ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಫ್ರೆಂಚ್ ಕ್ರಾಂತಿ ಯುದ್ಧಗಳು

ವಿಕಿಸೋರ್ಸ್ದಿಂದ

ಫ್ರೆಂಚ್ ಕ್ರಾಂತಿ ಯುದ್ಧಗಳು

ಫ್ರೆಂಚ್ ಕ್ರಾಂತಿಯ ಫಲವಾಗಿ 1792ರಿಂದ 1799ರ ವರೆಗೆ ಫ್ರಾನ್ಸ್ ಮತ್ತು ಯೂರೋಪಿನ ಇತರ ರಾಷ್ಟ್ರಗಳ ನಡುವೆ ನಡೆದ ಯುದ್ಧಗಳನ್ನು ಹೀಗೆಂದು ಕರೆಯಲಾಗಿದೆ. ಅನಂತರ ಮುಂದುವರಿದ ಯುದ್ಧಗಳಿಗೆ ನೆಪೋಲಿಯಾನಿಕ್ ಯುದ್ಧಗಳೆಂದು ಇತಿಹಾಸದಲ್ಲಿ ಹೆಸರು ಬಂದಿದೆ.

ಇವು ಫ್ರೆಂಚ್ ಕ್ರಾಂತಿಯ ನವ ನಿರ್ಮಾಣಶಕ್ತಿ ಮತ್ತು ಹಳೆಯ ರಾಜಕೀಯ ಮತ್ತು ಸಾಮಾಜಿಕ ವ್ಯವಸ್ಥೆ ಇವುಗಳ ನಡುವಿನ ಅಂತರರಾಷ್ಟ್ರೀಯ ಸಮರದ ಪ್ರಾರಂಭವಾಗಿತ್ತು. ಈ ಯುದ್ಧಗಳಿಗೆ ಸ್ವತಃ ಫ್ರಾನ್ಸಿನ ಮತ್ತು ಯೂರೋಪಿನ ರಾಷ್ಟ್ರಗಳ ಅನೇಕಾನೇಕ ಸ್ವಾಭಾವಿಕ ಹಾಗೂ ಕಲ್ಪಿತ ಕಾರಣಗಳು ಸಹಕಾರಿಗಳಾದುವು. ತಾವು ಮಹತ್ವಪೂರ್ಣವಾದ ಸ್ವಾತಂತ್ರ್ಯ, ಸಮಾನತೆ ಮತ್ತು ರಾಷ್ಟ್ರೀಯತೆಯ ತತ್ತ್ವಗಳಿಗೆ ಹೋರಾಡುತ್ತಿದ್ದೇವೆಂಬ ಉತ್ಸಾಹ ಫ್ರೆಂಚರಲ್ಲಿತ್ತು. ಫ್ರೆಂಚರ ಸೇನೆ ಅಶಿಸ್ತು ಹಾಗೂ ಅವ್ಯವಸ್ಥೆಯಿಂದ ಕೂಡಿದ್ದರೂ ಈ ಉತ್ಸಾಹ ಅದಕ್ಕೆ ಬೆಂಬಲವಾಗಿತ್ತು. ಫ್ರೆಂಚ್ ಕ್ರಾಂತಿಯ ಘೋಷಣೆಗಳ ಮತ್ತು ಫ್ರಾನ್ಸಿನ ಅತಿಕ್ರಮಣ ನೀತಿಯ ಎದುರು ಯೂರೋಪಿನ ರಾಷ್ಟ್ರಗಳು ಸಂಘಟಿತವಾದುವು. ಫ್ರಾನ್ಸಿನಲ್ಲಿ ಪುನಃ ರಾಜಪ್ರಭುತ್ವವನ್ನು ಸ್ಥಾಪಿಸಿ ತಮ್ಮ ದೇಶಗಳಲ್ಲಿ ಎಂದಿನ ಆಡಳಿತ ವ್ಯವಸ್ಥೆಯನ್ನು ಮುಂದುವರಿಸಿಕೊಂಡು ಹೋಗುವುದು ಈ ರಾಷ್ಟ್ರಗಳ ಏಕೈಕ ಉದ್ದೇಶವಾಗಿತ್ತು. ಫ್ರೆಂಚ್ ಕ್ರಾಂತಿಯ ಫಲವಾಗಿ 1791ರಲ್ಲಿ ಸಂವಿಧಾನವೊಂದು ರೂಪುಗೊಂಡಿತು. ಫ್ರಾನ್ಸಿನಲ್ಲಿ ನಿರಂಕುಶ ಪ್ರಭುತ್ವವನ್ನು ಕೊನೆಗೊಳಿಸಿ ಅದರ ಸ್ಥಾನದಲ್ಲಿ ಪ್ರಜಾಪ್ರಭುತ್ವವನ್ನು ಸ್ಥಾಪಿಸುವುದು, ಈ ಸಂವಿಧಾನದ ಉದ್ದೇಶ. ರಾಜ ನಿರ್ವಹಿಸುತ್ತಿದ್ದ ಅನೇಕ ಅಧಿಕಾರಗಳು ಜನರಿಂದ ಆಯ್ಕೆಯಾದ ವಿಧಾನಸಭೆಗೆ ವರ್ಗಾಯಿಸಲ್ಪಟ್ಟುವು. ಶ್ರೀಮಂತರ ಸವಲತ್ತುಗಳು, ಚರ್ಚಿನ ಆಸ್ತಿಪಾಸ್ತಿ ಮತ್ತು ರಾಜನ ಅಧಿಕಾರವನ್ನು ಮಿತಿಗೊಳಿಸಲಾಗಿತ್ತು. ರಾಷ್ಟ್ರೀಯ ಸಭೆಗೆ ಕೈಗೊಂಡ ಈ ಸುಧಾರಣೆಗಳು ಯೂರೋಪಿನ ಅನೇಕ ಭಾಗಗಳಲ್ಲಿ ಪ್ರಶಂಸೆಗೆ ಒಳಗಾದುವು. ಆದರೆ ಕೆಲವೇ ತಿಂಗಳುಗಳಲ್ಲಿ ಈ ಪ್ರಶಂಸೆಯ ಬದಲು ಸಂದೇಹಗಳು ತಲೆದೋರಿ ಕೊನೆಗೆ ದ್ವೇಷ ಹುಟ್ಟಿತು. ಆಗ ಬ್ರಿಟನ್ನನ್ನುಳಿದು ಎಲ್ಲ ಐರೋಪ್ಯ ರಾಷ್ಟ್ರಗಳಲ್ಲೂ ಎಂದಿನ ಹಳೆಯ ರಾಜಕೀಯ ವ್ಯವಸ್ಥೆಯೇ ಮುಂದುವರಿದುಕೊಂಡು ಬಂದಿತ್ತು. ಬ್ರಿಟನ್ನಿನಲ್ಲಿ ಸಂವೈಧಾನಿಕ ರಾಜಪ್ರಭುತ್ವವಿತ್ತು. ನೆರೆಯ ರಾಷ್ಟ್ರವೊಂದು ತಮ್ಮ ರಾಜಕೀಯ ವ್ಯವಸ್ಥೆಯನ್ನು ಅನುಸರಿಸಲು ಹವಣಿಸುತ್ತಿದೆಯೆಂದು ಬ್ರಿಟಿಷ್ ರಾಜಕೀಯ ಧುರೀಣರು ಬಗೆದು ಫ್ರೆಂಚ್ ಕ್ರಾಂತಿಕಾರರಲ್ಲಿ ಅನುಕಂಪ ತೋರಿದರು. ಆದರೆ ಫ್ರೆಂಚ್ ಕ್ರಾಂತಿ ಮುಂದುವರಿದು ಸಾಮಾಜಿಕ ಸಮಾನತೆಯ ಸ್ಥಾಪನೆಗಳಾಗಿ ಹೆಚ್ಚಿನ ಬದಲಾವಣೆಗಳನ್ನು ತರಲು ಪ್ರಯತ್ನಿಸಿದ್ದು ನೆರೆಯ ರಾಷ್ಟ್ರಗಳಿಗೆ ಆತಂಕವನ್ನುಂಟುಮಾಡಿತು. ಫ್ರೆಂಚ್ ಕ್ರಾಂತಿ ತಮ್ಮ ರಾಜಕೀಯ ಮತ್ತು ಸಾಮಾಜಿಕ ಸವಲತ್ತುಗಳಿಗೆ ಆಪತ್ಕಾರಿಯೆಂದು ಈ ರಾಷ್ಟ್ರಗಳ ದೊರೆಗಳು, ಶ್ರೀಮಂತರು ಮತ್ತು ಪುರೋಹಿತ ವರ್ಗದವರು ಭಾವಿಸಿದರು. ಯೂರೋಪಿನ ಇತರ ಭಾಗಗಳಿಗೆ ಫ್ರಾನ್ಸಿನ ಅಧಿಕಾರ ಹಬ್ಬುವುದನ್ನು ತಡೆಯುವುದು ಬ್ರಿಟನ್ನಿನ ಗುರಿಯಾಗಿತ್ತು. ಬ್ರಿಟಿಷರು ತಮ್ಮ ಸಮುದ್ರದ ಮೇಲಿನ ಹತೋಟಿಯನ್ನೂ ಐರೋಪ್ಯರಾಷ್ಟ್ರಗಳ ಸಮತೋಲನವನ್ನೂ ಕಾಪಾಡಿಕೊಂಡು ಬರಲು ಪ್ರಯತ್ನಿಸಿದರು. ಇತರ ದೇಶಗಳೊಡನೆ ಬ್ರಿಟನ್ ತನ್ನ ವ್ಯಾಪಾರ ಸಂಬಂಧವನ್ನು ಮುಂದುವರಿಸಿಕೊಂಡು ಹೋಗಲು ಮತ್ತು ವಸಾಹತುಗಳ ವಿಸ್ತರಣೆಯಲ್ಲಿ ಸಮುದ್ರದ ಮೇಲಿನ ಹತೋಟಿ ಅದಕ್ಕೆ ಅನುಕೂಲವಾಗಿತ್ತು. ಫ್ರಾನ್ಸ್ ಬಲಗೊಳ್ಳಲು ಬಿಟ್ಟರೆ ಅದು ತನ್ನ ನೌಕಾ ಸಾಮಥ್ರ್ಯವನ್ನು ಹೆಚ್ಚಿಸಿಕೊಂಡು, ಸಮುದ್ರದ ಮೇಲೆ ಬ್ರಿಟನ್ ಹೊಂದಿದ್ದ ಹಿಡಿತವನ್ನು ಸಡಿಲಿಸಿ ಯೂರೋಪಿನಲ್ಲಿ ಬ್ರಿಟಿಷರ ವ್ಯಾಪಾರವನ್ನು ಕುಂಠಿತಗೊಳಿಸುವುದೆಂಬ ಆತಂಕ ಬೆಳೆಯಿತು. ಬ್ರಿಟನ್ನಿನ ವಸಾಹತುವಾಗಿದ್ದ ಭಾರತದೊಡನೆ ವ್ಯಾಪಾರ ಸಂಬಂಧ ಕಡಿದು ಹೋಗುವ ಬೆದರಿಕೆಯಿತ್ತು. ಈ ಎಲ್ಲ ಕಾರಣಗಳಿಂದಾಗಿ ಬ್ರಿಟನ್ ಫ್ರಾನ್ಸಿನ ವಿರುದ್ಧ ಇತರ ರಾಷ್ಟ್ರಗಳಿಗಿಂತಲೂ ಬಲವಾದ ಹೋರಾಟ ನಡೆಸಲು ಆಸಕ್ತಿ ತೋರಿತು.

1780ರ ದಶಕದ ಉತ್ತರಾರ್ಧದಲ್ಲಿ ಮತ್ತು 1790ರ ಪೂರ್ವಾರ್ಧದಲ್ಲಿ ಯೂರೋಪಿನ ರಾಜಕೀಯ ವ್ಯವಹಾರಗಳಲ್ಲಿ ಒಟ್ಟಾರೆ ಆತಂಕಕರ ವಾತಾವರಣವಿತ್ತು. ಹಾಲೆಂಡಿನಲ್ಲಿ ಪ್ರಜಾಪ್ರಭುತ್ವವಾದಿ ಪಕ್ಷಕ್ಕೆ ಫ್ರಾನ್ಸು ಪ್ರೋತ್ಸಾಹ ನೀಡುತ್ತಿತ್ತು. ಇದನ್ನು ಹತ್ತಿಕ್ಕಲು ಅಲ್ಲಿಯ ದೊರೆ 5ನೆಯ ವಿಲಿಯಮ್ ಪ್ರಷ್ಯ ಮತ್ತು ಬ್ರಿಟನ್ನಿನ ಸಹಾಯ ಪಡೆದಿದ್ದ. ಪ್ರಷ್ಯದ 2ನೆಯ ಫ್ರೆಡರಿಕ್ ವಿಲಿಯು 1787ರಲ್ಲಿ ತನ್ನ ಸೈನ್ಯವನ್ನು ಹಾಲೆಂಡಿಗೆ ಕಳುಹಿಸಿದ. ಬ್ರಿಟನ್, ಪ್ರಷ್ಯ ಮತ್ತು ಹಾಲೆಂಡ್ ಒಂದು ತ್ರಿಕೂಟವನ್ನು ರಚಿಸಿಕೊಂಡವು. ಡಚ್ ವ್ಯವಹಾರಗಳಿಂದ ಫ್ರಾನ್ಸನ್ನು ದೂರವಿರಿಸುವುದು, ರಷ್ಯ ಮತ್ತು ಆಸ್ಟ್ರಿಯಗಳು ತುರ್ಕಿ ಮತ್ತು ಪೋಲೆಂಡಿನ ಮೇಲೆ ಆಕ್ರಮಣ ನಡೆಸದಂತೆ ತಡೆಯುವುದು ಇವು ಈ ತ್ರಿಕೂಟದ ಉದ್ದೇಶವಾಗಿತ್ತು. ಆದರೆ ಪ್ರಷ್ಯದ ದುರಾಶೆಯ ಫಲದಿಂದಾಗಿ ಈ ಕೂಟದ ಉದ್ದೇಶ ಸಫಲವಾಗಲಿಲ್ಲ. ಪ್ರಷ್ಯ 1789ರಲ್ಲಿ ರಷ್ಯದ ಮೇಲೆ ದಂಡೆತ್ತಿ ಹೋಗುವಂತೆ ಅದು ಸ್ವೀಡನ್ನನ್ನು ಪ್ರಚೋದಿಸಿತು. ರಷ್ಯ ವಶಪಡಿಸಿಕೊಂಡಿದ್ದ ಪ್ರದೇಶಗಳನ್ನು ತಾವಾಗಿ ಹಿಂದಿರುಗಿಸುವಂತೆ ಪೋಲೆಂಡು ರಷ್ಯವನ್ನು ಒತ್ತಾಯಪಡಿಸುವಂತೆಯೂ ಅದು ಪ್ರೇರಣೆ ನೀಡಿತು. ಹೀಗೆ ರಷ್ಯವನ್ನು ಇಕ್ಕಟ್ಟಿನಲ್ಲಿ ಸಿಕ್ಕಿಸಿ ಅದರೊಂದಿಗೆ ಯುದ್ಧ ಮಾಡುವ ಘಟ್ಟವನ್ನು ಪ್ರಷ್ಯ ಮುಟ್ಟಿತ್ತು. 1789ರ ಡಿಸೆಂಬರ್‍ನಲ್ಲಿ ಆಸ್ಟ್ರಿಯನ್ ನೆದರ್ಲೆಂಡ್ಸಿನಲ್ಲಿ ದಂಗೆಗಳು ಎದ್ದುವು. ಪ್ರಷ್ಯದ ನೀತಿಯಿಂದ ಬೇಸತ್ತ ಬ್ರಿಟನ್ನು ಫ್ರಾನ್ನಿನ ವಿರುದ್ಧ ನೆದರ್ ಲೆಂಡ್ಸನ್ನು ಬಲಗೊಳಿಸಲು ಆಸ್ಟ್ರಿಯದೊಡನೆ ತನ್ನ ಸಂಬಂಧವನ್ನು ಉತ್ತಮಪಡಿಸಿಕೊಳ್ಳಲು ಬಯಸಿತು. ಪ್ರಷ್ಯ ಮಾರ್ಚ್ 1790ರಲ್ಲಿ ಪೋಲೆಂಡಿನೊಂದಿಗೆ ಸೇರಿಕೊಂಡು ಆಸ್ಟ್ರಿಯದ ಬೊಹೀಮಿಯನ್ ಗಡಿಯ ಬಳಿಯಲ್ಲಿ ಸೇನೆಯನ್ನು ಜಮಾಯಿಸಿತು. ಈ ಪರಿಸ್ಥಿತಿಯನ್ನು ಎದುರಿಸಲು ಆಸ್ಟ್ರಿಯದ 2ನೆಯ ಲಿಯೊಪೋಲ್ಡ್ ತುರ್ಕಿಯೊಡನೆ ಶಾಂತಿ ಕೌಲನ್ನು ಮಾಡಿಕೊಂಡ. ಪ್ರಷ್ಯ ನೀಡಿದ ಸಹಾಯಕ್ಕೆ ಪ್ರತಿಯಾಗಿ ಕೆಲವು ಪ್ರಾಂತ್ಯಗಳನ್ನು ಅದಕ್ಕೆ ನೀಡಲು ಪೋಲೆಂಡ್ ನಿರಾಕರಿಸಿತು. ಪ್ರಷ್ಯ ಇತರ ರಾಷ್ಟ್ರಗಳಿಂದ ಬೇರ್ಪಟ್ಟು ಒಂಟಿಯಾಗಬೇಕಾಗಿ ಬಂದಾಗ ತನ್ನ ಹಟವನ್ನು ಬಿಡಬೇಕಾಯಿತು. ಆಸ್ಟ್ರಿಯದೊಡನೆ ಸ್ನೇಹ ಬೆಳಸಿ, ಫ್ರೆಂಚ್ ಕ್ರಾಂತಿಯ ವಿರುದ್ಧ ರಂಗದ ರಚನೆಯಾಗಬೇಕೆಂದು ಪ್ರತಿಪಾದಿಸಿತು. ಈ ವೇಳೆಗೆ ರಷ್ಯ ಮತ್ತು ಆಸ್ಟ್ರಿಯಗಳು ತುರ್ಕಿಯ ವಿರುದ್ಧ ಯುದ್ಧ ಮುಂದುವರಿಸಿದ್ದರಿಂದ ಫ್ರಾನ್ಸಿನ ವಿರುದ್ಧ ಕ್ರಮ ಕೈಗೊಳ್ಳಲು ಅಡ್ಡಿಯಾಯಿತು. 1791ರ ಆಗಸ್ಟ್ 4ರಂದು ತುರ್ಕಿಯೊಡನೆ ಶಾಂತಿ ಒಪ್ಪಂದಕ್ಕೆ ಆಸ್ಟ್ರಿಯ ಸಹಿ ಹಾಕಿತು. ಪೋಲೆಂಡಿನಲ್ಲಿ ತನಗಿದ್ದ ಆಸಕ್ತಿಯನ್ನು ರಷ್ಯ ಬದಿಗೊತ್ತಿತು. ಹೀಗೆ ಯೂರೋಪಿನ ರಾಜಕಾರಣಿಗಳ ಗಮನ 1791ರ ಅನಂತರ ಫ್ರಾನ್ಸಿನ ಕಡೆಗೆ ತಿರುಗಿತು. ಆಸ್ಟ್ರಿಯ ಮತ್ತು ಪ್ರಷ್ಯಗಳು ಫ್ರೆಂಚ್ ಕ್ರಾಂತಿಯನ್ನು ಹತ್ತಿಕ್ಕುವುದು ಮತ್ತು ಫ್ರಾನ್ಸಿಗೆ ಸೇರಿದ ಭಾಗಗಳನ್ನು ಹಂಚಿಕೊಳ್ಳುವುದು_ಇವು ಆಸ್ಟ್ರಿಯ ಮತ್ತು ಪ್ರಷ್ಯಗಳ ಉದ್ದೇಶಗಳಾಗಿದ್ದುವು. ಫ್ರಾನ್ಸಿಗೂ ಅದರ ನೆರೆ ರಾಷ್ಟ್ರಗಳಿಗೂ ನಡುವೆ ದ್ವೇಷ ಬೆಳೆಯಲು ಆ ವೇಳೆಗೆ ಮೂರು ಸಂಗತಿಗಳು ಪ್ರಬಲ ಕಾರಣಗಳಾದುವು: 1 ಫ್ರೆಂಚ್ ಕ್ರಾಂತಿಯ ಸಮಯದಲ್ಲಿ ಇತರ ರಾಷ್ಟ್ರಗಳಲ್ಲಿ, ವಿಶೇಷವಾಗಿ ಜರ್ಮನಿಯಲ್ಲಿ, ಆಶ್ರಯ ಪಡೆದಿದ್ದ ಫ್ರೆಂಚ್ ರಾಜಪ್ರಭುತ್ವದ ಬೆಂಬಲಿಗರು ವಿದೇಶೀಯರ ಸಹಾಯದೊಡನೆ ಕ್ರಾಂತಿಯ ವಿರುದ್ಧ ಸನ್ನಾಹ ನಡೆಸಿದ್ದರು. 2 ಊಳಿಗಮಾನ್ಯ ಪದ್ಧತಿಯ ನಿರ್ಮೂಲನದ ಪರಿಣಾಮವಾಗ ಕೆಲವು ಜರ್ಮನ್ ಭೂಮಾಲೀಕರು ಆಲ್ಸೇಸ್ ಮತ್ತು ಲೊರೇನ್‍ಗಳಲ್ಲಿ ತಮ್ಮ ಭೂಒಡೆತನದ ಹಕ್ಕನ್ನು ಕಳೆದುಕೊಂಡು ಪರಿಹಾರಕ್ಕೆ ಒತ್ತಾಯಿಸಿದರು. 3 ಪೋಪನ ಅಧೀನದಲ್ಲಿದ್ದ ಆವಿನ್ಯಾನ್ ಪಟ್ಟಣವನ್ನು ಅದರ ಪ್ರಜೆಗಳ ಬೇಡಿಕೆಯ ಮೇರೆಗೆ ರಾಷ್ಟ್ರೀಯ ಸಭೆ ಫ್ರಾನ್ಸಿಗೆ ಸೇರಿಸಿಕೊಂಡಿತು. ಆಸ್ಟ್ರಿಯ ಮತ್ತು ಪ್ರಷ್ಯ ದೇಶಗಳು ಈ ವಿಷಯಗಳಿಗೆ ಸಂಬಂಧಿಸಿದಂತೆ ಫ್ರಾನ್ಸಿನಿಂದ ವಿವರಣೆಯನ್ನು ಬಯಸಿ ಒತ್ತಾಯಪಡಿಸಿದಾಗ ರಾಷ್ಟ್ರೀಯ ಸಭೆಯ ಎಡ ಪಂಥೀಯ ಪಕ್ಷದ ಜಿರಾಂಡಿನನ ಸರ್ಕಾರ ಯುದ್ಧವನ್ನು ಘೋಷಿಸಿತು. ಈ ಆತುರದ ಕ್ರಮದ ಫಲವಾಗಿ ಯುದ್ಧ ಪ್ರಾರಂಭವಾಯಿತು.

ಆಸ್ಟ್ರಿಯ ಮತ್ತು ಪ್ರಷ್ಯಗಳು ಫ್ರಾನ್ಸಿನ ವಿರುದ್ಧ ಯುದ್ಧದಲ್ಲಿ ತೊಡಗಲು ಕಾರಣಗಳಿದ್ದುವು. ಫ್ರಾನ್ಸಿನ ರಾಣಿಯಾಗಿದ್ದ ಮೇರಿ ಅಂಟಾಯ್ನೆಟ್ ಆಸ್ಟ್ರಿಯದ ಹಾಪ್ಸ್‍ಬರ್ಗ್ ಮನೆತನದವಳು. ಆಕೆಯ ಸಹೋದರನಾದ 2ನೆಯ ಲಿಯೊಪಾಲ್ಡ್ ಆಸ್ಟ್ರಿಯದ ದೊರೆಯಾಗಿದ್ದ. ತನ್ನ ಗಂಡನ ಸಹಾಯಕ್ಕೆ ಬರಬೇಕೆಂದು ಅಂಟಾಯ್ನೆಟ್ಟಳಿಂದ ಇವನಿಗೆ ಬೇಡಿಕೆಗಳು ಬರುತ್ತಿದ್ದುವು. ಜರ್ಮನಿಯನ್ನು ಕ್ರಾಂತಿಯ ಅನಿಷ್ಟದಿಂದ ದೂರವಿರಿಸಿ ಫ್ರಾನ್ಸಿನ ಅತಿಕ್ರಮಣವನ್ನು ಹತ್ತಿಕ್ಕುವ ಉದ್ದೇಶ ಹೊಂದಿದ್ದ ಈತ ಯೂರೋಪಿನಲ್ಲಿ ಹಳೆಯ ಆಡಳಿತ ವ್ಯವಸ್ಥೆಯ ಬೆಂಬಲಿಗನಾಗಿದ್ದ. 1791ರ ಆಗಸ್ಟ್ 20ರಂದು ಆಸ್ಟ್ರಿಯ ಮತ್ತು ಪ್ರಷ್ಯಗಳು ಒಂದು ಘೋಷಣೆ ಹೊರಡಿಸಿ, ಯೂರೋಪಿನ ಸಾರ್ವಭೌಮರು ಫ್ರಾನ್ಸಿನ ವಿರುದ್ಧ ಒಂದಾಗಬೇಕೆಂದು ಕರೆ ಕೊಟ್ಟುವು. ಫ್ರಾನ್ಸಿನಲ್ಲಿ ರಾಜಪ್ರಭುತ್ವವನ್ನು ಪುನಃ ಸ್ಥಾಪಿಸುವುದಾಗಿ ಸಾರಿದುವು.

ಆ ವೇಳೆಗೆ ಫ್ರಾನ್ಸಿನ ರಾಜಕೀಯ ಪರಿಸ್ಥಿತಿಯಲ್ಲಿ ಗೊಂದಲದ ವಾತಾವರಣವಿತ್ತು. 16ನೆಯ ಲೂಯಿ 1791ರ ಜೂನ್ 21 ರಂದು ಫ್ರಾನ್ಸಿನಿಂದ ಪರಾರಿಯಾಗಲು ಮಾಡಿದ ವಿಫಲ ಪ್ರಯತ್ನದಿಂದಾಗಿ ಮತ್ತಷ್ಟು ಉದ್ರೇಕ ಉಂಟಾಗಿತ್ತು. ಜುಲೈ 17ರಂದು ರಾಜನನ್ನು ತೆಗೆದುಹಾಕುವಂತೆ ಒತ್ತಾಯಿಸಿ ಕ್ಯಾಂಪ್-ಡಿ-ಮಾರ್ಸ್‍ದಲ್ಲಿ ನಡೆದ ಪ್ರದರ್ಶನವನ್ನು ರಾಷ್ಟ್ರೀಯ ಸಭೆಯಲ್ಲಿ ಭಿನ್ನಾಭಿಪ್ರಾಯಗಳು ತಲೆದೋರಿದುವು. ಹೊಸದಾಗಿ ರಚಿತವಾದ ವಿಧಾನಸಭೆಯಲ್ಲಿ ಬಹುಮತ ಹೊಂದಿದ್ದ ಜೆರಾಂಡಿಸ್ಟರು ಸರ್ಕಾರದ ಮೇಲೆ ಹತೋಟಿ ಸ್ಥಾಪಿಸಿದರು. 16ನೆಯ ಲೂಯಿಯನ್ನು ಅಧಿಕಾರದಿಂದ ಇಳಿಸಿ ಫ್ರೆಂಚ್ ಗಣರಾಜ್ಯವನ್ನು ಸ್ಥಾಪಿಸುವುದು ಇವರ ಉದ್ದೇಶವಾಗಿತ್ತು. ಆಸ್ಟ್ರಿಯದ ಪಡೆಗಳನ್ನು ಫ್ರಾನ್ಸಿನ ಗಡಿಗಳಿಂದ ಹಿಂತೆಗೆದುಕೊಂಡು ಫ್ರೆಂಚ್ ರಾಜಕೀಯ ನಿರಾಶ್ರಿತರನ್ನು ಹಿಂದಕ್ಕೆ ಕಳುಹಿಸುವಂತೆ ಆಗ್ರಹಪಡಿಸುವಂತೆ 16ನೆಯ ಲೂಯಿಯನ್ನು ಜಿರಾಂಡಿನ್ ಗುಂಪಿನವರು ಒತ್ತಾಯ ಪಡಿಸಿದರು. ದೊರೆಯಿಂದ ಯಾವ ಪ್ರತಿಕ್ರಿಯೆಯೂ ಬಾರದಾಗ ಜಿರಾಂಡಿನ್ ಪಕ್ಷದ ಪ್ರಾಬಲ್ಯ ಪಡೆದ ರಾಷ್ಟ್ರೀಯ ಸಭೆ 1792ರ ಏಪ್ರಿಲ್ 30ರಂದು ಆಸ್ಟ್ರಿಯದ ಮೇಲೆ ಯುದ್ಧ ಘೋಷಿಸಿತು. ಈ ವೇಳೆಗೆ ಆಸ್ಟ್ರಿಯದಲ್ಲಿ 2ನೆಯ ಲಿಯೊಪಾಲ್ಡ್ ನಿಧನ ಹೊಂದಿ ಆತನ ಮಗನಾದ ಫ್ರಾನ್ಸಿಸ್ ಅಧಿಕಾರಕ್ಕೆ ಬಂದ. 1792ರ ಆಕ್ರಮಣ 23 ವರ್ಷಗಳ ದೀರ್ಘಕಾಲದ ಯುದ್ಧಗಳಿಗೆ ನಾಂದಿಯಾಯಿತು.

ಆರಂಭದಲ್ಲಿ ಫ್ರೆಂಚರಿಗೆ ಸೋಲಾಯಿತು. ಆಸ್ಟ್ರಿಯದ ಅಧೀನದಲ್ಲಿದ್ದ ನೆದರ್‍ಲೆಂಡ್ಸಿನ ಮೇಲಿನ ಫ್ರೆಂಚರ ಆಕ್ರಮಣ ತೆರವಾಯಿತು. ಫ್ರಾನ್ಸಿನ ಪಶ್ಚಿಮದ ಗಡಿಗಳಲ್ಲಿ ಮಿತ್ರಕೂಟದ ಪಡೆಗಳು ಹೆಚ್ಚಿನ ಅಡೆತಡೆಯಿಲ್ಲದೆ ಮುನ್ನುಗ್ಗಿ ಪ್ಯಾರಿಸ್ಸನ್ನು ಆಕ್ರಮಿಸಬಹುದೆಂಬಂತೆ ಕಂಡಿತು. ಫ್ರೆಂಚರ ಈ ಪ್ರಾರಂಭದ ಸೋಲಿಗೆ ರಾಜರಾಣಿಯರು ಕಾರಣರೆಂದು ಆಪಾದಿಸಲಾಯಿತು. ರಾಜನಿಗೆ ಶತ್ರುಗಳ ಬಗ್ಗೆ ಅನುಕಂಪವಿತ್ತು. ಫ್ರಾನ್ಸಿನ ಯುದ್ಧ ಯೋಜನೆಗಳ ಬಗ್ಗೆ ಅನುಕಂಪವಿತ್ತು. ಫ್ರಾನ್ಸಿನ ಯುದ್ಧ ಯೋಜನೆಗಳ ಬಗ್ಗೆ ಮೇರಿ ಅಂಟಾಯ್ನೆಟ್ ಶತ್ರು ರಾಷ್ಟ್ರಗಳಿಗೆ ಮಾಹಿತಿ ಒದಗಿಸುತ್ತಿದ್ದಳು. ಮಿತ್ರಕೂಟದವರು ಪ್ಯಾರಿಸ್ಸನ್ನು ಆಕ್ರಮಿಸಿಕೊಂಡರೆ ಫ್ರಾನ್ಸಿನ ಸಿಂಹಾಸನವನ್ನು ತನಗೆ ಹಿಂದಿರುಗಿಸುವರೆಂದು ರಾಜ ಬಗೆದಿದ್ದ, ಪ್ಯಾರಿಸಿನ ದಂಗೆಕೋರ ಗುಂಪೊಂದು ಟ್ಯೂಲರೀಸ್ ಅರಮನೆಯನ್ನು ಮುತ್ತಿತು.

1792ರ ಜುಲೈ 25ರಂದು ಫ್ರಾನ್ಸಿನ ರಾಜಕೀಯ ಸಂತ್ರಸ್ತರ ಒತ್ತಾಯದ ಮೇರೆಗೆ ಮಿತ್ರಪಡೆಗಳ ಸೇನಾನಿಯಾಗಿದ್ದ ಡ್ಯೂಕ್ ಆಫ್ ಬ್ರನ್ಸ್ ವಿಕ್ ಫ್ರಾನ್ಸಿನ ಜನರಿಗೆ ಎಚ್ಚರಿಕೆ ನೀಡಿದ. ಲೂಯಿ ಅಥವಾ ಮೇರಿ ಅಂಟಾಯ್ನೆಟ್‍ಗೆ ಅಪಾಯವುಂಟಾದಲ್ಲಿ ಪ್ಯಾರಿಸ್ಸನ್ನು ಪೂರ್ಣವಾಗಿ ವಶಪಡಿಸಿಕೊಳ್ಳುವುದಾಗಿ ಬೆದರಿಕೆ ಹಾಕಲಾಯಿತು. ಈ ಎಚ್ಚರಿಕೆ ಫ್ರಾನ್ಸಿನ ಜನರನ್ನು ಉದ್ರೇಕಗೊಳಿಸಿತು. ರಾಜಪ್ರಭುತ್ವವನ್ನು ನಿರ್ನಾಮ ಮಾಡಬೇಕೆಂದು ಅವರು ನಿರ್ಧರಿಸಿದರು. ಡಾಂಟನನ ನೇತೃತ್ವದಲ್ಲಿ ಕ್ರಾಂತಿಕಾರಿ ಸಮಿತಿಯ ಸಲಹೆಯ ಮೇರೆಗೆ ರಾಷ್ಟ್ರೀಯ ಒಡಂಬಡಿಕೆಯ ಸಮಿತಿಯನ್ನು ರೂಪಿಸಲಾಯಿತು. 1792ರ ಸೆಪ್ಪೆಂಬರ್ 4ರಂದು ಅದರ ಪ್ರಥಮ ಅಧಿವೇಶನ ನಡೆಯಿತು.

ಮೊದಲ ಅಧಿವೇಶನದಲ್ಲೇ ರಾಷ್ಟ್ರೀಯ ಒಡಂಬಡಿಕೆಯ ಸಮಿತಿ ರಾಜ ಪ್ರಭುತ್ವವನ್ನು ಸಂಪೂರ್ಣವಾಗಿ ತೆಗೆದುಹಾಕುವ ನಿರ್ಣಯವನ್ನು ಅವಿರೋಧವಾಗಿ ಅಂಗೀಕರಿಸಿತು. ಸೆಪ್ಪೆಂಬರ್ 22ರಂದು ಫ್ರೆಂಚ್ ಗಣರಾಜ್ಯದ ಪ್ರತಿಸ್ಠಾಪನೆ ಮಾಡಬೇಕೆಂದು ಗೊತ್ತುಪಡಿಸಲಾಯಿತು. ರಾಷ್ಟ್ರೀಯ ಒಡಂಬಡಿಕೆಯ ಸಮಿತಿಯ ಕಾರ್ಯಕರ್ತರ ಒಂದು ಗುಂಪು ರಾಜನಿಗೆ ಮರಣದಂಡನೆ ವಿಧಿಸಲು ನಿರ್ಣಯಿಸಿತು. ಡಾಂಟನ್‍ನ ನೇತೃತ್ವದಲ್ಲಿದ್ದ ಈ ಗುಂಪಿನವರು ಜಾಕೊಬಿನ್ನರೆಂದು ಹೆಸರಾದರು. ಡಾಂಟನ್ ಫ್ರೆಂಚ್ ಪಡೆಗಳಲ್ಲಿ ಹೊಸ ಉತ್ಸಾಹ ತುಂಬಲು ಪ್ರಯತ್ನಿಸಿದ. ಸೇನೆಯಲ್ಲಿ ಅನೇಕ ಸುಧಾರಣೆಗಳನ್ನು ಮಾಡಿದ. 1792ರ ಸೆಪ್ಪೆಂಬರ್ 20ರಂದು ಮಿತ್ರಕೂಟದ ಪಡೆಗಳು ವಾಲ್ಮೀಯಲ್ಲಿ ಪ್ರಥಮ ಸೋಲನ್ನನುಭವಿಸಿದುವು.

ಆಸ್ಟ್ರಿಯ ಮತ್ತು ಪ್ರಷ್ಯದ ಪಡೆಗಳು ಅನಂತರ ಯುದ್ಧದಿಂದ ಹಿನ್ನೆಡೆದುವು. 1793ರ ವಸಂತದಲ್ಲಿ ಅವು ಹೊಸ ಆಕ್ರಮಣ ಮಾಡಲು ಉದ್ದೇಶಿಸಿದ್ದುವು. ರಾಷ್ಟ್ರೀಯ ಒಡಂಬಡಿಕೆಯ ಸಮಿತಿ 1793ರ ಜನವರಿ 21ರಂದು 16ನೆಯ ಲೂಯಿಯನ್ನು ಗಲ್ಲಿಗೇರಿಸಿತು. ಬ್ರಿಟನ್, ಸ್ಪೇನ್, ನೆದರ್‍ಲೆಂಡ್ಸ್ ಮತ್ತು ಸಾರ್ಡೀನಿಯಗಳು, ಆಸ್ಟ್ರಿಯ ಮತ್ತು ಪ್ರಷ್ಯ ದೇಶಗಳೊಡನೆ ಸೇರಿಕೊಂಡವು. ಒಂದುಗೂಡಿದ ಈ ದೇಶಗಳ ದೊರೆಗಳು 16ನೆಯ ಲೂಯಿಯ ಮರಣದಂಡನೆಗಾಗಿ ಸೇಡು ತೀರಿಸಿಕೊಳ್ಳಲು ಪ್ರತಿಜ್ಞೆ ಮಾಡಿದುವು ಈ ದೇಶಗಳು ತಮ್ಮ ಅಪಾರ ಸಂಪತ್ತಿನಿಂದ ಫ್ರಾನ್ಸಿನ ಮೇಲೆ ಸುಲಭ ಜಯ ಸಾಧಿಸಬಹುದೆಂದು ತಿಳಿದಿದ್ದುವು. ಫ್ರಾನ್ಸ್ ಯೂರೋಪಿನ ಬಹುಪಾಲು ರಾಷ್ಟ್ರಗಳ ವಿರುದ್ದ ಒಂಟಿಯಾಗಿ ಹೋರಾಡಬೇಕಾಗಿ ಬಂದರೂ ಸಮತೋಲನವನ್ನು ಕಳೆದುಕೊಳ್ಳಲಿಲ್ಲ. ಮಿತ್ರರಾಷ್ಟ್ರಗಳ ಒಕ್ಕೂಟದಲ್ಲಿ ಸೌಹಾರ್ದದ ಕೊರತೆಯಿದ್ದುದು ಫ್ರಾನ್ಸ್‍ಗೆ ಅನುಕೂಲವಾಯಿತು.

ಸ್ವಲ್ಪಕಾಲ ಮಿತ್ರಕೂಟದ ಪಡೆಗಳು ಫ್ರೆಂಚ್ ಪಡೆಗಳನ್ನು ಹಿಮ್ಮೆಟ್ಟಿಸಿ ಬೆಲ್ಜಿಯಮ್ ಮತ್ತು ರೈನ್ ಪ್ರಾಂತ್ಯಗಳನ್ನು ವಶಪಡಿಸಿಕೊಂಡು ಫ್ರಾನ್ಸನ್ನು ಮುತ್ತಿಗೆ ಹಾಕುವಂತೆ ಕಂಡಿತು. ಆದರೆ ಜಾಕೊಬಿನ್ನರ ಬೆಂಬಲವನ್ನು ಪಡೆದ ರಾಷ್ಟ್ರೀಯ ಒಡಂಬಡಿಕೆಯ ಸರ್ಕಾರ ಹದಿನೆಂಟರಿಂದ ಇಪ್ಪತ್ತೈದು ವರ್ಷಗಳೊಳಗಿನ ಯುವಕರನ್ನೊಳಗೊಂಡ 7.70,000 ಜನರ ಸೈನ್ಯವನ್ನು ರಚಿಸಿತು. ಸೈನ್ಯದಲ್ಲಿ ಹೆಚ್ಚಿನ ಸುಧಾರಣೆಗಳನ್ನು ಮಾಡಲಾಯಿತು. 1794 ಮತ್ತು 1795ರಲ್ಲಿ ಫ್ರಾನ್ಸ್ ಎದುರಾಳಿಗಳನ್ನು ಸೋಲಿಸಿತು. ಪರಿಣಾಮವಾಗಿ ಮಿತ್ರಕೂಟದಲ್ಲಿ ಬಿರುಕುಂಟಾಗಿ ಅದು ಒಡೆದುಹೋಯಿತು. ಸ್ಪೇನಿನ 4ನೆಯ ಚಾಲ್ರ್ಸ್ ಫ್ರೆಂಚ್ ಗಣರಾಜ್ಯದೊಂದಿಗೆ ಸ್ನೇಹದಿಂದಿರಲು ಇಚ್ಚಿಸಿದ. ಪ್ರಷ್ಯದೊಡನೆ ಪ್ರತ್ಯೇಕವಾಗಿ ಮಾಡಿಕೊಂಡ ಬ್ಯಾಸೆಲ್ ಒಪ್ಪಂದದಂತೆ 2ನೆಯ ಫ್ರೆಡರಿಕ್ ವಿಲಿಯಂ ರೈನ್ ನದಿಯ ಎಡದಂಡೆಯ ಪ್ರದೇಶದ ಮೇಲಿನ ತನ್ನ ಹತೋಟಿಯನ್ನು ಫ್ರಾನ್ಸಿಗೆ ಒಪ್ಪಿಸಿದ. ಹಾಲೆಂಡಿನಲ್ಲಿ 5ನೆಯ ವಿಲಿಯಮನನ್ನು ಅಧಿಕಾರದಿಂದಿಳಿಸಿ, ಅದನ್ನು ಬಟೇವಿಯನ್ ಗಣರಾಜ್ಯವಾಗಿ ಮಾರ್ಪಡಿಸಿ ಫ್ರಾನ್ಸಿನ ಉಸ್ತುವಾರಿಗೆ ಒಳಪಡಿಸಲಾಯಿತು. ಫ್ರಾನ್ಸಿನ ಪಡೆಗಳು ಆಸ್ಟ್ರಿಯದ ನೆದರ್‍ಲೆಂಡ್ಸನ್ನು ಮತ್ತು ರೈನ್ ನದಿಯವರೆಗಿನ ಅದರ ಎಲ್ಲ ಪ್ರದೇಶಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡವು. ಬ್ರಿಟನ್, ಆಸ್ಟ್ರಿಯ ಮತ್ತು ಸಾರ್ಡೀನಿಯಗಳು ಮಾತ್ರವೇ ಫ್ರಾನ್ಸಿನ ವಿರುದ್ಧ ಕಣದಲ್ಲಿ ಉಳಿದುವು.

ಫ್ರಾನ್ಸಿನ ವಿಜಯ ಅತ್ಯಂತ ದುಬಾರಿಯದ್ದಾಗಿತ್ತು. ಹೆಚ್ಚು ಹೆಚ್ಚಾಗಿ ಸೇನೆಯನ್ನು ಬಲಪಡಿಸುವ ಮತ್ತು ಜಯವನ್ನು ಸಾಧಿಸುವ ಯೋಜನೆಗಳಲ್ಲಿ ಮಾತ್ರವೇ ಸರ್ಕಾರ ಆಸಕ್ತಿ ತೋರಿತ್ತು. ಹೆಚ್ಚುಹೆಚ್ಚು ರೈತರನ್ನು ಸೈನ್ಯದಲ್ಲಿ ಸೇರಿಸಿಕೊಳ್ಳಲಾಯಿತು. ಯುದ್ಧದ ವೆಚ್ಚವನ್ನು ಭರಿಸಲು ವ್ಯಾಪಾರ ಮತ್ತು ಕೈಗಾರಿಕೆಗಳ ಮೇಲೆ ಅಪಾರ ಸುಂಕದ ಹೊರೆ ಹೇರಲಾಯಿತು. ಇದರಿಂದಾಗಿ ಫ್ರಾನ್ಸಿನಲ್ಲಿ ಆಂತರಿಕ ಪ್ರತಿಭಟನೆ ಹೆಚ್ಚಿತು. 1795ರ ಅಗಸ್ಟ್ 22ರಂದು ಫ್ರಾನ್ಸಿನಲ್ಲಿ ನಿರ್ದೇಶಕ ಸಮಿತಿಯ ಆಡಳಿತ ಪ್ರಾರಂಭವಾಯಿತು. ಹದಗೆಟ್ಟ ಫ್ರಾನ್ಸಿನ ಪರಿಸ್ಥಿತಿಯನ್ನು ಹತೋಟಿಗೆ ತರಲು ಪ್ರಾಮಾಣಿಕ ಮತ್ತು ದಕ್ಷ ಆಡಳಿತದ ಅಗತ್ಯವಿತ್ತು. ಹೊಸ ಸರ್ಕಾರದ ನಿರ್ದೇಶಕರು ಲಂಚಗುಳಿತನ ಹಾಗೂ ಸ್ವಾರ್ಥದಿಂದ ಕೂಡಿದ್ದು, ಜನಹಿತವನ್ನು ನಿರ್ಲಕ್ಷಿಸಿದರು. ಆದರೆ ಫ್ರಾನ್ಸಿನ ಸೇನೆ ಶತ್ರುರಾಷ್ಟ್ರಗಳ ಮೇಲೆ ಸತತ ಜಯವನ್ನು ಸಾಧಿಸುತ್ತಿತ್ತು. ನಿರ್ದೇಶಕ ಸಮಿತಿ ಅಧಿಕಾರಕ್ಕೆ ಬಂದಾಗ ಫ್ರಾನ್ಸ್ ದೇಶ ಆಸ್ಟ್ರಿಯ, ಸಾರ್ಡೀನಿಯ ಮತ್ತು ಬ್ರಿಟನ್‍ಗಳೊಡನೆ ಯುದ್ಧ ಮುಂದುವರಿಸಿತ್ತು. ಜರ್ಮನಿ, ಆಸ್ಟ್ರಿಯ, ಇಟಲಿ ಮತ್ತು ವಿಯೆನ್ನಗಳನ್ನು ವಶಪಡಿಸಿಕೊಳ್ಳುವುದು ಫ್ರಾನ್ಸಿನ, ಮುಖ್ಯ ಯೋಜನೆಯಾಗಿತ್ತು. ಪರಾಕ್ರಮಿಗಳ ನಾಯಕತ್ವದಲ್ಲಿ ಫ್ರೆಂಚ್ ಸೇನೆ ಮುಂದುವರಿಯಿತು. ಇಟಲಿಯ ಆಕ್ರಮಣಕ್ಕೆ ನೇಮಿಸಲಾಗಿದ್ದ ಫ್ರೆಂಚ್ ಸೇನೆಯ ನೇತೃತ್ವವನ್ನು ನೆಪೋಲಿಯನ್ನನಿಗೆ ವಹಿಸಲಾಯಿತು.

ನೆಪೋಲಿಯನ್ 1796ರಲ್ಲಿ ಇಟಲಿಯಿಂದ ಆಸ್ಟ್ರಿಯನ್ನರನ್ನು ಓಡಿಸಿ ಅದನ್ನು ಫ್ರಾನ್ಸಿನ ಅಧೀನಕ್ಕೆ ತಂದ. ಅತಿ ಬಿರುಸಿನ ಕಾರ್ಯಚರಣೆ. ಚಾಕಚಕ್ಯ ಮತ್ತು ಪರಾಕ್ರಮಗಳಿಂದ ಈತ ಆಲ್ಪ್ಸ್ ಪರ್ವತವನ್ನು ದಾಟಿ ಸಾರ್ಡೀನಿಯವನ್ನು ಶರಣಾಗಿಸಿದ, ಸಾರ್ಡೀನಿಯ ಸವಾಯ್ ಮತ್ತು ನೈಸ್ ಪ್ರಾಂತ್ಯಗಳನ್ನು ಫ್ರಾನ್ಸಿಗೆ ಒಪ್ಪಿಸಿತು. ಅನಂತರ ನೆಪೋಲಿಯನ್ ಆಸ್ಟ್ರಿಯನ್ ಸೇನೆಯನ್ನು ಓಡಿಸಿ ಉತ್ತರ ಇಟಲಿಯ ಎಲ್ಲ ಕೋಟೆಗಳನ್ನು ವಶಪಡಿಸಿಕೊಂಡ. ಅವನು ವಿಯೆನ್ನವನ್ನು ಅತಿಕ್ರಮಿಸುತ್ತಿದ್ದಂತೆ ಆಸ್ಟ್ರಿಯ ಒಪ್ಪಂದಕ್ಕೆ ಬರಲು ಸಿದ್ದವಾಯಿತು. 1797ರ ಅಕ್ಟೋಬರ್ 17-18ರಂದು ಶಾಂತಿ ಒಪ್ಪಂದ ಏರ್ಪಟ್ಟಿತು. 1796-97ರ ಇಟಲಿಯ ಆಕ್ರಮಣ ನೆಪೋಲಿಯನ್ ಯೂರೋಪಿನಲ್ಲಿ ಕೈಗೊಂಡ ಅನೇಕ ಸೈನಿಕ ಕಾರ್ಯಾಚರಣೆಗಳ ಆರಂಭವಾಗಿತ್ತು. ಈ ಆಕ್ರಮಣದಿಂದ ನೆಪೋಲಿಯನ್ ಸಮರ್ಥ ಸೈನಿಕ ಅಧಿಕಾರಿ ಎಂಬುದು ಸಿದ್ದವಾಯಿತು. ಈ ಯುದ್ಧಗಳಿಂದಾಗಿ ಆತನ ಖ್ಯಾತಿ ಹೆಚ್ಚಿತು. ಆಸ್ಟ್ರಿಯ ಮತ್ತು ಸಾರ್ಡೀನಿಯಗಳು ಮಿತ್ರಕೂಟದಿಂದ ಹೊರ ಬಂದು ಫ್ರಾನ್ಸಿನೊಡನೆ ಶಾಂತಿ ಮಾಡಿಕೊಳ್ಳಲು ಬಯಸಿದವು.

1797ರ ಒಪ್ಪಂದ ಬ್ರಿಟನ್ನನ್ನು ಸಂದಿಗ್ಧ ಪರಿಸ್ಥಿತಿಗೆ ಸಿಲುಕಿಸಿತು. ಬ್ರಿಟನ್ ಮಾತ್ರವೇ ಫ್ರಾನ್ಸಿನ ವಿರುದ್ಧ ಹೋರಾಟ ಮುಂದುವರಿಸಬೇಕಾಯಿತು. ಫ್ರಾನ್ಸ್ ಇತರ ರಾಷ್ಟ್ರಗಳೊಡನೆ ಮಾಡಿಕೊಂಡ ಒಪ್ಪಂದಗಳು ಬ್ರಿಟನ್ನಿಗೆ ಆತಂಕಕಾರಿಯಾಗಿದ್ದುವು. ಇವುಗಳಿಂದ ಫ್ರಾನ್ಸಿನ ನೌಕಾಬಲ ಹೆಚ್ಚಿತು. ಫ್ರಾನ್ಸ್ ಮತ್ತು ಅದರ ಮಿತ್ರರಾಷ್ಟ್ರಗಳ ನೌಕಾ ನೆಲೆಗಳು ಬ್ರಿಟನ್ನು ಸಮುದ್ರದ ಮೇಲೆ ಹೊಂದಿದ್ದ ಹತೋಟಿಯನ್ನು ಧಿಕ್ಕರಿಸಲು ಸಮರ್ಥವಾಗಿದ್ದುವು. ಬ್ರಿಟನ್ನನ್ನು ನೇರವಾಗಿ ಎದುರಿಸುವುದು ಕಷ್ಟವೆಂದು ತಿಳಿದು. ಭಾರತದೊಡನೆ ಅದರ ವ್ಯಾಪಾರ ಸಂಬಂಧವನ್ನು ಕಡಿದು ಹಾಕಿ ಬ್ರಿಟನ್ನು ಸುಲಭವಾಗಿ ಎದುರಿಸಬಹುದೆಂದು ಫ್ರಾನ್ಸ್ ಯೋಚಿಸಿತು. ಈ ಉದ್ದೇಶದಿಂದ ಫ್ರೆಂಚ್ ನಿರ್ದೇಶಕ ಸಮಿತಿ ನೆಪೋಲಿಯನ್ನನನ್ನು ಈಜಿಪ್ಪಿನ ಆಕ್ರಮಣಕ್ಕೆ ಕಳುಹಿಸಿತು. ಈಜಿಪ್ಪನ್ನು ವಶಪಡಿಸಿಕೊಂಡು ಅನಂತರ ಭಾರತದ ಬ್ರಿಟಿಷ್ ನೆಲೆಗಳನ್ನು ದಾಳಿ ಮಾಡುವುದು ಈ ಆಕ್ರಮಣದ ಉದ್ದೇಶವಾಗಿತ್ತು. ಪ್ರಾರಂಭದಲ್ಲಿ ನೆಪೋಲಿಯನ್ ಯಶಸ್ವಿಯಾದರೂ ಸಿರಿಯದಲ್ಲಿ ಫ್ರೆಂಚ್ ಸೇನೆಗೆ ಅಡ್ಡಿ ಉಂಟಾಯಿತು. ಬ್ರಿಟನ್ನಿನ ಅಡ್ಮಿರಲ್ ಲಾರ್ಡ್ ನೆಲ್ಸನ್ ನದಿಯ ಮುಖದಲ್ಲಿ ನೆಪೋಲಿಯನ್ನನನ್ನು 1798ರ ಆಗಸ್ಟ್ 1ರಂದು ನೌಕಾಯುದ್ಧದಲ್ಲಿ ಸೋಲಿಸಿದ. ಫ್ರೆಂಚ್ ಸೇನೆ ಅಪಾರ ನಷ್ಟ ಅನುಭವಿಸಿತು.

ನೆಲ್ಸನನ ವಿಜಯದಿಂದಾಗಿ ಧೈರ್ಯಗೊಂಡ ಯೂರೋಪಿಯನ್ ರಾಷ್ಟ್ರಗಳು ಫ್ರಾನ್ಸಿನ ವಿರುದ್ಧ ತಮ್ಮ ಹೋರಾಟವನ್ನು ಪುನಶ್ಚೇತನಗೊಳಿಸಿದವು. ಫ್ರೆಂಚ್ ನಿರ್ದೇಶಕ ಸಮಿತಿಯ ವಿದೇಶಾಂಗ ನೀತಿ ಈ ರಾಷ್ಟ್ರಗಳಿಗೆ ಅತೃಪ್ತಿಕರವಾಗಿತ್ತು. ಬ್ರಿಟನ್, ರಷ್ಯ, ಮತ್ತು ತುರ್ಕಿಗಳೂ ಸೇರಿದಂತೆ ಎರಡನೆಯ ಒಕ್ಕೂಟದ ರಚನೆಯಾಯಿತು. 1798ರ ಆರಂಭದಿಂದ ನಿರ್ದೇಶಕ ಸಮಿತಿ ಯೂರೋಪಿನಲ್ಲಿ ಹೊಸ ಆಕ್ರಮಣಗಳನ್ನು ಪ್ರಾರಂಭಿಸಿ ಒಪ್ಪಂದವನ್ನು ಉಲ್ಲಂಘಿಸಿತು. ರೋಮ್‍ನಲ್ಲಿ 1797ರ ಕೊನೆಯ ವೇಳೆಗೆ ಕ್ರಾಂತಿಕಾರಿ ಶಕ್ತಿಗಳು ದಂಗೆಯೇಳಲು ಪ್ರಯತ್ನಿಸಿದುವು. ಇದಕ್ಕೆ ಫ್ರಾನ್ಸ್ ಕಾರಣವೆಂದು ದೂಷಿಸಲಾಯಿತು. ರೋಮ್‍ನಲ್ಲಿದ್ದ ಫ್ರೆಂಚ್ ಜನರಲ್ ಹತನಾದ. ಆದ್ದರಿಂದ ಫ್ರೆಂಚ್ ಸೇನೆ ರೋಮಿನ ಮೇಲೆ ದಾಳಿ ನಡೆಸಿ ಅದನ್ನು ಆಕ್ರಮಿಸಿಕೊಳ್ಳುವಂತೆ ನೆಪೋಲಿಯನ್ ನಿರ್ದೇಶಕ ಸಮಿತಿಗೆ ಸಲಹೆ ನೀಡಿದ. ಸ್ವಿಟ್‍ಜûರ್ಲೆಂಡಿನ ಮೇಲೂ ಫ್ರೆಂಚ್ ಸೈನ್ಯ ಆಕ್ರಮಣ ಕೈಗೊಂಡಿತು. ಹಾಲೆಂಡ್ ಮುಂತಾದ ದೇಶಗಳ ಆಂತರಿಕ ವ್ಯವಹಾರಗಳಲ್ಲಿ ಫ್ರಾನ್ಸ್ ತಲೆಹಾಕಿತು. ಫ್ರೆಂಚ್ ಗಡಿ ವಿಸ್ತರಣಾ ನೀತಿ ಮುಂದುವರಿದಿತ್ತು. ಇದರ ವಿರುದ್ಧ ಎರಡನೆಯ ಒಕ್ಕೂಟದ ರಚನೆ ಅನಿವಾರ್ಯವೆಂದು ಇತರ ಯೂರೋಪಿಯನ್ ರಾಷ್ಟ್ರಗಳು ತೀರ್ಮಾನಿಸಿದುವು. ರೋಮಿನ ಮೇಲೆ ಕ್ರಾಂತಿಕಾರಿ ಫ್ರಾನ್ಸ್ ನಡೆಸಿದ ಆಕ್ರಮಣವನ್ನು ತಡೆಯಲು ತುರ್ಕಿ ಸರ್ಕಾರದ ಒಪ್ಪಿಗೆ ಪಡೆದ ರಷ್ಯದ ನೌಕೆ 1798ರ ಸೆಪ್ಪೆಂಬರ್‍ನಲ್ಲಿ ಮೆಡಿಟರೇನಿಯನ್ ಸಮುದ್ರವನ್ನು ಪ್ರವೇಶಿಸಿತು. ಬ್ರಿಟನ್ನಿನ ಸಹಾಯದೊಡನೆ ನೇಪಲ್ಸಿನ ಜನರು ರೋಮಿನ ಮೇಲೆ ದಾಳಿ ಮಾಡಲು ಇದರಿಂದ ಅನುಕೂಲವಾಯಿತು. ರೋಮ್ 1798ರ ನವೆಂಬರ್ 26ರಂದು ರೋಮ್ ನೇಪಲ್ಸಿನ ವಶವಾಯಿತು. ಅನ್ಯಮಾರ್ಗವಿಲ್ಲದೆ ಫ್ರೆಂಚ್ ನಿರ್ದೇಶಕ ಸಮಿತಿ ಡಿಸೆಂಬರ್ 4ರಂದು ಎರಡನೆಯ ಒಕ್ಕೂಟದ ಮೇಲೆ ಯುದ್ಧ ಘೋಷಿಸಿತು. ಸಾರ್ಡೀನಿಯ ಮತ್ತು ಪೀಡ್ಮಾಂಟ್‍ಗಳ ಮೇಲೆ ಆಕ್ರಮಣ ನಡೆಸಲು ಫ್ರೆಂಚ್ ತುಕಡಿಗಳನ್ನು ರವಾನಿಸಲಾಯಿತು. ಫ್ರಾನ್ಸಿನ ಸೇನೆ ನೇಪಲ್ಸನ್ನು ಸೋಲಿಸಿ ರೋಮನ್ನೂ ನೇಪಲ್ಸನ್ನೂ ವಶಪಡಿಸಿಕೊಂಡಿತು.

ಆದರೆ ಬಹುಕಾಲ ಶಾಂತಿ ಉಳಿಯಲಿಲ್ಲ. ಯುದ್ಧ ಪುನಃ ಪ್ರಾರಂಭವಾಯಿತು. ಫ್ರಾನ್ಸ್ ಮತ್ತೆ ಯುದ್ಧಕ್ಕೆ ಸಜ್ಜಾಗಿರಲಿಲ್ಲ. ಶತ್ರುಗಳ ಸೇನಾಬಲ ಅದರ ಸೇನೆಯ ಎರಡರಷ್ಟಿತ್ತು. ಫ್ರಾನ್ಸ್ ಮೊದಮೊದಲು ರಕ್ಷಣಾ ವಿಧಾನವನ್ನು ಅನುಸರಿಸಬೇಕಾಯಿತು. ಆದ್ದರಿಂದ ತನ್ನ ಸೇನಾಬಲವನ್ನೆಲ್ಲ ಎರಡು ಮುಖ್ಯ ಕ್ಷೇತ್ರಗಳಾಗಿದ್ದ ದಕ್ಷಿಣ ಜರ್ಮನಿ ಮತ್ತು ಉತ್ತರ ಇಟಲಿಯಲ್ಲಿ ಸಜ್ಜುಗೊಳಿಸಿ ತನ್ನ ಸೈನಿಕ ಕಾರ್ಯಾಚರಣೆಯನ್ನು ಸೀಮಿತಗೊಳಿಸಿಕೊಂಡಿತು. 1798ರ ಸೆಪ್ಪೆಂಬರ್‍ನಲ್ಲಿ ಹೊಸದಾಗಿ ತರಬೇತು ಪಡೆದ ಅಪಾರ ಫ್ರೆಂಚ್ ಸೈನಿಕರು ಯುದ್ಧದಲ್ಲಿ ಪಾಲ್ಗೊಂಡರು. ಹೀಗೆ ಹೊಸ ಸೇನಾ ತುಕಡಿಗಳು ತಯಾರುಗೊಂಡು ಯುದ್ದಭೂಮಿಗೆ ಬರುವವರೆಗೆ ರಕ್ಷಣೆಯ ವಿಧಾನವನ್ನೇ ಅನುಸರಿಸುತ್ತಿದ್ದ ಫ್ರಾನ್ಸ್ ಅನಂತರ ಆಕ್ರಮಣ ನೀತಿಯನ್ನು ಅನುಸರಿಸಿ ಬಿರುಸಿನ ಕಾರ್ಯಾಚರಣೆಯೊಂದಿಗೆ ಮುನ್ನುಗ್ಗಿತು. ಹಿಂದಿನಂತೆಯೇ ಎರಡನೆಯ ಒಕ್ಕೂಟದ ರಾಷ್ಟ್ರಗಳಲ್ಲಿ ಒಮ್ಮತದ ಕಾರ್ಯಾಚರಣೆಯ ಕೊರತೆಯಿತ್ತು. ಪರಿಣಾಮವಾಗಿ ಅದು ಸಂಪೂರ್ಣ ಸೋಲನ್ನನುಭವಿಸಿತು. ಮಿತ್ರ-ರಾಷ್ಟ್ರಗಳು ಅಪಾರ ಸೈನ್ಯವನ್ನು ಹೊಂದಿದ್ದುದೇನೋ ಸರಿ. ಆದರೆ ಫ್ರಾನ್ಸಿನ ಸಮಯೋಚಿತ ಕಾರ್ಯಾಚರಣೆಯಿಂದ ಶತ್ರುಗಳು ಹಿಮ್ಮೆಟ್ಟಿದ್ದರು. ರಷ್ಯದ ಪಡೆಗಳು ಕಾರ್ಯಮಗ್ನವಾಗುವ ಮೊದಲೇ ಫ್ರೆಂಚ್ ಸೈನಿಕರು ತಮ್ಮ ಆಕ್ರಮಣವನ್ನು ಪ್ರಮುಖ ಗಡಿಗಳಲ್ಲಿ ಬಿರುಸುಗೊಳಿಸಿದರು. ರಷ್ಯದ ಪಡೆಗಳು ರೈನ್ ನದಿಯ ಉತ್ತರಕ್ಕೆ ಹಿಮ್ಮಟ್ಟಿದುವು. ಅದೇ ದಿನ ಆಸ್ಟ್ರಿಯ ಜûೂರಿಚ್ ನದಿಯ ಆಗ್ನೇಯದಲ್ಲಿ ಸೋತಿತು. 1799ರ ಅಕ್ಟೋಬರ್ 7ರಂದು ರಷ್ಯ ಯುದ್ಧದಲ್ಲಿ ಸಂಪೂರ್ಣವಾಗಿ ಪರಾಜಯ ಹೊಂದಿತು. ಹಾಲೆಂಡಿನಲ್ಲಿ ಫ್ರೆಂಚರ ಮೇಲೆ ಕೈಗೊಂಡ ರಷ್ಯನ್ ಮತ್ತು ಬ್ರಿಟಿಷ್ ಜಂಟಿ ಆಕ್ರಮಣವೂ ಸೋಲಿನಲ್ಲಿ ಕೊನೆಗೊಂಡಿತು. 1800ರಲ್ಲಿ ನೆಪೋಲಿಯನ್ ಇಟಲಿಯ ಆಕ್ರಮಣ ನಡೆಸಿದಾಗ ಮಿತ್ರಕೂಟದ ಸೋಲು ಪೂರ್ಣವಾಯಿತು. ನೆಪೋಲಿಯನ್ ಫ್ರಾನ್ಸಿನ ಅತ್ಯುನ್ನತ ಪದವಿಗೇರಿದ ತರುವಾಯ ಫ್ರೆಂಚ್ ಕ್ರಾಂತಿಯ ಯುದ್ಧಗಳು ನೆಪೋಲಿಯಾನಿಕ್ ಯುದ್ಧಗಳಲ್ಲಿ ಪರ್ಯವಸಾನವಾದುವು. ಯುದ್ಧಗಳು 1814ರ ವರೆಗೆ ಮುಂದುವರಿದುವು. ವಾಟರ್‍ಲೂ ಯುದ್ಧದೊಂದಿಗೆ ಫ್ರಾನ್ಸ್ ಮತ್ತು ಬ್ರಿಟನ್‍ಗಳ ನಡುವಣ ದೀರ್ಘಕಾಲದ ಹೋರಾಟ ಮುಕ್ತಾಯಗೊಂಡಿತು. (ಜಿ.ಆರ್.ಆರ್.)