ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಫ್ರೋಲಿಚ್, ಆಲ್ಫ್ರೆಡ್

ವಿಕಿಸೋರ್ಸ್ದಿಂದ

ಫ್ರೋಲಿಚ್, ಆಲ್ಫ್ರೆಡ್ 1871-1953. ಅಮೆರಿಕದಲ್ಲಿ ನೆಲಸಿದ್ದ ಆಸ್ಟ್ರಿಯದ ನರವಿಜ್ಞಾನಿ ಹಾಗೂ ಔಷಧವಿಜ್ಞಾನಿ. ಅಡಿಪೋನೋ ಜೆನಿಟಲ್ ಡಿಸ್ಟ್ರೋಫಿ (ಮೇಧಾಂಗಾಂಶ ಜನನಾಂಗಗಳ ವೈಪರೀತ್ಯ) ಎಂಬ ರೋಗದ ಲಕ್ಷಣಗಳನ್ನು ಇವನು ಮೊತ್ತಮೊದಲಿಗೆ ವಿವರಿಸಿದ. ಸ್ಥೂಲಕಾಯ ಜನನಾಂಗಗಳ ನಿಧಾನವಿಕಸನ, ಅತಿನಿದ್ರೆ ಮತ್ತು ಅನೇಕವೇಳೆ ಅತಿಮೂತ್ರ ಈ ಲಕ್ಷಣ ಕೂಟವಿರುವ ಈ ರೋಗಕ್ಕೆ ಫ್ರೋಲಿಚ್ಚನ ಲಕ್ಷಣ ಕೂಟವೆಂದೂ (ಫ್ಲೋರಿಚ್ಸ್ ಸಿಂಡ್ರೋಮ್) ಹೆಸರುಂಟು. ಪಿಟ್ಯುಯಿಟರಿ ಗ್ರಂಥಿ ಮತ್ತು ಅದು ಅಂಟಿಕೊಂಡಿರುವ ಮಿದುಳಿನ ತಳದ ಭಾಗ ಕಾರಣಾಂತರಗಳಿಂದ ರೋಗಗ್ರಸ್ತವಾಗಿರುವುದು ಈ ರೋಗಕ್ಕೆ ಕಾರಣವೆಂದು ತಿಳಿದಿದೆ. ಚಾಲ್ರ್ಸ್ ಡಿಕನ್ಸನ ಪಿಕ್‍ವಿಕ್ ಪೇಪರ್ಸ್‍ನಲ್ಲಿ ಬರುವ ಜೊ ಎಂಬ ವ್ಯಕ್ತಿ ಈ ಲಕ್ಷಣಗಳಿದ್ದವನೆಂದು ವರ್ಣಿತವಾಗಿರುವುದರಿಂದ ಬಹುಶಃ ಅವನು ಫ್ರೋಲಿಚ್ ಸಿಂಡ್ರೋಮಿನಿಂದ ನರಳುತ್ತಿದ್ದನೆಂದು ತೋರುತ್ತದೆ. (ಎಸ್.ಆರ್.ಆರ್.)