ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಫ್ರೈಟಾಕ್, ಗೆಸ್ಟಾಫ್

ವಿಕಿಸೋರ್ಸ್ದಿಂದ

ಫ್ರೈಟಾಕ್, ಗೆಸ್ಟಾಫ್

	(1816-1895). ಜರ್ಮನ್ ಕಾದಂಬರಿಕಾರ, ನಾಟಕಕಾರ ಮತ್ತು ವಿಮರ್ಶಕ, ಹುಟ್ಟಿದ್ದು ಸೈಲೀಶಿಯದ ಕ್ರೆಟ್ಸ್‍ಬರ್ಗ್‍ನಲ್ಲಿ ಈತ ಬ್ರೆಸ್ಲಾವ್ ಮತ್ತು ಬರ್ಲಿನ್ ಶಾಲೆ, ಕಾಲೇಜುಗಳಲ್ಲಿ ವ್ಯಾಸಂಗ ಮಾಡಿ ಭಾಷಾಶಾಸ್ತ್ರದಲ್ಲಿ ವಿಶೇಷ ಅಧ್ಯಯನ ನಡೆಸಿ ಮಹಾಪ್ರಬಂಧ ಬರೆದು ಪದವೀಧರನಾದ. 1848ರಿಂದ 1861ರವರೆಗೆ ಮತ್ತು 1867-70ರ ವರೆಗೆ ಲೀಪಾಜಿಗ್ನಲ್ಲಿ ಗ್ರೆಂಟ್ಸ್‍ಬೊಟನ್ ವಾರಪತ್ರಿಕೆಯ ಸಹ ಸಂಪಾದಕನಾಗಿ ದುಡಿದ. 1841ರಲ್ಲಿ ಆರಂಭವಾದ ಈ ಪತ್ರಿಕೆ ಜರ್ಮನಿ ಮತ್ತು ಆಸ್ಟ್ರಿಯಾಗಳ ಉದಾರವಾದದ ಮುಖವಾಣಿ ಆಯಿತು. ಜರ್ಮನ್ ಉದಾರವಾದಿ ಪಕ್ಷದ ಮತ್ತು ಮಧ್ಯಮವರ್ಗದ ನಾಯಕನಾಗಿದ್ದ ಈತ ಜರ್ಮನ್ ಭಾಷೆಯ ಮತ್ತು ಸಾಹಿತ್ಯದ ಖಾಸಗಿ ಶಿಕ್ಷಕನಾಗಿ ಬ್ರೆಸ್ಲಾವ್‍ನಲ್ಲಿ ನೆಲಸಿದ. 1879ರಲ್ಲಿ ವೀಸ್ ಬೇಡೆನ್ಗೆ ಹೋಗಿ ವಾಸಿಸತೊಡಗಿದ.

ಡೈ ಬ್ರಾಂಟ್ ಫಾಟ (1844). ಡೈಜರ್ನಲಿಸ್ಟೆನ್ (1854) ಎಂಬ ಎರಡು ಹರ್ಷನಾಟಕಗಳನ್ನು ಬರೆದ. ಜರ್ನಲಿಸ್ಟ್‍ನ್ (ದಿ ಜರ್ನಲಿಸ್ಟ್) 19ನೆಯ ಶತಕದ ಶ್ರೇಷ್ಠ ಪ್ರಹಸನಗಳಲ್ಲಿ ಒಂದು ಎಂದು ಪರಿಗಣಿಸಲಾಯಿತು. ಸ್ವಾನುಭವವೇ ಇದರ ವಸ್ತು. 1855ರಲ್ಲಿ ಜರ್ಮನಿಯ ವರ್ತಕ ಜೀವನವನ್ನು ಚಿತ್ರಿಸುವ ಜೋಲ್ ಊಂಟ್ ಹಾಬಿನ್ ಎಂಬ ವಸ್ತುನಿಷ್ಠಪ್ರಧಾನ ಕಾದಂಬರಿಯನ್ನು ಪ್ರಕಟಿಸಿ ವಿಶ್ವವಿಖ್ಯಾತನಾದ. ಎಲ್ಲ ಐರೋಪ್ಯ ಭಾಷೆಗಳಿಗೂ ಅದು ಅನುವಾದವಾಗಿದೆ. ಸಾಮಾಜಿಕ, ರಾಜಕೀಯ ಕ್ಷೋಭೆಯ ಹಿನ್ನೆಲೆಯಲ್ಲಿ ಜರ್ಮನಿಯ ವ್ಯಾಪಾರಸ್ಧರ ಜೀವನದ ತದ್ವತ್ ಚಿತ್ರ ಇಲ್ಲಿದೆ. ಜೊತೆಗೆ ಡಿಕನ್ಸ್‍ನನ್ನು ನೆನಪಿಗೆ ತರುವ ಲವಲವಿಕೆಯ ಹಾಸ್ಯಸಿಂಚನ. ಈ ಹಲವಾರು ಗುಣಗಳಿಂದ ಇದು ಆ ಕಾಲದ ಶ್ರೇಷ್ಠ ಕಾದಂಬರಿ ಎನಿಸಿತು.

ಗ್ರೆಂಟ್ಸ್ ಬೋಟೆನ್ ಪತ್ರಿಕೆಯಲ್ಲಿ ಪ್ರಷ್ಯಾದ ಅಧಿನಾಯಕತ್ವದ ಪರವಾಗಿ ವಾದಿಸಿದ. ಇದರಿಂದ ಗೋಥಾದ ಡ್ಯೂಕ್ ಸ್ಯಾಕ್ಸ್ ಕೋಬಗನ ಸ್ನೇಹ ಲಭಿಸಿತು. ಗೋಥಾದ ಪಕ್ಕದ ಎಸ್ಟೇಟನ್ನೇ ಕೊಂಡು ಅಲ್ಲಿ ನೆಲೆಸಿದ. 1870ರ ಯುದ್ಧ ಮತ್ತು ಚಳವಳಿಗಳಲ್ಲಿ ಭಾಗವಹಿಸಿದ. 1864ರಲ್ಲಿ ಡೀ ಫರ್ಲೋರೇನ್ ಹ್ಯಾಂಡ್ ಷ್ರಿಫ್ಟ್ ಎಂಬ ಕಾದಂಬರಿ ರಚಿಸಿದ. ಈ ಕೃತಿಯಲ್ಲಿ ಲೀಪಾಜಿಗ್ನ ಸಮಾಜವನ್ನೂ ಜರ್ಮನ್ ವಿಶ್ವವಿದ್ಯಾಲಯದ ಜೀವನವನ್ನೂ ಚಿತ್ರಿಸಿದ. ಡೈ ಆನೆನ್ ಎಂಬ ಆರು ಐತಿಹಾಸಿಕ ಕಾದಂಬರಿಗಳ ಸರಣಿ ಈತನ ಮತ್ತೊಂದು ಕೊಡುಗೆ. 4ನೆಯ ಶತಮಾನದ ಜರ್ಮನ್ ಇತಿಹಾಸದ ಆರಂಭಕಾಲದಿಂದ 19ನೆಯ ಶತಕದ ವರೆಗಿನ ಜರ್ಮನ್ ಕುಟುಂಬವೊಂದರ ರಮ್ಯ ಕಥಾನಕ. ಜರ್ಮನಿಯ ಐತಿಹಾಸಿಕ ಸಂಗತಿಗಳು, ಕಾಲಕಾಲದ ಸಾಮಾಜಿಕ ಜೀವನ ಎಲ್ಲ ತೆರೆದುಕೊಳ್ಳುತ್ತ ಸ್ವಾರಸ್ಯವಾಗಿ ಕಥೆ ಓದಿಸಿಕೊಳ್ಳುತ್ತದೆ. ಉದ್ದಕ್ಕೂ ರಾಷ್ಟ್ರಾಭಿಮಾನ ದೇಶಭಕ್ತಿ ತುಂಬಿ ತುಳುಕುತ್ತವೆ.

ಬಿಲ್ಟರ್ ಔಸ್ ಡೆರ್ ಡಾಯಿಟ್ಷೆನ್ ಫರ್ಗಾಂಗೆನ್‍ಹೈಟ್ (1872) ಜನಪ್ರಿಯತೆಯನ್ನು ಗಳಿಸಿದ ಜರ್ಮನ್ ಇತಿಹಾಸ ಗ್ರಂಥ. ಗ್ರೀನ್ ಸಂಕ್ಷಿಪ್ತ ಇಂಗ್ಲಿಷ್ ಇತಿಹಾಸ ಎಂಬ ಗ್ರಂಥದಷ್ಟೇ ಶ್ರೇಷ್ಠ ಮತ್ತು ಮಹೋನ್ನತ ಕೃತಿ. ಇದರದು ಮಾದರಿ ಶೈಲಿ. 1887ರಲ್ಲಿ ಕಾಲಮ್ಯಾಥಿ ಎಂಬ ಕಾವ್ಯನಾಮದಲ್ಲಿ ಎರಿನ್ನೆರುಂಗೆನ್ ಔಸ್ ಮೇನಿಮ್ ಲೀಬೆನ್ ಎಂಬ ಶಿರೋನಾಮೆಯಲ್ಲಿ ಆತ್ಮಕತೆ ಬರೆದ.

ಈತ ಪ್ರಾಚೀನ ಮತ್ತು ಆರ್ವಾಚೀನ ಸಾಹಿತ್ಯತತ್ತ್ವಗಳ ಸಮನ್ವಯವನ್ನು ಸಾಧಿಸಿದ. ಸಮಕಾಲೀನರ ಮೇಲೆ ಗಾಢವಾದ ಪ್ರಭಾವವನ್ನು ಬೀರಿದ. ಈತನ ಸಾಮಾಜಿಕ ಮತ್ತು ಐತಿಹಾಸಿಕ ಕಾದಂಬರಿಗಳ ಡಿಕನ್ಸ್ ಮತ್ತು ಸ್ಕಾಟ್‍ರ ಪ್ರಭಾವವಿರುವುದನ್ನು ಗುರುತಿಸಬಹುದು.

ಓಡರ್ ಕುಂಟ್ಸ್ ಫಾನ್ ಡೆರ್ ರೊಸೆನ್ (1884) ಎಂಬುದು ಈತನ ಯಶಸ್ವಿ ಪ್ರಹಾಸನ.

ಗೆಸಾಮ್ಮೆಲೆ ಔಫ್ ಸೆಟ್ಜ್‍ಗ್ರೆಂಟ್ಸ್ ಬೊಟನ್ (1888), ಡೆರ್ ಕ್ರೋನ್ ಪ್ರಿನ್ಜ್ ಊಚಿಟ್ ಡೀ ಡಾಯಿಟ್ಷ ಕೈಸೆóರ್ ಕ್ರೋನ್, ಎರಿನ್ನೆರೊಂಗ್ಸ್ ಬ್ಲಾಟೆರ್ (1889) — ಇವು ಈತನ ಇತರ ಕೃತಿಗಳು. (ಕೆ.ವಿ.ಸಿ.)