ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಫ್ಲೀಟ್, ಜಾನ್ ಫೇತ್ಫುಲ್

ವಿಕಿಸೋರ್ಸ್ದಿಂದ

ಫ್ಲೀಟ್, ಜಾನ್ ಫೇತ್‍ಫುಲ್ 1847-1917. ಪ್ರಾಚ್ಯ ವಿದ್ಯಾಕ್ಷೇತ್ರದಲ್ಲಿ ವಿಶೇಷವಾಗಿ ಕೆಲಸ ಮಾಡಿದ ಇಂಗ್ಲಿಷ್ ವಿದ್ವಾಂಸರು ಭಾರತೀಯ ಹಾಗೂ ಕರ್ನಾಟಕದ ಶಾಸನಗಳ ಅಧ್ಯಯನಗಳಿಂದಾಗಿ ಪ್ರಸಿದ್ಧರಾದವರು.

ಜಾನ್ ಫೇತ್‍ಪುಲ್ ಫ್ಲೀಟ್ ಇಂಗ್ಲೆಂಡಿನ ಚೆಸ್‍ವಿಕ್‍ನಲ್ಲಿ ಜನಿಸಿದರು. ತಂದೆ ಜಾನ್ ಜಾರ್ಜ್ ಫ್ಲೀಟ್, ತಾಯಿ ಎಸ್ತರ್ ಫೇತ್‍ಪುಲ್. ಲಂಡನಿನ ಟೇಲರ್ಸ್ ಶಾಲೆಯಲ್ಲಿ ಇವರು ಶಿಕ್ಷಣ ಪಡೆದರು. 1865ರಲ್ಲಿ ಇಂಡಿಯನ್ ಸಿವಿಲ್ ಸರ್ವಿಸ್ ಪರೀಕ್ಷೆಯಲ್ಲಿ ತೇರ್ಗಡೆಯಾದರು. ಮುಂದಿನ ತರಬೇತಿನ ಕಾಲದಲ್ಲಿ ಲಂಡನ್ ವಿಶ್ವವಿದ್ಯಾಲಯದ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದ ಗೋಲ್ಡ್ ಸ್ಟಕರ್‍ರಲ್ಲಿ ಸಂಸ್ಕøತ ಕಲಿತರು. 1867ರಲ್ಲಿ ಇವರು ಮುಂಬಯಿ ಪ್ರಾಂತ್ಯದಲ್ಲಿ ಸೇವೆಯನ್ನು ಆರಂಭಿಸಿದರು. ತಮ್ಮ ಸೇವಾವಧಿಯ ಬಹುಭಾಗವನ್ನು ಅಂದು ದಕ್ಷಿಣ ಮರಾಠಾ ಎಂದು ಕರೆಯಲಾಗುತ್ತಿದ್ದ ಈಗಿನ ಉತ್ತರ ಕರ್ನಾಟಕ ಭಾಗದಲ್ಲಿ ಕಳೆದರು. ಅವರು ಅನುಕ್ರಮವಾಗಿ ಕಲೆಕ್ಟರ್ ಮತ್ತು ದಂಡಾಧಿಕಾರಿ, ವಿದ್ಯಾಭ್ಯಾಸದ ಇನ್ಸ್‍ಪೆಕ್ಟರ್ (1872) ಕೊಲ್ಹಾಪುರ ಮತ್ತು ದಕ್ಷಿಣ ಮರಾಠಾ ಪ್ರದೇಶದ ಸಹಾಯಕ ರಾಜಕೀಯ ನಿಯೋಗಿ (1875), ಭಾರತ ಸರ್ಕಾರದ ಶಾಸನತಜ್ಞ (1883), ಸೊಲ್ಲಾಪುರದ ಜೂನಿಯರ್ ಕಲೆಕ್ಟರ್ (1889). ದಕ್ಷಿಣ ವಿಭಾಗದ ಕಮಿಷನರ್ (1891), ಕೇಂದ್ರ ವಿಭಾಗದ ಕಮಿಷನರ್ (1892) ಮತ್ತು ಕಮಿಷನರ್ ಆಫ್ ಕಸ್ಟಮ್ಸ್ (1893) ಆದರು. 1897ರಲ್ಲಿ ಸರ್ಕಾರಿ ಸೇವೆಯಿಂದ ನಿವೃತ್ತರಾಗಿ ಇಂಗ್ಲೆಂಡಿಗೆ ಮರಳಿ ಈಲಿಂಗ್‍ನಲ್ಲಿ ನೆಲಸಿದರು. ಇವರು 1917ರಲ್ಲಿ ತೀರಿಕೊಂಡರು.

ಫ್ಲೀಟರು ಸಂಸ್ಕøತ ಕನ್ನಡ ಭಾಷೆ ಸಾಹಿತ್ಯಗಳಲ್ಲಿ ಪಾಂಡಿತ್ಯ ಗಳಿಸಿದ್ದರು. ತಮ್ಮ ಅಧಿಕಾರಾವಧಿಯ ಪ್ರಾರಂಭದಿಂದಲೇ ಮುಂಬಯಿ ಪ್ರಾಂತ್ಯದ ಅನೇಕ ಶಿಲಾಶಾಸನಗಳನ್ನು ಅಭ್ಯಸಿಸಿ ಅವುಗಳ ಬಗ್ಗೆ ಪ್ರಬಂಧಗಳನ್ನು ಜರ್ನಲ್ ಆಫ್ ದಿ ಬಾಂಬೆ ಬ್ರ್ಯಾಂಚ್ ಆಫ್ ರಾಯಲ್ ಏಷ್ಯಾಟಿಕ್ ಸೊಸೈಟಿ ಮತ್ತು ಇಂಡಿಯನ್ ಆಂಟಿಕ್ವೆರಿಯಗಲ್ಲಿ ಪ್ರಕಟಿಸಿದರು. 1878ರಲ್ಲಿ ಪಾಲಿ, ಸಂಸ್ಕøತ್ ಅಂಡ್ ಓಲ್ಡ್ ಕೆನರೀಸ್ ಇನ್‍ಸ್ಕ್ರಿಪ್ಷನ್ಸ್ ಎಂಬ ಗ್ರಂಥವನ್ನು, ಕರ್ನಲ್ ಡಿಕ್ಸನರು 1865ರಲ್ಲಿ ಮೈಸೂರು ಸರ್ಕಾರದ ಸಲುವಾಗಿ ತೆಗೆದ ಛಾಯಾಚಿತ್ರಗಳ ಆಧಾರದ ಮೇಲೆ ಪ್ರಕಟಿಸಿದರು. ಇಂಡಿಯನ್ ಆಂಟಿಕ್ವೆರಿಯ 14ರಿಂದ 20ರ ವರೆಗಿನ ಸಂಪುಟಗಳಿಗೆ ಇವರು ರಿಚರ್ಡ್ ಕಾರ್ನಾಕ್ ಟೆಂಪಲರೊಂದಿಗೆ ಸಹಸಂಪಾದಕರಾಗಿದ್ದರು (1885-91).

ಶಾಸನಗಳ ಬಗ್ಗೆ ಇವರಿಗಿದ್ದ ಒಲವನ್ನೂ ಇವರ ಪಾಂಡಿತ್ಯವನ್ನೂ ಮನಗಂಡ ಭಾರತ ಸರ್ಕಾರ ಇವರನ್ನು ಶಾಸನತಜ್ಞರನ್ನಾಗಿ ನೇಮಿಸಿತು. ಈ ಹುದ್ದೆಯಲ್ಲಿ ಇವರು 1883ರಿಂದ 1886ರ ವರೆಗೆ ಇದ್ದು, ಗುಪ್ತವಂಶದ ಅರಸರಿಗೆ ಸಂಬಂಧಪಟ್ಟ ಶಾಸನಗಳನ್ನು ಕಾರ್ಪಸ್ ಇನ್‍ಸ್ಕ್ರಿಪ್ಷನಂ ಇಂಡಿಕ್ಯಾರಂ ಸರಣಿಯಲ್ಲಿ ಮೂರನೆಯ ಸಂಪುಟವಾಗಿ ಪ್ರಕಟಿಸಿದರು. ಇದರಲ್ಲಿ ಇವರು ಗುಪ್ತಯುಗದ ಪ್ರಾರಂಭಕಾಲವನ್ನು ನಿರ್ಣಯಿಸಿದ್ದಾರೆ. ಅಂದಿಗೆ ತಿಳಿದಿದ್ದ ಗುಪ್ತವಂಶದ ಮತ್ತು ಆ ಕಾಲದ ಶಾಸನಗಳನ್ನೆಲ್ಲ ಇವರು ಇದರಲ್ಲಿ ಪರಿಷ್ಕರಿಸಿ ಪ್ರಕಟಿಸಿದರು.

ಮುಂಬೈ ಪ್ರಾಂತ್ಯದ ಗೆಜೆಟಿಯರ್‍ನ ಒಂದನೆಯ ಸಂಪುಟದ ಎರಡನೆಯ ಭಾಗಕ್ಕಾಗಿ ಫ್ಲೀಟ್ ಬರೆದಿರುವ ಡೈನಾಸ್ಟೀಸ್ ಆಪ್ ದಿ ಕೆನರೀಸ್ ಡಿಸ್ಟ್ರಿಕ್ಟ್ಸ್ (1895) ಎಂಬುದು ಕರ್ನಾಟಕದ ಇತಿಹಾಸವನ್ನು ಕುರಿತ ಉದ್ಬವ ಕೃತಿ. ಇದರಲ್ಲಿ ಕರ್ನಾಟಕದ ಇತಿಹಾಸದ ಪ್ರಾರಂಭಕಾಲದಿಂದ ತೊಡಗಿ 1318ರಲ್ಲಿ ಇದು ಮುಸ್ಲಿಮರ ವಶವಾಗುವ ವರೆಗಿನ ಕಾಲಕ್ಕೆ ಸಂಬಂಧಿಸಿದಂತೆ ಶಾಸನ ಮತ್ತು ಸಾಹಿತ್ಯಗಳ ಮೂಲಾಧಾರಗಳಿಂದ ವಿವರಗಳನ್ನು ಸಂಗ್ರಹಿಸಿ ಸುವ್ಯವಸ್ಥಿತವಾದ ರೀತಿಯಲ್ಲಿ ಹೇಳಿದ್ದಾರೆ. ಸುಮಾರು 100 ವರ್ಷಗಳಷ್ಟು ಹಿಂದೆ ರಚಿತವಾದ ಈ ಕೃತಿ ಇಂದಿಗೂ ಕರ್ನಾಟಕದ ಇತಿಹಾಸದ ಬಗ್ಗೆ ಒಂದು ಮುಖ್ಯ ಆಧಾರ ಗ್ರಂಥವಾಗಿದೆ.

ನ್ಯೂ ಇಂಪೀರಿಯಲ್ ಗೆಜೆಟಿಯರ್ ಆಫ್ ಇಂಡಿಯದ ಎರಡನೆಯ ಸಂಪುಟದಲ್ಲಿ (1908) ಶಾಸನಶಾಸ್ತ್ರದ ಮೇಲೆ ಬರೆದಿರುವ ಒಂದು ಅಧ್ಯಾಯದಲ್ಲಿ ಇವರು ಅದುವರೆಗೆ ಶಾಸನರಂಗದಲ್ಲಿ ನಡೆದ ಕಾರ್ಯವನ್ನು ಸಂಕ್ಷಿಪ್ತವಾಗಿ ಹೇಳಿದ್ದಾರೆ. ಎನ್ಸೈಕ್ಲೋಪೀಡಿಯ ಬ್ರಿಟ್ಯಾನಿಕ 11ನೆಯ ಆವೃತ್ತಿಯಲ್ಲಿ (1191) ಭಾರತೀಯ ಶಾಸನಗಳ ಬಗ್ಗೆ ಇವರು ಬರೆದ ಲೇಖನದಲ್ಲಿ ಈ ವಿಷಯದ ನಾನಾ ಮುಖಗಳ ಪ್ರಭುತ್ವಪೂರ್ಣ ಪುನರ್ವಿಮರ್ಶೆಯಾಗಿದೆ. ಈ ಕ್ಷೇತ್ರದ ಬಗ್ಗೆ ಇವರು ಪಡೆದಿದ್ದ ಸೂಕ್ಷ್ಮಜ್ಞಾನವನ್ನು ಈ ಲೇಖನದಲ್ಲಿ ನೋಡಬಹುದು.

ತಮ್ಮ ಅಧಿಕಾರಾವಧಿಯ ಬಹುಕಾಲವನ್ನು ಈಗಿನ ಉತ್ತರ ಕರ್ನಾಟಕದ ಭಾಗದಲ್ಲಿ ಕಳೆದ ಫ್ಲೀಟರು ಆ ಕಾಲದಲ್ಲಿ ಸ್ಥಳೀಯರೊಂದಿಗೆ ಬೆರೆತು ಇಲ್ಲಿಯ ಭಾಷೆ ಮತ್ತು ಸಂಸ್ಕøತಿಗಳ ಆಳವಾದ ಪರಿಚಯ ಮಾಡಿಕೊಂಡರು. ಕರ್ನಾಟಕದ ಶಾಸನಶಾಸ್ತ್ರ ಅಧ್ಯಯನಕ್ಕೆ ಇವರು ಅಡಿಗಲ್ಲನ್ನು ಹಾಕಿದರು. ಇವರು ಮತ್ತು ಕನ್ನಡದ ಸಂಬಂಧ ವಿಶೇಷವಾದ್ದು. ಕರ್ನಾಟಕದ ಇತಿಹಾಸ ಮತ್ತು ಸಂಶೋಧನೆಯನ್ನು ಕೈಗೊಳ್ಳುವಂತೆ ಇವರು ಅನೇಕ ವಿದ್ವಾಂಸರನ್ನು ಪ್ರೋತ್ಸಾಹಿಸಿದರಲ್ಲದೆ, ಕವಿರಾಜಮಾರ್ಗದ ಕರ್ತೃತ್ವ ವಿಚಾರವೇ ಮುಂತಾದ ವಿಷಯಗಳ ಬಗ್ಗೆ ತಾವೇ ಲೇಖನಗಳನ್ನು ಬರೆದರು. ಕನ್ನಡ ಜನಪದ ಸಾಹಿತ್ಯದ ಸಂಗ್ರಹ ಮತ್ತು ಪ್ರಕಟನೆಯ ಕಾರ್ಯವನ್ನು ನಡೆಸಿದವರಲ್ಲೂ ಫ್ಲೀಟರು ಮೊದಲಿಗರು. ಸಂಗೊಳ್ಳಿರಾಯಣ್ಣನ ದಂಗೆ, ಆದಾಯ ತೆರಿಗೆ, ಹಲಗಲಿಯ ಬೇಡರು. ಸಂಗ್ಯನ ಅಪರಾಧ ಮತ್ತು ಸಾವು. ಕಿತ್ತೂರು ಚೆನ್ನಮ್ಮನ ಸೊಸೆ-ಈ ಲಾವಣಿಗಳು 1880ರ ದಶಕದಲ್ಲೇ ಇಂಡಿಯನ್ ಆಂಟಿಕ್ವೆರಿ ಪತ್ರಿಕೆಯಲ್ಲಿ ಪ್ರಕಟವಾದುವು.

ಕಾಲಗಣನಶಾಸ್ತ್ರ, ಪ್ರಾಚೀನ ಅಂಕಿ-ಅಂಶ, ನಾಣ್ಯಗಳು, ಐತಿಹಾಸಿಕ ಭೂಗೋಳ, ಕೆಲವು ಶಬ್ದಗಳ ಅರ್ಥ ಮುಂತಾದ ಅನೇಕ ವಿಷಯಗಳ ಮೇಲೆ ಇವರು ಪ್ರಬಂಧಗಳನ್ನು ಪ್ರಕಟಿಸಿದರು. ಫ್ಲೀಟರು ಇಂಗ್ಲೆಂಡಿಗೆ ಹಿಂದಿರುಗಿದ ಮೇಲೆ 1907ರಲ್ಲಿ ಬ್ರಿಟನ್ ಮತ್ತು ಐರ್ಲೆಂಡಿನ್ ರಾಯಲ್ ಏಷಿಯಾಟಿಕ್ ಸೊಸೈಟಿಯ ಗೌರವ ಕಾರ್ಯದರ್ಶಿಯಾಗಿದ್ದರು. ಈ ಸಂಸ್ಥೆ 1912ರಲ್ಲಿ ಇವರಿಗೆ ಚಿನ್ನದ ಪದಕವನ್ನು ನೀಡಿ ಗೌರವಿಸಿತು. ಬ್ರಿಟಿಷ್ ದೊರೆಯಿಂದ ಇವರು ಸರ್ ಬಿರುದನ್ನು ಪಡೆದಿದ್ದರು. (ಸಿ.ಎಸ್.ವಿ.; ಸಿ.ಪಿ.ಕೆ.)