ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಫ್ರ್ಯಾಷ್, ಹೆರ್ಮಾನ್

ವಿಕಿಸೋರ್ಸ್ದಿಂದ

ಫ್ರ್ಯಾಷ್, ಹೆರ್ಮಾನ್ 1851-1914. ಜರ್ಮನ್-ಅಮೆರಿಕನ್ ರಸಾಯನವಿಜ್ಞಾನಿ. ಜರ್ಮನಿಯ ವುರ್ಟೆಂಬರ್ಗಿನಲ್ಲಿ ಜನನ, 25-12-1851. ಬಾಲ್ಯ ವಿದ್ಯಾಭ್ಯಾಸ ಜರ್ಮನಿಯಲ್ಲಿ ಆಯಿತು. ಅಲ್ಲಿಯೇ ಇವನಿಗೆ ರಸಾಯನ ವಿಜ್ಞಾನದ ಮೊದಲ ಪರಿಚಯವಾದದ್ದು. ತಂದೆಯ ಇಷ್ಟಕ್ಕೆ ವಿರೋಧವಾಗಿ ಈತ ಹದಿನೇಳನೆಯ ವಯಸ್ಸಿನಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನಗಳಿಗೆ ವಲಸೆ ಹೋಗಿ ಅಲ್ಲಿಯೇ ನೆಲಸಿದ. ಆಗತಾನೆ ಅಮೆರಿಕದ ಸ್ವಾತಂತ್ರ್ಯಸಂಗ್ರಾಮ ಮುಗಿದಿತ್ತು. ಈ ಪರ್ವಕಾಲದಲ್ಲಿ ರಾಸಾಯನಿಕಗಳಿಗೆ ಅತ್ಯಧಿಕ ಬೇಡಿಕೆಯಿತ್ತು. ಇದನ್ನು ಕಂಡು ಫ್ರ್ಯಾಷ್ ಪೆಟ್ರೋಲಿಯಮ್ ಹೈಡ್ರೊಕಾರ್ಬನ್ನುಗಳ ಕೂಲಂಕಷಾಧ್ಯಯನ ಪ್ರಾರಂಭಿಸಿ ತಜ್ಞತೆ ಗಳಿಸಿದೆ. ಪ್ಯಾರಫಿನ್ ಮೇಣ ಸಂಸ್ಕರಣೆಗೆ ನೂತನ ವಿಧಾನ ಶೋಧಿಸಿದ. ಕ್ಲೀವ್‍ಲೆಂಡಿನಲ್ಲಿ ಕಚೇರಿ ಮತ್ತು ಪ್ರಯೋಗಶಾಲೆಯನ್ನೂ ಪ್ರಾರಂಭಿಸಿದ. ದಿನವಹಿ ಇವನಿಗೆ ಬಿಡುವಿಲ್ಲದ ಕಾರ್ಯಕ್ರಮ. ಇವನ ತಜ್ಞ ಸಲಹೆಗಾಗಿ ಉದ್ಯಮಿಗಳು ನೆರೆದಿರುತ್ತಿದ್ದರು. ಇವನಿಗೆ ಹಾರುವ ಡಚ್‍ಮ್ಯಾನ್ ಎಂದು ಅಡ್ಡ ಹೆಸರಿಟ್ಟದ್ದೂ ಉಂಟು.

ಆಂಟೀರಿಯೊ ಬಳಿ ಕಂಡುಬರುವ ಪೆಟ್ರೋಲಿಯಮ್ ಎಣ್ಣೆ ಇವನ ಗಮನ ಸೆಳೆಯಿತು. ಇದರಲ್ಲಿ ಗಂಧಕಾಂಶ ಹೆಚ್ಚಾಗಿದ್ದುದರಿಂದ ದುರ್ವಾಸನೆ ಬಡಿಯುತ್ತಿತ್ತು. ಇದರಿಂದ ತಯಾರಿಸಿದ ಸೀಮೆ ಎಣ್ಣೆ ಸರಿಯಾಗಿ ಉರಿಯುತ್ತಿರಲಿಲ್ಲ. ದೀಪದ ಗಾಜು ಮಸಿಗಟ್ಟಿ ಬತ್ತಿ ಕರಕಾಗುತ್ತಿತ್ತು. ಇಂಥದೆ ಮತ್ತೊಂದು ಪೆಟ್ರೋಲಿಯಮ್ ನಿಕ್ಷೇಪ ಲಿಮಾ ಪ್ರದೇಶದಲ್ಲಿ ಪತ್ತೆಆಯಿತು. ಇದರ ಸರ್ವಸ್ವಾಮ್ಯವನ್ನು ಪಡೆದಿದ್ದ ಸ್ಟ್ಯಾಂಡರ್ಡ್ ಆಯಿಲ್ ಕಂಪನಿ ಈ ಹೊಲಸು ಎಣ್ಣೆಯ ಸಂಸ್ಕರಣಕ್ಕೆ ಫ್ರ್ಯಾಷಾನನ್ನು ನೇಮಿಸಿಕೊಂಡಿತು. ಇವನು ಹೂಡಿದ ತಂತ್ರ ಸರಳವಾಗಿತ್ತು. ಎಣ್ಣೆಯಲ್ಲಿದ್ದ ಗಂಧಕದ ಸಂಯುಕ್ತಗಳು ಲೋಹದ ಆಕ್ಸೈಡಿನೊಡನೆ ವರ್ತಿಸುವಂತೆ ಮಾಡಿದರೆ ಲೋಹದ ಸಲ್ಪೈಡ್ ಒತ್ತರಿಸುತ್ತದೆ. ಇದನ್ನು ಬೇರ್ಪಡಿಸಿ ಲೋಹದ ಆಕ್ಸೈಡಿಗೆ ಪರಿವರ್ತಿಸಿ ಮತ್ತೆ ಉಪಯೋಗಿಸುವುದು ಇವನ ಯೋಜನೆ. ಇದಕ್ಕಾಗಿ ಇವನು ತಾಮ್ರ, ಸೀಸ ಕಬ್ಬಿಣ, ಪಾದರಸ, ಬಿಸ್ಮತ್, ಕ್ಯಾಡ್ಮಿಯಮ್ ಮತ್ತು ಬೆಳ್ಳಿಯ ಆಕ್ಸೈಡುಗಳ ನಾನಾ ಸಂಯೋಜನೆಗಳನ್ನು ಬಳಸುತ್ತಿದ್ದ. ಹಳೆಯ ವಿಧಾನದಲ್ಲಿ ಲಿಥಾರ್ಜ್ (ಸೀಸದ ಮಾನಾಕ್ಷೈಡಿನ ವ್ಯಾವಹಾರಿಕ ನಾಮ) ಉಪಯೋಗಿಸುತ್ತಿದ್ದರು. ಈ ಸಂದರ್ಭದಲ್ಲಿ ಇವನು ಅನೇಕ ಪ್ರಶ್ನೆಗಳಿಗೆ ಉತ್ತರ ಹುಡುಕಬೇಕಾಗಿತ್ತು. (i) ಯಾವ ಯಾವ ಆಕ್ಸೈಡುಗಳನ್ನು ಯಾವಯಾವ ಪ್ರಮಾಣದಲ್ಲಿ ಸಂಯೋಜಿಸಿ ಉಪಯೋಗಿಸಿದರೆ ಉತ್ತಮ ಫಲಿತಾಂಶ ಬರುತ್ತದೆ. (ii) ಗಂಧಕವನ್ನು ಪ್ರಥಮ ಆಸವನ ಕಾಲದಲ್ಲಿ ಒತ್ತರಿಸಬೇಕೇ, ಇಲ್ಲ, ಸೀಮೆಎಣ್ಣೆಗಾಗಿ ಪುನರಾಸವಿಸುವಾಗ ಒತ್ತರಿಸಬೇಕೇ, (iii) ಮಿಶ್ರಣವನ್ನು ಹೇಗೆ ಮಿಲಾಯಿಸಿದರೆ ಸಲ್ಪೈಡುಗಳ ಉತ್ಪತ್ತಿಗೆ ಅನುಕೂಲ, (iv) ಆಕ್ಸೈಡುಗಳನ್ನು ಸಂಪಾದಿಸಿ ಪುನಶ್ಚೇತನಗೊಳಿಸಲು ಅತ್ಯುತ್ತಮ ಮಾರ್ಗವೇನು? ಈ ಸಮಸ್ಯೆಗಳನ್ನು ಬಗೆಹರಿಸಲು ಇವನಿಗೆ ಸುಮಾರು ಎರಡು ವರ್ಷ ಹಿಡಿಯಿತು.

ಭಿನ್ನಾಸವನ ಸ್ತಂಭಗಳಲ್ಲಿ ಕಲ್ಲನ್ನು ತುಂಬುವ ಬದಲು ಲೋಹದ ತಡೆಗೋಡೆಗಳನ್ನು ನಿರ್ಮಿಸುವುದು ಯುಕ್ತ ಎಂದು ಫ್ರ್ಯಾಷ್ ಸಲಹೆ ಮಾಡಿದ್ದ. ಪೆಟ್ರೋಲಿಯಮ್ ಉದ್ಯಮಿಗಳು ಈ ಸಲಹೆಯನ್ನು ಕಾರ್ಯಗತ ಮಾಡಿದ್ದ ಪಕ್ಷದಲ್ಲಿ, ಹದನೈದು ಮುಂಚೆಯೇ ತೈಲ ಸಂಸ್ಕರಣ ತಂತ್ರದಲ್ಲಿ ಗುಳ್ಳೆ ಗೋಪುರಗಳನ್ನು ಅಳವಡಿಸಿದ ಕೀರ್ತಿ ಫ್ರ್ಯಾಷನಿಗೆ ಸಲ್ಲುತ್ತಿತ್ತು. ಆದರೆ ಹೀಗಾಗದಿದ್ದುದು ವಿಷಾದನೀಯ. ಹೇಗೂ ಇವನು ತೈಲೋದ್ಯಮಕ್ಷೇತ್ರದಲ್ಲಿ ಸಂಶೋಧನೆಯ ಪಿತನೆಂದು ಹೆಸರು ಗಳಿಸಿದ.

ಫ್ರಾಷ್ ನಿರ್ಗಂಧಗೊಳಿಸಿದ ಉತ್ತಮದರ್ಜೆಯ ಎಣ್ಣೆಯ ಬೆಲೆ ಒಂದು ಬ್ಯಾರಲ್ಲಿಗೆ 14 ಸೆಂಟ್ ಇದ್ದದ್ದು 1 ಡಾಲರಿಗೆ ಏರಿತು. ಕಂಪನಿಯ ಪಾಲುದಾರನೂ ಆಗಿದ್ದ ಫ್ರ್ಯಾಷನಿಗೆ ಇದರಿಂದ ಸಾಕಷ್ಷು ಲಾಭ ಬಂದು ಶ್ರೀಮಂತನಾದ. ನೆಮ್ಮದಿಯ ಬದುಕಿಗೆ ಸಾಕಾಗುವಷ್ಟು ಹಣ ಕೂಡಿದ್ದರಿಂದ ಯಾವ ಆಡಳಿತಾಧಿಕಾರಕ್ಕೂ ಆಸೆಪಡದೆ ಸ್ಟ್ಯಾಂಡರ್ಡ್ ಆಯಿಲ್ ಕಂಪನಿಗೆ ಅಜೀವ ಸಲಹೆಗಾರನಾಗಿರಲು ಮಾತ್ರ ಒಪ್ಪಿಕೊಂಡ.

ಸುಮಾರು ಇದೇ ವೇಳೆ ಇವನು ಗಂಧಕದ ಗಣಿಗಾರಿಕೆಯಲ್ಲಿ ವಿನೂತನ ಕ್ರಮವೊಂದನ್ನೂ ಸಾಂದ್ರ ತೈಲ ಸಂಸ್ಕರಣದಲ್ಲಿ ಬಳಸಲಾಗುವ ಸಲ್ಫ್ಯೂರಿಕ್ ಆಮ್ಲವನ್ನು ಪುನಃ ಸಂಪಾದಿಸಿ ಉಪಯೋಗಿಸುವ ವಿಧಾನವನ್ನೂ ಪರಿಪೂರ್ಣಗೊಳಿಸಿ ಇವುಗಳ ಹಕ್ಕುಗಳನ್ನು ಕಾಯ್ದಿರಿಸಿಕೊಂಡ. ಇವನ ಪ್ರಗತಿಯನ್ನು ಕಂಡು ಉತ್ತೇಜಿತರಾದ ಇಬ್ಬರು ಕಂಪನಿ ಅಧಿಕಾರಿಗಳು ಇವನ ವಹಿವಾಟುಗಳಲ್ಲಿ ತಾವೂ ಪಾಲುದಾರರಾಗಿ ಸೇರಿಕೊಂಡರು. ಮೂವರೂ ಕೂಡಿ ಭೂಗರ್ಭದಲ್ಲಿರುವ ಗಂಧಕವನ್ನು ಹೊರಕ್ಕೆ ತೆಗೆಯುವ ಯೋಜನೆ ಕೈಗೊಂಡರು.

ಲೂಸಿಯಾನ ಗಂಧಕ ನಿಕ್ಷೇಪದ ಅನ್ವೇಷಣೆ ಪ್ರಾರಂಭವಾಯಿತು. ಈಗಾಗಲೇ ಇದನ್ನು ಮೆಲೆತ್ತಲು ಹ್ಯೂವಿಟ್ ಮತ್ತು ಕೂಪರ್ ಎಂಬವರು ಪ್ರಯತ್ನಿಸಿ ವಿಫಲರಾಗಿದ್ದರು. ಏಕೆಂದರೆ ಈ ಗಂಧಕದ ಸ್ತರ ಭೂಮಟ್ಟಕ್ಕಿಂತ ಸುಮಾರು 210-275 ಮೀಟರುಗಳಷ್ಟು ಕೆಳಗಿದೆ. ಇಷ್ಟು ಆಳದಲ್ಲಿರುವ ಗಂಧಕದ ಸ್ತರದ ಮೇಲೆ ಸುಮಾರು 150 ಮೀಟರ್‍ಗಳಷ್ಟು ದಪ್ಪ ಉಸುಬು ಮತ್ತು ಜೇಡಿಮಣ್ಣು, 30 ಮೀಟರುಗಳಷ್ಟು ದಪ್ಪ ಸುಣ್ಣಕಲ್ಲಿನ ಪದರ, ಅಗಾಧ ಪರಿಮಾಣ ಉಪ್ಪು ನೀರು, ಹೈಡ್ರೋಜನ್ ಸಲ್ಪೈಡ್ ಮತ್ತು ಗಂಧಕ ಡೈಆಕ್ಸೈಡುಗಳಂಥ ವಿಷವಾಯುಗಳು ಸಂಗ್ರಹವಾಗಿರುತ್ತವೆ. ಈ ಪರಿಸ್ಧಿತಿಯಲ್ಲಿ ಗಂಧಕವನ್ನು ಮೇಲೆತ್ತುವುದು ಒಂದು ಸಮಸ್ಯೆಯಾಗಿತ್ತು. ಇದನ್ನು ಯಶಸ್ವಿಯಾಗಿ ನಿರ್ವಹಿಸುವ ವಿಧಾನವನ್ನು ರೂಪಿಸಿದ ಕೀರ್ತಿ ಫ್ರ್ಯಾಷನಿಗೆ ಸಲ್ಲುತ್ತದೆ (1902).

ಫ್ರ್ಯಾಷ್‍ನ ಮಹತ್ಸಾಧನೆಗಳು ಎರಡು ಪೆಟ್ರೋಲಿಯಮ್ ಕೈಗಾರಿಕೆಯಲ್ಲಿ ಕೋಟ್ಯಂತರ ಗ್ಯಾಲನ್ನುಗಳಷ್ಟು ಹೊಲಸು ಎಣ್ಣೆಯನ್ನು ಶುದ್ಧಗೊಳಿಸಿದ್ದು ಮತ್ತು ಭೂಗರ್ಭದಲ್ಲಿ ಅಡಗಿಕೊಂಡು ನಿರುಪಯುಕ್ತವಾಗಿ ಬಿಡುತ್ತಿದ್ದ ನೂರಾರು ಮಿಲಿಯನ್ ಟನ್ ಗಂಧಕವನ್ನು ಮೇಲೆತ್ತಿ ಉದ್ಧರಿಸಿದ್ದು. ಇದಕ್ಕಾಗಿ ಅವನಿಗೆ ಪರ್ಕಿನ್ ಪದಕ ಮತ್ತು ಇತರ ಪ್ರಶಸ್ತಿಗಳು ಲಭಿಸಿದುವು.

ಈತ ದೀರ್ಘಕಾಲ ಬೇನೆ ಬಿದ್ದು 1914 ಮೇ 1ರಂದು ಪ್ಯಾರಿಸಿನಲ್ಲಿ ಕಾಲವಾದ. (ಎಚ್.ಜಿ.ಎಸ್.)