ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಫ್ರೌನ್ಹಾಫರ್, ಜೋಸೆಫ್ ಫಾನ್

ವಿಕಿಸೋರ್ಸ್ದಿಂದ

ಫ್ರೌನ್‍ಹಾಫರ್, ಜೋಸೆಫ್ ಫಾನ್

	1787-1826. ಜರ್ಮನ್ ಭೌತವಿಜ್ಞಾನಿ ಹಾಗೂ ನೇತ್ರೋಪಕರಣಕಾರ. ಜನನ 6-3-1787, ಮರಣ 7-6-1826. ಗಾಜುಗಾರನೊಬ್ಬನ ಮಗನಾಗಿ ಹುಟ್ಟಿದ ಫ್ರೌನ್‍ಹಾಫರ್ ಇದೇ ಕೈಗಾರಿಕೆಯನ್ನು ಅವಲಂಬಿಸಿದ. ತಯಾರಿಕೆಯ ಬಗೆಬಗೆಯ ವಿಧಾನಗಳಿಂದ ಗಾಜಿನ ಗುಣ ಹೇಗೆ ಬದಲಾಗುವುದು ಎಂಬುದನ್ನು ಪರಿಶೀಲಿಸಿ ಈ ಕೈಗಾರಿಕೆಯನ್ನು ಕಲೆಯ ಮಟ್ಟಕ್ಕೆ ಎತ್ತರಿಸಿದ. ದೃಗ್ವೈಜ್ಞಾನಿಕ ಉಪಕರಣಗಳಲ್ಲಿ ಸುಧಾರಣೆಗಳನ್ನು ಮಾಡಿದ. ಉತ್ಕøಷ್ಟ ದರ್ಜೆಯ ಅಶ್ರಗಗಳನ್ನು ಅರೆದು ತಯಾರಿಸುವುದರಲ್ಲಿ ನಿಸ್ಸೀಮನಾಗಿದ್ದ. ಇಪ್ಪತ್ತು ವರ್ಷದ ಯುವಕನಾಗಿದ್ದಾಗ ಬೆನೆಡಿಕ್ಟ್‍ಬೆಯರ್ನ್ ಎಂಬ ಸ್ಧಳದಲ್ಲಿ ದೃಗ್ವಿಜ್ಞಾನದ ಸಂಸ್ಥೆಯೊಂದನ್ನು ಪ್ರಾರಂಭಿಸುವ ಜವಾಬ್ದಾರಿ ವಹಿಸಿಕೊಂಡ. ಅಲ್ಲಿ ಮಸೂರಗಳಿಗೂ ಅಶ್ರಗಗಳಿಗೂ ಬೇಕಾಗುವ ದೋಷರಹಿತವಾದ ಮತ್ತು ಶುದ್ಧವಾದ ದೊಡ್ಡ ದೊಡ್ಡ ಗಾಜಿನ ಚೂರುಗಳನ್ನು ತಯಾರಿಸುವುದರಲ್ಲಿ ಯಶಸ್ವಿಯಾದ. ಆ ತನಕ ಇಂಗ್ಲೆಂಡು ಮತ್ತು ಜರ್ಮನಿಗಳಲ್ಲಿ ಇಂಥ ಶುದ್ಧ ಗಾಜುಗಳು ದೊರೆಯುತ್ತಲೇ ಇರಲಿಲ್ಲ. ಇಷ್ಟೇ ಅಲ್ಲದೆ ವಿಜ್ಞಾನಕ್ಕೆ ಸಂಬಂಧಪಟ್ಟ ಅನೇಕ ಯಂತ್ರಗಳನ್ನು ಇವನು ನಿರ್ಮಿಸಿದ. ಇವುಗಳಲ್ಲಿ ಮುಖ್ಯವಾದವು ವರ್ಣರಹಿತ ಮಸೂರಗಳಿಗೆ ಮೆರುಗು ಕೊಡುವಯಂತ್ರ, ಎರಡು ನಕ್ಷತ್ರಗಳ ನಡುವಿನ ಕೋನಾಂತರವನ್ನು ಅಳೆಯುವ ಯಂತ್ರ, ಸೂಕ್ಷ್ಮವಸ್ತು ಮಾಪಕ ಮತ್ತು ಗೋಳದ ತ್ರಿಜ್ಯವನ್ನೂ ಸಣ್ಣಪದಾರ್ಥಗಳ ದಪ್ಪವನ್ನೂ ಅಳೆಯುವ ಸಲಕರಣೆ. ಮೊತ್ತಮೊದಲಿಗೆ ವಿವರ್ತನ ಗ್ರೇಟಿಂಗನ್ನು (ಡಿಫ್ರ್ಯಾಕ್ಷನ್ ಗ್ರೇಟಿಂಗ್) ರಚಿಸಿದ ಗೌರವ ಈತನಿಗೆ ಸಲ್ಲುತ್ತದೆ. ಇದನ್ನು ಉಪಯೋಗಿಸಿ ಕೆಲವು ನಕ್ಷತ್ರಗಳ ರೋಹಿತಗಳನ್ನು ಶೋಧಿಸಿದ. ಇವೆಲ್ಲವುಗಳಿಗಿಂತಲೂ ಹೆಚ್ಚಾಗಿ ಇವನನ್ನು ಪ್ರಪಂಚ ವಿಖ್ಯಾತನಾಗಿ ಮಾಡಿದ ಸಂಶೋಧನೆ ಎಂದರೆ ಸೂರ್ಯನ ಬೆಳಕಿನ ರೋಹಿತದಲ್ಲಿ ಕಂಡುಬರುವ ಕಪ್ಪು ರೇಖೆಗಳ ಶೋಧನೆ. ಇವನ್ನು ಫ್ರೌನ್‍ಅಫರ್ ರೇಖೆಗಳು ಎಂದು ಕರೆದು ಇವನ ಹೆಸರನ್ನು ಚಿರಸ್ಥಾಯಿಗೊಳಿಸಿದ್ದಾರೆ. ಇವುಗಳ ನೆರವಿನಿಂದ ಸೂರ್ಯನ ವಾತಾವರಣದಲ್ಲಿ ಇರುವ ಧಾತುಗಳನ್ನು ಸುಲಭವಾಗಿ ತಿಳಿಯಬಹುದು.

(ವಿ.ವಿ.ವಿ.ಎಸ್.)