ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಫ್ಲಿಂಟ್, ಆಸ್ಟಿನ್

ವಿಕಿಸೋರ್ಸ್ದಿಂದ

ಫ್ಲಿಂಟ್, ಆಸ್ಟಿನ್

1812-86, ಗುಂಡಿಗೆಯ ರೋಗದ ಒಂದು ವಿಶಿಷ್ಟ ಮರ್ಮರವನ್ನು ಮೊದಲು ಕಂಡುಹಿಡಿದು ವರ್ಣಿಸಿದ್ದರಿಂದ ಹೆಸರಾಗಿರುವ ಅಮೆರಿಕದ ವೈದ್ಯ. ಇವನು ಹಾರ್ವರ್ಡ್ ವೈದ್ಯಪದವೀಧರ (1833). ಬಫೆಲೊ ಕಾಲೇಜಿನ ಸ್ಥಾಪಕ ಅಧ್ಯಾಪಕನಾಗಿ ವೈದ್ಯ ಕಲಿಸುತ್ತಿದ್ದ (1847-52). ಆಮೇಲೆ, ಇನ್ನೂ ಕೆಲವು (ರಷ್ ವೈದ್ಯ ಕಾಲೇಜು, ಲೂಯಿವಿಲ್ಲೆ ವಿಶ್ವವಿದ್ಯಾಲಯ) ವೈದ್ಯ ಕಾಲೇಜುಗಳಲ್ಲೂ ವೈದ್ಯ ಚಿಕಿತ್ಸಾಶಾಸ್ತ್ರದ ಪ್ರಾಧ್ಯಾಪಕನಾಗಿದ್ದ (1852-61). ನ್ಯೂಯಾರ್ಕಿನ ಬೆಲ್ಲೆವ್ಯೂ ಆಸ್ಪತ್ರೆಯ ವೈದ್ಯ ಕಾಲೇಜಿನಲ್ಲಿ ವೈದ್ಯಚಿಕಿತ್ಸಾಶಾಸ್ತ್ರದ ಪ್ರಾಧ್ಯಾಪಕನಾಗಿ ಸೇರಿಕೊಂಡು (1861) ಮರಣದ ತನಕ ಅಲ್ಲಿಯೆ ಸೇವೆ ಸಲ್ಲಿಸಿದ. ವ್ಯೆದ್ಯವಿಷಯಗಳನ್ನು ಕುರಿತು ಫ್ಲಿಂಟ್ ವಿಪುಲವಾಗಿ ಬರೆದಿದ್ದಾನೆ. ಅವನ ಖ್ಯಾತ ಪಠ್ಯಪುಸ್ತಕ ಗುಂಡಿಗೆಯ ರೋಗಗಳು (1859-170). ಅಮೆರಿಕದ ವೈದ್ಯಸಂಘದ ಅಧ್ಯಕ್ಷನಾಗಿದ್ದ (1883). ಎದೆಯನ್ನು ಬೆರಳುಗಳಿಂದ ಬಡಿದು, ಅದರಿಂದೇಳುವ ಸದ್ದುಗಳನ್ನು ಆಲಿಸಿ, ರೋಗ ನಿದಾನಮಾಡುವ ವಿಧಾನದಲ್ಲಿ ಪರಿಣತನಾಗಿದ್ದು ಮಹಾಧಮನಿ (ಅಯೋರ್ಟ) ದುರ್ಬಲವಾದಾಗ ಗುಂಡಿಗೆಯ ತುದಿಯಲ್ಲಿ ಕೇಳಿಸುವ ಒಂದು ವಿಶಿಷ್ಟ ಮರ್ಮರವನ್ನು ಪತ್ತೆಹಚ್ಚಿದುದಕ್ಕೆ (1862) ಈಗಲೂ ಅವನ ಹೆಸರು ಉಳಿದಿದೆ. (ಡಿ.ಎಸ್.ಎಸ್)