ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಫ್ಲಾರಿಡ

ವಿಕಿಸೋರ್ಸ್ದಿಂದ

ಫ್ಲಾರಿಡ ಅಮೆರಿಕ ಸಂಯುಕ್ತ ಸಂಸ್ಥಾನದ ಒಂದು ರಾಜ್ಯ. ಈ ರಾಜ್ಯವನ್ನು ಸೂರ್ಯ ಬೆಳಗುವ ನಾಡೆಂದೂ ಪರ್ಯಾಯ ದ್ವೀಪ ರಾಜ್ಯವೆಂದೂ ಕರೆಯುತ್ತಾರೆ. ಫ್ಲಾರಿಡ ಅಮೆರಿಕ ಸಂಯುಕ್ತ ಸಂಸ್ಥಾನಗಳ ಆಗ್ನೇಯದ ತುತ್ತ ತುದಿಯಲ್ಲಿದೆ. ಈ ರಾಜ್ಯವನ್ನು ಉತ್ತರದಲ್ಲಿ ಆಲಬಾಮ ಮತ್ತು ಜಾರ್ಜಿಯ ರಾಜ್ಯಗಳೂ ಪೂರ್ವದಲ್ಲಿ ಅಟ್ಲಾಂಟಿಕ್ ಸಾಗರ, ದಕ್ಷಿಣದಲ್ಲಿ ಫ್ಲಾರಿಡಕ್ಕೆ 160 ಕಿಮೀ ದೂರದಲ್ಲಿರುವ ಕ್ಯೂಬಾವನ್ನು ಬೇರ್ಪಡಿಸಿರುವ ಫ್ಲಾರಿಡಾ ಜಲಸಂಧಿ ಮತ್ತು ಪಶ್ಚಿಮದಲ್ಲಿ ಮೆಕ್ಸಿಕೊ ಕೊಲ್ಲಿ ಮತ್ತು ಅಲಬಾಮ ರಾಜ್ಯ ಸುತ್ತು ವರೆದಿವೆ. ಉತ್ತರ ಅಕ್ಷಾಂಶ 24( 30' -31( ಪಶ್ಚಿಮ ರೇಖಾಂಶ 80(-87( 38'ಗಳ ನಡುವೆ ಹಬ್ಬಿರುವ ಈ ರಾಜ್ಯ ದಕ್ಷಿಣದಲ್ಲಿ ಸಮುದ್ರದೊಳಕ್ಕೆ 640 ಕಿಮೀ ಚಾಚಿಕೊಂಡಿದೆ. ಸಂಯುಕ್ತ ಸಂಸ್ಧಾನದ ರಾಜ್ಯಗಳ ವಿಸ್ತೀರ್ಣದಲ್ಲಿ 22ನೆಯ ರಾಜ್ಯವಾಗಿರುವ ಫ್ಲಾರಿಡ ಹೆಚ್ಚು ಸಮುದ್ರ ತೀರವನ್ನು ಹೊಂದಿರುವ ಎರಡನೆ ರಾಜ್ಯ. ಉತ್ತರ ದಕ್ಷಿಣವಾಗಿ 719 ಕಿಮೀ, ಪೂರ್ವ ಪಶ್ಚಿಮವಾಗಿ 581 ಕಿಮೀ ಹರಡಿರುವ ಈ ರಾಜ್ಯದ ವಿಸ್ತೀರ್ಣ 1,51,670 ಚ.ಕಿಮೀ. 67 ಕೌಂಟಿಗಳಿರುವ ಈ ರಾಜ್ಯದ ಜನಸಂಖ್ಯೆ 97,39,992 (1980). ರಾಜಧಾನಿ ಟಲಹಸಿ.

ಮೇಲ್ಮೈಲಕ್ಷಣ: ಫ್ಲಾರಿಡಾದ ಭೂಮಿ ಚಪ್ಪಟೆ ಎನ್ನಬಹುದು. ಇದನ್ನು ಭೌಗೋಳಿಕವಾಗಿ ಅಟ್ಲಾಂಟಿಕ್ ತೀರದ ಬಯಲು ಮತ್ತು ಫ್ಲಾರಿಡ ಮೇಲ್ಭೂಮಿ ಎಂದು ಮೂರು ಸಾಮಾನ್ಯ ವಿಭಾಗಗಳನ್ನು ಮಾಡಬಹುದು. ಇವುಗಳಲ್ಲಿ ಮೊದಲನೆಯ ಅಟ್ಲಾಂಟಿಕ್ ಸಮುದ್ರ ತೀರದ ತಗ್ಗು ಬಯಲು ಪೂರ್ವಭಾಗದ ಉದಕ್ಕೂ ಆವರಿಸಿ ಓಳನಾಡಿಗೆ 48 ಕಿಮೀರಿಂದ 161 ಕಿಮೀಗಳವರೆಗೆ ಪ್ರಸರಿಸಿದೆ. ತೀರದ ಅನತಿದೂರದಲ್ಲಿ ಮರಳಿನ ಕಟ್ಟೆಗಳು. ಅವುಗಳ ಹಿಂದೆ ಉಪ್ಪು ನೀರಿನ ಹರವುಗಳು ಹಾಗೂ ಮರಳಿನ ದಿಬ್ಬಗಳು ಮತ್ತು ಜೌಗುಗಳು ಇರುವುದು ಈ ಪ್ರದೇಶದ ವೈಶಿಷ್ಟ್ಯ. ದಕ್ಷಿಣದಲ್ಲಿ ಬಿಸ್ಕೇನಿ ಕೊಲ್ಲಿಯಿಂದ ಕೀವೆಸ್ಟ್‍ವರೆಗೆ ಫ್ಲಾರಿಡದ ತಗ್ಗು ದ್ವೀಪಗಳು ಮಣಿ ಮಾಲೆಯಂತೆ ದಕ್ಷಿಣದತ್ತ ಹಬ್ಬಿವೆ. ಈ ತಗ್ಗು ದ್ವೀಪಗಳಲ್ಲಿ ಕೀವೆಸ್ಟಿನ ಪಶ್ಚಿಮಕ್ಕಿರುವ ಡ್ರೈಟಾರ್ಟುಗಸ್ ದ್ವೀಪಗಳ ಗುಂಪು ಕೊನೆಯದು. ಕಿಲಾರ್ಗೊ ಇಲ್ಲಿನ ದೊಡ್ಡ ದ್ವೀಪ. ಎರಡನೆಯ ಭೂ ವಿಭಾಗದ ಬಯಲು ಭೂಶಿರದ ಪಶ್ಚಿಮ ಭಾಗದಲ್ಲಿದೆ. ಇದರ ಅಗಲ 48 ಕಿಮೀ. ಇದರ ತೀರ ಒರಟಾಗಿದ್ದು ಅನೇಕ ಕೊಲ್ಲಿಗಳನ್ನು ಒಳಗೊಂಡಿದೆ. ಈ ಪ್ರದೇಶದಲ್ಲಿ ಗುಲ್ಮಗಳಿರುವ ಜವಳು ಭೂಮಿ ಕೆಲವು ಕಡೆ ಬಹುದೂರದವರೆಗೆ ಒಳಸರಿದಿದೆ. ಕೊನೆಯ ವಿಭಾಗದಲ್ಲಿ ಬಯಲು ಭೂಶಿರದ ಉತ್ತರ ಮಧ್ಯಭಾಗ ಮತ್ತು ವಾಯವ್ಯದ ಉದ್ದನ್ನ ತೋಳು ಸೇರುತ್ತವೆ. ಇದರ ಸರಾಸರಿ ಎತ್ತರ ಸಮುದ್ರ ತೀರದಿಂದ 61-91 ಮೀಟರುಗಳು. ಲೇಕ್‍ವುಡ್ಡಿನ ಉತ್ತರಕ್ಕೆ ವಾಲ್ಡನ್ ಕೌಂಟಿಯಲ್ಲಿರುವ ಒಂದು ಅನಾಮಧೇಯ ಗುಡ್ಡವೇ ಈ ರಾಜ್ಯದ ಅತಿ ಎತ್ತರ ಪ್ರದೇಶ (105 ಮೀ). ಈ ವಿಭಾಗ ಗುಡ್ಡ ಮತ್ತು ಸರೋವರಗಳಿಂದ ಕೂಡಿದೆ. ಮೇಲ್ಭೂಮಿ ಪ್ರದೇಶದ ಪಶ್ಚಿಮ ತೋಳಿನ ಅಗಲ 48 ಕಿಮೀ ನಿಂದ 80 ಕಿಮೀಗಳು. ಉದ್ದ ಸುಮಾರು 443 ಕಿಮೀ. ಇಲ್ಲಿ ಕೆಂಪು ಜೇಡಿ ಮಣ್ಣಿನ ಗುಡ್ಡ ಹಾಗು ಫಲವತ್ತಾದ ಕೊಳ್ಳಗಳು ಇವೆ. ಒಕಚೋಬಿ ಸರೋವರದ ದಕ್ಷಿಣಕ್ಕೆ ಸಿಹಿ ನೀರಿನ ಜೌಗು ಮತ್ತು ಜವುಳು ಭೂಮಿಯ ಪ್ರದೇಶವಿದೆ.

ಈ ರಾಜ್ಯದ ನದಿಗಳಲ್ಲಿ 443 ಕಿಮೀ ಉದ್ದನೆಯ ಸೆಂಟ್ ಜಾನ್ಸ್ ನದಿಯೇ ದೊಡ್ಡದು. ಅದು ಒಕಚೋಬಿ ಜಲಾಶಯದ ಹತ್ತಿರದ ತನ್ನ ಮೂಲದಿಂದ ಪೂರ್ವ ತೀರಕ್ಕೆ ಸಮಾಂತರದಲ್ಲಿ ಉತ್ತರದತ್ತ ಹರಿದು ಫ್ಲಾರಿಡಾ ಮತ್ತು ಚಾರ್ಜಿಯಾಗಳ ನಡುವಿನ ಭಾಗಶಃ ಗಡಿಯಾಗಿ ಅಟ್ಲಾಂಟಿಕ್ ಸಾಗರವನ್ನು ಸೇರುತ್ತದೆ. ಪೆರ್ಡಿಡೊ ಫ್ಲಾರಿಡದ ಎಲ್ಲೆಯಲ್ಲಿ ಹರಿದು ಮೆಕ್ಸಿಕೊ ಕೊಲ್ಲಿಯನ್ನು ಸೇರುತ್ತದೆ ಫ್ಲಾರಿಡದ ವಾಯವ್ಯದಲ್ಲಿ ಹರಿಯುವ ಅಪಲಾಚಿ ಕೊಲ ಒಂದು ಮುಖ್ಯ ನದಿ. ಫ್ಲಿಂಟ್ ಮತ್ತು ಚಟ ಹೂಚೀ ನದಿಗಳು ಕೂಡುವಲ್ಲಿ ಹುಟ್ಟುವ ಈ ನದಿ ಮೆಕ್ಸಿಕೊ ಕೊಲ್ಲಿಯನ್ನು ಸೇರುತ್ತದೆ. ಇವಲ್ಲದೆ ಸೆಂಟ್ ಮೇರಿ, ಸವಾನಿ, ಅಸಿಲ್ಲ, ಹಿಲ್ಸ್‍ಬರೋ, ಇಂಡಿಯನ್, ಕಿಸ್ಮೀ, ಪೀಸ್ ಮತ್ತು ಯಲ್ಲೋ ನದಿಗಳಿವೆ. ಸುಮಾರು 30,000 ಸರೋವರಗಳು ಮಧ್ಯ ಫ್ಲಾರಿಡಾದಲ್ಲಿವೆ. ಇವುಗಳಲ್ಲಿ ಸಂಯುಕ್ತ ಸಂಸ್ಥಾಗಳಲ್ಲಿ ಮಿಚಿಗನ್ ಸರೋವರ ಬಿಟ್ಟರೆ ಫ್ಲಾರಿಡಾದ ಒಕಚೋಬಿ ಸರೋವರ ಒಂದೇ ದೊಡ್ಡದು. ಇದು 1800 ಚ. ಕಿಮೀ ವಿಸ್ತೀರ್ಣವನ್ನಾಕ್ರಮಿಸಿದೆ. ರಾಜ್ಯದಲ್ಲಿ 17 ದೊಡ್ಡ ಹಾಗು ಅಸಂಖ್ಯ ಸಣ್ಣ ಸಣ್ಣ ಬುಗ್ಗೆಗಳಿವೆ. ಅನೇಕ ಬುಗ್ಗೆಗಳ ನೀರು ದೇಹಾರೋಗ್ಯಕರವೆನಿಸಿವೆ. ಟಲಹಸಿ ಬಳಿ ಇರುವ ವಾಕುಲ್ಲಾ ಬುಗ್ಗೆ ಇಲ್ಲಿನ ಆಳವಾದದ್ದು. ಸಿಲ್ವರ್‍ಸ್ಪ್ರಿಂಗ್ಸ್ ರಾಜ್ಯದ ಅತಿ ದೊಡ್ಡ ಚಿಲುಮೆ. ಬಹು ಅನೇಕ ಚಿಲುಮೆಗಳ ನೀರು ಅವುಗಳ ತಳ ಕಾಣುವಷ್ಟು ಶುದ್ಧವಾಗಿವೆ.

ಹವಾಗುಣ: ಸೌಮ್ಯ ಹವಾಗುಣ. ಚಳಿಗಾಲದಲ್ಲಿ ಮಿಸಿಸಿಪಿಯ ಪೂರ್ವಕ್ಕಿರುವ ಎಲ್ಲ ರಾಜ್ಯಗಳಿಗಿಂತಲೂ ಇಲ್ಲಿ ಹೆಚ್ಚು ಬಿಸಿಲು ಇರುತ್ತದೆ. ವಾರ್ಷಿಕ ಸರಾಸರಿ ಮಳೆ ಸುಮಾರು 135 ಸೆಂ.ಮಿ.. ಅದರಲ್ಲಿ ಹೆಚ್ಚು ಭಾಗ ಏಪ್ರಿಲ್‍ನಿಂದ ನವೆಂಬರ್‍ವರೆಗೆ ಬೀಳುವ ಕಾರಣ ಬೇಸಿಗೆಯ ಉಷ್ಣತೆ ಮಿತವಾಗುತ್ತದೆ. ಸರಾಸರಿ ಉಷ್ಣತೆ 21( ಅ ಇರುವುದಾದರೂ ರಾಜ್ಯ ಕೆಲವೊಮ್ಮೆ ಕೊರೆಯುವ ಚಳಿಯಬೀಳಿಗೆ ತುತ್ತಾಗುವುದು. ಕ್ಯಾರೀಬಿಯನ್ ಸಮುದ್ರದಿಂದ ಬೀಸುವ ಸುಂಟರಗಾಳಿಗಳಿಂದಾಗಿ ಅನೇಕ ಸಲ ಇಲ್ಲಿ ಆಸ್ತಿ ಮತ್ತು ಪ್ರಾಣಹಾನಿಗಳಾಗುವುದುಂಟು.

ಫ್ಲಾರಿಡದಲ್ಲಿನ ಭೂಮಿ ಜೈವಿಕ ಪದಾರ್ಥಗಳು ಶೇಖರವಾಗುವ ನದಿಗಳ ತಳ ಮತ್ತು ಜವುಳು ಕ್ಷೇತ್ರಗಳನ್ನು ಬಿಟ್ಟರೆ ಶೀರದ ತಗ್ಗು ಭೂಮಿಗಳ ಮತ್ತು ಪಶ್ಚಿಮದ ಉನ್ನತ ಪ್ರದೇಶಗಳ ಮರಳು ಮಣ್ಣು ಸತ್ವಹೀನ ಮತ್ತು ಕಡಿಮೆ ಫಲವತ್ತಾದದ್ದು. ಮರಳು ದಿಬ್ಬಗಳ ಮತ್ತು ಸಮುದ್ರ ದಡಗಳ ಮರಳು ಯಾವ ಬೆಳೆಗೂ ಪ್ರಯೋಜನಕಾರಿಯಲ್ಲ. ಎವರ್ ಗ್ಲೇಡ್ಸಿನ ಜೈವಿಕ ಕೊಳೆ ಮತ್ತು ಬೆಸ್ಯಾಂಗಾರ, ಮಧ್ಯದ ಉನ್ನತ ಪ್ರದೇಶದ ಸುಣ್ಣದಕಲ್ಲು ಮತ್ತು ಮರಳು ಮಿಶ್ರಿತ ಮಣ್ಣು ಫಲವತ್ತಾದದ್ದು. ಕೆಂಪು ಜೇಡಿಮಣ್ಣು ಮತ್ತು ಜೈವಿಕ ಪದಾರ್ಥಗಳು ಹೆಚ್ಚಾಗಿರುವ ಟಲಹಸಿ ಗುಡ್ಡಗಳ ಮಣ್ಣು ಅತ್ಯಂತ ಫಲವತ್ತಾದದ್ದು ಎನ್ನಬಹುದು.

ಸಸ್ಯ, ಪ್ರಾಣಿವರ್ಗ: ಈ ರಾಜ್ಯದಲ್ಲಿ 300ಕ್ಕೂ ಹೆಚ್ಚು ಜಾತಿಯ ಮರಗಳಿವೆ. ಪೈನ್, ಓಕ್, ಸೈಪ್ರೆಸ್, ತಾಳೆ ಮತ್ತು ಗುಲ್ಮಗಳು ಹಾಗೂ ಮ್ಯಾಗ್ನೋಲಿಯ, ಯೂ, ಹಾಲಿ ಮತ್ತು ಹಿತರಿ ಸ್ಥಳೀಯ ಮುಖ್ಯ ಮರಗಳು, ರಾಯಲ್ ಪಾಮ್ (ರಾಜತಾಳೆ) ಮತ್ತು ತೆಂಗು ಉಷ್ಣವಲಯದವು. ರೆಡ್‍ಮೇಪಲ್, ಸ್ವೀಟ್‍ಗಮ್ ಮತ್ತು ಟುಲಿಪ್ ಮರ ಉತ್ತರದ ಜಾತಿಗಳಲ್ಲಿ ಸೇರುತ್ತವೆ. ಇಲ್ಲಿನ ಕಾಡು, ಹುಲ್ಲು ಗಾಡು ಮತ್ತು ಜವುಳು ಪ್ರದೇಶಗಳಲ್ಲಿ 3500ಕ್ಕೂ ಹೆಚ್ಚು ಜಾತಿಯ ಸಸ್ಯಗಳಿವೆ.

ರಾಜ್ಯದಲ್ಲಿ ಸುಮಾರು 84 ಜಾತಿಯ ಭೂಸ್ತನಿಗಳಿವೆ. ಅವುಗಳಲ್ಲಿ ಕಾಡುಬೆಕ್ಕು, ಕಂದುನರಿ, ಜಿಂಕೆ, ಚಿರತೆ ಹಾಗು ದಕ್ಷಿಣ ರಾಜ್ಯಗಳಿಗೆ ಸ್ಥಳೀಯವಾಗಿರುವ ಎಲ್ಲ ಸಣ್ಣ ಜಾತಿಯ ಸಸನ್ತಿಗಳೂ ಇವೆ. ತುಪ್ಪಳಕ್ಕಾಗಿ ಕೊಲ್ಲುವದರಿಂದ ಮಿಂಕ್ ಆಟರ್ಗಳ (ನೀರುನಾಯಿ) ಸಂಖ್ಯೆ ಕ್ಷೀಣಿಸಿದೆ. ಕಡಲಹಸು (ಮೀನಿನಂಥ ಒಂದು ಸಸ್ತನಿ) ತೀರದ ಹತ್ತಿರ ಮತ್ತು ದಕ್ಷಿಣ ಪ್ರದೇಶದ ತೀರದ ನದಿಗಳಲ್ಲಿ ಕಂಡುಬರುತ್ತವೆ. ರಾಜ್ಯದಲ್ಲಿ 400ಕ್ಕೂ ಹೆಚ್ಚು ಪಕ್ಷಿ ಜಾತಿಗಳ ದಾಖಲೆಯಿದೆ. ಒಕಚೋಬಿ ಜಲಾಶಯದ ಸುತ್ತು ಮುತ್ತುಲಿನ ಪ್ರದೇಶ. ಸೈಪ್ರೆಸ್ ಜೌಗು ಮತ್ತು ಎವರ್ ಗ್ಲೇಡ್ಸ್‍ಗಳಲ್ಲಿನ ಠುಕ್ ಹಕ್ಕಿಗಳು ಜಗತ್ಪ್ರಸಿದ್ಧ. ಇಲ್ಲಿ ಅನೇಕ ಪಕ್ಷಿಧಾಮಗಳಿವೆ. ಗಲ್, ಪೆಲಿಕನ್, ಕಾರ್ಮೊರಂಟ್, ಕಡಲಡೇಗೆ ಮತ್ತು ಸ್ಯಾಂಡ್‍ಪೈಪರ್, ಐಬಿಸ್, ಕ್ರೌಂಚ್ (ಹೆರನ್), ಈಗ್ರೆಟ್ ಮತು ನೀರುಕೋಳಿ ಇವು ಜಲಪಕ್ಷಿಗಳು. ಟರ್ಕಿಕೋಳಿ, ಲಾವಕ್ಕಿ ಕಪೋತ ಮತ್ತು ಹೆಣ್ಣುಬಾತು ರಕ್ಷಿತ ಪಕ್ಷಿಗಳು. ಇವುಗಳನ್ನು ಬೇಟೆಯ ಕಾಲದಲ್ಲಲ್ಲದೆ ಇತರ ಕಾಲದಲ್ಲಿ ಕೊಲ್ಲುವಂತಿಲ್ಲ. ಮೊಸಳೆ ಇಲ್ಲಿನ ಕಾನೂನು ರಕ್ಷಿತ ಜಲಪ್ರಾಣಿ, ಬಿಸ್ಕೇನಿ ಕೊಲ್ಲಿ ಮತ್ತು ನೀರುಕೋಳಿ ಇವು ಜಲಪಕ್ಷಿಗಳು. ಟರ್ಕಿ ಕೋಳಿ, ಲಾವಕ್ಕಿ ಕಪೋತ ಮತ್ತು ಹೆಣ್ಣುಬಾತು ರಕ್ಷಿತ ಪಕ್ಷಿಗಳು. ಇವುಗಳನ್ನು ಬೇಟೆಯ ಕಾಲದಲ್ಲಲ್ಲದೆ ಇತರ ಕಾಲದಲ್ಲಿ ಕೊಲ್ಲುವಂತಿಲ್ಲ. ಮೊಸಳೆ ಇಲ್ಲಿನ ಕಾನೂನು ರಕ್ಷಿತ ಜಲಪ್ರಾಣಿ, ಬಿಸ್ಕೇನಿ ಕೊಲ್ಲಿ ಮತ್ತು ಸೇಬಲ್ ಭೂಶಿರಗಳ ನಡುವಣ ಪೂರ್ವತೀರದಲ್ಲಿ ಮೊಸಳೆಗಳು ಕಂಡುಬರುತ್ತವೆ. ಇಲ್ಲಿರುವ 40 ಬಗೆಯ ಹಾವುಗಳಲ್ಲಿ ನಾಲ್ಕು ಮಾತ್ರ ವಿಷಪೂರಿತ. ಇಲ್ಲಿನ 700ಕ್ಕೂ ಹೆಚ್ಚು ಜಾತಿಯ ಮೀನುಗಳಲ್ಲಿ ಮಲೆಟ್, ಡಮ್‍ಫಿಶ್, ಟ್ರೌಟ್, ಮ್ಯಾಕರೆಲ್, ಸ್ಯಾಡರ್ ಮತ್ತು ಪಂಪಾನೋ ಆಹಾರಯೋಗ್ಯ ಸಮುದ್ರ ಮೀನುಗಳು. ಸಿಹಿನೀರಿನ ಮೀನುಗಳಲ್ಲಿ ಬಾಸ್, ಬ್ರೀಮ್ ಪರ್ಚ್ ಮತ್ತು ಕ್ಯಾಟ್‍ಫಿಶ್ ಇಲ್ಲಿ ಹೇರಳವಾಗಿ ಸಿಗುತ್ತವೆ. ಕಾಡುಗಳಲ್ಲಿ ಕಪ್ಪು ಕರಡಿಗಳು, ಫ್ಲಾರಿಡ ಚಿರತೆ, ಬೂದು ಬಣ್ಣದ ನರಿಗಳು, ಕಾಡು ಬೆಕ್ಕು ಇತ್ಯಾದಿ ಪ್ರಾಣಿಗಳನ್ನು ಕಾಣಬಹುದು.

ಅರಣ್ಯಗಳು ಉದ್ಯಾನಗಳು: ಒಕಾಲ, ಒಸಿಯೋಲ, ಅಪಲಾಚಕೊಲ ಈ ಮೂರು ರಾಷ್ಟ್ರೀಯ ಅರಣ್ಯಗಳು ಒಟ್ಟು 4451.7 ಚ ಕಿಮೀ ಪ್ರದೇಶವನ್ನು ವ್ಯಾಪಿಸಿವೆ. ಜೊತೆಗೆ ಇಲ್ಲಿ ನಾಲ್ಕು ರಾಜ್ಯ ಅರಣ್ಯ ಪ್ರದೇಶಗಳಿವೆ. ರಕ್ಷಿತ ಸಸ್ಯಪ್ರಾಣಿ ಮತ್ತು ಕಡಲ ಜೀವಾದಿಗಳ ಪಾಲನೆಗಾಗಿ ನಿರ್ಮಿಸಲಾದ ಕೆಲವೇ ಉದ್ಯಾನಗಳಲ್ಲಿ ಒಂದಾದ ಎವರ್‍ಗ್ಲೇಡ್ಸ್ ಉದ್ಯಾನ ಫ್ಲಾರಿಡದ ದಕ್ಷಿಣದಲ್ಲಿದೆ. ಈ ಉದ್ಯಾನ ಮತ್ತು ರಾಷ್ಟ್ರೀಯ ಸ್ಮಾರಕಗಳಾದ ಸೇಂಟ್ ಅಗಸ್ಟೈನಿನಲ್ಲಿರುವ ಸ್ಟ್ಯಾನಿಷ್ ಕೋಟೆ, ಕ್ಯಾರೊಲಿನ್ ಕೋಟೆ ಮತ್ತು ಟಾಂಪಾದ ಹತ್ತಿರ ಇರುವ ಡ ಸಾಟೋ ಸ್ಮಾರಕ ಇವು ಅಧಿಕ ಸಂಖ್ಯೆಯಲ್ಲಿ ಪ್ರವಾಸಿಗಳನ್ನು ಆಕರ್ಷಿಸುತ್ತವೆ. ಅನೇಕ ರಾಜ್ಯ ಉದ್ಯಾನ ಮತ್ತು ಐತಿಹಾಸಿಕ ಸ್ಮಾರಕಗಳಲ್ಲಿ ಸಸ್ಯ ಮತ್ತು ಪ್ರಾಣಿಗಳ ರಕ್ಷಣೆಯೊಂದಿಗೆ ಭೂವೈಜ್ಞಾನಿಕ ರಚನೆ ಮತ್ತು ಐತಿಹಾಸಿಕ ಹೆಗ್ಗುರುತುಗಳನ್ನು ಕಾದಿಡಲಾಗಿದೆ. ಸೇಂಟ್ ಆಗಸ್ಟೈನಿನ ದಕ್ಷಿಣಕ್ಕೆ 29 ಕಿಮೀ ದೂರದಲ್ಲಿರುವ ಸಣ್ಣ ಸಣ್ಣ ಮೀನುಗಳವರೆಗಿನ 100 ಕಡಲ ಜೀವಿಗಳ ನಮೂನೆಗಳನ್ನೂ ತರಬೇತಿ ಪಡೆದ ಡಾಲ್ಫಿನ್‍ಗಳನ್ನೂ ನೋಡಬಹುದು.

ಕೃಷಿ: ಕೃಷಿ ಉತ್ಪಾದನೆಗೆ ಫ್ಲಾರಿಡಾದಲ್ಲಿ ಸುಮಾರು 6 ಮಿಲಿಯಹೆಕ್ಟೇರ್ ಭೂಪ್ರದೇಶವನ್ನು ಬಳಸಿಕೊಳ್ಳಲಾಗಿದೆ. ವರ್ಷಕ್ಕೆ ಸುಮಾರು 1.5 ಬಿಲಿಯನ್ ಡಾಲರ್‍ಗಳ ನಿವ್ವಳ ಆದಾಯವಿದ್ದು ರಾಜ್ಯದ ಒಟ್ಟು ಉತ್ಪಾದನೆಯ 1/5 ಭಾಗ ಕೃಷಿಯಿಂದ ಬರುತ್ತಿದೆ. ರಾಷ್ಟ್ರದ ಕಿತ್ತಳೆ ಮತ್ತು ಜಂಬೀರ ಜಾತಿಯ ಹಣ್ಣುಗಳ ಬೆಳೆಗೆ ಫ್ಲಾರಿಡ ಪ್ರಸಿದ್ಧ. 1976ರಲ್ಲಿ ರಾಜ್ಯದಲ್ಲಿ ಆದ ಕಿತ್ತಳೆ ಮತ್ತು ದ್ರಾಕ್ಷಿ ಉತ್ಪಾದನೆಗಳ ಮೌಲ್ಯ ಕ್ರಮವಾಗಿ 562 ದಶಲಕ್ಷ ಮತ್ತು 111 ದಶಲಕ್ಷ ಡಾಲರುಗಳು. ಫ್ಲಾರಿಡ ಕಬ್ಬಿನ ಬೆಳೆಯಲ್ಲೂ ಎಲ್ಲ ರಾಜ್ಯಗಳಿಗೂ ಮುಂದಿದೆ. ತರಕಾರಿ ಮುಖ್ಯ ಕೃಷಿ ಉತ್ಪಾದನೆಗಳಲ್ಲಿ ಒಂದು. ಆಲೂಗೆಡ್ಡೆ, ಟೊಮಟೋ, ಹುರುಳಿಕಾಯಿ, ಗೆಣಸು, ಕರಬೂಜ, ನಿಂಬೆ, ಟ್ಯಾಂಜೆರೀನ್ ನೆಲಗಡಲೆ, ಹತ್ತಿತಂಬಾಕು, ನೆಲಮುಳ್ಳಿಹಣ್ಣು ಮುಂತಾದವನ್ನು ಬೆಳೆಯುತ್ತಾರೆ. ಕೋಳಿ ಮತ್ತು ದನದ ಮಾಂಸದ ಉತ್ಪಾದನೆಯಲ್ಲೂ ಈ ರಾಜ್ಯ ಪ್ರಮುಖವಾಗಿದೆ. ವಿವಿಧ ಬೆಳೆಗಳು ಮತ್ತು ಸಾಕುಪ್ರಾಣಿಗಳಿಂದ ಬಂದ ಆದಾಯ 1976ರಲ್ಲಿ 2.7 ಶತಕೋಟಿ ಡಾಲರು ಇತ್ತು. ಮೀನುಗಾರಿಕೆ ಮುಖ್ಯ ಉದ್ಯೋಗಗಳಲ್ಲಿ ಒಂದು. ಈ ಉದ್ಯೋಗದಿಂದ ಬರುವ ಆದಾಯ ವರ್ಷಕ್ಕೆ 88 ದಶಲಕ್ಷ ಡಾಲರುಗಳೆಂದು ಅಂದಾಜು ಮಾಡಲಾಗಿದೆ.

ಕೈಗಾರಿಕೆ: ಫ್ಲಾರಿಡದ ಕೈಗಾರಿಕಾ ಅಭಿವೃದ್ಧಿ ಮುಖ್ಯವಾಗಿ 20ನೆಯ ಶತಮಾನದಿಂದ ಪ್ರಾರಂಭವಾಯಿತು. ಆಹಾರ ಸಂಸ್ಕರಣ ವಿದ್ಯುತ್ತಿನ ಉಪಕರಣಗಳು. ಸಾರಿಗೆಯ ಉಪಕರಣಗಳು ಲೋಹಗಳ ಉತ್ಪಾದನೆ, ಕಾಗದ, ಕೃತಕ ನಾರು, ಪ್ಲಾಸ್ಟಿಕ್ ಮತ್ತು ರಾಳ ಇವು ಇಲ್ಲಿನ ಮುಖ್ಯ ಕೈಗಾರಿಕೆಗಳು. ರಾಷ್ಟ್ರದ ಟರ್ಪೆಂಟೈನ್ ರಾಳದ ಉತ್ಪಾದನೆಯಲ್ಲಿ ನಾಲ್ಕನೆಯ ಒಂದು ಭಾಗ ಫ್ಲಾರಿಡದ್ದು. 1956ರಿಂದ ಅನೇಕ ಕ್ಷಿಪಣಿ ಮತ್ತು ಜೆಟ್ ಎಂಜಿನ್ನುಗಳ ನಿರ್ಮಾಪಕರು ಕಾರ್ಖಾನೆಗಳನ್ನು ಫ್ಲಾರಿಡದಲ್ಲಿ ಸ್ಥಾಪಿಸಲಾರಂಭಿಸಿದರು. 1963ರಲ್ಲಿ ಸ್ಥಾಪಿತವಾದ ರಾಷ್ಟ್ರೀಯ ಕ್ಷಿಪಣಿ ಸಂಶೋಧನಾ ಕೇಂದ್ರ ಕೇಪ್ ಕೆನಡಿಯಲ್ಲಿದೆ. ರಾಜ್ಯದಲ್ಲಿ 150ಕ್ಕೂ ಹೆಚ್ಚು ಎಲೆಕ್ಟ್ರಾನಿಕ್ಸ್ ಸಂಸ್ಥೆಗಳಿವೆ.

ಖನಿಜಗಳು: ಫಾಸ್ಪೇಟ್ ಶಿಲೆ ಮತ್ತು ಚವಳು ಮಣ್ಣು ಇವುಗಳ ಉತ್ಪಾದನೆ ಮತ್ತು ಅಲ್ಯೂಮಿನಿಯಮ್ ಯುರೇನಿಯಮ್‍ಗಳನ್ನು ಫಾಸ್ಟೇಟ್‍ಶಿಲೆಯಿಂದ ಸಂಗ್ರಹಿಸಲಾಗುತ್ತದೆ. ಟೈಟಾನಿಯಮ್ಮಿನ ಉತ್ಪಾದನೆಯಲ್ಲಿ ಫ್ಲಾರಿಡದ ಸ್ಥಾನ ರಾಷ್ಟ್ರದಲ್ಲಿ ಎರಡನೆಯದು. ಸರ್ಕೋನಿಯಮ್ ಮತ್ತು ಹ್ಯಾಪ್ನಿಯಮ್ ಈ ಹೊಸ ಖನಿಜಗಳು ಇಲ್ಲಿ ದೊರೆಯುತ್ತವೆ. 1976ರಲ್ಲಿ ಆದ ಖನಿಜ ಉತ್ಪಾದನೆಗಳ ಮೌಲ್ಯ 1.7 ಶತಕೋಟಿ ಡಾಲರುಗಳು.

ಪ್ರವಾಸೋದ್ಯಮ: ಫ್ಲಾರಿಡದ ಪ್ರವಾಸೋದ್ಯಮ ರಾಜ್ಯಕ್ಕೆ ಅತಿಹೆಚ್ಚು ಆದಾಯವನ್ನು ತರುತ್ತಿದೆ. ಸ್ವಯಂಯಾನಗಳು. ಉತ್ತಮ ಮಾರ್ಗಗಳು ಮತ್ತು ಎರಡನೆಯ ಮಹಾ ಯುದ್ಧದಿಂದೀಚೆಗೆ ಹೆಚ್ಚಿದ ವಿಮಾನಸಂಚಾರ ಇವುಗಳಿಂದಾಗಿ ರಾಜ್ಯದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಯಾಗಿದೆ. ಪ್ರವಾಸಿಗಳಿಗೆ ಇಲ್ಲಿಯೇ ಒಳ್ಳೆ ಹವಾಗುಣ, ಪ್ರವಾಸಿಧಾಮಗಳು ಮತ್ತು ಜಲಕ್ರೀಡಾ ಸೌಕರ್ಯಗಳ ಜೊತೆಗೆ ವಿವಿಧ ಬಗೆಯ ಅನೇಕ ಆಕರ್ಷಣೆಗಳಿವೆ. ಪ್ರಸಿದ್ಧ ಬಾಹ್ಯಾಕಾಶಯಾನ ಕೇಂದ್ರ ಕೆಪ್ ಕೆನಡಿ, ಆಫ್ರಿಕದ ಪ್ರಾಣಿಗಳು ಅಪರೂಪದ ಪಕ್ಷಿಗಳು ಇರುವ ಬುಷ್ ಗಾರ್ಡನ್ಸ್, ಸೈಪ್ರಸ್ ಗಾರ್ಡನ್ಸ್, ಗಿಳಿಗಳ ಕಾಡು ಮಿಯಾಮಿ ನಗರ ಮತ್ತು ಹೆಚ್ಚು ವಿಲಾಸೀ ಹೋಟಲುಗಳನ್ನು ಹೊಂದಿರುವ ಮಿಯಾಮೀತೀರ, ಪಾಮ್‍ಬೀಚ್, ಸಂಯುಕ್ತ ಸಂಸ್ಧಾನಗಳ ಅತ್ಯಂತ ಹಳೆಯನಗರ ಸೇಂತಾ ಆಗಸೈಸ್, ಪ್ರೋರ್ಟಲ್ಯಾಂಡರ್‍ಡೇಲ್, ಸಾರಾಸಾಟಾ, ಕೀವೆಸ್ಟ್, ಸೇಂಟ್ ಪೀಟಸಬರ್ಗ್, ಪೆನ್ಸಕೊಲ, ಪನಾಮ ನಗರ, ಎವರ್‍ಗ್ಲೈಡ್ಸಾ ರಾಷ್ಟ್ರೀಯ ಉದ್ಯಾನ ಮೊದಲಾದ ಸ್ಧಳಗಳಲ್ಲಿರುವ ವಿಶೇಷ ಆಕರ್ಷಣೆಗಳು. 1976ರಲ್ಲಿ 13.1 ದಶಲಕ್ಷ ಪ್ರವಾಸಿಗಳು ಭೇಟಿಯಿತ್ತ ಪ್ರಸಿದ್ಧ ವಾಲ್ಟ್‍ಡಿಸ್ನೆ ಪ್ರಪಂಚ ಮತ್ತು ಅನೇಕ ಜಲಾಶಯಗಳು, ವಿಶಾಲ ತೀರಗಳು, ಇಲ್ಲಿ ನಡೆಯುವ ಕುದುರೆ ಮತ್ತು ನಾಯಿ ಪಂದ್ಯಗಳು ಪ್ರವಾಸಿಗಳನ್ನು ಅಧಿಕ ಸಂಖ್ಯೆಯಲ್ಲಿ ಆಕರ್ಷಿಸುತ್ತವೆ. 1976ರಲ್ಲಿ ಇಲ್ಲಿಗೆ ಬಂದ ಪ್ರವಾಸಿಗಳ ಸಂಖ್ಯೆ ಸುಮಾರು 29 ದಶಲಕ್ಷ ಎಂದು ಅಂದಾಜಿದೆ.

ಸಾರಿಗೆ ಮತ್ತು ಸಂಪರ್ಕ: ರಾಜ್ಯದಲ್ಲಿ ಸುಮಾರು 7567 ಕಿಮೀ ಉದ್ದದ ರೈಲುಮಾರ್ಗಗಳಿವೆ. 22540 ಕಿಮೀ ಉದ್ದದ ರಾಜ್ಯ ಸರ್ಕಾರದಾಡಳಿತಕ್ಕೆ ಸೇರಿದ ಮಾರ್ಗಗಳೂ 66010 ಕಿಮೀ ಉದ್ದದ ಕೌಂಟಿ ಮತ್ತು ಶಹರುಗಳಿಗೆ ಸೇರಿದ ಮಾರ್ಗಗಳೂ ಹಾಗೂ 32640 ಕಿಮೀ ಉದ್ದದ ಕಚ್ಚಾರಸ್ತೆಯೂ ಇವೆ. ಮಿಯಾಮಿ ಮತ್ತು ಟಂಪಾಗಳಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳಿವೆ. ಸ್ಥಳೀಯ ಮತ್ತು ಅನೇಕ ವಿದೇಶಿ ವಿಮಾನ ಸಂಸ್ಥೆಗಳು 100ಕ್ಕೂ ಹೆಚ್ಚು ವಾಣಿಜ್ಯ ಹಾಗು ಪೌರಸಂಸ್ಥೆಗಳ ವಿಮಾನ ನಿಲ್ದಾಣಗಳನ್ನು ಬಳಸುತ್ತವೆ. 50ಕ್ಕೂ ಹೆಚ್ಚು ಮಿಲಿಟರಿ ವಿಮಾನ ನಿಲ್ದಾಣಗಳು ಇಲ್ಲಿವೆ. 13 ಆಳನೀರಿನ ಬಂದರುಗಳು ಆಮದು ಮತ್ತು ರಪ್ತು ವ್ಯಾಪಾರಕ್ಕೆ ಸಂಬಂಧಿಸಿದ 10,000,000 ಟನ್ನು ಸರಕನ್ನು ನಿರ್ವಹಿಸುತ್ತವೆ. ಫ್ಲಾರಿಡದಲ್ಲಿ 150 ವಾರಪತ್ರಿಕೆಗಳು ಇವೆ. ರೇಡಿಯೋ ಮತ್ತು ವಾಣಿಜ್ಯ ಹಾಗೂ ಶೈಕ್ಷಣಿಕ ದೂರದರ್ಶನ ಕೇಂದ್ರಗಳಿವೆ.

ಆಡಳಿತ: ಆಡಳಿತಾಧಿಕಾರಗಳು ಶಾಸಕ, ನಿರ್ವಾಹಕ ಮತ್ತು ನ್ಯಾಯಿಕ ಶಾಖೆಗಳ ನಡುವೆ ವಿಭಜಿಸಲ್ಪಟ್ಟಿವೆ. ವಿಧಾನಮಂಡಲದಲ್ಲಿ ಸೆನೆಟ್ ಮತ್ತು ಪ್ರತಿನಿಧಿಗಳ ಸಭೆ ಇವೆ. ಅಧಿವೇಶನ ವರ್ಷದಲ್ಲಿ ಎರಡು ಸಲ ನಡೆಯುತ್ತದೆ. ಸೆನೆಟ್ ಮತ್ತು ಪ್ರತಿನಿಧಿಗಳು ಇರುವ ವಿಧಾನ ಪರಿಷತ್ತು ಅಧಿವೇಶನಗಳ ನಡುವೆ ಹಂಗಾಮಿ ಯೋಜನೆ ಮತ್ತು ಪ್ರತಿನಿಧಿಗಳು ಇರುವ ವಿಧಾನ ಅಧ್ಯಯನ ಸಮಿತಿಯಂತೆ ಕೆಲಸ ನಿರ್ವಹಿಸುತ್ತದೆ. ನಿರ್ವಾಹಕ ಅಧಿಕಾರನಿಯೋಗ, ಅಧಿಕಾರವರ್ಗ, ಮಂಡಲಿಗಳ ಮತ್ತು ಆಯೋಗಗಳಲ್ಲಿ ವಿಕೇಂದ್ರಿಕೃತವಾಗಿದೆ. ನ್ಯಾಯಾಂಗ ಶಾಖೆಯಲ್ಲಿ 6 ವರ್ಷಗಳ ಅವಧಿಗೆ ಚುನಾಯಿತರಾಗುವ ನ್ಯಾಯಾಧೀಶರಿರುವ ಸರ್ವೋಚ್ಚ ನ್ಯಾಯಾಲಯವಿದೆ. ಮುಖ್ಯನ್ಯಾಯಾಧೀಶನ ಪದವಿ ಸದಸ್ಯರಿಗೆ ಸರದಿಯ ಮೇಲೆ ಹೋಗುತ್ತದೆ. ಅನಂತರ 6 ವರ್ಷಗಳ ಅವಧಿಗೆ ಚುನಾಯಿತ ನ್ಯಾಯಾಧೀಶರಿರುವ ಮೂರು ಜಿಲ್ಲಾ ಅಪೀಲು ನ್ಯಾಯಾಲಯಗಳೂ ಸಂಚಾರೀ ನ್ಯಾಯಾಲಯಗಳೂ ಪ್ರತಿಯೊಂದು ಕೌಂಟಿಯಲ್ಲೂ ಕೌಂಟಿ ನ್ಯಾಯಾಲಯಗಳೂ ಇವೆ.

ಶಿಕ್ಷಣ: ಫ್ಲಾರಿಡದ ಶಾಲಾ ಶಿಕ್ಷಣ ವಯಸ್ಕರ ಉದ್ಯೋಗಕ್ಕೆ ತೊಂದರೆಯಾಗದಂತೆ ಉಳಿದ ವೇಳೆಯಲ್ಲಿ ಸಾಧ್ಯವಾಗುವಂತೆ ವೈವಿಧ್ಯದ ಸಹಕಾರೀ ತರಬೇತಿ ನೀಡುವ ಯೋಜನೆಯನ್ನು ಒಳಗೊಂಡಿದೆ. ವಿಶ್ವವಿದ್ಯಾನಿಲಯದ ವ್ಯವಸ್ಥೆಯಲ್ಲಿ ಸರಕಾರದ ಆಸರೆ ಪಡೆಯುವ ಎಲ್ಲ ಉಚ್ಛ ಶಿಕ್ಷಣ ಸಂಸ್ಥೆಗಳಿವೆ. 1853ರಲ್ಲಿ ಸ್ಥಾಪಿತವಾದ ಫ್ಲಾರಿಡ ವಿಶ್ವವಿದ್ಯಾಲಯ ಗೆಯಾನ್ಸ್ ವಿಲೆಯಲ್ಲಿದೆ. 1857ರಲ್ಲಿ ಸ್ಥಾಪಿತವಾದ ಫ್ಲಾರಿಡ ಕೃಷಿ ಮತ್ತು ಯಾಂತ್ರಿಕ ವಿಶ್ವವಿದ್ಯಾಲಯಗಳಿವೆ. ಫ್ಲಾರಿಡದ ವಿಶ್ವವಿದ್ಯಾಲಯಕ್ಕೆ ಔಷಧಿ ಚಿಕಿತ್ಸೆ, ಶುಶ್ರೂಷೆ ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ಸೇವೆಗಳ ಕಾಲೇಜು ಸೇರಿದೆ. ಮಿಯಾಮಿಯಲ್ಲಿರುವ ಖಾಸಗಿ ವೈದ್ಯಕೀಯ ಕಾಲೇಜಿಗೆ ಸಕಾರದ ಸಹಾಯವಿದೆ. ವಿಂಟರ್ ಪಾರ್ಕಿನಲ್ಲಿರುವ ಸದರ್ನ್ ಕಾಲೇಜು ಖಾಸಗಿ ಸಂಸ್ಥೆಗಳಲ್ಲಿ ಸೇರುತ್ತದೆ. ರಾಜ್ಯದಲ್ಲಿ ಅನೇಕ ಜ್ಯೂನಿಯರ್ ಕಾಲೇಜುಗಳೂ ವಿವಿಧ ಶಿಕ್ಷಣ ಸಂಸ್ಥೆಗಳೂ ಇವೆ.

ಇತಿಹಾಸ: ಸ್ಟ್ಯಾನಿಯಾರ್ಡರು 16ನೆಯ ಶತಮಾನದ ಆದಿಯಲ್ಲಿ ಇಲ್ಲಿಗೆ ಬಂದಿಳಿದಾಗ ಸಹಸ್ರಾರು ಇಂಡಿಯನ್ನರು ಇಲ್ಲಿ ವಾಸಿಸುತ್ತಿದ್ದರು. ನೈಋತ್ಯದಲ್ಲಿ ಕಲುಸಾ ಇಂಡಿಯನ್ನರು ಕೇಪ್ ಕೆನವೆರಲ್ ದಕ್ಷಿಣಕ್ಕೆ ಫಗ್ರ್ಯುಸನ್ ಇಂಡಿಯನ್ನರು. ಮಧ್ಯ ಮತ್ತು ಈಶಾನ್ಯ ಫ್ಲಾರಿಡದಲ್ಲಿ ಟಿಮುಕ್ವಾನ್ ಇಂಡಿಯನ್ನರು ಮತ್ತು ವಾಯವ್ಯದಲ್ಲಿ ಅಪಲಾಚಿಯನ್ನರು ವಾಸವಾಗಿದ್ದರು. ಸ್ಟ್ಯಾನಿಷ್ ಪರಿಶೋಧಕ ಪಾನ್ಸೆಡ ಲಿಯಾನ್ 1513ರಲ್ಲಿ ಫ್ಲಾರಿಡವನ್ನು ಕಂಡುಹಿಡಿದ. ಅವನು ಅಟ್ಲಾಂಟಿಕ್ ತೀರದಲ್ಲಿಳಿದು ಆ ಪ್ರದೇಶವನ್ನು ಸ್ಪೇನಿಗೆ ಸೇರಿದ್ದೆಂದು ಸಾರಿದ. 1528ರಲ್ಲಿ ಪಾಂಟಲೊ ಡ ನರ್ವಾಜ್ ಎಂಬ ಇನ್ನೊಬ್ಬ ಸ್ಪ್ಯಾನಿಷ್ ಪರಿಶೋಧಕ ಸುಮಾರು 400 ಮುಂದಿಯೊಡನೆ ನೈಋತ್ಯ ತೀರದಲ್ಲಿಳಿದ. ಚಿನ್ನದ ಶೋಧದಲ್ಲಿ ಅವರು ಕೊಲ್ಲಿಯ ತೀರದ ಗುಂಟ ಕಚ್ಚಾ ದೋಣಿಗಳಲ್ಲಿ ಸಾಗುತ್ತಿದ್ದಾಗ ಮುಳುಗಿ ಸತ್ತರು. ಕ್ಯೂಬ ಮತ್ತು ಫ್ಲಾರಿಡಗಳ ಹೊಸ ಗವರ್ನರ್ ಹರ್ನಾಂಡೊ ಡ ಸಾಟೋ ನೇತೃತ್ವದಲ್ಲಿ ಒಂದು ತಂಡ 1539ರಲ್ಲಿ ಟಂಪಾಕೊಲ್ಲಿಯಲ್ಲಿ ಬಂದಿಳಿಯಿತು. ಮಿಸಿಸಿಪಿ ನದಿಯನ್ನು ಮುಟ್ಟಿದ (1541) ಪ್ರಥಮ ಯೂರೋಪಿಯನ್ ತಂಡ ಇದಾಯಿತು. ಫ್ರಾನ್ಸಿನ ಪ್ರಾಟೆಸ್ಟಂಟರು ಸೇಂಟ್ ಜಾನ್ಸ್ ನದಿ ದಂಡೆಗಳ ಮೇಲೆ ನೆಲಸೆಗಳನ್ನು ಸ್ಥಾಪಿಸಲು ಯತ್ನಿಸಿ 1564ರಲ್ಲಿ ಕ್ಯಾರೊಲೀನ್ ಕೋಟೆಯನ್ನು ಕಟ್ಟಿದರು. 1565ರಲ್ಲಿ ಸ್ಟ್ಯಾನಿಷರು ಸಂಯುಕ್ತ ಸಂಸ್ಥಾನಗಳಲ್ಲೇ ಬಿಳಿಯರ ಪ್ರಥಮ ಶಾಶ್ವತ ನೆಲೆಯನ್ನು ಸೇಂಟ್ ಆಗಸ್ಟೈನಿನಲ್ಲಿ ಸ್ಧಾಪಿಸಿದರು. ಸ್ಟ್ಯಾನಿಯಾರ್ಡರು ಹೆಚ್ಚು ಕಡಿಮೆ ಎಲ್ಲ ಫ್ರೆಂಚ್ ನೆಲಸಿಗರನ್ನು ಕೊಂದು ಮುಂದಿನ ಸುಮಾರು 200 ವರ್ಷಗಳ ಕಾಲ ಫ್ಲಾರಿಡವನ್ನು ತಮ್ಮ ಸ್ವಾದೀನದಲ್ಲಿಟ್ಟುಕೊಂಡಿದ್ದರು. 1698ರಲ್ಲಿ ಅವರು ಫ್ರೆಂಚ್ ವಸಾಹತುಗಾರರನ್ನು ಲೂಸಿಯಾನಾ ಪ್ರದೇಶದಿಂದ ದೂರಿಡಲು ಪೆನ್ಸ ಕೊಲದಲ್ಲಿ ಕೋಟೆಯೊಂದನ್ನು ಕಟ್ಟಿದರು.

ಇಂಗ್ಲಿಷರ ಕಾಲ: 1763ರಲ್ಲಿ ಇಂಡಿಯನ್ನರ ಮತ್ತು ಫ್ರೆಂಚರ ನಡುವಿನ ಯುದ್ಧಗಳು ಕೊನೆಗೊಂಡ ಅನಂತರ ಇಂಗ್ಲಿಷರಿಗೆ ಹವಾನಾದ (ಕ್ಯೂಬ) ಬದಲಾಗಿ ಫ್ಲಾರಿಡವನ್ನು ಬಿಟ್ಟು ಕೊಡಲಾಯಿತು. ಮಿಸಿಸಿಪಿಯ ಪೂರ್ವಕ್ಕಿರುವ ಲೂಸಿಯಾನಾ ಪ್ರದೇಶವನ್ನು ಫ್ಲಾರಿಡಕ್ಕೆ ಸೇರಿಸಲಾಯಿತು. ಇಂಗ್ಲಿಷ್ ವಸಾಹತುಗಾರರು ಫ್ಲಾರಿಡ ಅಪಲಾಚಿಕೊಲ ನದಿಯ ಪಶ್ಚಿಮಕ್ಕಿದ್ದು ಅದರಲ್ಲಿ ಈಗಿನ ಅಲಬಾಮ ಮತ್ತು ಮಿಸಿಸಿಪಿ ಸೇರಿದ್ದವು. ಈಗಿನ ಫ್ಲಾರಿಡದ ಉಳಿದ ಭಾಗ ಪೂರ್ವ ಫ್ಲಾರಿಡ ಸ್ಪ್ಯಾನಿಷರ ವಶವಾಗಿ 1821ರ ವರೆಗೂ ಅವರ ಸ್ವಾಮಿತ್ವದಲ್ಲಿ ಉಳಿಯಿತು. 19ನೆಯ ಶತಮಾನದ ಆದಿಯಲ್ಲಿ ಪಶ್ಚಿಮ ಮತ್ತು ಪೂರ್ವ ಫ್ಲಾರಿಡಗಳಲ್ಲಿರುವ ಅಮೆರಿಕನ್ ನೆಲಸಿಗರು ಫ್ಲಾರಿಡವನ್ನು ಸಂಯುಕ್ತ ಸಂಸ್ಥಾನಗಳಿಗೆ ಸೇರಿಸುವುದಕ್ಕೆ ಬಂಡಾಯವನ್ನಾರಂಬಿಸಿದರು. 1814ರಲ್ಲಿ ಜನರಲ್ ಅ್ಯಂಡ್ರೂಜಾಕ್‍ಸನ್ನನ ನೇತೃತ್ವದಲ್ಲಿಯ ಒಂದು ಸೈನ್ಯ 1812ರ ಯುದ್ಧದ ಕಾಲದಲ್ಲಿ ಸ್ಪ್ಯಾನಿಯಾರ್ಡರು ಇಂಗ್ಲಿಷರಿಗೆ ನೌಕಾನೆಲೆಯಾಗಿ ಉಪಯೋಗಿಸಲು ಬಿಟ್ಟಿದ್ದ ಪೆನ್ಸಕೊಲವನ್ನು ಗೆದ್ದುಕೊಂಡಿತು. ನಾಲ್ಕು ವರ್ಷಗಳ ಅನಂತರ ಜಾಕ್‍ಸನ್ನನ ಸೈನ್ಯಜಾರ್ಜಿಯಾದ ಮೇರೆಯ ಮೇಲೆ ದಾಳಿಗಳನ್ನು ಮಾಡುತ್ತಿದ್ದ ಇಂಡಿಯನ್ನರನ್ನು ಶಿಕ್ಷಿಸುವುದಕ್ಕೆ ಪೆನ್ಸಕೊಲ ಮತ್ತು ಸುವಾನೀ ನದಿಗಳ ನಡುವಿನ ಪ್ರದೇಶಗಳಲ್ಲಿ ದಾಳಿ ಮಾಡಿತು.

ಮುಂದೆ ಫ್ಲಾರಿಡವನ್ನು 1819ರಲ್ಲಿ ಸ್ಪೇನ್‍ನಿಂದ ಕೊಂಡುಕೊಂಡಿತು. 821ರಲ್ಲಿ ಸ್ಪೇನ್ ಫ್ಲಾರಿಡವನ್ನು ಅಮೆರಿಕಕ್ಕೆ ವರ್ಗಾಯಿಸಿದಾಗ ಕಾಂಗ್ರೆಸ್ 1822ರಲ್ಲಿ ಫ್ಲಾರಿಡವನ್ನು ಒಂದು ವ್ಯವಸ್ಥಿತ ಸಮಸ್ಟಿಯನ್ನಾಗಿ ಮಾಡಿತು. ವಿಲಿಯಮ್ ಪಿ. ಡುವಲ್ ಮೊದಲನೆಯ ಪ್ರಾದೇಶಿಕ ಗವರ್ನರನಾದ. ಸಾವಿರಾರು ಅಮೆರಿಕನ್ ನೆಲಸಿಗರು ಇಲ್ಲಿಗೆ ಬಂದರು. 1750ರ ಅನಂತರ ಫ್ಲಾರಿಡಕ್ಕೆ ಬಂದಿದ್ದ ಸೆಮಿನಾಲರು 1835ರಲ್ಲಿ ಮೇಜನರ್ ಫ್ರಾನ್ಸಿಸ್ ಎಲ್. ಡೇಡ್‍ನನ್ನು ಕೊಂದು ಅವನ ಸೈನ್ಯವನ್ನು ನಾಶಪಡಿಸಿದರು. ಈ ಘಟನೆ 7 ವರ್ಷಗಳ ಸೆಮಿನಾಲ್ ಯುದ್ಧಕ್ಕೆ ಪೀಠಿಕೆಯಾಯಿತು. 1842ರಲ್ಲಿ ನಡೆದ ಯುದ್ಧದಲ್ಲಿ ಸೆಮಿನಾಲರು ಸೋತು ಫ್ಲಾರಿಡವನ್ನು ಬಿಟ್ಟರು. ಕೆಲವೇ ಸೆಮಿನಾಲ್ ಮಂದಿ ಅಲ್ಲಿ ಉಳಿದರು.

ಫ್ಲಾರಿಡ 1839ರಲ್ಲಿ ರಾಜ್ಯ ಸಂವಿಧಾನವನ್ನು ತಯಾರಿಸಿತು. ಆದರೆ ಕಾಂಗ್ರೆಸ್ಸು 1845ರ ವರೆಗೂ ಫ್ಲಾರಿಡವನ್ನು ಒಂದು ರಾಜ್ಯವೆಂದು ಮಾನ್ಯ ಮಾಡಲಿಲ್ಲ. ಗುಲಾಮರ ಪದ್ಧತಿಯನ್ನು ಇಟ್ಟುಕೊಂಡಿದ್ದ ದಕ್ಷಿಣದ ರಾಜ್ಯಗಳ ಪ್ರಜೆಗಳು ವಿಲಿಯಮ್ ಡಿ.ಮಾಸ್ಲೆಯನ್ನು ಪ್ರಥಮ ಗವರ್ನರನನ್ನಾಗಿ ಆರಿಸಿದರು. ಫ್ಲಾರಿಡ 1861ರ ಜನವರಿ 10ರಂದು ಒಕ್ಕೂಟದಿಂದ ಬೇರೆಯಾಯಿತು. ಒಕ್ಕೂಟದ ಪಡೆಗಳು ಆಂತರಿಕ ಯುದ್ಧದ (1861-65) ಮೊದಲಿನ ಎರಡು ವರ್ಷಗಳಲ್ಲಿ ತೀರದ ಅನೇಕ ಊರುಗಳನ್ನು ವಶಪಡಿಸಿಕೊಂಡವು. 1864 ಫೆಬ್ರವರಿ 20ರಂದು ಫ್ಲಾರಿಡದ ಪಡೆಗಳು ಓಲ್‍ಸ್ಟಿ ಕದನದಲ್ಲಿ ಸಂಪೂರ್ಣ ಸೋತವು. 1868 ಜೂನ್ 25ರಂದು ಫ್ಲಾರಿಡವನ್ನು ಮತ್ತೆ ಅಮೆರಿಕ ಸಂಯುಕ್ತ ಸಂಸ್ಧಾನದ ಒಕ್ಕೂಟಕ್ಕೆ ಸೇರಿಸಿಕೊಳ್ಳಲಾಯಿತು.

               (ಜಿ.ಕೆಯು.)