ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಫ್ರೆಂಚ್ ಜಾನಪದ

ವಿಕಿಸೋರ್ಸ್ದಿಂದ

ಫ್ರೆಂಚ್ ಜಾನಪದ -

ಕ್ರಿಶ್ಚಿಯನ್ ಹಾಗೂ ಸೆಲ್ಟಿಕ್_ಈ ಎರಡೂ ಸಂಸ್ಕøತಿಗಳ ಮಿಶ್ರಣ ಹೊಂದಿರುವ ಫ್ರೆಂಚ್ ಜಾನಪದ ಈಗ ಪ್ರಾದೇಶಿಕವಾಗಿ ಮೂರು ಕಡೆಗಳಲ್ಲಿ ಹಂಚಿಕೆಯಾಗಿದೆ_ಫ್ರೆಂಚ್ ದೇಶದಲ್ಲಿಯ ಜಾನಪದ, ಫ್ರೆಂಚ್ ಅಮೆರಿಕನ್ ಜಾನಪದ, ಫ್ರೆಂಚ್_ಕೆನಡ ಜಾನಪದ. ಸ್ಥಳೀಯ ಜಾನಪದ ಅಲ್ಲಿಯ ಸಂಕೀರ್ಣ ಸಾಂಸ್ಕøತಿಕ ಬೆಳವಣಿಗೆಗೆ ಒಳಗಾಗಿ ದುರ್ಬಲವೂ ಸಂಕೀರ್ಣವೂ ಆಗಿದ್ದರೆ ಉಳಿದೆರಡು ಕಡೆಗಳಲ್ಲಿಯ ಜಾನಪದ ತನ್ನ ಮೂಲ ಸ್ವರೂಪವನ್ನು ಉಳಿಸಿಕೊಂಡು ಜನಾಂಗ ಸಂಬಂಧಿಯಾಗಿದೆ.

ಲ್ಯಾಟಿನ್ ಭಾಷಾ ಒತ್ತಡ ಮತ್ತು ಅನ್ಯಸಂಸ್ಕøತಿಯ ಅಂಧಾಭಿಮಾನದಿಂದ ಕೆಲಕಾಲ ಫ್ರೆಂಚ್ ಭಾಷೆ ಮತ್ತು ಜಾನಪದದ ಬಗ್ಗೆ ಸ್ಥಳೀಯ ಜನ ತಾತ್ಸಾರ ತೋರಿದ್ದುಂಟು. ಆದರೆ ಹನ್ನೆರಡನೆಯ ಶತಮಾನದ ಅನಂತರ ಈ ನಿರ್ಲಕ್ಷ್ಯ ಕಡಿಮೆಯಾಯಿತು. ಹೊಸ ಪೀಳಿಗೆಯ ವಿದ್ವಾಂಸರು ಜಾನಪದ ಕಲೆಗಳ ಅನ್ವೇಷಣೆ ಮತ್ತು ಪುನರುತ್ಥಾನಕ್ಕೆ ಕಾರಣರಾದರು. ತಮ್ಮ ಸಂಸ್ಕøತಿಯ ಪುನರುಜ್ಜೀವನಕ್ಕೆ ಕೈಹಾಕಿದರು. ಜಾನಪದಕಥೆ, ಗೀತೆ, ಆಚಾರವಿಚಾರಗಳ ಸಂಗ್ರಹ ಸಂಪಾದನೆ ಮತ್ತು ಸಂರಕ್ಷಣೆಗೆ ಹೆಚ್ಚು ಹೆಚ್ಚು ಬೆಂಬಲಕೊಟ್ಟರು. ಈ ನಿಟ್ಟನಲ್ಲಿ ಚಾಲ್ರ್ಸ್ ಪೆರ್ರಾಲ್ಟ್ (1697), ಜಾರ್ಜ್‍ಬ್ಯಾಕ್ (1823), ಆಲ್ಸೆ ಫಾರ್ಟಿಯರ್ (1886), ಪಾಲ್ಸೆಬಿಲ್ಲೊಟ್ (1882), ಹೆನ್ರಿ ಗೆಯ್‍ಡೊಜ್ ಮತ್ತು ಯೂಜಿನ್ ರೊಲ್ಯಾಂಡ್ (1877), ಗ್ಯಾಸ್‍ಟನ್ ಪಾರಿಸ್ ಮೊದಲಾದವರು ಒಳ್ಳೆಯ ಕೆಲಸ ಮಾಡಿದರು.

ಸೆಬಿಲ್ಲೊಟ್ ತನ್ನ ಕಾನ್‍ಟ್ಯೂಮ್ಸ್ ಎಟ್ ಟ್ರೆಡಿಷಸ್ಸ್ ಪಾಪ್ಯುಲೈರೆಸ್ ಡ ಲ ಹೌಟಿ ಬ್ರೆಟಗ್ನೆ (1882) ಕೃತಿಯಲ್ಲಿ ಜನಪದ ಕಥೆಗಳು, ಐತಿಹ್ಯಗಳು, ನಂಬಿಕೆಗಳು, ಮೂಢನಂಬಿಕೆಗಳು, ಔಷಧೋಪಚಾರ ಮತ್ತು ಮಾಂತ್ರಿಕ ಆಚರಣೆಗಳನ್ನು ಮುಂದಿಟ್ಟ. ಈತ ಜಾನಪದ ಪತ್ರಿಕೆಯೊಂದನ್ನು ಸಂಪಾದಿಸಿದ್ದಲ್ಲದೆ ಸಂಗ್ರಹಿತ ಸಾಮಗ್ರಿಗಳ ಸೂಚಿಯನ್ನೂ ಒದಗಿಸಿದ. ಹೆನ್ರಿ ಗೆಯ್‍ಡೂಜ್ ಮತ್ತು ಯೂಜಿನ್ ರೊಲ್ಯಾಂಡ್ ಅವರು ಮೇಲ್ಯುಸೈನ್ ಎಂಬ ಜಾನಪದ ಪತ್ರಿಕೆಯನ್ನು ಸಂಪಾದಿಸುವುದರ ಮೂಲಕ ಬಹುತೇಕ ಜಾನಪದ ಸಾಮಗ್ರಿಯನ್ನು ಬೆಳೆಕಿಗೆ ತಂದರು.

ಹದಿನೆಂಟು ಮತ್ತು ಹತ್ತೊಂಬತ್ತನೆಯ ಶತಮಾನಗಳಲ್ಲಿ ಜನಪದ ಪರಂಪರೆಯನ್ನು ಅಮೂಲಾಗ್ರವಾಗಿ ಪರಿಶೀಲಿಸುವ ಪ್ರಯತ್ನ ಸಾಂಘಿಕವಾಗಿ ಕೂಡ ನಡೆಯಿತು. ವೃತ್ತಿ ಸಂಗ್ರಹಕಾರರು, ಅಕಾಡೆಮಿ ಜನ ಜಾನಪದ ಕೆಲಸಕ್ಕೆ ಕೈಹಾಕಿದರು. ಮೂರನೆಯ ನೆಪೋಲಿಯನ್ ಗ್ರಿಮ್ಸ್ ಸಹೋದರರಿಂದ ಪ್ರಭಾವಿತನಾಗಿ ಉಪಾಧ್ಯಾಯರು ಮತ್ತು ಪಾದ್ರಿಗಳು ಶಾಲಾಕಾಲೇಜುಗಳಲ್ಲಿ ಜನಪದ ಗೀತೆಗಳನ್ನು ಸಂಗ್ರಹಿಸುವಂತೆ ಪ್ರೋತ್ಸಾಹಿಸಿದ. 1855ರಿಂದೀಚೆಗೆ ಈ ಕೆಲಸ ತ್ವರಿತಗತಿಯಲ್ಲಿ ನಡೆಯತೊಡಗಿತು. ಎಮ್ಯಾನುಅಲ್ ಕಾಸ್ಕಿನ್, ವಾನ್ ಗಾನ್ನೆಪ್, ಅನಾತೊಲೆ ಲೌಕ್ವಿನ್, ಜೋಸೆಫ್ ಮೆಡಾರ್ಡ್ ಕಾರಿಯರ್, ಜಾರ್ಜ್ ಡಾನ್ಸಿಅಕ್ಸ್ ಜೂಲಿಯನ್ ಟಿಯರ್‍ಸಾಟ್, ಸ್ವಿತ್ ಥಾಮ್ಸನ್, ಮಾರಿಸ್ ಬಾರ್‍ಬಿಯೋ ಮುಂತಾದವರು ಜಾನಪದದ ಬೇರೆ ಬೇರೆ ಪ್ರಕಾರಗಳಲ್ಲಿ ಉತ್ತಮ ಸಾಧನೆಯನ್ನು ಮಾಡಿದರು.

ಫ್ರೆಂಚ್ ಜನಪದ ಆಚಾರ-ವಿಚಾರಗಳ ಸಮಗ್ರ ಸರ್ವೇಕ್ಷಣೆಯ ವಿಚಾರದಲ್ಲಿ ಸೆಬಿಲ್ಲೊಟ್‍ನಂತೆ ವಾನ್‍ಗಾನ್ನೆಪ್ ಸಹ ಗಂಭೀರವಾದ ಕೆಲಸವನ್ನು ಮಾಡಿದ್ದಾನೆ. ತನ್ನ ಮಾನ್ಯುಅಲ್ ದ ಫೋಕ್‍ಲೋರ್ ಫ್ರಾಮಕೈಸ್ ಕಾನ್‍ಟೆಂಪೊರೈನ್ (1943) ಕೃತಿಯಲ್ಲಿ ಅತ್ಯಂತ ಸಾರ್ಥಕವಾದ ಜಾನಪದ ಅಂಶಗಳನ್ನು ಈತ ಮಂಡಿಸಿದ್ದಾನೆ. ಇತರೆ ವಿಜ್ಞಾನಗಳ ಅಧ್ಯಯನದ ಸಂದರ್ಭದಲ್ಲಿ ಜಾನಪದ ಅಧ್ಯಯನ ವಿದ್ವಾಂಸರಿಗೆ ಒಂದು ಚಿಲ್ಲರೆ ವಿಷಯವಾಗಿದೆ. ಅನೇಕ ಪ್ರಾಕ್ತನ ಮನೋಧರ್ಮದವರ ದೃಷ್ಟಿಯಲ್ಲಿ ಜಾನಪದ ಸಂರಕ್ಷಣೆ ಕಾಲ ಕಳೆಯುವ ಸಂಗತಿಯೂ ಆಗಿದೆ. ಜಾನಪದವನ್ನು ವಿದ್ವಾಂಸರು ಕೀಳುದೃಷ್ಟಿಯಿಂದ ನೋಡುತ್ತಾರೆ. ಜಾನಪದ ಅಧ್ಯಯನಕ್ಕಾಗಿ ಯಾವ ವಿಶ್ವವಿದ್ಯಾನಿಲಯವೂ ಒಂದು ಕೇಂದ್ರವನ್ನು ಸ್ಥಾಪಿಸುವ ಯೋಜನೆಯನ್ನು ಮಾಡಿಲ್ಲ. ಇದು ದುರ್ದೈವದ ಸಂಗತಿ ಎಂಬುದು ವಾನ್‍ಗಾನ್ನೆಪ್ ತನ್ನ ಸಮಕಾಲೀನ ಫ್ರೆಂಚ್ ಜಾನಪದ ಅಧ್ಯಯನದ ಪರಿಸ್ಥಿತಿಯನ್ನು ಕುರಿತು ವ್ಯಕ್ತಪಡಿಸಿದ ಪ್ರಾಮಾಣಿಕ ಅನಿಸಿಕೆ.

ಫ್ರೆಂಚ್ ಜನಪದ ಕಥೆಗಳ ಸಮಗ್ರ ಅಧ್ಯಯನಕ್ಕೆ ಎಮ್ಯಾಸುಅಲ್ ಕಾಸ್ಕಿನ್ ಪ್ರಯತ್ನಿಸಿದ್ದಾನೆ. ಲೊರೈನಾ ಪ್ರದೇಶದ ಜನಪದ ಕಥೆಗಳ ಅಧ್ಯಯನದ ಮೂಲಕ ಜನಪದ ಕಥೆಗಳ ಪ್ರಾದೇಶಿಕ ಮಹತ್ತ್ವವನ್ನು ಎತ್ತಿ ತೋರಿಸಿದ್ದಾನೆ. ಭಾರತೀಯ ಮೂಲ ಸಿದ್ಧಾಂತವಾದಿಯಾದ ಈತ ಇನ್ನೂ ಮುಂದೆ ಹೋಗಿ ಆಶಯಗಳ ಸ್ವತಂತ್ರ ಪ್ರವೃತ್ತಿಯ ಬಗ್ಗೆ ಚಿಂತನೆ ನಡೆಸಿದ್ದಾನೆ. ಜನಪದ ಕಥೆಗಳ ಅಧ್ಯಯನದಲ್ಲಿ ಇವನು ಒದಗಿಸಿರುವ ಪೂರಕ ಸಾಮಗ್ರಿ ಮುಂದಿನ ತಲೆಮಾರಿನ ಅಧ್ಯಯನಕಾರರಿಗೆ ಮಾರ್ಗದರ್ಶಕವಾಯಿತು. ಪ್ರಪಂಚದ ಜನಪದ ಕಥೆಗಳ ಸಮೂಹದಲ್ಲಿ ಫ್ರಾನ್ಸಿನ ಅನೇಕ ಕಥೆಗಳು ಪ್ರಾತಿನಿಧಿಕವಾದವುಗಳೆಂದು ಸ್ಟಿತ್‍ಥಾಮ್ಸನ್ ಮುಂತಾದ ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ.

ವಾಸ್ತವದ ಸಂಗತಿ ಎಂದರೆ ಫ್ರೆಂಚ್ ಮೂಲ ಸಂಸ್ಕøತಿಯನ್ನು ತಿಳಿಸಬಹುದಾದ ಜಾನಪದ ಈಗಿನ ಫ್ರಾನ್ಸ್ ದೇಶಕ್ಕೆ ಹೊರ ದೇಶಗಳಿಂದ ದೊರೆಯುತ್ತಿದೆ. ಅನೇಕ ಕಾರಣಗಳಿಂದಾಗಿ ಹೊರದೇಶಗಳಿಗೆ ವಲಸೆಹೋಗಿ ಅಲ್ಲಿಯೇ ನೆಲೆಸಿದ ಜನ ಅದನ್ನು ಪೂರ್ವಾಧಾರಿತ ಸಂಸ್ಕøತಿಯನ್ನಾಗಿ ಉಳಿಸಿಕೊಂಡು ಬಂದಿದ್ದಾರೆ. ಕೆನಡ ಮತ್ತು ಅಮೆರಿಕದ ಫ್ರೆಂಚ್ ಜನಾಂಗದ ಜಾನಪದ ಇಂದಿಗೂ ತನ್ನ ಅಸಲಿತನವನ್ನು ಉಳಿಸಿಕೊಂಡು ಬಂದಿದೆ. ಮಧ್ಯಕಾಲೀನ ಯುಗಾರಂಭದಿಂದ ಜನಪದ ಗೀತೆಗಳ ಸಂಮೃದ್ಧತೆ ಮತ್ತು ವೈವಿಧ್ಯತೆ ಇಲ್ಲಿ ಕಂಡುಬರುತ್ತದೆ. ಕುರುಬರ ಗೀತೆಗಳು ಅತ್ಯಂತ ಮನಮೋಹಕ ಜನಪದ ಸಾಹಿತ್ಯ ಕೃತಿಗಳಾಗಿ ಕಂಡುಬಂದಿವೆ. ರಾಜಕೀಯ ಜೀವನದಲ್ಲಿಯ ಕಾಮ-ಪ್ರೇಮಕ್ಕೆ ಸಂಬಂಧಿಸಿದ ಜನಪದ ಗೀತ ಸಂಪ್ರದಾಯವೊಂದು ನವುರಾದ ಪ್ರೀತಿಲಾಲಸೆಗಳ ಆಗರವಾಗಿದೆ. ಫ್ರೆಂಚ್ ಹೋರಾಟಮಯ ಬದುಕಿನ ಐತಿಹಾಸಿಕ ಕಥನ ಗೀತೆಗಳು ಜನಮನವನ್ನು ಮೈಮರೆಸುವಂತಿವೆ. ಕುಡಿತದ ಗೀತೆಗಳು ಫ್ರೆಂಚ್ ಸಂಸ್ಕøತಿಯ ಬದುಕಿನ ಒಳತಿರುಳನ್ನು ಪ್ರತಿನಿಧಿಸುತ್ತವೆ. ಸುಮಾರು ಮೂವತ್ತು ವರ್ಷಗಳಿಂದೀಚೆಗೆ ಈ ಜಾನಪದವನ್ನು ತೀವ್ರಗತಿಯಿಂದ ಸಂಗ್ರಹಿಸಲಾಗುತ್ತಿದೆ. ಜನಪದ ಗೀತೆ, ಕಥೆ ಮುಂತಾದ ಅನೇಕ ಬಗೆಯ ಜಾನಪದ ವಿಷಯಗಳ ಸಂಗೀತಾತ್ಮಕತೆ ಮತ್ತು ಕಲಾತ್ಮಕತೆಗಳನ್ನು ಅಧ್ಯಯನ ಮಾಡಲಾಗಿದೆ. ಲಾವೆಲ್ ಮುಂತಾದ ಕಡೆಗಳಲ್ಲಿ ಜಾನಪದ ಸಾಮಗ್ರಿಗಳ ಸಂರಕ್ಷಣಾಲಯ, ವಸ್ತುಸಂಗ್ರಹಾಲಯ ಮತ್ತು ಅಧ್ಯಯನ ಕೇಂದ್ರಗಳನ್ನು ತೆರೆಯಲಾಗಿದೆ. ಫ್ರೆಂಚ್ ಜಾನಪದದ ವಿವಿಧ ಮುಖಗಳನ್ನು ಕುರಿತ ಗಂಭೀರ ಚಿಂತನೆ ನಡೆಯುತ್ತಿದೆ. (ಎಚ್.ಎಸ್.ಆರ್.ಜಿ.; ಡಿ.ಕೆ.ಆರ್.)