಾರನ್ನು ನೀಡಿ ರಾಜ್ಯಾಡಳಿತದ ರೂಪರೇಷಗಳನ್ನೇ ಬದಲಾಯಿಸಿದ. 15ನೆಯ ಲೂಯಿ ಪ್ರ್ರಾಪ್ತವಯಸ್ಕನಾದ ಮೇಲೆ ರಾಜ್ಯದ ಅಧಿಕಾರ ವಹಿಸಿಕೊಂಡ, ಆದರೆ ಅವನು ಆಡಳಿತದ ಹೊಣೆಗಾರಿಕೆಯನ್ನು ಮರೆತು ಸುಖಜೀವನದಲ್ಲಿ ಆಸಕ್ತನಾದ. ನೃತ್ಯ. ನಾಟಕ, ಬೇಟೆ, ಪಂದ್ಯ ಇವು ಅವನ ಮನಸ್ಸನ್ನು ಸೆರೆ ಹಿಡಿದವು. ಅವನು ಸ್ತ್ರೀಲೋಲುಪನಾದ; ರಾಷ್ಟ್ರ ಹಿತರಕ್ಷಣೆಯನ್ನು ಕಡೆಗಣಿಸಿದ. ಅವನಿಗೆ ಪ್ರಿಯರಾಗಿದ್ದ ಪಾಂಪಡೂರ್, ಡು ಬಾರಿ ಈ ಸ್ತ್ರೀಯರು ಸರ್ಕಾರದ ನೀತಿಯನ್ನು ರೂಪಿಸುತ್ತಿದ್ದರು. ಪಾಂಪಡೂರಳ ಪ್ರಭಾವದಿಂದ ಫ್ರಾನ್ಸ್ ದೇಶ ಏಳು ವರ್ಷಗಳ ಯುದ್ಧವನ್ನು (1756-63) ಪ್ರವೇಶಿಸಿ ಯೂರೋಪಿನಲ್ಲಿ ಮಾತ್ರವಲ್ಲದೆ ಅಮೆರಿಕ ಮತ್ತು ಭಾರತದಲ್ಲೂ ಅಪಕೀರ್ತಿ ಗಳಿಸಿತು. ಫ್ರಾನ್ಸಿನ ಹಣಕಾಸಿನ ಸ್ಥಿತಿ ಹದಗೆಟ್ಟಿತು. ರಾಷ್ಟ್ರದ ಪ್ರಗತಿಗೆ ಏನನ್ನೂ ಮಾಡದೆ ಬೊಕ್ಕಸದ ಹಣವನ್ನೆಲ್ಲ ರಾಜ ಮತ್ತು ಅವನ ಆಸ್ಥಾನಿಕರು ನುಂಗಿದರು. ನನ್ನ ಅನಂತರ ಪ್ರಳಯ ಎಂಬುದಾಗಿ ಅವನು ಹೇಳಿದ ಮಾತು ಲೂಯಿಯ ಬೇಜವಾಬ್ದಾರಿಯನ್ನು ತೋರಿಸುತ್ತದೆ.

ಸಾಮಾನ್ಯ ಜನರಿಗೆ ರಾಜಕೀಯ ಸ್ವಾತಂತ್ರ್ಯ ಲಭ್ಯವಿರಲಿಲ್ಲ. ಪ್ರಜಾಪ್ರತಿನಿಧಿ ಸಭೆ (ಸ್ಟೇಟ್ಸ್-ಜನರಲ್) 1614ರಿಂದ ಸಮಾವೇಶಗೊಂಡಿರಲಿಲ್ಲ. ಎಲ್ಲ ಅಧಿಕಾರವನ್ನೂ ರಾಜನೇ ಹೊಂದಿದ್ದ ಸಮಿತಿಯೊಂದರ ಮೂಲಕ ಅದನ್ನು ಚಲಾಯಿಸುತ್ತಿದ್ದ. ವ್ಯಕ್ತಿಸ್ವಾತಂತ್ರ್ಯವನ್ನು ನಿರಾಕರಿಸಲಾಗಿತ್ತು. ಅಕಾರಣವಾಗಿ ಜನರನ್ನು ದಸ್ತಗಿರಿ ಮಾಡಲಾಗುತ್ತಿತ್ತು. ರಾಜ ತನ್ನ ಆಸ್ಥಾನಿಕರಿಗೆ ಮುದ್ರೆ ಒತ್ತಿ ಸಹಿ ಹಾಕಿದ ಆಜ್ಞಾಪತ್ರಗಳನ್ನು ಕೊಟ್ಟಿದ್ದ. ಅವರು ಈ ಪತ್ರಗಳನ್ನು ನಿರಾಯಾಸವಾಗಿ ತಮ್ಮ ಶತ್ರುಗಳ ಮೇಲೆ ಪ್ರಯೋಗಿಸಿ ದುರುಪಯೋಗಪಡಿಸಿಕೊಳ್ಳುತ್ತಿದ್ದರು. ಪ್ರಾಂತ್ಯಗಳ ರಾಜ್ಯಪಾಲರೂ ರಾಜನಂತೆಯೇ ತಂತಮ್ಮ ಮಿತಿಯೊಳಗೆ ನಿರಂಕುಶ ಪ್ರಭುಗಳಾಗಿ ಮರೆಯುತ್ತಿದ್ದರು.

15ನೆಯ ಲೂಯಿಯ ತರುವಾಯ 16ನೆಯ 1774ರಲ್ಲಿ ಸಿಂಹಾಸನ ಏರಿದ. ಇವನ ಕಾಲದಲ್ಲಿ ಒಳ್ಳೆಯ ಆಡಳಿತ ಬರಬಹುದೆಂದು ನಿರೀಕ್ಷಿಸಲಾಗಿತ್ತು. ಅವನು ಆ ಕಾಲದ ಮಾನವೀಯ ಆಶೆ ಆಕಾಂಕ್ಷೆಗಳ ಪ್ರಭಾವಕ್ಕೆ ಒಳಗಾದವನಾಗಿದ್ದ. ರಾಷ್ಟ್ರ ಪ್ರಗತಿಪಥದಲ್ಲಿ ಸಾಗಬೇಕಾದರೆ ಪರಿವರ್ತನೆ ಆವಶ್ಯಕವೆಂದು ತಿಳಿದಿದ್ದ. ಆದರೆ ಅವನ ಹಾದಿ ಸುಗಮವಾಗಿರಲಿಲ್ಲ. ಅವನ ಕೆಲವು ಕ್ರಮಗಳು ವಿಫಲಗೊಂಡುವು. ಅವನು ಸದ್ಗುಣಿಯೂ ದಯಾಪರನೂ ಉದಾರಿಯೂ ಆಗಿದ್ದನಾದರೂ ಆ ಕಾಲದಲ್ಲಿ ರಾಜ್ಯಾಡಳಿತದ ಸೂತ್ರ ಹಿಡಿದು ಸಮರ್ಪಕವಾಗಿ ಕಾರ್ಯ ನಿರ್ವಹಿಸುವ ದಕ್ಷತೆ ಪಡೆದಿರಲಿಲ್ಲ. ಸರಿಯೆಂದು ತೋರಿದ್ದನ್ನು ಕೂಡಲೇ ಜಾರಿಗೆ ತರುವ ಧೈರ್ಯಸ್ಥೆರ್ಯಗಳು ಅವನಿಗಿರಲಿಲ್ಲ. ರಾಜನೀತಿನಿಪುಣನಲ್ಲಿ ಸಾಮಾನ್ಯವಾಗಿರಬೇಕಾದ ವಿಶೇಷ ಗುಣಗಳು ಅವನಲ್ಲಿರಲಿಲ್ಲ. ಅವನು ಆಸ್ಟ್ರಿಯಾದ ರಾಜಕುಮಾರಿ ಮೇರಿ ಆಂಟಾಯ್ನೆಟ್ಟಳನ್ನು ವಿವಾಹವಾದ್ದು ಒಂದು ರೀತಿಯಲ್ಲಿ ದೊಡ್ಡ ಪ್ರಮಾದವಾಯಿತು. ಫ್ರಾನ್ಸಿನ ಮೇಲೆ ಬದ್ಧದ್ವೇಷ ಸಾಧಿಸುತ್ತಿದ್ದ ಆಸ್ಟ್ರಿಯನ್ನರ ಮೇಲೆ ಫ್ರೆಂಚರು ಯಾವಾಗಲೂ ಕಣ್ಣಿಟ್ಟಿದ್ದರು. ಆಸ್ಟ್ರಿಯದ ರಾಜಕುಮಾರಿಯೊಬ್ಬಳು ಫ್ರಾನ್ಸಿನ ಮಹಾರಾಣಿಯಾಗುವುದು ಫ್ರೆಂಚರಿಗೆ ಸ್ವಲ್ಪವೂ ಇಷ್ಟವಿರಲಿಲ್ಲ. ಮೇರಿ ಆಂಟಾಯ್ನೆಟ್ ಮಹಾಸುಂದರಿ ಮತ್ತು ಪ್ರಚಂಡ ಬುದ್ದಿವಂತೆ. ವೈಭವ ವಿಲಾಸಗಳಲ್ಲಿ ಮೆರೆಯಬೇಕೆನ್ನುತ್ತಿದ್ದ ಅವಳಿಗೆ ಜನಸಾಮಾನ್ಯರ ಕಷ್ಟಗಳು ಅರ್ಥವಾಗುತ್ತಿರಲಿಲ್ಲ. ಅವಳು ರಾಜಕೀಯದಲ್ಲಿ ಕೈಹಾಕಿ, ತನ್ನ ಹಿತೈಷಿಗಳಿಗೆ ಉಡುಗೊರೆಗಳನ್ನು ಕೊಟ್ಟು ಅವರನ್ನು ಗೌರವಿಸಿ, ಶತ್ರುಗಳನ್ನು ಮನ ಬಂದಂತೆ ಚಿತ್ರಹಿಂಸೆಗೆ ಗುರಿ ಮಾಡುತ್ತಿದ್ದಳು. ಅವಳ ಸ್ವೇಚ್ಚಾ ನೀತಿಯ ವೈಭವ ವಿಲಾಸಗಳಿಂದ ಫ್ರಾನ್ಸಿನ ಬೊಕ್ಕಸ ಬರಿದಾಯಿತು. ದೇಶದ ಆರ್ಥಿಕಸ್ಥಿತಿ ತುಂಬ ಹದಗೆಟ್ಟಿತ್ತು. ಸುಧಾರಣೆಗಳು ಆವಶ್ಯಕವಾಗಿದ್ದುವು. ಆದರೆ ಕಾಲ ಮಿಂಚಿತ್ತು. ಫ್ರೆಂಚ್ ರಾಜ್ಯಪ್ರಭುತ್ವ ಅಂದಿನ ಸಮಸ್ಯೆಯನ್ನು ಬಗೆಹರಿಸಲು ವಿಫಲವಾದ್ದರಿಂದ ಕ್ರಾಂತಿ ಅನಿವಾರ್ಯವಾಯಿತು. ರಾಜರು ತಮ್ಮ ಅಧಿಕಾರ ದೈವದತ್ತವಾದ್ದೆಂದು ತಿಳಿದು ನಿರಂಕುಶ ಪ್ರಭುಗಳಾಗಿ ಜನಾಭಿಪ್ರಾಯಕ್ಕೆ ಮನ್ನಣೆ ಕೊಡದೆ ಅಸಮಾನತೆಯನ್ನು ಎತ್ತಿಹಿಡಿದು ಕ್ರಾಂತಿಗೆ ಎಡೆಮಾಡಿಕೊಟ್ಟು ತಮ್ಮ ಕೊನೆಯನ್ನು ತಾವೇ ತಂದುಕೊಂಡರು.

ಸಾಮಾಜಿಕ ಪರಿಸ್ಥಿತಿ: ಫ್ರಾನ್ಸಿನ ಸಾಮಾಜಿಕ ಜೀವನವೂ ರಾಜಕಾರಣದಷ್ಟೇ ಹದಗೆಟ್ಟಿತ್ತು. ಫ್ರಾನ್ಸಿನ ಸಮಾಜದಲ್ಲಿ ಪಾದ್ರಿಗಳು, ಕುಲೀನರು ಮತ್ತು ಸಾಮಾನ್ಯರು ಎಂಬ ಮೂರು ವರ್ಗಗಳಿದ್ದುವು. ಆ ವರ್ಗಗಳಲ್ಲಿ ಅಸಮಾನತೆ ತೀವ್ರವಾಗಿತ್ತು. ಧಾರ್ಮಿಕ ಕಾರ್ಯಾಚರಣೆ ಪಾದ್ರಿಗಳ ಕರ್ತವ್ಯ, ಯುದ್ಧ ಮಾಡುವುದು ಕುಲೀನರ ಕರ್ತವ್ಯ, ತೆರಿಗೆ ತೆರುವುದು ಸಾಮಾನ್ಯರ ಕರ್ತವ್ಯ ಎಂಬುದು ಫ್ರೆಂಚರಲ್ಲಿ ಮನೆಮಾತಾಗಿತ್ತು. ಚರ್ಚು ಫ್ರಾನ್ಸಿನ ಭೂಮಿಯಲ್ಲಿ 1/3 ಭಾಗವನ್ನು ತನ್ನ ಅಧೀನದಲ್ಲಿಟ್ಟುಕೊಂಡು ರಾಜ್ಯದೊಳಗೆ ಒಂದು ರಾಜ್ಯವಾಗಿ ಮಾರ್ಪಟ್ಟಿತು. ಚರ್ಚಿನ ಅಧಿಕಾರಿಗಳು ಪ್ರಥಮ ದರ್ಜೆಯ ಪ್ರಜೆಗಳಾಗಿದ್ದು ವಿಶೇಷ ಸೌಲಭ್ಯಗಳನ್ನು ಪಡೆದು ವೈಭವ ಜೀವನ ನಡೆಸುತ್ತಿದ್ದರು. ಇವರು ಸರ್ಕಾರಕ್ಕೆ ಯಾವ ತೆರಿಗೆಗಳನ್ನೂ ಕೊಡಬೇಕಾಗಿರಲಿಲ್ಲ. ಕುಲೀನರು ರಾಜರ ಕೃಪಾಕಟಾಕ್ಷಕ್ಕೆ ಪಾತ್ರರಾಗಿ ತೆರಿಗೆಗಳಿಂದ ವಿನಾಯಿತಿ ಪಡೆದು ಸರ್ಕಾರ ಮತ್ತು ಸೈನ್ಯದಲ್ಲಿ ಉನ್ನತ ಹುದ್ದೆಗಳನ್ನು ಗಳಿಸಿಕೊಂಡಿದ್ದರು. ಅವರ ವರಮಾನ ಹೆಚ್ಚಾಗಿದ್ದರೂ ಅವರು ತೆರಿಗೆ ಕೊಡಬೇಕಾಗಿರಲಿಲ್ಲ. ಈ ಎರಡು ವರ್ಗದವರು ದೇಶಕ್ಕಾಗಿ ಯಾವ ಸೇವೆಯನ್ನೂ ಸಲ್ಲಿಸುತ್ತಿರಲಿಲ್ಲ. ಇವರು ದೇಶಕ್ಕೂ ಸಮಾಜಕ್ಕೂ ಹೊರೆಯಾಗಿದ್ದರು. ಇವರು ತಮಗೆ ಬರಬೇಕಾಗಿದ್ದ ಜಹಗೀರಿನ ಶುಲ್ಕಗಳನ್ನು ವಸೂಲು ಮಾಡಿಕೊಂಡು ದುಡಿಮೆಗಾರರಿಂದ ಬಲವಂತವಾಗಿ ಸೇವೆ ಪಡೆದುಕೊಂಡು, ವಿಲಾಸಜೀವನ ನಡೆಸುತ್ತಿದ್ದರು. ದುಡಿತವಿಲ್ಲದೆ ವಿಶೇಷ ಸೌಲಭ್ಯ ಅನುಭವಿಸುತ್ತಿದ್ದ ಈ ವರ್ಗಗಳನ್ನು ಸಾಮಾನ್ಯ ಜನರು ದ್ವೇಷಿಸಲಾರಂಭಿಸಿದರು. ಸಾಮಾಜಿಕ ಅಸಮಾನತೆ ಮತ್ತು ಜಹಗೀರ ಪದ್ಧತಿಯನ್ನು ಕೊನೆಗಾಣಿಸದೆ ಹೋದ್ದರಿಂದ ಕ್ರಾಂತಿ ಆರಂಭವಾಯಿತೆಂದು ಕೆಲವರು ಅಭಿಪ್ರಾಯಪಡುತ್ತಾರೆ.

ಫ್ರೆಂಚ್ ಸಮಾಜದಲ್ಲಿದ್ದ ಮೂರನೆಯ ವರ್ಗವೆಂದರೆ ಯಾವ ವಿಶೇಷ ಹಕ್ಕುಗಳನ್ನೂ ಅನುಭವಿಸದಿದ್ದವರದು. ಈ ವರ್ಗದಲ್ಲಿ ವಕೀಲರು ವೈದ್ಯರು, ವರ್ತಕರು, ಬರೆಹಗಾರರು, ಉಪಾಧ್ಯಾಯರು ಹಾಗೂ ಬಹುಸಂಖ್ಯಾತರಾದ ರೈತರು ಸೇರಿದ್ದರು. ಇವರು ಎಷ್ಟೇ ವ್ಯವಹಾರ ಕುಶಲರೂ ಪ್ರತಿಭಾವಂತರೂ ಆಗಿದ್ದರೂ ಇವರಿಗೆ ಸರ್ಕಾರದ ಆಡಳಿತದಲ್ಲಿ ಸೇವೆ ಸಲ್ಲಿಸುವ ಅವಕಾಶವಿರಲಿಲ್ಲ. ಫ್ರಾನ್ಸಿನ ಬೆನ್ನುಮೂಳೆಯಂತಿದ್ದ ರೈತರ ಸ್ಥಿತಿ ಚಿಂತಾಜನಕವಾಗಿತ್ತು. ಅವರ ಊಳಿಗಮಾನ್ಯ ಪದ್ಧತಿಯ ಕೆಲವು ನಿರ್ಬಂಧಗಳಿಗೆ ಸಿಲುಕಿ ತೊಳಲಾಡುತ್ತಿದ್ದರು. ಊಳಿಗಮಾನ್ಯ ಶುಲ್ಕಗಳ ಜೊತೆಗೆ ಅವರು ಸರ್ಕಾರದ ತೆರಿಗೆಗಳನ್ನೂ ಕೊಡಬೇಕಾಗಿತ್ತು. ಅವು ದುಬಾರಿಯಾಗಿದ್ದುವಲ್ಲದೆ ನ್ಯಾಯಬಾಹಿರವಾಗಿದ್ದುವು. ಅವುಗಳ ಪೈಕಿ ಗ್ಯಾಬಲೆ, ಕಾರ್ವಿ ಮತ್ತು ಟೈಲೆ ಮುಖ್ಯವಾದುವು. ಗ್ಯಾಬಲೆ (ಉಪ್ಪಿನ ತೆರಿಗೆ) ಅವುಗಳಲ್ಲ್ಲೊಂದು. ಅನೇಕರು ಉಪ್ಪಿನ ಕಳ್ಳವ್ಯಾಪಾರದಲ್ಲಿ ತೊಡಗಿ ಕಾರಗೃಹವಾಸವನ್ನನುಭವಿಸುತ್ತಿದ್ದರು. ಒಂದು ರೀತಿಯ ಕಡ್ಡಾಯ ಶ್ರಮದಾನ ಇನ್ನೊಂದು. ಇದರ ಪ್ರಕಾರ ಪ್ರತಿಯೊಬ್ಬ ಪ್ರಜೆಯೂ ವಾರದ ಕೆಲವು ದಿನಗಳಲ್ಲಿ ಕೂಲಿಯನ್ನು ನಿರೀಕ್ಷಿಸದೆ ಸಂಸ್ಥಾನಕ್ಕಾಗಿ ದುಡಿಯಬೇಕಾಗಿತ್ತು. ಎಲ್ಲ ತೆರಿಗೆಗಳಿಗಿಂತ ದುಬಾರಿಯಾದ ತೆರಿಗೆಯೆಂದರೆ ಟೈಲೆ. ಇದು ಭೂ ಮತ್ತು ಮನೆಗಂದಾಯವಾಗಿತ್ತು. ಸರ್ಕಾರದ ಅಧಿಕಾರಿಗಳು ತಮ್ಮ ಇಚ್ಛಾನುಸಾರ ಇದನ್ನು ವಸೂಲು ಮಾಡುತ್ತಿದ್ದರು. ಕೆಲವು ಜಿಲ್ಲೆಗಳಲ್ಲಿ ಈ ಕಂದಾಯ ಒಬ್ಬ ವ್ಯಕ್ತಿಯ ಆದಾಯದ ಅರ್ಧಭಾಗದಷ್ಟು ಆಗುತ್ತಿತ್ತು. ರೈತರು ಅನಕ್ಷರಸ್ಥರಾಗಿದ್ದರು. ಅವರಿಗೆ ಮಾಂಟೆಸ್ಕ್ಯು, ವಾಲ್ಟೇರ್ ಮತ್ತು ರೂಸೋ ಅವರ ತತ್ತ್ವಗಳು ಗೊತ್ತಿರಲಿಲ್ಲ. ಆದರೂ ಅವರು ತಮಗಾಗುತ್ತಿದ್ದ ಅನ್ಯಾಯಗಳ ಬಗ್ಗೆ ತಿಳಿವಳಿಕೆಯುಳ್ಳವರಾಗಿದ್ದರು. ಅವನ್ನು ನಿವಾರಿಸಲು ಸುಧಾರಣೆಗಳಾಗಬೇಕೆಂದು ಬಯಸಿದರು. ತತ್ಪರಿಣಾಮವಾಗಿ ಮಧ್ಯಮ ವರ್ಗದವರು ನಾಯಕತ್ವ ವಹಿಸಿದಾಗ ಕ್ರಾಂತಿಗೆ ಅವರು ಬೆಂಬಲ ನೀಡಿದರು.

ದಾರ್ಶನಿಕರ ಪ್ರಭಾವ: ಫ್ರಾನ್ಸಿನ ಕ್ರಾಂತಿಗೆ ದಾರ್ಶನಿಕರ ವಿಚಾರವಂತ ಲೇಖನಗಳು ಮತ್ತು ಬರೆವಣಿಗೆಗಳು ಕೂಡ ಕಾರಣವಾಗಿದ್ದುವು. ಅವರು ತಮ್ಮ ಲೇಖನಗಳ ಮೂಲಕ ಫ್ರಾನ್ಸಿನ ರಾಜಕೀಯ, ಸಾಮಾಜಿಕ, ಆರ್ಥಿಕ ಅನ್ಯಾಯಗಳ ವಿರುದ್ಧ ಜನತೆಯನ್ನು ಎಚ್ಚರಿಸಿದರು. ಅವರ ವಿಚಾರಸರಣಿಗಳು ಕ್ರಾಂತಿಕಾರಕವಾಗಿದ್ದು ಜನರ ಮನಸ್ಸಿನ ಮೇಲೆ ವಿಶೇಷ ಪ್ರಭಾವ ಬೀರಿದುವು. ಆ ಕಾಲದ ಪ್ರಸಿದ್ಧ ತತ್ತ್ವಜ್ಞಾನಿಗಳಲ್ಲಿ ಮಾಂಟಿಸ್ಕ್ಯು, ವಾಲ್ಟೇರ್, ರೂಸೋ, ಡೀಡ್ರೋ ಮತ್ತು ಡ-ಅಲಾನ್‍ಬಾರ್ ಪ್ರಸಿದ್ಧರು. ಮಾಂಟಿಸ್ಕ್ಯು (1689-1755) ಇಂಗ್ಲಿಷ್ ಆಡಳಿತ ಪದ್ಧತಿಯನ್ನು ಪ್ರಶಂಸಿಸಿ, ಕಾರ್ಯಾಂಗ ಮತ್ತು ಶಾಸಕಾಂಗ ಬೇರೆ ಬೇರೆಯಾಗಿರಬೇಕು ಎಂದು ತನ್ನ ಒಂದು ಗ್ರಂಥದಲ್ಲಿ ತಿಳಿಸಿದ್ದ. ಸಂವಿಧಾನಾತ್ಮಕ ಸರ್ಕಾರ ಉತ್ತಮವಾದ್ದೆಂದೂ ಆದ್ದರಿಂದಲೇ ವ್ಯಕ್ತಿ ಸ್ವಾತಂತ್ರ್ಯದ ರಕ್ಷಣೆ ಸಾಧ್ಯವೆಂದೂ ಘೋಷಿಸಿದ್ದ. ವಾಲ್ಟೇರ್ (1694-1778) 18ನೆಯ ಶತಮಾನದ ಯೂರೋಪಿನ ಬೌದ್ಧಿಕ ಕ್ರಾಂತಿಯ ಪ್ರತೀಕವಾಗಿದ್ದ. ಚರ್ಚು ಜನತೆಯಲ್ಲಿ ಮೌಢ್ಯವನ್ನು ಹೆಚ್ಚಿಸುವುದರಲ್ಲೇ ನಿರತವಾಗಿದೆಯೆಂದು ಹೇಳಿ, ಚರ್ಚಿನ ಲೋಪದೋಷಗಳನ್ನು ಖಂಡಿಸಿದ. ಫ್ರೆಂಚ್ ಸರ್ಕಾರದಲ್ಲಿದ್ದ ಅನ್ಯಾಯ, ದೌರ್ಬಲ್ಯ, ಹಮ್ಮು ಬಿಮ್ಮು, ಅಂಧಾನುಕರಣಿಗಳನ್ನು ತನ್ನ ಲೇಖನಿಯ ಮೂಲಕ ಎತ್ತಿ ತೋರಿಸಿದ. ಮಾನವನ ವ್ಯವಹಾರದಲ್ಲಿ ವಿವೇಕಕ್ಕೆ ಮೊದಲನೆಯ ಸ್ಥಾನವಿರಬೇಕೆಂದು ಆದೇಶ ನೀಡಿದ. ಇವರಿಬ್ಬರಿಗಿಂತಲೂ ಹೆಚ್ಚು ಪ್ರಭಾವಶಾಲಿಯಾದವನು ರೂಸೋ (1712-78). ಇವನನ್ನು ಫ್ರೆಂಚ್ ಕ್ರಾಂತಿಯ ಜನಕನೆಂದು ಕರೆದಿದ್ದಾರೆ. ನೆಪೋಲಿಯನ್ ಹೇಳುವಂತೆ, ರೂಸೋ ಇಲ್ಲದಿದ್ದರೆ ಫ್ರಾನ್ಸಿನಲ್ಲಿ ಕ್ರಾಂತಿಯೇ ಸಂಭವಿಸುತ್ತಿರಲಿಲ್ಲ. ರಾಜ್ಯದ ಹುಟ್ಟು ಬೆಳವಣಿಗೆಗಳಿಗೆ ಸೇರಿದ್ದು ಎಂದು ಇವನು ಹೇಳಿದ. ರಾಜನ ಅಧಿಕಾರ ದೈವದತ್ತವಾದ್ದಲ್ಲ. ಮಾನವದತ್ತವಾದ್ದು ಎಂದು ಘೋಷಿಸಿ, ರಾಜಪ್ರಭುತ್ವವನ್ನು ವಿರೋಧಿಸಿ ಪ್ರಜಾಪ್ರಭುತ್ವವನ್ನು ಪ್ರತಿಪಾದಿಸಿದ. ಜನ್ಮತಃ ಸ್ವತಂತ್ರನಾದ ಮಾನವ ಎಲ್ಲೆಲ್ಲೂ ಸರಪಳಿಯಿಂದ ಬಂಧಿತನಾಗಿದ್ದಾನೆ ಎಂದು ಇವನು ಹೇಳಿದ. ಫ್ರಾನ್ಸಿನ ಮಹಾಕ್ರಾಂತಿಯ ತತ್ತ್ವಗಳಾದ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವ ಇವು ರೂಸೋನ ಬರೆವಣಿಗೆಯಿಂದ ಹೊರಬಿದ್ದವು. ಇವನ ಕ್ರಾಂತಿಕಾರಕ ಬರೆವಣಿಗೆಗಳು ಫ್ರೆಂಚರ ಮೇಲೆ ಮಾತ್ರವಲ್ಲದೆ ಇಡೀ ಯೂರೋಪಿಯನ್ನರ ಮೇಲೆ ತೀವ್ರ ಪರಿಣಾಮ ಬೀರಿದುವು, ಸ್ವಾತಂತ್ರ್ಯಪ್ರಿಯ ಜನಾಂಗಕ್ಕೆ ನಂದಾದೀಪವಾದವು. ಬಹಳ ಕಾಲದಿಂದ ರಾಜಕೀಯ ಮತ್ತು ಸಾಮಾಜಿಕ ದುಷ್ಟಶಕ್ತಿಗಳ ನಡುವೆ ಸಿಕ್ಕಿ ಸಂಕಟಪಡುತ್ತಿದ್ದ ಜನತೆಗೆ ರೂಸೋನ ತತ್ತ್ವಗಳು ಮಹಾ ಸಂದೇಶಗಳಾಗಿ ಕಂಡು, ಅವರು ಅನ್ಯಾಯದ ವಿರುದ್ದ ದಂಗೆಯೇಳುವಂತೆ ಮಾಡಿದುವು. ಡೀಡ್ರೋ ಮತ್ತು ಡ-ಅಲಾನ್‍ಬಾರ್ ಎಂಬ ವಿಚಾರವಾದಿ ವಿದ್ವಾಂಸರು ಹದಿನೇಳು ಸಂಪುಟಗಳಲ್ಲಿ ವಿಶ್ವಕೋಶವನ್ನು ರಚಿಸಿದರು. ಇವರು ಚರ್ಚಿನಲ್ಲಿದ್ದ ಲೋಪದೋಷಗಳನ್ನು ಬಯಲಿಗೆಳೆದು ಸುಧಾರಣೆಯ ಅಗತ್ಯವನ್ನು ಒತ್ತಿಹೇಳಿದರು. ಇವರೇ ಅಲ್ಲದೆ ಪ್ರಕೃತಿ ಪ್ರಾಧಾನ್ಯವಾದಿ ಪಂಥದ ವಿಚಾರವಾದಿಗಳು ಅರ್ಥಶಾಸ್ತ್ರದ ಬಗ್ಗೆ ವಿಚಾರಪೂರ್ಣ ಕೃತಿಗಳನ್ನು ರಚಿಸಿದರು. ಇವರಲ್ಲಿ ಕೀನೇ ಎಂಬುವನ್ನು ಹೆಚ್ಚು ಪ್ರಸಿದ್ದ. ಭೂಮಿಯ ಉತ್ಪಾದನೆ ದುಡಿಯುವವನ ಪರಿಶ್ರಮವನ್ನವಲಂಬಿಸಿರುವುದರಿಂದ, ಶ್ರಮಜೀವಿಗಳೇ ಉತ್ಪಾದಕರಾಗಿರುವುದರಿಂದ, ಸರ್ಕಾರದ ಕ್ರಮ ಕನಿಷ್ಠವಾಗಿರಬೇಕೆಂದು ತಿಳಿಸಿದರು. ಅನಿರ್ಬಂಧಿತ ವ್ಯಾಪಾರ ಹಾಗೂ ಕಡ್ಡಾಯ ಶಿಕ್ಷಣದ ಪ್ರಾಮುಖ್ಯವನ್ನು ಒತ್ತಿ ಹೇಳಿ, ಭೂಮಿಯ ಮೇಲಿದ್ದ ಹಲವಾರು ತೆರಿಗೆಗಳನ್ನು ರದ್ದುಪಡಿಸಿ ಒಂದೇ ತೆರಿಗೆಯನ್ನು ವಿಧಿಸಬೇಕೆಂದರು. ಆರ್ಥಿಕ ಕ್ಷೇತ್ರವನ್ನು ಸ್ವಚ್ಛಗೊಳಿಸಿದರೆ ಇತರ ಕ್ಷೇತ್ರಗಳೆಲ್ಲ ತಾವಾಗಿಯೇ ಸರಿಯಾಗುತ್ತವೆಂದು ಕ್ರಾಂತಿಯ ನಾಯಕರಲ್ಲೊಬ್ಬನಾದ ಮೀರಾಬೋ ತಿಳಿಸಿದ. ಇವರೆಲ್ಲರ ಬರೆವಣಿಗೆಯಿಂದ ಪ್ರಚೋದಿತವಾದ ಜನತೆ ರಾಜರ ದಬ್ಬಾಳಿಕೆಯನ್ನೂ ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆಗಳನ್ನೂ ಕೊನೆಗಾಣಿಸುವುದಕ್ಕಾಗಿ ದಂಗೆಯೆದ್ದರು.

ಅಮೆರಿಕದ ಕ್ರಾಂತಿಯೂ ಫ್ರಾನ್ಸಿನ ಕ್ರಾಂತಿಗೆ ಪ್ರೇರಕವಾಯಿತು. ಅಮೆರಿಕದ ಕ್ರಾಂತಿ ವಿಜಯದಲ್ಲಿ ಸಮಾಪ್ತಿಗೊಳ್ಳದಿದ್ದರೆ ಫ್ರಾನ್ಸಿನ ಕ್ರಾಂತಿ ಆಗುತ್ತಿತ್ತೋ ಇಲ್ಲವೋ ಎಂದು ವಿದ್ವಾಂಸರು ಶಂಕಿಸಿದ್ದಾರೆ. ಅಮೆರಿಕನ್ ವಸಾಹತುಗಳು ಸ್ವಾತಂತ್ರ್ಯಕ್ಕಾಗಿ ಆರಂಭಿಸಿದ ಹೋರಾಟಕ್ಕೆ ಫ್ರೆಂಚರು ಸಹಾನುಭೂತಿ ವ್ಯಕ್ತಪಡಿಸಿದರು. ಅವರಲ್ಲಿ ಲಾ ಫಿಯಟ್ ಎಂಬವನು ಅಮೆರಿಕ ಸ್ವಾತಂತ್ರ್ಯ ಸಂಗ್ರಾಮಕ್ಕೆ ನೆರವು ನೀಡಿದ. ಈ ಸಂಗ್ರಾಮದಲ್ಲಿ ಭಾಗವಹಿಸಿ ಸ್ವದೇಶಕ್ಕೆ ಮರಳಿದ ಫ್ರೆಂಚ್ ಸೈನಿಕರು ಫ್ರಾನ್ಸಿನಲ್ಲಿ ಪ್ರಜಾಸರ್ಕಾರದ ಸ್ಥಾಪನೆಗೆ ಪ್ರತಿಯೊಬ್ಬರೂ ದುಡಿಯ ಬೇಕೆಂದು ಕರೆಕೊಟ್ಟರು. ಅಮೆರಿಕನರ ಜಯದಿಂದ ಫ್ರೆಂಚರಿಗೆ ಉತ್ತೇಜನ ದೊರಕಿತು. ಆದರೆ ಅಮೆರಿಕನ್ ಕ್ರಾಂತಿಯಿಂದ ಫ್ರಾನ್ಸಿನ ಆರ್ಥಿಕ ಸ್ಥಿತಿ ಹದಗೆಟ್ಟಿತು. ಬ್ರಿಟಿಷರ ಮೇಲೆ ಸೇಡನ್ನು ತೀರಿಸಿಕೊಳ್ಳಲು ಅಮೆರಿಕನರ ಪಕ್ಷ ವಹಿಸಿ ಹೋರಾಡಿದ್ದರಿಂದ ಫ್ರೆಂಚರು ಆರ್ಥಿಕವಾಗಿ ಅನೇಕ ಕಷ್ಟನಷ್ಟಗಳನ್ನುನುಭವಿಸಬೇಕಾಯಿತು. ಯುದ್ಧದ ವೆಚ್ಚದಿಂದಾಗಿ ಫ್ರಾನ್ಸಿನ ಆರ್ಥಿಕರಂಗದ ಅಡಿಪಾಯ ಕುಸಿಯತೊಡಗಿತು. ಇದರಿಂದ ಬೇಸತ್ತ ಜನರು ಕ್ರಾಂತಿಯ ಕಿಚ್ಚು ಹಚ್ಚಿದರು.

ಹಣಕಾಸಿನ ಪರಿಸ್ಥಿತಿ: ಫ್ರಾನ್ಸಿನ ಹಣಕಾಸಿನ ಸ್ಥಿತಿ ಶೋಚನೀಯವಾಗಿತ್ತು. ಫ್ರೆಂಚ್ ಸರ್ಕಾರ ಆಯವ್ಯಯ ಅಂದಾಜುಪಟ್ಟಿ ತಯಾರಿಸುತ್ತಿರಲಿಲ್ಲ. ಅಲ್ಲಿ ಜಾರಿಯಲ್ಲಿದ್ದ ತೆರಿಗೆ ಪದ್ಧತಿಗೆ ನ್ಯಾಯ ನಿಯಮಗಳೇ ಇರಲಿಲ್ಲ. ಸರಕಾರದ ಆಯಕ್ಕಿಂತ ವ್ಯಯ ಅಧಿಕವಾಗಿತ್ತು. ರಾಜರಾಣಿಯರ ವಿಲಾಸ ಜೀವನ, ಅವರ ದುಂದುವೆಚ್ಚ ಮತ್ತು ನಿರಂತರ ಯುದ್ಧಗಳು ರಾಜ್ಯದ ಬೊಕ್ಕಸವನ್ನು ಬರಿದು ಮಾಡಿದ್ದವು. ಜೊತೆಗೆ ಪ್ರತಿವರ್ಷವೂ ಹಣಕಾಸಿನ ಮುಗ್ಗಟ್ಟನ್ನು ಎದುರಿಸಲು ಪ್ರಜೆಗಳಿಂದ ಸಾಲ ಎತ್ತುವುದು ಸರ್ಕಾರದ ವಾಡಿಕೆಯಾಗಿತ್ತು. ಕೊನೆಗೆ ಸರ್ಕಾರಕ್ಕೆ ಸಾಲಕೊಡಲು ಜನರು ಹಿಂಜರಿಯತೊಡಗಿದರು. ರಾಜ್ಯದ ಬೊಕ್ಕಸಕ್ಕೆ ಭೂ ಕಂದಾಯದಿಂದ ಹೆಚ್ಚಿನ ವರಮಾನ ಬರುತ್ತಿತ್ತು. ಆದರೆ ಕಂದಾಯ ವಸೂಲಿಯಲ್ಲಿ ಯಾವ ನಿಯಮಗಳೂ ಇರಲಿಲ್ಲ. ಅಧಿಕಾರಿಗಳು ಸ್ವಾರ್ಥಿಗಳೂ ಭ್ರಷ್ಟಾಚಾರಿಗಳೂ ಆಗಿದ್ದುದರಿಂದ ವಸೂಲಾದ ಕಂದಾಯದ ಬಹುಭಾಗವನ್ನು ಅವರೇ ನುಂಗಿ ಹಾಕುತ್ತಿದ್ದರು. ಮೇಲಾಗಿ ತೆರಿಗೆ ವಿಧಿಸುವುದರಲ್ಲಾಗಲಿ ವಸೂಲಿ ಮಾಡುವುದರಲ್ಲಾಗಲಿ ಒಂದು ಕ್ರಮವಿರಲಿಲ್ಲ. ಕೆಳವರ್ಗದವರ ಮತ್ತು ದುರ್ಬಲರ ಮೇಲೆ ತೆರಿಗೆಗಳ ಭಾರ ಅಧಿಕವಾಗಿತ್ತು. ಮೇಲ್ದರ್ಜೆಯ ಪಾದ್ರಿಗಳು ಮತ್ತು ಶ್ರೀಮಂತರು ಸರ್ಕಾರಕ್ಕೆ ತೆರಿಗೆಯೇನೂ ಸಲ್ಲಿಸದೆ ವಿಲಾಸ ಜೀವನ ನಡೆಸುತ್ತಿದ್ದರು. ಜನಸಾಮಾನ್ಯರಾದರೋ ತಮ್ಮ ವರಮಾನದ ಬಹುಭಾಗವನ್ನು ಸರ್ಕಾರಕ್ಕೂ ಪಾದ್ರಿಗಳಿಗೂ ಶ್ರೀಮಂತರಿಗೂ ತೆತ್ತು ಉಳಿದದ್ದರಲ್ಲಿ ಜೀವನ ನಡೆಸುತ್ತಿದ್ದರು. ಕೈಗಾರಿಕೆ ಮತ್ತು ವಾಣಿಜ್ಯ ಹಿಂದುಳಿದಿದ್ದುವು. ಉತ್ಪಾದನೆಯ ಯೋಜನೆಗಳಿಗೆ ಸರ್ಕಾರ ಹೆಚ್ಚು ಹಣ ವ್ಯಯಮಾಡುತ್ತಿರಲಿಲ್ಲ. ಆಯವ್ಯಯವನ್ನು ಸರಿತೂಗಿಸುವುದು ಸರ್ಕಾರದ ಮೊಟ್ಟಮೊದಲನೆಯ ಕೆಲಸವಾಗಿತ್ತು. 16ನೆಯ ಲೂಯಿ ಪ್ರಪ್ರಥಮವಾಗಿ ಮಂತ್ರಿಮಂಡಲವನ್ನು ರಚಿಸಿದಾಗ ಟುರ್ಗೋ ಎಂಬುವನನ್ನು ಹಣಕಾಸಿನ ಖಾತೆಯ ಮಂತ್ರಿಯಾಗಿ ನೇಮಿಸಿದ. ಇವನು ನಿಷ್ಠೆಯಿಂದ ದುಡಿದ. ಮೇಲಣ ವರ್ಗಗಳವರೂ ತೆರಿಗೆಗಳನ್ನು ಕೊಡುವಂಥ ಯೋಜನೆಗಳನ್ನು ಇವನು ರೂಪಿಸಿ ಜಾರಿಗೆ ತಂದ. ಎಲ್ಲ ವರ್ಗಗಳವರೂ ಆಸ್ತಿ ತೆರಿಗೆ ಕೊಡಬೇಕೆಂದು ಹೇಳಿದ. ವ್ಯಾಪಾರದ ಮೇಲೆ ಯಾವ ನಿರ್ಬಂಧವೂ ಇರಕೂಡದೆಂದು ಇವನು ಸೂಚಿಸಿದ. ಇವನ ಸಲಹೆಯನ್ನು ಶ್ರೀಮಂತವರ್ಗದವರು ತೀವ್ರವಾಗಿ ವಿರೋಧಿಸಿದರು. ರಾಜ ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಇವನ ಯೋಜನೆಗಳಿಗೆ ಬೆಂಬಲ ಸೂಚಿಸಿದರೆ ಕ್ರಾಂತಿಯನ್ನು ಮೊಳಕೆಯಲ್ಲೇ ಮೊಟಕುಮಾಡಬಹುದಾಗಿತ್ತು. ಅದಕ್ಕೆ ಬದಲಾಗಿ ಅವನು ಟುರ್ಗೋನನ್ನು ಕೆಲಸದಿಂದ ತೆಗೆದುಹಾಕಿದ.

ಅನಂತರ ಅವನು ನೆಕೇರ್ ಎಂಬುವನನ್ನು ಹಣಕಾಸು ಮಂತ್ರಿಯಾಗಿ ನೇಮಿಸಿದ. ನೆಕೇರ್ ರಾಜ್ಯದ ಹಣಕಾಸು ಪದ್ಧತಿಯನ್ನು ಹಿಂದಿನಂತೆಯೇ ಮುಂದುವರಿಸಿ, ಉಳಿತಾಯ ಮಾಡಬಹುದಾದ ಕ್ಷೇತ್ರಗಳಲ್ಲಿ ಸರಿಯಾದ ಕ್ರಮಗಳನ್ನು ಕೈಗೊಂಡು ಸಾರ್ವಜನಿಕರಿಂದ ಸಾಲವೆತ್ತುತ್ತಿದ್ದ. ಆದರೆ ಅಮೆರಿಕನ್ ಸ್ವಾತಂತ್ರ ಸಂಗ್ರಾಮದಲ್ಲಿ ಫ್ರಾನ್ಸ್ ಬರಿದಾಯಿತು. ತನ್ನ ಉಳಿತಾಯ ಯೋಜನೆಗಳಿಂದ ಯುದ್ಧದ ಆವಶ್ಯಕತೆಗಳನ್ನು ಪೂರೈಸಲಾಗದ ನೆಕೇರ್ ಶ್ರೀಮಂತ ವರ್ಗದವರೂ ಈ ಹೊರೆಯಲ್ಲಿ ಸ್ವಲ್ಪ ಭಾಗವನ್ನು ಹೊರಲೆಂದು ಆಶಿಸಿದ. ಆದರೆ ಶ್ರೀಮಂತರು ಅವನ ಮೇಲೆ ನಾನಾ ಆರೋಪಗಳನ್ನು ಹೊರಿಸಿ, ಅವನನ್ನು ಅಧಿಕಾರದಿಂದ ತೆಗೆಸಿ ಹಾಕಿದರು. ಹಣಕಾಸಿನ ಕೊರತೆಯನ್ನು ಭರ್ತಿಮಾಡುವುದು ಹೇಗೆಂಬುದೇ ಮುಖ್ಯ ಪ್ರಶ್ನೆಯಾಯಿತು. ಮಂತ್ರಿಗಳು ಮತ್ತು ಶ್ರೀಮಂತವರ್ಗದವರು ತೆರಿಗೆಯನ್ನು ಕೊಡುವಂತೆ ಮಾಡಬೇಕೆಂದು ಪಟ್ಟ ಶ್ರಮ ವ್ಯರ್ಥವಾಯಿತು. ಅವರು ಯಾವ ತೆರಿಗೆಗೂ ಒಪ್ಪಲಿಲ್ಲ.

1783ರಲ್ಲಿ ಕ್ಯಾಲಾನ್ ಎಂಬವನನ್ನು ಹಣಕಾಸು ಮಂತ್ರಿಯಾಗಿ ನೇಮಿಸಲಾಯಿತು. ಇವನು 1787ರ ವರೆಗೂ ಅಧಿಕಾರದಲ್ಲಿ ಮುಂದುವರಿದ. ಶ್ರೀಮಂತರನ್ನು ಒಲಿಸಿಕೊಳ್ಳದಿದ್ದರೆ ಹಣಕಾಸಿನ ಸಮಸ್ಯೆಯನ್ನು ಬಗೆಹರಿಸುವುದು ಕಷ್ಟವೆಂದು ಇವನು ಮನಗಂಡು ಕೆಲವು ಶ್ರೀಮಂತರನ್ನು ಬರಮಾಡಿಕೊಂಡು ದೇಶದ ಆರ್ಥಿಕ ಚಿತ್ರವನ್ನು ಅವರ ಮುಂದಿಟ್ಟು ಸರ್ಕಾರಕ್ಕೆ ತೆರಿಗೆ ಕೊಡುವ ಉದಾರಮನಸ್ಸು ಮಾಡಬೇಕೆಂದು ಬೇಡಿಕೊಂಡ. ಆದರೆ ಇವನ ಬೇಡಿಕೆಗೆ ಅವರು ಕಿವಿಕೊಡಲಿಲ್ಲ. ಹೀಗೆ 16ನೆಯ ಲೂಯಿ ಹಣಕಾಸಿನ ಬಿಕ್ಕಟ್ಟನ್ನು ಸುಧಾರಿಸಲು ಒಬ್ಬರಾದ ಮೇಲೊಬ್ಬರಂತೆ ಆರ್ಥಿಕ ತಜ್ಞರನ್ನು ಹಣಕಾಸು ಮಂತ್ರಿಗಳನ್ನಾಗಿ ನೇಮಿಸಿದ. ಇವರು ತೆರಿಗೆ ಮತ್ತು ಹಣಕಾಸು ಆಡಳಿತದಲ್ಲಿ ಸುಧಾರಣೆಗಳನ್ನು ಮಾಡಲು ಪ್ರಾಮಾಣಿಕವಾಗಿ ಪ್ರಯತ್ನಿಸಿದರು. ಆದರೆ ಇವರು ಸೂಚಿಸಿದ ಸುಧಾರಣೆಗಳೆಲ್ಲವನ್ನೂ ಮೇರಿ ಆಂಟಾಯ್ನೆಟ್ ಹಾಗೂ ಶ್ರೀಮಂತ ಆಸ್ಥಾನಿಕರು ತೀವ್ರವಾಗಿ ವಿರೋಧಿಸಿದರು. ಅವರ ಒತ್ತಾಯಕ್ಕೆ ಲೂಯಿ ಮಣಿದ. ದೇಶದ ಆರ್ಥಿಕ ಮುಗ್ಗಟ್ಟು ಇನ್ನೂ ಅಧಿಕವಾಯಿತು. ವಿವಿಧ ಭಾಗಗಳಲ್ಲಿ ಗಲಭೆಗಳಾಗುತ್ತಿದ್ದುವು. ಆಡಳಿತ ನಿರ್ವಹಣೆಗೆ ಹಣವಿಲ್ಲದಂತಾಯಿತು. ಸ್ಟೇಟ್ಸ್ ಜನರಲ್ ಸಭೆಯನ್ನು 1789ರಲ್ಲಿ ಕರೆಯಬೇಕಾಯಿತು. ಇದರೊಂದಿಗೆ ಕ್ರಾಂತಿ ಆರಂಭವಾಯಿತು.

ವರ್ಸೇಲ್ಸ್ ಅರಮನೆಯಲ್ಲಿ 1789ರ ಮೇ 5ರಂದು ಸ್ಟೇಟ್ಸ್ ಜನರಲ್ ಸಭೆಯ ಮಹಾಧಿವೇಶನ ಆರಂಭವಾಯಿತು. ನೂರಿಪ್ಪತ್ತೈದು ವರ್ಷಗಳಿಂದಲೂ ಸೇರದಿದ್ದ ಈ ಸಭೆಯ ಅಧಿವೇಶನದಿಂದ ಸಂತೋಷಗೊಂಡ ಜನರು ಇದರಿಂದ ಮಹತ್ತರ ಕಾರ್ಯವನ್ನು ನಿರೀಕ್ಷಿಸಿದ್ದರು. ಆದರೆ ಅವರ ಆಶೋತ್ತರಗಳು ಪೂರೈಸಲಿಲ್ಲ. ಶ್ರೀಮಂತರು, ಪಾದ್ರಿಗಳು ಮತ್ತು ಸಾಮಾನ್ಯ ಪ್ರತಿನಿಧಿಗಳು ಒಂದೆಡೆ ಕುಳಿತು ದೇಶದ ಜಟಿಲ ಸಮಸ್ಯೆಗಳನ್ನು ಚರ್ಚಿಸಬೇಕೆ ಅಥವಾ ಮೊದಲಿನಂತೆ ಮೂರು ವರ್ಗದವರೂ ಪ್ರತ್ಯೇಕವಾಗಿ ಕುಳಿತು ಅವನ್ನು ಚರ್ಚಿಸಬೇಕೆ ಎಂಬ ವಿಷಯದಲ್ಲಿ ಗೊಂದಲ ಆರಂಭವಾಯಿತು. ಮೂರೂ ವರ್ಗಗಳ ಪ್ರತಿನಿಧಿಗಳು ಒಟ್ಟಿಗೆ ಸೇರಿ ಮತನೀಡಿದರೆ ಮೂರನೆಯ ವರ್ಗದವರ ಅಭಿಪ್ರಾಯಗಳಿಗೆ ಬೆಂಬಲ ದೊರಕುವ ಸಾಧ್ಯತೆ ಇತ್ತು. ಆದ್ದರಿಂದ ಸಭೆ ಸಮಾವೇಶಗೊಂಡ ಕ್ಷಣದಲ್ಲೆ ಮತನೀಡುವ ಕ್ರಮದ ಬಗ್ಗೆ ಭಿನ್ನಾಭಿಪ್ರಾಯಗಳುಂಟಾದುವು. ಪ್ರತ್ಯೇಕ ಮತದಾನದ ಪರವಾಗಿ ರಾಜ ಮತ್ತು ಮೊದಲನೆಯ ಎರಡು ವರ್ಗಗಳವರು ವಾದಿಸಿದರು. ಆದರೆ ಎಲ್ಲರೂ ಒಟ್ಟಿಗೆ ಸೇರಿ ನಿರ್ಣಯಗಳನ್ನು ಮಾಡಬೇಕೆಂದು ಮೂರನೆಯ ವರ್ಗದ ಪ್ರತಿನಿಧಿಗಳು ಹಟಹಿಡಿದರು. ಈ ವರ್ಗದ ಪ್ರತಿನಿಧಿಗಳು ತಮ್ಮ ಕುಂದುಕೊರತೆಗಳನ್ನು ಹಾಗೂ ಸಲಹೆಗಳನ್ನು ಒಳಗೊಂಡಿದ್ದ ಪತ್ರಗಳನ್ನು ತಂದು, ತಮ್ಮ ಬೇಡಿಕೆಗಳನ್ನು ಘೋಷಿಸಿದರು. ಸಭಾಮಂದಿರದ ಬಾಗಿಲುಗಳನ್ನು ದೊರೆ ಬಲಾತ್ಕಾರವಾಗಿ ಮುಚ್ಚಿಸಿ ಸಭೆಯ ಕಲಾಪವನ್ನು ಮುಂದಕ್ಕೆ ಹಾಕಿದ. ರಾಜನ ಈ ನಿರ್ಣಯದಿಂದ ಕುಪಿತರಾದ ಮೂರನೆಯ ವರ್ಗದ ಪ್ರತಿನಿಧಿಗಳು ಪಕ್ಕದಲ್ಲಿದ್ದ ಟೆನ್ನಿಸ್ ಕೋರ್ಟಿನಲ್ಲಿ ಸಮಾವೇಶಗೊಂಡು ಫ್ರಾನ್ಸಿಗೆ ಸಂವಿಧಾನವನ್ನು ರೂಪಿಸುವವರೆಗೂ ತಾವು ಬೇರ್ಪಡುವುದಿಲ್ಲವೆಂದು ಪ್ರಮಾಣವಚನ ತೆಗೆದುಕೊಂಡರು. ಪರಿಸ್ಥಿತಿಯ ಭೀಕರತೆಯನ್ನು ಲೂಯಿ ಅರಿತುಕೊಂಡು ಮೂರೂ ವರ್ಗಗಳ ಪ್ರತಿನಿಧಿಗಳು ಒಟ್ಟಿಗೆ ಕುಳಿತು ಚರ್ಚಿಸಿ ಮತ ನೀಡಬಹುದೆಂದು ಅನುಮತಿ ನೀಡಿದ. ರಾಜನ ದೌರ್ಬಲ್ಯವನ್ನು ಅರಿತುಕೊಂಡ ಸಾಮಾನ್ಯ ವರ್ಗದವರು ತಮಗೆ ಸಾರ್ವಜನಿಕರ ಬೆಂಬಲವಿದೆಯೆಂಬುದನ್ನೂ ಸಭೆಯಲ್ಲಿ ತಾವು ಅಧಿಕ ಸಂಖ್ಯೆಯಲ್ಲಿದ್ದುದರಿಂದ ಯಾವ ಸುಧಾರಣೆಗಳನ್ನಾದರೂ ಜಾರಿಗೆ ತರಬಹುದೆಂಬುದನ್ನೂ ಮನಗಂಡರು.

ಈ ಮಧ್ಯೆ ಮೂರನೆಯ ವರ್ಗದ ಪ್ರತಿನಿಧಿಗಳು ಸ್ಟೇಟ್ಸ್-ಜನರಲ್ ಸಭೆಯನ್ನು ರಾಷ್ಟ್ರೀಯ ಸಭೆಯೆಂದು ಘೋಷಿಸಿ ತಮ್ಮ ಕಲಾಪಗಳನ್ನು ಪ್ರಾರಂಭಿಸಿದರು. ಮೀರಾಬೋ ಅವರ ನಾಯಕರಲ್ಲೊಬ್ಬ. ಲೂಯಿ ರಾಷ್ಟ್ರೀಯ ಸಭೆಯ ಕಲಾಪಗಳನ್ನು ಹತ್ತಿಕ್ಕಲು ಸೈನಿಕರಿಗೆ ಆಜ್ಞೆಮಾಡಿದ. ಸೈನ್ಯವನ್ನು ಹಿಂತೆಗೆದುಕೊಳ್ಳುವಂತೆ ಬೇಡಿಕೆ ಬಂದರೂ ಅದನ್ನು ನಿರಾಕರಿಸಿದ. ಇದರಿಂದ ರೊಚ್ಚಿಗೆದ್ದ ಪ್ಯಾರಿಸ್ ನಗರದ ಜನಸಮೂಹ ರಾಷ್ಟ್ರೀಯ ಸಭೆಯ ಸಹಾಯಕ್ಕೆ ಬಂತು.

ಜನಗಳು ರಾಜನ ವಿರುದ್ಧ ಘೋಷಣೆಗಳನ್ನು ಕೂಗುತ್ತ ಪಟ್ಟಣದ ಬೀದಿಯಲ್ಲಿ ಮೆರವಣಿಗೆ ನಡೆಸಿದರು. 1789 ಜುಲೈ 14 ರಂದು ಪ್ಯಾರಿಸಿನ ಜನರು ಆಯುಧಗಳನ್ನು ಹಿಡಿದುಕೊಂಡು ನಗರದ ಹೊರವಲಯದಲ್ಲಿದ್ದ ಬ್ಯಾಸ್ಟಿಲ್ ಸೆರೆಮನೆಗೆ ಮುತ್ತಿಗೆ ಹಾಕಿ ಅದರ ಕಾವಲುಗಾರರನ್ನೆಲ್ಲ ಕೊಂದು, ವಿಚಾರಣೆಯಿಲ್ಲದೆ ಸೆರೆವಾಸವನ್ನು ಅನುಭವಿಸುತ್ತಿದ್ದವರನ್ನೆಲ್ಲ ಬಿಡುಗಡೆ ಮಾಡಿದರು. ಈ ರೀತಿ ಅನೇಕ ಶತಮಾನಗಳಿಂದಲೂ ಫ್ರಾನ್ಸಿನ ನಿರಂಕುಶ ಪ್ರಭುತ್ವದ ಸಂಕೇತವಾಗಿದ್ದ ಬ್ಯಾಸ್ಟಿಲ್ ಸೆರೆಮನೆಯ ಧ್ವಂಸವಾಯಿತು. ಗಲಭೆಕಾರರು ನಗರದಲ್ಲೆಲ್ಲ ಸಂಚರಿಸಿ ಕೊಲೆ ಸುಲಿಗೆ ಮತ್ತು ಲೂಟಿಗಳನ್ನು ಮಾಡುತ್ತ ಅನೇಕ ಪಾದ್ರಿಗಳನ್ನು ಮತ್ತು ಶ್ರೀಮಂತರನ್ನು ಕೊಂದರು. ಕ್ರಾಂತಿಯ ಜ್ವಾಲೆ ಇಡೀ ದೇಶವನ್ನು ಆವರಿಸಿತು. ಕ್ರಾಂತಿಯ ಇತಿಹಾಸದಲ್ಲಿ 1789ರ ಅಕ್ಟೋಬರ್ 5 ಮತ್ತು 6ನೆಯ ದಿನಾಂಕಗಳು ಮಹತ್ತ್ವಪೂರ್ಣವಾದವು. ಬರಗಾಲದ ಬೇನೆಯಿಂದಲೂ ಆಹಾರದ ಅಭಾವದಿಂದಲೂ ಕಂಗೆಟ್ಟಿದ್ದ. ಪ್ಯಾರಿಸ್ ನಗರದ ಮಹಿಳೆಯರು ನಮಗೆ ರೊಟ್ಟಿ ಬೇಕು ಎಂದು ಘೋಷಣೆಗಳನ್ನು ಕೂಗುತ್ತ ವರ್ಸೇಲ್ಸ್ ಅರಮನೆಗೆ ಮುತ್ತಿಗೆ ಹಾಕಿದರು. ರಾಜರಾಣಿಯರು ತಮ್ಮ ಮಧ್ಯೆ ವಾಸಿಸುವಂತೆ ಮಾಡಿದರೆ ತಮ್ಮ ಸಮಸ್ಯೆಗಳು ಬಗೆಹರಿಯುವುದೆಂದು ಬಗೆದು ಅವರನ್ನು ವರ್ಸೇಲ್ಸ್ ಅರಮನೆಯಿಂದ ಬಲಾತ್ಕಾರವಾಗಿ ಕರೆತಂದು ಪ್ಯಾರಿಸ್ಸಿನ ಟ್ಯುಯಲರೀಸ್ ಅರಮನೆಯಲ್ಲಿಟ್ಟು ತಮ್ಮ ಮಧ್ಯೆ ವಾಸಿಸುವಂತೆ ಮಾಡಿದರು.

1789ರ ಆಗಸ್ಟ್‍ನಲ್ಲಿ ರಾಷ್ಟ್ರೀಯ ಸಭೆ ಚರಿತ್ರಾರ್ಹವಾದ ಕೆಲವು ಕಾನೂನುಗಳನ್ನು ಜಾರಿಗೆ ತಂದಿತು. ಶತಮಾನಗಳಿಂದಲೂ ಫ್ರಾನ್ಸಿನಲ್ಲಿ ಬೇರು ಬಿಟ್ಟಿದ್ದ ರಾಜಕೀಯ, ಸಾಮಾಜಿಕ ಮತ್ತು ಶ್ರೀಮಂತರ ವಿಶಿಷ್ಟ ಹಕ್ಕುಗಳನ್ನು ಕೊನೆಗೊಳಿಸಿ, ಚರ್ಚಿನ ಅಧಿಕಾರಿಗಳನ್ನು ಇನ್ನು ಮುಂದೆ ಸರ್ಕಾರವೇ ನೇಮಿಸಬೇಕೆಂದು ನಿರ್ಧರಿಸಿ ಅವರಿಗೆ ಸಂಬಳವನ್ನು ಗೊತ್ತುಪಡಿಸಿತು. ಜಹಗೀರುಗಳನ್ನು ವಶಪಡಿಸಿಕೊಂಡು ಊಳಿಗಮಾನ್ಯ ಪದ್ಧತಿಯನ್ನು ತೊಡೆದುಹಾಕಿತು. ಗುಲಾಮಿ ಪದ್ಧತಿಯನ್ನು ರದ್ದುಗೊಳಿಸಿತು. ಮಾನವಹಕ್ಕುಗಳ ಘೋಷಣೆ ಮಾಡಿತು. ರೂಸೋನ ತತ್ತ್ವಗಳಾದ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವಗಳನ್ನು ಈ ಘೋಷಣೆಯಲ್ಲಿ ಅಳವಡಿಸಲಾಗಿತ್ತು. ರಾಷ್ಟ್ರೀಯ ಸಭೆಯ ಈ ಕೆಲವು ಕ್ರಾಂತಿಕಾರಕ ನಿರ್ಣಯಗಳು ಫ್ರಾನ್ಸಿನಲ್ಲಿ ಎಲ್ಲ ವರ್ಗದವರಿಗೂ ಸಮಾನತೆಯನ್ನು ದೊರಕಿಸಿಕೊಟ್ಟುವು. ಇಂಥ ನಿರ್ಣಯಗಳಿಂದ ಅತೃಪ್ತರಾದ ಕೆಲವು ಪಾದ್ರಿಗಳು ಮತ್ತು ಸರದಾರರು ದೇಶ ಬಿಟ್ಟು ಓಡಿಹೋದರು.

ಈ ಮಧ್ಯೆ ರಾಷ್ಟ್ರೀಯ ಸಭೆಯ ಕ್ರಾಂತಿಕಾರಕ ನಿರ್ಣಯಗಳಿಂದ ಭಯಗೊಂಡ ದೊರೆ ಮತ್ತು ರಾಣಿ ಪ್ಯಾರಿಸಿನಿಂದ ತಪ್ಪಿಸಿಕೊಂಡು ಓಡಿಹೋಗಿ ಆಸ್ಟ್ರಿಯದ ರಾಜನ ಸಹಾಯವನ್ನು ಪಡೆದು ಕ್ರಾಂತಿಯನ್ನು ಹತ್ತಿಕ್ಕಲು ಪ್ರಯತ್ನಿಸಿದರು. ಓಡಿಹೋಗುತ್ತಿದ್ದ ಅವರನ್ನು ಕ್ರಾಂತಿಕಾರರು ಪತ್ತೆಹಚ್ಚಿ ಪ್ಯಾರಿಸಿಗೆ ವಾಪಸು ಕರೆತಂದರು. ಅವರು ರಾಷ್ಟ್ರದ್ರೋಹಿಗಳೆಂದು ಪರಿಗಣಿತರಾದರು. ರಾಷ್ಟ್ರೀಯ ಸಭೆ 1791ರ ಸೆಪ್ಪೆಂಬರ್‍ನಲ್ಲಿ ಹೊಸ ಸಂವಿಧಾನವನ್ನು ಚಾರಿಗೆ ತಂದಿತು. ಇದರ ಪ್ರಕಾರ ಫ್ರಾನ್ಸಿನಲ್ಲಿ ನಿರಂಕುಶ ಪ್ರಭುತ್ವ ಕೊನೆಗೊಂಡು, ಸಾಂಕುಶ ಪ್ರಭುತ್ವ ಜಾರಿಗೆ ಬಂತು. ಈ ಸಂವಿಧಾನವನ್ನು ಚಾರಿಗೆ ತಂದ ಬಳಿಕ ರಾಷ್ಟ್ರೀಯ ಸಭೆ ವಿಸರ್ಜನೆಗೊಂಡಿತು. ಸಂವಿಧಾನದ ಪ್ರಕಾರ ಅಸ್ತಿತ್ವಕ್ಕೆ ಬಂದ ವಿಧಾನಸಭೆ ಅದರ ಕಲಾಪಗಳನ್ನು ಮುಂದುವರಿಸಿತು. ವಿಧಾನಸಭೆಯಲ್ಲಿ ಅನೇಕ ರಾಜಕೀಯ ಪಕ್ಷಗಳಿದ್ದವು. ಜಾಕೊಬಿನ್ನರ ಮತ್ತು ಗಿರಾಂಡಿಯನ್ನರ ಗುಂಪುಗಳು ಬಹಳ ಮುಖ್ಯವಾಗಿದ್ದುವು.

ರಾಜರಾಣಿಯರು ಸಿಕ್ಕಿಹಾಕಿಕೊಂಡ ಸುದ್ದಿ ಆಸ್ಟ್ರಿಯ ಚಕ್ರವರ್ತಿಯಾದ 16ನೆಯ ಲೂಯಿಯ ಹೆಂಡತಿಯ ಸೋದರನೂ ಆದ ಲೀಯೊಪಾಲ್ಡನಿಗೆ ತಿಳಿದಾಗ ಅವನು ಫ್ರಾನ್ಸಿನ ದೊರೆಯನ್ನು ಸಿಂಹಾಸನದಲ್ಲಿ ಮತ್ತೆ ಕೂರಿಸಲು ಹಾಗೂ ಕ್ರಾಂತಿಯನ್ನು ಹತ್ತಿಕ್ಕಲು ನೆರವು ನೀಡಬೇಕೆಂದು ರಷ್ಯ, ಇಂಗ್ಲೆಂಡ್, ಪ್ರಷ್ಯ, ಸ್ಪೇನ್, ನೇಪಲ್ಸ್ ಮತ್ತು ಸಾರ್ಡೀನಿಯಗಳನ್ನು ಕೇಳಿಕೊಂಡ. ಆದರೆ ಪ್ರಷ್ಯವನ್ನು ಬಿಟ್ಟರೆ ಯೂರೋಪಿನ ಉಳಿದ ದೇಶಗಳ ಸೈನ್ಯಗಳು ದೇಶ ಬಿಟ್ಟು ಓಡಿ ಬಂದಿದ್ದ ಕೆಲವು ಶ್ರೀಮಂತರ ಸಹಾಯದಿಂದ ಫ್ರಾನ್ಸಿನ ಮೇಲೆ ಆಕ್ರಮಣ ಮಾಡಿದುವು. ಮೊದಮೊದಲು ಕ್ರಾಂತಿಕಾರರು ಅನೇಕ ಅಪಜಯಗಳನ್ನು ಅನುಭವಿಸಬೇಕಾಯಿತು. ಆದಾಗ್ಯೂ ಅವರು ಸ್ವಲ್ಪ ಸಮಯದಲ್ಲಿಯೇ ಚೇತರಿಸಿಕೊಂಡು ಜರ್ಮನಿಯ ರೈನ್ ಪ್ರದೇಶ ಮತ್ತು ಆಸ್ಟ್ರೀಯದ ನೆದರ್‍ಲೆಂಡ್ಸ್‍ಗಳ ಮೇಲೆ ದಾಳಿ ಮಾಡಿ ಕೆಲವು ಪಟ್ಟಣಗಳನ್ನು ವಶಪಡಿಸಿಕೊಂಡರು. ಈ ವಿಜಯಗಳಿಂದ ಸ್ಛೂರ್ತಿಗೊಂಡ ಕ್ರ್ರಾಂತಿಕಾರರು ಯೂರೋಪಿನ ಇತರ ರಾಜ್ಯಗಳಲ್ಲಿ ನಿರಂಕುಶ ಪ್ರಭುಗಳ ಆಳ್ವಿಕೆಯಿಂದ ಪರಿತಪಿಸುತ್ತಿದ್ದ ಜನತೆಗೆ ಬಹಿರಂಗವಾಗಿ ಬೆಂಬಲವನ್ನು ಸೂಚಿಸಿ ಅವರೂ ತಮ್ಮ ರಾಜರುಗಳ ವಿರುದ್ದ ದಂಗೆ ಏಳುವಂತೆ ಪ್ರಚೋದಿಸಿದರು.

ಈ ಎಲ್ಲ ಘಟನೆಗಳ ಮಧ್ಯದಲ್ಲಿ ಕ್ರಾಂತಿ ಭೀಕರ ಸ್ವರೂಪ ತಾಳಿತು. ಕ್ರಾಂತಿಕಾರರ ಸೈನ್ಯ ಮೊದಲು ಅನುಭವಿಸಿದ ಸೋಲಿಗೆ ರಾಜ ಮತ್ತು ಅವನ ಬೆಂಬಲಿಗರೇ ಕಾರಣವೆಂದು ತಿಳಿದ ಕ್ರ್ರಾಂತಿಕಾರರು ಅವರೆಲ್ಲರನ್ನೂ ಕೊನೆಗಾಣಿಸಲು ತೀರ್ಮಾನಿಸಿದರು. ಕ್ರಾಂತಿಕಾರರಲ್ಲಿ ಉಗ್ರವಾದಿಗಳು ರಾಜತ್ವವನ್ನೇ ರದ್ದುಪಡಿಸಬೇಕೆಂದು ಸೂಚಿಸಿದರಲ್ಲದೆ, ಕ್ರಾಂತಿವಿರೋಧಿಗಳನ್ನು ನಿರ್ದಯವಾಗಿ ಅಡಗಿಸಬೇಕೆಂದು ತಿಳಿಸಿದರು. 1792 ಆಗಸ್ಟ್ 10ರಂದು ಡಾಂಟನ್ನನ ನಾಯಕತ್ವದಲ್ಲಿ ಕ್ರಾಂತಿಕಾರರು ಟ್ಯುಯಲರೀಸ್ ಅರಮನೆಗೆ ಮುತ್ತಿಗೆ ಹಾಕಿ ರಕ್ಷಣಾದಳದವರನ್ನು ಕೊಂದುಹಾಕಿ, ರಾಜರಾಣಿಯರನ್ನು ಸೆರೆಯಲ್ಲಿಟ್ಟರು. ಇದಾದ ಮೇಲೆ ಕ್ರಾಂತಿಯ ಇತಿಹಾಸದ ಕರಾಳ ಘಟನೆ ಜರುಗಿತು. 1792ರ ಸೆಪ್ಪೆಂಬರ್ 2 ಮತ್ತು 3ರಂದು ಕ್ರಾಂತಿಕಾರರು ರಾಜರಾಣಿಯರ ಬೆಂಬಲಿಗರೆಂದು ತಿಳಿದುಬಂದವರನ್ನೆಲ್ಲ ಹಿಡಿದು ನೂರಾರು ಸಂಖ್ಯೆಯಲ್ಲಿ ಪ್ಯಾರಿಸ್ಸಿನ ಬೀದಿಗಳಲ್ಲಿ ಕೊಂದರು. ಸೆಪ್ಪೆಂಬರ್ ಕಗ್ಗೊಲೆಯೆಂದು ಇದು ಹೆಸರಾಗಿದೆ. ಅದೇ ತಿಂಗಳ ಕೊನೆಯಲ್ಲಿ ವಿಧಾನಸಭೆ ರಾಜತ್ವವನ್ನು ರದ್ದುಗೊಳಿಸಿ ಪ್ರಥಮ ಬಾರಿಗೆ ಪ್ರಚಾಪ್ರಭುತ್ವವನ್ನು ಘೋಷಿಸಿತು. ಸರ್ಕಾರದ ಆಡಳಿತ ವ್ಯವಹಾರಗಳನ್ನು ನೋಡಿಕೊಳ್ಳಲು ವಿಧಾನಸಭೆಯ ಸ್ಥಾನದಲ್ಲಿ ರಾಷ್ಟ್ರೀಯ ಸಮಿತಿ ಅಸ್ತಿತ್ವಕ್ಕೆ ಬಂತು. ಹೊಸ ಸರ್ಕಾರ ಯುದ್ಧವನ್ನು ದಕ್ಷತೆಯಿಂದ ಮುಂದುವರಿಸಿತು. ಒಳಾಡಳಿತದಲ್ಲಿ ಕೆಲವು ತ್ವರಿತವಾದ ನಿರ್ಣಯಗಳನ್ನು ಕೈಗೊಂಡಿತು. 16ನೆಯ ಲೂಯಿ ರಾಷ್ಟ್ರದ್ರೋಹಿಯೆಂದು ಆಪಾದಿಸಿ 1793ರ ಜನವರಿ 21ರಂದು ಅವನ ಶಿರಚ್ಛೇದ ಮಾಡಲಾಯಿತು. ರಾಜನ ಕೊಲೆಯನ್ನು ವಿರೋಧಿಸಿದ ಗಿರಾಂಡಿಯನ್ ಅಥವಾ ಮಂದಗಾಮಿ ಪಕ್ಷದ ನಾಯಕರುಗಳನ್ನೂ ಅದೇ ರೀತಿ ಕೊಲ್ಲಲಾಯಿತು. ಆ ವರ್ಷದ ಅಕ್ಟೋಬರ್ ತಿಂಗಳಲ್ಲಿ ಮೇರಿ ಆಂಟಾಯ್ನೆಟ್ಟಳನ್ನೂ ಗಲ್ಲಿಗೇರಿಸಲಾಯಿತು. 1793ರ ಜೂನ್‍ನಿಂದ 1794ರ ಜುಲೈವರೆಗೆ ಫ್ರಾನ್ಸಿನಲ್ಲಿ ಭೀತಿಯ ವಾತಾವರಣವಿತ್ತು.

ಫ್ರಾನ್ಸಿನ ಕ್ರಾಂತಿಕಾರಿ ಸರ್ಕಾರ ಆಂತರಿಕ ಮತ್ತು ವಿದೇಶಾಂಗ ಕ್ಷೇತ್ರಗಳಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಯಿತು. ಫ್ರಾನ್ಸಿನ ರಾಜರಾಣಿಯರ ಕೊಲೆಯಿಂದ ಭೀತರಾದ ಇಂಗ್ಲೆಂಡ್, ಸ್ಪೇನ್ ಮತ್ತು ಹಾಲೆಂಡ್ ರಾಜರು ಆಸ್ಟ್ರಿಯ ಮತ್ತು ಪ್ರಷ್ಯಗಳೊಂದಿಗೆ ಸೇರಿ ಯುದ್ಧಕ್ಕೆ ಸಿದ್ದರಾದರು. ಇದೊಂದು ಪ್ರಬಲ ಒಕ್ಕೂಟವಾಗಿತ್ತು. ಫ್ರಾನ್ಸಿನ ಒಳಗಡೆಯೂ ಕ್ರಾಂತಿ ವಿರೋಧಿಗಳ ಪ್ರಾಬಲ್ಯ ಹೆಚ್ಚಿತು. ಈ ಸಮಸ್ಯೆಗಳನ್ನು ಎದುರಿಸಲು ರಾಷ್ಟ್ರೀಯ ಸಮಿತಿ ಜಾಕೊಬಿನ್ ಪಕ್ಷದ ಉಗ್ರವಾದಿಗಳಾದ ಡಾಂಟೆನ್ ಮತ್ತು ರಾಬೆಸ್ಪ್ಯೇರರ ನಾಯಕತ್ವದಲ್ಲಿ ಒಂಬತ್ತು ಜನರಿಂದ ಕೂಡಿದ ಸಾರ್ವಜನಿಕ ರಕ್ಷಣಾ ಸಮಿತಿಯನ್ನು ರಚಿಸಿತು. ಈ ಸಮಿತಿ ಯಾರನ್ನು ಬೇಕಾದರೂ ಬಂಧಿಸಿ ಕೊಲ್ಲಿಸುವ ಅಧಿಕಾರ ಹೊಂದಿತ್ತು. ಸಾರ್ವಜನಿಕ ರಕ್ಷಣಾ ಸಮಿತಿ ಒಂದು ವರ್ಷಕಾಲ ಫ್ರಾನ್ಸಿನಲ್ಲಿ ಭಯಾನಕ ಆಡಳಿತ ನಡೆಸಿತು. ಕ್ರಾಂತಿಯ ವಿರೋಧಿಗಳೆಂದು ಸಂಶಯ ಬಂದ ಸಾವಿರಾರು ವ್ಯಕ್ತಿಗಳನ್ನು ಸ್ವಾತಂತ್ರ್ಯದ ಹೆಸರಿನಲ್ಲಿ ಗಲ್ಲಿಗೇರಿಸಿತು. ತರುವಾಯ ಈ ಸಮಿತಿ ತನ್ನ ದೃಷ್ಟಿಯನ್ನು ಸಮಿತಿಯ ಸದಸ್ಯರ ಕಡೆ ತಿರುಗಿಸಿತು. ಕೊನೆಗೆ ಡಾಂಟನ್ ಮತ್ತು ರಾಬೆಸ್ಪ್ಯೇರರ ನಡುವೆ ಭಿನ್ನಾಭಿಪ್ರಾಯಗಳುಂಟಾಗಿ ಡಾಂಟನ್ ಕೂಡ ಶಿರಚ್ಛೇದಕ್ಕೆ ಗುರಿಯಾದ. ಡಾಂಟನನ ಮರಣದ ತರುವಾಯ ಸಾರ್ವಜನಿಕ ರಕ್ಷಣಾ ಸಮಿತಿಯ ಇತರ ಸದಸ್ಯರಿಗೂ ಹೆದರಿಕೆ ಉಂಟಾಯಿತು. ರಾಬೆಸ್ಪ್ಯೇರ್ ತಮ್ಮ ತಲೆಗಳನ್ನೂ ತೆಗೆದುಕೊಳ್ಳುವನೆಂದು ಭೀತಿಗೊಂಡು ಅವನ ವಿರುದ್ದ ಸಂಚು ಮಾಡಿದರು. ಪ್ಯಾರಿಸ್ಸಿನ ಜನರನ್ನು ಎತ್ತಿಕಟ್ಟಿದರು. ರಾಬೆಸ್ಪ್ಯೇರನನ್ನು ಬಂಧಿಸಿ 1794ರ ಜುಲೈ 28ರಂದು ಗಲ್ಲಿಗೇರಿಸಲಾಯಿತು. ಅವನ ಮರಣದೊಂದಿಗೆ ಫ್ರಾನ್ಸಿನಲ್ಲಿ ಭಯಾನಕ ಆಡಳಿತದ ಪ್ರಕರಣ ಕೊನೆಗೊಂಡಿತು.

ಅನಂತರ ರಾಷ್ಟ್ರೀಯ ಸಮಿತಿ ಫ್ರೆಂಚ್ ಪ್ರಜಾರಾಜ್ಯಕ್ಕೆ ಹೊಸ ಸಂವಿಧಾನವನ್ನು ರಚಿಸಿ, ವಿಸರ್ಜನೆಗೊಂಡಿತು. ಈ ಸಂವಿಧಾನದ ಪ್ರಕಾರ ಆಡಳಿತಾಧಿಕಾರವನ್ನು ಐವರು ನಿರ್ದೇಶಕರಿಗೆ ವಹಿಸಲಾಯಿತು. ಶಾಸನ ಮಾಡುವುದಕ್ಕಾಗಿ ಎರಡು ಸಭೆಗಳಿಂದ ಕೂಡಿದ ಶಾಸನಾಂಗವನ್ನು ರಚಿಸಲಾಯಿತು. ನಿರ್ದೇಶಕ ಸರ್ಕಾರ ನಾಲ್ಕು ವರ್ಷಗಳ ಕಾಲ (1795-99) ಅಧಿಕಾರದಲ್ಲಿತ್ತು. ಮಹತ್ತ್ವಾಕಾಂಕ್ಷಿ ನೆಪೋಲಿಯನ್ 1799ರಲ್ಲಿ ನಿರ್ದೇಶಕ ಸರ್ಕಾರವನ್ನು ಉರುಳಿಸಿ ಅಧಿಕಾರಾರೂಢನಾದ.

ಪರಿಣಾಮಗಳು: ಫ್ರಾನ್ಸಿನ ಕ್ರಾಂತಿಯಿಂದ ವಿನಾಶಕಾರಿಯಾದ ಪರಿಣಾಮಗಳುಂಟಾದುವೇ ಹೊರತು ಬೇರೆ ಯಾವುದೇ ರೀತಿಯ ಮಹತ್ತ್ವಪೂರ್ಣ ಪರಿಣಾಮಗಳು ಉಂಟಾಗಲಿಲ್ಲ ಎಂಬುದು ಸಾಮಾನ್ಯವಾಗಿ ಹೊರನೋಟಕ್ಕೆ ಕಂಡುಬರುವ ವಿಷಯ. ಏಕೆಂದರೆ ಕ್ರಾಂತಿ ಮತ್ತು ಕ್ರಾಂತಿಕಾರರ ಧ್ಯೇಯೋದ್ದೇಶಗಳ ಸಾಧನೆ ಏಕಕಾಲದಲ್ಲಿ ಆಗಲಿಲ್ಲ. ಕ್ರಾಂತಿ ಆರಂಭವಾದ ಕೆಲವು ದಿವಸಗಳಲ್ಲೇ ಅದು ರಚನಾತ್ಮಕ ಕಾರ್ಯಗಳನ್ನು ಕೈಗೊಳ್ಳುವ ಬದಲು ವಿಪತ್ಕಾರಕ ಕೆಲಸಗಳಲ್ಲಿ ತೊಡಗಿತು. ಕ್ರಾಂತಿಕಾರರು ವಿನಾಶಕಾರಕ ಯುದ್ಧಗಳಲ್ಲಿ ತೊಡಗಿದರು. ರಚನಾತ್ಮಕ ಕಾರ್ಯಗಳ ಕಡೆ ಗಮನ ಕೊಡಲಿಲ್ಲ. ರಾಜ, ರಾಣಿ ಮತ್ತು ಇತರ ಕ್ರಾಂತಿವಿರೋಧಿಗಳನ್ನೇ ಅಲ್ಲದೆ ಸಹಸ್ರಾರು ಸಂಖ್ಯೆಯಲ್ಲಿ ನಿರಪರಾಧಿ ಜನರ ತಲೆ ಕಡಿಯುವುದರಲ್ಲಿ ಕ್ರಾಂತಿ ಪರ್ಯವಸಾನಗೊಂಡಿತು. ಅಲ್ಲದೆ ಕ್ರಾಂತಿಯ ಉದಾತ್ತ ತತ್ತ್ವಗಳ ಹೆಸರಿನಲ್ಲಿ ಭೀಕರವೂ ಹಿಂಸಾತ್ಮಕವೂ ಆದ ಘಟನೆಗಳು ಜರುಗಿದವು. ಈ ಕ್ರಾಂತಿ ನಿರಂಕುಶ ಪ್ರಭುತ್ವವನ್ನು ನಾಶಪಡಿಸಿದ ಮೇಲೆ ಪ್ರಜಾಪ್ರಭುತ್ವ ಸ್ಥಾಪನೆಗೆ ಬದಲಾಗಿ ಸರ್ವಾಧಿಕಾರಿಯ ಉದಯಕ್ಕೆ ಅವಕಾಶ ಕಲ್ಪಿಸಿಕೊಟ್ಟು ಇಂಗ್ಲೆಂಡಿನ ಬರ್ಕ್ ಕವಿ ನುಡಿದಿದ್ದ ಭವಿಷ್ಯವನ್ನು ನಿಜವಾಗಿಸಿತು. ಈ ಕ್ರಾಂತಿ ಅಜ್ಞಾನಿಗಳಾದ ಜನಸಮುದಾಯದ ಉದ್ವೇಗ ಮಾತ್ರವೆಂದೂ ಇದು ಕೊನೆಗೆ ಯಾವನಾದರೂ ಒಬ್ಬ ಸ್ವಾರ್ಥಿಯ ಸರ್ವಾಧಿಕಾರದಲ್ಲಿ ಪರ್ಯವಸಾನಗೊಳ್ಳುವುದೆಂದೂ ಬರ್ಕ್ ಮುನ್ನುಡಿದಿದ್ದ. ಅದು ನಿಜವಾಯಿತು. ಆದರೆ ಫ್ರಾನ್ಸಿನ ಕ್ರಾಂತಿಯಿಂದುಂಟಾದ ಪ್ರತ್ಯಕ್ಷ ಪರಿಣಾಮಗಳಿಗಿಂತಲೂ ಪರೋಕ್ಷ ಪರಿಣಾಮಗಳು ಬಹು ಮುಖ್ಯವಾಗಿದ್ದು ಅವು ನವಸಮಾಜದ ಉದಯಕ್ಕೆ ಕಾರಣವಾದುವು.

ಈ ಕ್ರಾಂತಿ ಯೂರೋಪಿನ ಇತಿಹಾಸದಲ್ಲೇ ಅಲ್ಲದೆ ವಿಶ್ವದ ಇತಿಹಾಸದಲ್ಲೂ ಒಂದು ಪ್ರಮುಖ ಘಟನೆ. ಇದು ಯೂರೋಪಿನ ರಾಜ್ಯಗಳ ರಾಜಕಾರಣದಲ್ಲಿ ಮೂರನೆಯ ವರ್ಗದ ಜನತಾ ಶಕ್ತಿಯ ಪ್ರವೇಶಕ್ಕೆ ಅವಕಾಶ ಮಾಡಿಕೊಟ್ಟಿತು. ಇದು ಮುಂದೆ ಪ್ರಜಾಪ್ರಭುತ್ವದ ಸ್ಥಾಪನೆಗಾಗಿ ಸಾಧಿಸಲಾದ ದೊಡ್ಡ ವಿಜಯವಾಗಿತ್ತು. ಫ್ರಾನ್ಸಿನ ಕ್ರಾಂತಿಯ ಘೋಷಣೆಗಳಾದ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವ ತತ್ತ್ವಗಳಿಂದ ಇಡೀ ಮಾನವಕೋಟಿ ಪ್ರಭಾವಿತವಾಗಿದೆ. ಇವು ಆಧುನಿಕ ಪ್ರಜಾಪ್ರಭುತ್ವಕ್ಕೆ ಆಧಾರಸ್ತಂಭಗಳಾಗಿವೆ. ಇವುಗಳಿಂದ ಜನರ ಮನಸ್ಸು ವಿಕಾಸಗೊಂಡು ಸ್ವಾತಂತ್ರ್ಯ ಮತ್ತು ಸಮಾನತೆಗಾಗಿ ಹೋರಾಟ ವೃದ್ದಿ ಹೊಂದುವುದಕ್ಕೂ ಆಧುನಿಕ ಯುಗದಲ್ಲಿ ರೂಪುಗೊಳ್ಳತ್ತಿರುವ ವಿಶ್ವಭ್ರಾತೃತ್ವ ಭಾವನೆಯ ಪ್ರಚಾರಕ್ಕೂ ಫ್ರಾನ್ಸಿನ ಕ್ರಾಂತಿ ಶಾಶ್ವತವಾದ ಪರಿಸರವನ್ನು ಸೃಷ್ಟಿಸಿತು. ಈ ಕ್ರಾಂತಿ ನಾಗರಿಕ ಜಗತ್ತಿಗೆ ನೀಡಿರುವ ಕೊಡುಗೆಗಳ ಪೈಕಿ ಮಾನವ ಹಕ್ಕುಗಳ ಘೋಷಣೆ ಬಹುಮುಖ್ಯವಾದ್ದಾಗಿದೆ. ಇದರಿಂದ ಯೂರೋಪಿನಲ್ಲಿ ಮತ್ತು ವಿಶ್ವದ ನಾನಾ ಭಾಗಗಳಲ್ಲಿ ನಿರಂಕುಶ ಪ್ರಭುತ್ವಗಳು ಮತ್ತು ಊಳಿಗಮಾನ್ಯ ಪದ್ಧತಿಗಳು ಪತನ ಹೊಂದಿದುವು. ನವಸಮಾಜ ಅಸ್ತಿತ್ವಕ್ಕೆ ಬಂತು. ಹತ್ತೊಂಬತ್ತನೆಯ ಶತಮಾನ ರಾಷ್ಟ್ರೀಯತೆಯ ಮತ್ತು ಪ್ರಜಾಪ್ರಭುತ್ವ ಸ್ಥಾಪನೆಯ ಯುಗವಾಗಿ ಮಾರ್ಪಡಲು ಈ ಕ್ರಾಂತಿ ಕಾರಣವಾಯಿತು. ಅಂತೆಯೇ ಇಪ್ಪತ್ತನೆಯ ಶತಮಾನದಲ್ಲಿ ಏಷ್ಯ, ಆಫ್ರಿಕ ಮತ್ತು ಲ್ಯಾಟಿನ್ ಅಮೆರಿಕಗಳ ರಾಜ್ಯಗಳು ಪರಕೀಯರ ದಾಸ್ಯದಿಂದ ವಿಮೋಚನೆ ಪಡೆದು ಸ್ವತಂತ್ರ ರಾಷ್ಟ್ರಗಳಾಗಲು ಈ ಕ್ರಾಂತಿ ಮಾರ್ಗದರ್ಶಕವಾಯಿತು. ಹೀಗೆ ಇದು ಮಾನವ ಇತಿಹಾಸದ ಮೇಲೆ ಮಹತ್ತ್ವಪೂರ್ಣ ಪರಿಣಾಮಗಳನ್ನುಂಟು ಮಾಡಿ ನಾಗರಿಕತೆಯ ಮುನ್ನಡೆಗೆ ಮುಖ್ಯ ಕೊಡುಗೆ ಸಲ್ಲಿಸಿತು. (ಎಂ.ಜಿ.)