ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಫ್ಲಾರೆನ್ಸಿನ ಕಲೆ

ವಿಕಿಸೋರ್ಸ್ದಿಂದ

ಫ್ಲಾರೆನ್ಸಿನ ಕಲೆ - ಕ್ರಿ.ಶ. ಸುಮಾರು ಹದಿಮೂರನೆಯ ಶತಮಾನದಿಂದ ಹದಿನಾರನೆಯ ಶತಮಾನದ ಮಧ್ಯದವರೆಗಿನ ಮೂರು ಶತಮಾನಗಳ ಕಾಲದ ಫ್ಲಾರೆನ್ಸ್ ನಗರದಲ್ಲಿ ವಿಕಸಿತಗೊಂಡ ವಾಸ್ತುಶಿಲ್ಪ, ಚಿತ್ರ ಹಾಗೂ ಇತರ ಕುಶಲಕಲೆಗಳಲ್ಲಿ ಸೃಜನಾತ್ಮಕ ಗುಣಗಳನ್ನು ವಿಶೇಷವಾಗಿ ಗಮನಿಸಬಹುದು. ಫ್ಲಾರೆನ್ಸಿನ ಕಲಾವಿದರು ತಮ್ಮ ಕಲಾತಂತ್ರ ಹಾಗೂ ಅದರ ಅರ್ಥ ವಿಶೇಷಕ್ಕೆ ಹೆಚ್ಚಿನ ಮಹತ್ತ್ವ ನೀಡಿದರು. ಅವರ ಧ್ಯೇಯ ಧೋರಣೆಗಳು ಲಿಯೋನೆ ಬಾತ್ತಿಸ್ತಾ ಹಾಗೂ ಅಲಬೆರ್ಟಿ ಅವರ ಬರವಣಿಗೆಗಳಿಂದ ಪ್ರೇರಿತವಾದುವು. ಅದರೂ ಅವರು ಯಾವುದೇ ನಿರ್ದಿಷ್ಟ ಮಾದರಿಯನ್ನು ಆದರ್ಶವಾಗಿಟ್ಟುಕೊಂಡಂತೆ ಕಾಣಬರುವುದಿಲ್ಲ. ನಿಸರ್ಗವೇ ಅದರ ಮುಂದಿದ್ದ ಆದರ್ಶ. ಮಾನವನ ಸಾಮಾಜಿಕ, ನೈತಿಕ ಹಾಗೂ ಆಧ್ಯಾತ್ಮಿಕ ಜೀವನವನ್ನು ಕಲಾಕೃತಿಯಲ್ಲಿ ಮೂಡಿಸಲು ಬಹುವಾಗಿ ಶ್ರಮಿಸಿದರು. ಸ್ವತಂತ್ರವಾದ ಒಂದು ಶಿಷ್ಟಶೈಲಿಯನ್ನು ಸಾಧಿಸಿಕೊಂಡು ಫ್ಲಾರೆನ್ಸಿನ ಕಲೆಗೆ ಒಂದು ಹೊಸ ಆಯಾಮವನ್ನು ಒದಗಿಸಿದರು. ಇದನ್ನು ಕ್ಲಾಸಿಕಲ್ ಶೈಲಿಯ ಪುನರುಜ್ಜೀವನವೆಂದೂ ಕರೆಯಬಹುದು. ಅರಿಸ್ಟಾಟಲನ ಕಲಾತತ್ವ ಸಿದ್ಧಾಂತ ಈ ಪುನರುಜ್ಜೀವನ ಕಲಾಶೈಲಿ ರೂಪತಾಳುವಲ್ಲಿ ಪ್ರಧಾನ ಪಾತ್ರವಹಿಸಿತು. ಐಹಿಕ ಮತ್ತು ಆಧ್ಯಾತ್ಮಿಕ ಜೀವನ ಧೋರಣೆಗಳ ಸುಂದರ ಸಮನ್ವಯವನ್ನು ಫ್ಲಾರೆನ್ಸಿನ ಕಲೆಯಲ್ಲಿ ಗುರುತಿಸಬಹುದು. ಈ ಬಗೆಯ ಕಲಾಶೈಲಿ ಯೂರೋಪಿನ ಪುನರುಜ್ಜೀವನಕ್ಕೆ ಹೆಚ್ಚಿನ ಪ್ರೇರಣೆ ನೀಡಿತು. ಶ್ರೀಮಂತ ಮೆಡಿಸಿಕುಟುಂಬದ ಉದಾರವಾದ ಆಶ್ರಯದಲ್ಲಿ ಫ್ಲಾರೆನ್ಸ್ ನಗರದ ಅನೇಕ ಶ್ರೇಷ್ಠ ಕಲಾವಿದರು ಸ್ಥಪತಿಗಳು ಲೇಖಕರು ಬೆಳಕಿಗೆ ಬಂದರು. ಇಟಲಿಯ ಪ್ರತಿಭಾನ್ವಿತ ಕಲಾಕಾರರು ಇಲ್ಲಿ ಬೆಳೆದರು : ಫ್ಲಾರೆನ್ಸಿನ ಕಲೆಯನ್ನು ಹುಲುಸು ಮಾಡಿದರು.

ವಾಸ್ತುಶಿಲ್ಪ: ಫ್ಲಾರೆನ್ಸಿನ ಕಲೆಯ ಗುಣಲಕ್ಷಣಗಳನ್ನು ಮೈಗೂಡಿಸಿಕೊಂಡ ಕೆಲವು ಪ್ರಾಚೀನ ಚರ್ಚುಗಳೂ ಮತ್ತು ಇತರ ಕಟ್ಟಡಗಳೂ ಉತ್ತಮ ವಾಸ್ತುಶಿಲ್ಪಕ್ಕೆ ಉದಾಹರಣೆಯಾಗಿವೆ. ಹನ್ನೊಂದನೆಯ ಶತಮಾನದ ಬ್ಯಾಪ್ಟಿಸ್ಟ್ ಅಥವಾ ಚರ್ಚಿನ ಪ್ರಮುಖ ಭಾಗ ಹಾಗೂ ಎಸ್. ವಿನಿಯಟೊ ಆಲ್ ಮಾಂಟ್ ಚರ್ಚ್‍ಗಳನ್ನು ಉದಾಹರಿಸಬಹುದು. ಇವುಗಳ ವಿಶಾಲ ಒಳಾಂಗಣ, ದುಂಡುಗಂಬಗಳು, ಕಮಾನುಗಳು ಹಾಗೂ ಕಮಾನುಸಾಲುಗಳು ಗಮನ ಸೆಳೆಯುವಂಥವು. ಇವುಗಳ ಭಿತ್ತಿಭಾಗ ಬಹುಬಣ್ಣಗಳ ಅಮೃತ ಶಿಲೆಗಳ ಫಲಕಗಳಿಂದ ಅಲಂಕೃತವಾಗಿವೆ. ಇವೆಲ್ಲ ಫ್ಲಾರೆನ್ಸಿನ ರೂಮನಸ್ಕ್ ಶೈಲಿಯ ವೈಶಿಷ್ಟ್ಯಗಳಾಗಿವೆ. ಇವುಗಳ ಪ್ರಭಾವ ಹದಿಮೂರು-ಹದಿನಾಲ್ಕನೆಯ ಶತಮಾನದ ಗೋತಿಕ್ ಶೈಲಿಯ ಮೇಲಾಗದೆ ಇರಲಿಲ್ಲ. ಫ್ರಾನ್ಸಿಸ್ಕನ್ನಿನ ಸ್ಟಕ್ರೊಸೆ ದಿ ಡೊಮೆನಿಕನ್ ಎಸ್.ಮೆರಿಯ ನೊವೆಲ್ಲ ಚರ್ಚು ಇವೇ ಮುಂತಾವುಗಳಲ್ಲಿ ಕಂಡುಬರುವ ಅಗಲ ಕಮಾನುಗಳು ಕಟ್ಟಡಗಳ ಒಳಾಂಗಣಕ್ಕೆ ಹೆಚ್ಚಿನ ವೈಶಾಲ್ಯವನ್ನಲ್ಲದೆ ವಿಶೇಷ ಶೋಭೆಯನ್ನು ನೀಡುತ್ತವೆ. ಈ ಬಗೆಯ ಪುನರುಜ್ಜೀವನ ವಾಸ್ತುಪರಂಪರೆಯನ್ನು ಬ್ರೂನಯೋಲ್ಲಾಸ್ಕಿ ಆರಂಭಿಸಿದ. ವಾಸ್ತು ವಸ್ತುಗಳ ಗುಣ, ರಚನೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಆತ ಪರಿಶೀಲಿಸಿದ. ಏಕಬಿಂದು ಯಥಾದೃಷ್ಟಿರೂಪಣದ ಶೋಧನೆಯಿಂದ ವಾಸ್ತುಶಿಲ್ಪಕಲೆಯಲ್ಲಿ ತಾವನ್ನು ಬೇಕಾದಂತೆ ಉಪಯೋಗಿಸುವುದು ಹಾಗೂ ನಿಯಂತ್ರಿಸುವುದು ಸಾಧ್ಯವಾಯಿತು. ದೂರದ ವಸ್ತುಗಳು ಕಣ್ಣೆಲೆಗೆ ಹೇಗೆ ಕಾಣಿಸುತ್ತವೆಂಬ ವಿಷಯದಲ್ಲಿ ಭೌತವಿಜ್ಞಾನದ ದೃಶ್ಯಾಂತರದ ತತ್ತ್ವವನ್ನಾಗಲೇ ಬ್ರೂನಯೋಲ್ಲಾಸ್ಕಿ ಸಾದರ ಪಡಿಸಿದ್ದ. ಈತನ ಸಮಕಾಲೀನನಾದ ಅಲ್ಬೆರ್ಟಿ ರೋಮಿನ ಕಲೋಸಿಯಮ್‍ನಿಂದ ಸ್ಫೂರ್ತಿ ಪಡೆದ. ಪಲಜ್ಜೊರೂಸೆಲ್ಲಿ ಬಳಸಿದ ಸ್ತಂಭಿಕೆಗಳಲ್ಲಿ ಎಸ್. ಆಂಡ್ರಿಯ ಇನ್ ಮಂಟುವ ಚರ್ಚಿನ ದ್ವಾರದ ಭವ್ಯ ಕಮಾನುಗಳಲ್ಲಿ ಇದನ್ನು ಗುರುತಿಸಬಹುದು. ಕಟ್ಟಡದ ಒಳ ಭಾಗದಲ್ಲಿ ಕಮಾನು ವಿನ್ಯಾಸಗಳನ್ನೇ ಮರುಕಳಿಸುವಂತೆ ಮಾಡಿದ್ದರಿಂದ ಸ್ತಂಭ ರಹಿತ ಒಳಾಂಗಣ ಸಾಧ್ಯವಾಯಿತು. ಈ ಮಾದರಿಯನ್ನು ಪುನರುಜ್ಜೀವನ ಕಾಲದ ಅನೇಕ ಕ್ಯಾಥೋಲಿಕ್ ಚರ್ಚ್‍ಗಳಲ್ಲಿ ಬಳಸಲಾಯಿತು.

ಹದಿನೈದನೆಯ ಶತಮಾನದ ಖ್ಯಾತ ಸ್ಥಪತಿಗಳಾದ ಮೀಚೆಯೋಲಾಟಟ್ಸೊ ಹಾಗೂ ಸಾಂಗ್ಗಾಲ್ಲೊ ಬ್ರೂನಯೋಲ್ಲಾಸ್ಕಿ ಶೈಲಿಯನ್ನೇ ಹೆಚ್ಚಾಗಿ ಜನಪ್ರಿಯಗೊಳಿಸಿದರು. ಈ ಶೈಲಿಯನ್ನು ಎಸ್. ಲೊರೆಂಜೊನ ಉಗ್ರಾಣ ರಚನೆಯಲ್ಲಿ ಕೂಡ ಮೈಕೆಲ್ಯಾಂಜೆಲೋ ಕೆಲಮಟ್ಟಿಗೆ ಅಳವಡಿಸಿದ್ದುಂಟು. ಮೂಲತಃ ಖ್ಯಾತ ಶಿಲ್ಪಿಯೆಂದು ಪ್ರಸಿದ್ಧನಾದ ಈತ ಲೌರೆಂಥಿಯನ್ ವಾಚನಾಲಯದ ದ್ವಾರದಲ್ಲಿರುವ ಮೆಟ್ಟಿಲುಗಳ ವಿನ್ಯಾಸವನ್ನು ಭವ್ಯವಾಗಿ ರೂಪಿಸಿದ. ಈತನ ಕಲಾಶೈಲಿಯಲ್ಲಿ ಒಂದು ನಿರ್ದಿಷ್ಟವಾದ ವಿಲಕ್ಷಣತೆ ಎದ್ದು ಕಾಣುತ್ತದೆ. ಗೆತಾನೊದ ಮುಂಭಾಗ ಈ ಅಲಂಕರಣ ಶೈಲಿಗೆ ಉತ್ತಮ ಉದಾಹರಣೆಯಾಗಿದೆ. ಫ್ಲಾರೆನ್ಸ್ ನಗರದ ಪುನರ್ರಚನೆಯಲ್ಲಿ ಮೈಕೆಲ್ಯಾಂಜೆಲೋವಿನ ಕೈವಾಡ ಸಾಕಷ್ಟಿದೆ, ಸಾನ್ ಲೊರೆಂಜೊ ಚರ್ಚಿನ ಉಗ್ರಾಣದ ವಿನ್ಯಾಸವನ್ನು ಮೈಕೆಲ್ಯಾಂಜೆಲೋ ರೂಪಿಸಿದ. ಇಲ್ಲೇ ಆತನ ಸಮಾಧಿ ಇರುವುದು.

ಫ್ಲಾರೆನ್ಸಿನ ಫ್ರಾನ್ಸಿಸ್ಕನ್ ಚರ್ಚುಗಳಲ್ಲೆಲ್ಲ ಅತ್ಯಂತ ಸುಂದರವಾದ್ದೆಂದರೆ ಸಾಂತಕ್ರೂಸ್. ಇದನ್ನು ಫ್ಲಾರೆನ್ಸಿನ ಪಾಂತೆನಾನ್ ಎಂದು ಕೂಡ ಬಣ್ಣಿಸುವುದುಂಟು. ಇದರಲ್ಲಿ ಅನೇಕ ಗಣ್ಯರ ಸಮಾಧಿಗಳಿವೆ.

ಫ್ಲಾರೆನ್ಸಿನ ಕ್ಷಾತ್ರ ಹಾಗೂ ಲೌಕಿಕ ವಾಸ್ತುಶಿಲ್ಪಕ್ಕೆ ಅನೇಕ ಉದಾಹರಣೆಗಳಿವೆ. ಅವುಗಳಲ್ಲೆಲ್ಲ ಅತ್ಯಂತ ಉತ್ತಮವಾದ ಕಟ್ಟಡ ಪಲeóÉೂವೆಕ್ಕಿಯೊ. ಪಲeóÉೂ ಡೆಗ್ಲಿ ಯುಫಿಜಿಯ ಚಿತ್ರಕಲಾಶಾಲೆಯಲ್ಲಿ ಇಟಲಿಯ ಕೆಲ ಮೇರು ಚಿತ್ರಕೃತಿಗಳು ಪ್ರದರ್ಶಿತವಾಗಿವೆ. ಸ್ಯಾಂಡ್ರೊ ಬೊಟ್ಟಿಸೆಲ್ಲಿ, ರ್ಯಾಫೆಲ್, ಮೈಕೆಲ್ಯಾಂಜೆಲೋ ಮುಂತಾದ ಖ್ಯಾತ ಕಲಾಕಾರರ ಕೃತಿಗಳನ್ನು ಇಲ್ಲಿ ಜೋಡಿಸಲಾಗಿದೆ. ಅವುಗಳಲ್ಲಿ ಪಲeóÉೂ ಪಿಟ್ಟಿ. ಬೊಬೊಲಿಗಾರ್ಡನ್ಸ್, ಪಲeóÉೂ ಸ್ಟ್ರೊಜಿ, ಪಲeóÉೂ ಮೆಡಿಸಿ ರಿಕಾರ್ಡಿ ಮುಂತಾದವು ಪ್ರಸಿದ್ಧವಾಗಿವೆ.

ಶಿಲ್ಪ: ಯೂರೋಪಿನ ಕಲೆಯ ಬೆಳವಣಿಗೆಯಲ್ಲಿ ಫ್ಲಾರೆನ್ಸಿನ ಶಿಲ್ಪಶೈಲಿಯ ಪ್ರಭಾವ ಮಹತ್ತ್ವಪೂರ್ಣದ್ದಾಗಿದೆ. ಫ್ಲಾರೆನ್ಸಿನ ಪ್ರಾಚೀನ ಶಿಲ್ಪಗಳಲ್ಲಿ ಆರ್ನೋಲ್ಫೊ ಡಿ ಕ್ಯಾಂಬಿಯೊ ಆ ನಗರದ ಪ್ರಾರ್ಥನಾ ಮಂದಿರದ ಪ್ರಥಮ ಶಿಲ್ಪಿಗಳಲ್ಲೊಬ್ಬನೆಂದು ಹೆಸರುವಾಸಿಯಾಗಿದ್ದಾನೆ. ಆಂಡ್ರಿಯ ಪಿಯಾನೊ, ಕಮೈನೊ ಮುಂತಾದ ಶಿಲ್ಪಿಗಳು ತಯಾರಿಸಿದ ಕಂಚಿನ ಉಬ್ಬು ಶಿಲ್ಪಿಗಳಲ್ಲಿ ಗೋತಿಕ್ ಶೈಲಿಯ ಸ್ಪಷ್ಟ ಗುರುತುಗಳಿವೆ.

ಫ್ಲಾರೆನ್ಸಿನ ಶಿಲ್ಪ ಕ್ಷೇತ್ರಗಳಲ್ಲಿ ಡೊನಾಟೆಲ್ಲೊನದು ಅತಿ ದೊಡ್ಡ ಹೆಸರು. ಈತನ ಸೌಂದರ್ಯ ಪ್ರಜ್ಞೆ ಅಲ್ಟೆರ್ಟಿನೋನ ಅನುಕರಣ ಸಿದ್ಧಾಂತದಿಂದ ಪ್ರೇರಿತವಾದದ್ದು. ವಾಸ್ತವವಾಗಿ ಈತ ಫ್ಲಾರೆನ್ಸಿನ ಶಿಲ್ಪಕಲೆಯ ಹೊಸಯುಗದ ಹರಿಕಾರ. ಕಲೆಯಲ್ಲಿ ಆಧ್ಯಾತ್ಮಿಕತೆಯನ್ನು ಸಮರ್ಥ ರೀತಿಯಲ್ಲಿ ಈತ ವ್ಯಕ್ತಪಡಿಸಿದ. ಪ್ರಾಚೀನ ರೋಮ್ ಮತ್ತು ಗ್ರೀಕ್ ಶೈಲಿಯಿಂದ ಪ್ರಭಾವಿತನಾದ ಈತ ಉಬ್ಬುಶಿಲ್ಪಗಳಲ್ಲಿ ಯಥಾದೃಷ್ಟಿಯ ತಂತ್ರವನ್ನು ಅಳವಡಿಸಿಕೊಂಡು ರಚಿತವಾಗಿರುವ ಈತನ ಸಂತ ಮಾರ್ಕನ ಪ್ರತಿಮೆಯಲ್ಲಿ ಗುರುತಿಸಬಹುದು. ಮಾರ್ಕ್ ನಿಂತ ವೈಖರಿ, ಧೀಮಂತಿಕೆ, ಗಾಂಭೀರ್ಯ, ನೇರನೋಟ ತುಂಬ ಸಹಜವಾಗಿದೆ. ಯೋಧನ ಉಡುಪಿನಲ್ಲಿ ನಿಂತ ಸಂತ ಜಾರ್ಜನ ಪ್ರತಿಮೆಯಲ್ಲೂ ಕ್ಷಾತ್ರ ತೇಜಸ್ಸು, ದಿಟ್ಟತನ, ಧೈರ್ಯ, ಸಾಹಸಗುಣಗಳು ಎದ್ದುಕಾಣುತ್ತವೆ. ಈತ ಬಿಡಿಸಿರುವ ತಲೆಗೂದಲು, ಮುಖದ ನೆರಿಗೆ, ಕೈಚರ್ಮ ನೈಜವಾಗಿ ಮೂಡಿದೆ. ಡೇವಿಡ್‍ನ ಕಂಚಿನ ಶಿಲ್ಪ ಡೊನಾಟೆಲ್ಲೊನ ಅಪೂರ್ವ ಸಾಧನೆಯೆನ್ನಬಹುದು. ಡೇವಿಡ್‍ನ ಮೈಕಾಂತಿ ಹಾಗೂ ಅಂಗಾಂಗ ಸೌಷ್ಠವ ಲಾಲಿತ್ಯ ಮನೋಹರವಾಗಿದೆ. ಮೇರಿ ಮ್ಯಾಗ್ಡಲೀನಳ ಕಾಷ್ಠ ಶಿಲ್ಪದಲ್ಲಿ ಕಾಣುವ ದುಃಖಿತ ಮುಖ, ಸುಕ್ಕುಗಟ್ಟಿದ ದೇಹ ಸಹಜವಾಗಿ ಮೂಡಿದೆ. ಶಿಲ್ಪಶಾಸ್ತ್ರವನ್ನಾಧರಿಸಿ ಕೆಲವು ಅಮೂಲ್ಯ ಚಿಕಣಿ ಶಿಲ್ಪಗಳನ್ನು ರಚಿಸಿದ ಕೀರ್ತಿ ಪೊಲ್ಲಿವಾವ್ಲೋಗೆ ಸಲ್ಲಬೇಕು. ತಾಮ್ರದ ಫಲಕಗಳ ಮೇಲೆ ಈ ಬಗೆಯ ಚಿತ್ರಗಳನ್ನು ಕೊರೆಯುವುದರಲ್ಲೂ ಈತ ನಿಪುಣ. ಹತ್ತು ನಗ್ನ ಪುರುಷರ ಕಾಳಗ ಎಂಬ ಶಿಲ್ಪದಲ್ಲಿ ಅಂಗಾಗ ವಿನ್ಯಾಸವನ್ನು ಸೂಕ್ಷ್ಮರೇಖೆಗಳಲ್ಲಿ ಸೆರೆಹಿಡಿದಿದ್ದಾನೆ. ಮಾನವನ ಸೇಡು, ಕೋಪ, ತಾಪಗಳು ಸಮರ್ಥವಾಗಿ ಮೂಡಿವೆ. ಇಲ್ಲಿ ಯುದ್ಧ ಕ್ರಿಯೆ ತುಂಬ ಶಕ್ತಿಶಾಲಿಯಾಗಿ ಚಿತ್ರಿತಗೊಂಡಿದೆ. ಇದೊಂದು ಸತ್ವಪೂರ್ಣಕೃತಿ. ಈತನ ಸಮಕಾಲೀನನಾದ ಗಿಲ್ಬೆರ್ಟ್ ಕೆಲವು ನವೀನ ಕಲಾತಂತ್ರಗಳನ್ನು ಅಳವಡಿಸಿಕೊಂಡ ಉದ್ದಾಮ ಶಿಲ್ಪಿ, ಈತ ಗೋತಿಕ್ ಶೈಲಿಯಿಂದ ಪ್ರಭಾವಿತಗೊಂಡವ. ಈತನ ರಚನೆಗೆ ಚರ್ಚಿನ ಉಗ್ರಾಣದ ಬಾಗಿಲಿನ ಮೇಲಿರುವ ಎರಡು ಉಬ್ಬುಶಿಲ್ಪಗಳನ್ನು ಉದಾಹರಿಸಬಹುದು.

ಡೆಲ್ಲಾ ರೊಬಿಯನ್ ರಚಿಸಿದ ಹೊಳೆಯುವ ಮೃಣ್ ಮೂರ್ತಿಗಳಲ್ಲಿ ಮುಖದಲ್ಲಿ ಪ್ರಾಮಾಣಿಕತೆ, ಸರಳತೆ ಎದ್ದು ಕಾಣುತ್ತದೆ. ಈತನ ಕೃತಿಗಳು ಹೊಸತನ ಹಾಗೂ ಲಾವಣ್ಯಗಳಿಂದಾಗಿ ಪ್ರಸಿದ್ಧವಾಗಿವೆ. ಡೆಸಿಡೆರಿಯೊ ಡೆ ಸೆಟ್ಟಿಗ್ನಾನೊ ಪ್ರೌಢಕಲಾವಿದ ಮಧ್ಯಕಾಲೀನ ಶಿಲ್ಪರಚನೆಗಳಲ್ಲಿ ಅತ್ಯಂತ ಪ್ರಸಿದ್ಧನಾದವ. ಈತ ರಚಿಸಿದ ಶಿಲ್ಪಗಳಲ್ಲಿ ಛಾಯಾ ಲಕ್ಷಣ ಹಾಗೂ ಗಾತ್ರ ಎದ್ದು ಕಾಣುತ್ತದೆ. ಫ್ಲಾರೆನ್ಸಿನ ಶಿಲ್ಪಿಗಳು ಹದಿನೈದನೆಯ ಶತಮಾನದ ಅಂತ್ಯದ ವೇಳೆಗೆ ಇನ್ನೂ ಕೆಲವು ಹೊಸ ತಂತ್ರಗಳನ್ನು ಸಾಧಿಸಿಕೊಂಡರು. ಆಂಡ್ರಿಯಾ ಡೆಲ್ ವೆರೊಚಿಯೊ ರಚಿಸಿದ ಒಕ್ಕಾಲಿನ ಮೇಲೆ ನಿಂತ ಶಿಶು ಮುಂತಾದ ಕೃತಿಗಳಲ್ಲಿ ಮುಖ್ಯವಾಗಿ ಗ್ರೀಕ್ ಮಾರ್ಗಶೈಲಿಯ ಸೊಬಗನ್ನು ಕಾಣಬಹುದು. ಅಲ್ಲಿಯವರೆಗಿನ ಸಿದ್ಧಿ ಸಾಧನೆ ಹಾಗೂ ಪ್ರತಿಭೆಗಳೆಲ್ಲ ಒಟ್ಟಾರೆ ಒಂದು ತೆರೆದ ಪುಸ್ತಕದಂತೆ ಮೈಕೆಲ್ಯಾಂಜೆಲೋಗೆ ಲಭ್ಯವಾಯಿತು. ಹದಿನೈದನೆಯ ಶತಮಾನದ ಅಂತ್ಯದಲ್ಲಿ ಈತ ಪೂರ್ವ ಪರಂಪರೆಯ ಉತ್ತಮಾಂಶಗಳಿಂದ ಪ್ರೇರಿತನಾದ ಕಲಾವಿದನಾಗಿ ಪ್ರಸಿದ್ಧನಾದ. ಈತ ರಚಿಸಿದ ಶಿಲ್ಪಗಳಲ್ಲಿ ದೈಹಿಕ ಸೌಂದರ್ಯ, ಆಧ್ಯಾತ್ಮಿಕ ತೇಜಸ್ಸು ಹಾಗೂ ಅಮೋಘವಾದ ತಂತ್ರ ಸಿದ್ದಿಗಳು ಮುಪ್ಪುರಿಗೊಂಡದ್ದರಿಂದ ಅವು ಸತ್ವಪೂರ್ಣ ಕಲಾಕೃತಿಗಳಾಗಿ ಉಳಿದಿವೆ. ಫ್ಲಾರೆನ್ಸಿನ ಕಲಾವಿದರಿಗೆ ಪ್ರಕೃತಿಯೇ ಗುರು. ನಿಸರ್ಗ ನಿರೀಕ್ಷಣೆಯಿಂದ ಪಡೆದ ಪ್ರೇರಣೆ ಮೈಕೆಲ್ಯಾಂಜೆಲೋವಿನ ಕೃತಿಗಳಲ್ಲಿ ಫಲಪ್ರದವಾಗಿದೆ. ಇದನ್ನು ನೈಜಶೈಲಿಯೆಂದೇ ಕರೆಯಬಹುದು. ಆಂಡ್ರಿಯಾ ಸಾನ್ಸೊವಿನೋ ಈ ಪರಂಪರೆಯನ್ನು ಮುಂದುವರಿಸಿಕೊಂಡು ಹೋದ. ಎಂಟೊನಿಯೋ ಡೆಲ್ ಪೊಪ್ಲಿವಾಲ್ಲೊ ಒಬ್ಬ ಸಮರ್ಥ ಶಿಲ್ಪಿ. ಮಾನವ ಅಂಗ ಶಾಸ್ತ್ರವನ್ನು ಚೆನ್ನಾಗಿ ಅಭ್ಯಾಸ ಮಾಡಿಕೊಂಡಿದ್ದವ. ಹಕ್ರ್ಯುಲೀಸ್ ಮತ್ತು ಎಂಟಾಯೇಸ್ ಕಂಚಿನ ಪ್ರತಿಮೆಯಲ್ಲಿ ಇದು ವ್ಯಕ್ತವಾಗಿದೆ. ಹೊಡೆದಾಟದಲ್ಲಿ ಮಗ್ನರಾಗಿರುವ ಹಕ್ರ್ಯುಲೀಸ್ ಮತ್ತು ಎಂಟಾಯೇಸರ ಮುಖ ಭಂಗಿ, ಕೋಪದ ಪರಿಣಾಮವಾಗಿ ಕಾಣುವ ಸ್ನಾಯುಗಳ ಬಿಗಿತ ತುಂಬ ಸ್ಪಷ್ಟವಾಗಿ ಚಿತ್ರಿತವಾಗಿದೆ. ನಿಕಾಲೋ ಡೆಲ್ ರಚಿಸಿದ ಸುಡಾವೆ ಮಣ್ಣಿನ ಮೂರ್ತಿ ಆಕರ್ಷಿತವಾದುದು. ಪ್ರಲಾಪಿಸುವ ಸ್ತ್ರೀಯೊಬ್ಬಳು ತನ್ನ ಕೈಯನ್ನು ಮುಂದಕ್ಕೆ ಚಾಚಿಕೊಂಡು ತನ್ನ ದುಃಖ ದುಮ್ಮಾನಗಳನ್ನು ತೋಡಿಕೊಳ್ಳುತ್ತಿರುವ ಈ ಮೂರ್ತಿ ದುಃಖ ಭಾರದಿಂದ ಮುಗ್ಗರಿಸಿ ಬೀಳುವಂತಿದೆ. ಫ್ಲಾರೆನ್ಸಿನ ಇತರ ಶಿಲ್ಪಗಳಲ್ಲಿ ಸಾನ್ ಮಿಷಲ್ ಚರ್ಚಿನ ಮಾನವ ಪ್ರಮಾಣದ ನಾಲ್ವರು ಸಂತರ ಶಿಲ್ಪ, ಹಾರುವ ಮೇಘದೂತ, ಪುಟ್ಟೊ ಮತ್ತು ಹಂದಿಮೀನು ಮುಂತಾದವು ಪ್ರಸಿದ್ಧವಾಗಿವೆ.

ಚಿತ್ರಕಲೆ: ಫ್ಲಾರೆನ್ಸಿನ ಚಿತ್ರಕಲೆಯ ಅತ್ಯಂತ ಪ್ರಾಚೀನ ಮಾದರಿಯನ್ನು ಚಿಮಾಬ್ಯೂನ (1240-1302) ಕಲೆಯಲ್ಲಿ ನೋಡಬಹುದು. ಇದರಲ್ಲಿ ಬೈeóÁಂಟಿನ್ ಮತ್ತು ಗೋತಿಕ್ ಶೈಲಿಗಳು ಮೇಳ್ಮೈಸಿವೆ. ಜೊಟ್ಟೋ (1266-1337) ಫ್ಲಾರೆನ್ಸಿನ ಚಿತ್ರಕಲೆಯ ಹರಿಕಾರರಲ್ಲಿ ಪ್ರಸಿದ್ಧನಾದವ. ಈತ ವಾಸ್ತವವಾಗಿ ನಿಸರ್ಗ ಕಲಾವಿದ. ಅಲಂಕರಣ ಸಾಂಕೇತಿಕತೆಗಿಂತ ಮಿಗಿಲಾದ ಪ್ರಮಾಣಬದ್ಧತೆಯಿಂದಾಗಿ ಈತನ ಕೃತಿಗಳು ಮನೋಹರವಾಗಿವೆ. ರೇಖೆ ಬಣ್ಣ ಬೆಳಕು ನೆಳಲಿನ ಪ್ರಭಾವ ಮುಂತಾದವನ್ನು ಸಮರ್ಥವಾಗಿ ಈತ ಬಳಸಿದ್ದಾನೆ. ಸಾತ್ವಿಕ ಸ್ವಭಾವದ ಮಾನವಪಾತ್ರಗಳನ್ನು ತನ್ನದೇ ಆದ ಕಥನ ಶೈಲಿಯಲ್ಲಿ ಚಿತ್ರಿಸಿದ್ದಾನೆ. ಮಸಾಟ್‍ಚೊ (1401-28) ಎಂಬ ಕ್ರಾಂತಿಕಾರ ಕಲಾವಿದ ಜೊಟ್ಟೋನನ್ನು ಅನುಕರಣೆ ಮಾಡಿದ. ಫ್ಲಾರೆನ್ಸಿನ ಮರಿಯಾ ನೊವೆಲ್ಲ ಚರ್ಚಿನಲ್ಲಿ ಈತನ ಕೃತಿಗಳಿವೆ. ಕನ್ಯೆ ಮೇರಿ, ಸಂತ ಜಾನರನ್ನೊಳಗೊಂಡ ಪವಿತ್ರತ್ರಯರು ಎಂಬ ಭಿತ್ತಚಿತ್ರ ತುಂಬ ನೈಜವಾಗಿ ಚಿತ್ರಿತವಾಗಿದೆ. ಇದೊಂದು ಸುಂದರ ದೃಶ್ಯ ನಿರೂಪಣಾ ಚಿತ್ರ. ಬೈಬಲಿನ ಕಥಾನಕವಾದ ಕಪ್ಪ ಒಪ್ಪಿಸುವ ಪ್ರಸಂಗ ಅಷ್ಟೇ ಖ್ಯಾತಿಗಳಿಸಿದ ಮತ್ತೊಂದು ಭಿತ್ತಿಪತ್ರ. ಇದರಲ್ಲಿ ದೃಶ್ಯಾಂತರ ತಂತ್ರ ಮೋಹಕವಾಗಿ ಮೂಡಿದೆ. ಆದಂ ಮತ್ತು ಈವರು ಸ್ವರ್ಗದಿಂದ ಕೆಳಕ್ಕೆ ತಳ್ಳಲ್ಪಟ್ಟ ದೃಶ್ಯ ಭಾವಪೂರಿತವಾಗಿದೆ. ಈರ್ವರ ಸಂತಾಪ ಅವರ ಮುಖದಲ್ಲಿ ಸ್ಪಷ್ಟವಾಗಿ ವ್ಯಕ್ತವಾಗಿದೆ. ಈ ಚಿತ್ರದಲ್ಲಿ ಅಳವಡಿಸಿರುವ ಬೆಳಕಿನ ಯೋಜನೆ ಆಕರ್ಷಕವಾಗಿದೆ. ಪಾಲೊ ಹಾಗೂ ಉಚೆಲೋ ಶೈಲಿಯಲ್ಲಿ ಯಥಾದೃಷ್ಟಿರೂಪಣ ಹಾಗೂ ಗೋತಿಕ್ ಶೈಲಿಯ ಬಣ್ಣ ಮತ್ತು ರೇಖೆಗಳ ಬಲ ಸಮ್ಮಿಳಿತಗೊಂಡಿವೆ. ಆಂಡ್ರಿಯಾ ಡೆಲ್ ಕಾಸ್ಟಗ್ನೊ ಶೈಲಿಯಲ್ಲಿ ಭೌತಿಕ ಹಾಗೂ ದೈಹಿಕ ನೈಜತೆಯತ್ತ ಹೆಚ್ಚಿನ ಒಲವು ಎದ್ದು ಕಾಣುತ್ತದೆ. ಡೊಮಿನಿಕೊ ವೆನೆಟ್ಸ್‍ಯಾನ ಪ್ರಕೃತಿಯಲ್ಲಿ ನಿತ್ಯ ಕಾಣುವ ಬೆಳಲು ಮತ್ತು ತೆರವನ್ನು ಯಥಾವತ್ತಾಗಿ ಬಣ್ಣ ಹಾಗೂ ರೇಖೆಗಳಿಂದ ಚಿತ್ರಿಸಲು ಯತ್ನಿಸಿದ ಪೀರೊಡೆಲ್ಲ ಫ್ರಾನ್ಸಿಸ್ಕ ಈ ಶೈಲಿಯನ್ನೂ ಹೆಚ್ಚು ಪರಿಣಾಮಕಾರಿಯಾಗುವಂತೆ ಮಾಡಿದ.

ಫ್ಲಾರೆನ್ಸಿನ ಚಿತ್ರಕಲೆಯಲ್ಲಿ ಸಾಧಿಸಿದ ಚೌಕಟ್ಟಿನಲ್ಲೇ ಆಧಾತ್ಮಿಕ ಪ್ರಪಂಚವನ್ನು ವ್ಯಕ್ತಪಡಿಸಲು ಯತ್ನಿಸಿದ ಶ್ರೇಷ್ಠ ಚಿತ್ರಕಾರನೆಂದರೆ ಫ್ರಾ ಅಂಜೆಲಿಕೋ (1387-1455). ಫಿಲಪ್ಪೊಲಿಪ್ಪಿ ಈತನಿಂದ ಪ್ರಭಾವಿತನಾದ.

ಗಿರ್‍ಲಾನ್‍ಡಾಯೋ (1449-94) ಸಮಕಾಲೀನ ಫ್ಲಾರೆನ್ಸಿನ ಜನಜೀವನದ ಅತ್ಯುತ್ತಮವಾಗಿ ಚಿತ್ರೀಕರಿಸಿದ. ಪೊಲೈವೊಲೋನ (1429-98) ಶೈಲಿಯಲ್ಲಿ ರೇಖೆಗಳು ಶಕ್ತಿಶಾಲಿಯಾಗಿವೆ. ಈ ಬಗೆಯ ರೇಖಾಪ್ರಧಾನ ಶೈಲಿಯನ್ನು ಬೊಟ್ಟಿಚೇಲೀ (1444-1510) ಅಳವಡಿಸಿಕೊಂಡ. ಈ ಮೂಲಕ ಒಂದು ಆದರ್ಶ ಪ್ರಪಂಚವನ್ನು ಬಯಸುವ ಆತ್ಮದ ಚಿಂತಾಕುಲತೆಯನ್ನು ತನ್ನ ಕೃತಿಗಳ ಮೂಲಕ ವ್ಯಕ್ತಪಡಿಸಿದ. ಲಿಯೊನಾರ್ಡ್ ದ ವಿಂಚಿ (1858-1919) ಮನೋವೈಜ್ಞಾನಿಕ ಸ್ಥಿತಿಗಳನ್ನು ತನ್ನ ಚಿತ್ರದಲ್ಲಿ ತುಂಬ ಚೆನ್ನಾಗಿ ನಿರೂಪಿಸಿದ್ದಾನೆ. ಈತ ಬೆಳಕು ಮತ್ತು ಯಥಾದೃಷ್ಟ ರೂಪಣ ತಂತ್ರವನ್ನು ಅಪೂರ್ವವಾದ ರೀತಿಯಲ್ಲಿ ಬಳಸಿದ್ದಾನೆ.

ಜೀವನದ ವಿವಿಧ ಹಂತಗಳಲ್ಲಿ ಒಂದು ಸಮನ್ವಯ ಸೂತ್ರಕ್ಕಾಗಿ ತುಡಿಯುವುದನ್ನು ಫ್ಲಾರೆನ್ಸಿನ ಕಲೆಯಲ್ಲಿ ಪ್ರಧಾನವಾಗಿ ಕಾಣುತ್ತೇವೆ. ರಾಫೆಲ್‍ನ (1483-1520) ಅನಂತರ ಈ ಕನಸು ನನಸಾಗಿದೆ. ಹದಿನಾರನೆ ಶತಮಾನದಲ್ಲಿ ಈ ಸಮನ್ವಯ ಪ್ರಯತ್ನ ಇನ್ನೂ ಹೆಚ್ಚಾಗಿ ನಡೆಯಿತು. ಈ ದಿಶೆಯಲ್ಲಿ ಫ್ರಾ ಬಾರ್ಟೊಲೋಮ್ಮೆಯೊ (1475-1517) ಹಾಗೂ ಆಂಡ್ರೆ ಡೆಲ್ ಸಾರ್ಟೊನ ಹೆಸರನ್ನು ಇಲ್ಲಿ ಉಲ್ಲೇಖಿಸಬಹುದು.

ಹದಿನಾರನೆಯ ಶತಮಾನದ ಅನಂತರದ ಫ್ಲಾರೆನ್ಸಿನ ಕಲೆ ಪೀಠೋಪಕರಣ, ಚಿತ್ರನೇಯ್ದ ಬಟ್ಟೆ ಮುಂತಾದ ಕರಕುಶಲ ಕಲೆಗಳಿಗೆ ಸೀಮಿತವಾಯಿತು. (ಎಚ್.ಆರ್.ಆರ್.ಬಿ.)