ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಫ್ರೇಗೂ, ಗಾಟ್ಲಾಬ್

ವಿಕಿಸೋರ್ಸ್ದಿಂದ

ಫ್ರೇಗೂ, ಗಾಟ್ಲಾಬ್ 1848-1925. ಜರ್ಮನ್ ಗಣಿತವಿದ. ಜನನ 8-11-1848, ಮರಣ 26-7-1925. ಯೆನಾ ವಿಶ್ವವಿದ್ಯಾಲಯದಲ್ಲಿ 1879ರಿಂದ 1918ರ ತನಕ ಗಣಿತಶಾಸ್ತ್ರದ ಪ್ರಾಧ್ಯಾಪಕನಾಗಿದ್ದ. ಸಮಕಾಲೀನ ಗಣಿತಜ್ಞರು ಅನೇಕರಿಗೆ ಈತ ಅಜ್ಞಾತ. ಇತರರು ಈತನ ಬಗ್ಗೆ ತಪ್ಪು ಅಭಿಪ್ರಾಯ ಹೊಂದಿದ್ದರು. ಆದರೆ ಫ್ರೇಗೂ ಹತ್ತೊಂಬತ್ತನೆಯ ಶತಮಾನದ ಅತಿ ಶ್ರೇಷ್ಠ ತರ್ಕಶಾಸ್ತ್ರಜ್ಞ ಎಂಬುದರಲ್ಲಿ ಇಂದು ಸಂದೇಹ ಉಳಿದಿಲ್ಲ. ಇವನನ್ನು ಪ್ರತೀಕಾತ್ಮಕ ತರ್ಕಶಾಸ್ತ್ರದ ಎರಡನೆಯ ಸ್ಥಾಪಕ ಎಂದು ಪರಿಗಣಿಸಲಾಗಿದೆ. ಮೂಲ ಸ್ಥಾಪಕ ಜಾರ್ಜ್ ಬೂಲೆ (1815-64), ತರ್ಕಶಾಸ್ತ್ರದ ಬೀಜಗಣಿತದಿಂದ ಲಾಜಿಸ್ಟಿಕ್ ವಿಧಾನಕ್ಕೆ ಸಾಗಲು ಅನುಸರಿಸಬೇಕಾದ ಪ್ರಮುಖ ಮಾರ್ಗಗಳಲ್ಲಿ ಹಲವನ್ನು ಫ್ರೇಗೂ 1879 ರಲ್ಲಿ ಪ್ರಕಟವಾದ ಬೆಗ್ರಿಫ್ ಷ್ಕ್ರಿಫ್ಟ್ ಪ್ರೌಢ ಪ್ರಬಂಧದಲ್ಲಿ ಸೂಚಿಸಿದ್ದಾನೆ.

ಪ್ರಮೇಯ ಕಲನಶಾಸ್ತ್ರ (ಪ್ರಾಪೊಸಿಶನಲ್ ಕ್ಯಾಲ್ಕುಲಸ್), ಪ್ರಮೇಯೋತ್ಪನ್ನದ ಪರಿಕಲ್ಪನೆ, ಪರಿಮಾಣವಾಚಕಗಳು (ಕ್ವಾಂಟಿಫೈಯರ್ಸ್), ಸ್ಪಷ್ಟವಾಗಿ ನಿರೂಪಿಸಿದ ನಿಬಂಧಿತ ನಿಯಮಗಳು (ರೂಲ್ಸ್ ಆಫ್ ಇನ್ಫರೆನ್ಸ್), ಅನುವಂಶಿಕ ಗುಣದ ಪರಿಕಲ್ಪನೆ , ಗಣಿತಾನುಮಿತಿ ಸಾಧನೆಯ ತಾರ್ಕಿಕ ವಿಶ್ಲೇಷಣೆ ಇವೆಲ್ಲವೂ ಈ ಪ್ರೌಢ ಪ್ರಬಂಧದಲ್ಲಿ ಮೊದಲ ಬಾರಿಗೆ ಕಂಡುಬರುತ್ತವೆ. ಅನುಮಿತೀಯ ಗಣನ ಸಂಖ್ಯೆಯ (ಇಂಡಕ್ಟಿವ್ ಕಾರ್ಡಿನಲ್ ನಂಬರ್) ವ್ಯಾಖ್ಯೆಯಲ್ಲಿ ಮೇಲೆ ಹೇಳಿದ ಗಣಿತಾನುಮಿತಿಯ ಪಾತ್ರ ಬಲು ಮುಖ್ಯವಾದುದು. ಗಣಿತಾನುಮಿತಿಯನ್ನೇ ಆಧರಿಸಿ 1884 ರಲ್ಲಿ ಪ್ರಕಟವಾದ ಗ್ರುಂಡ್ಲಾಗೆನ್ ಡೆರ್ ಅರಿತ್‍ಮೆಟಿಕ್ ಮತ್ತು ಎರಡು ಭಾಗಗಳಲ್ಲಿ 1893 ಮತ್ತು 1894 ರಲ್ಲಿ ಪ್ರಕಟವಾದ ಗ್ರುಂಡ್‍ಗೆಸೆಟ್‍ಜೆ ಡೆರ್ ಅರಿತ್‍ಮೆಟಿಕ್ ಉದ್ಗ್ರಂಥಗಳಲ್ಲಿ ಫ್ರೇಗೂ ತರ್ಕಶಾಸ್ತ್ರದಿಂದ ಅಂಕಗಣಿತವನ್ನು ಸೃಷ್ಟಿಸಿದ್ದಾನೆ. ಗ್ರುಂಡ್‍ಗೆಸೆಟ್‍ಜೆ ಡೆರ್ ಅರಿತ್‍ಮೆಟಿಕ್ ಪುಸ್ತಕದ ಮೊದಲನೆಯ ಭಾಗ ಈತನ ಮೇರು ಕೃತಿ. ಇದರಲ್ಲಿ ಇನ್ನೂ ಹೆಚ್ಚಿನ ಮುಖ್ಯ ವಿಚಾರಗಳು ಅಡಕವಾಗಿವೆ, ಉದಾಹರಣೆಗೆ ಸೂತ್ರವೊಂದನ್ನು ಬಳಸುವುದಕ್ಕೂ ಅದನ್ನು ಹೆಸರಿಸುವುದಕ್ಕೂ ಸೂಕ್ಷ್ಮ ವ್ಯತ್ಯಾಸವಿದೆ ಎಂಬುದನ್ನು ಪ್ರೇಗೂ ಉದ್ಧರಣ ಚಿಹ್ನೆಗಳನ್ನು ಬಳಸುವುದರ ಮೂಲಕ ತಿಳಿಯಪಡಿಸುತ್ತಾನೆ. ಗ್ರುಂಡ್‍ಗೆಸೆಟ್‍ಜೆಯ ಎರಡನೆಯ ಭಾಗದ ಅಚ್ಚಿನ ಕೆಸಲ ಮುಗಿಯುವುದರಲ್ಲಿದ್ದಾಗ ಪ್ರೇಗೂನ ಕೃತಿಗಳಲ್ಲಿದ್ದ ಅಸಮಂಜಸಕತೆಯೊಂದನ್ನು (ಮುಂದೆ ಇದನ್ನು ರಸ್ಸಲನ ವಿರೋಧಾಭಾಸ ಎಂದು ಕರೆಯಲಾಯಿತು) ಬಟ್ರ್ರಂಡ್ ರಸ್ಸಲ್ ಈತನ ಗಮನಕ್ಕೆ ತಂದರು, ಇದನ್ನು ಆ ಗ್ರಂಥದ ಪರಿಶಿಷ್ಟವೊಂದರಲ್ಲಿ ಒಪ್ಪಿಸಿಕೊಂಡಿದ್ದಾನೆ. (ಎಸ್.ಬಿಎಚ್.)