ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಫ್ಲೆಕ್ಸ್‌ನರ್, ಸೈಮನ್

ವಿಕಿಸೋರ್ಸ್ದಿಂದ

ಫ್ಲೆಕ್ಸ್‍ನರ್, ಸೈಮನ್ 1863-1946. ಅಮೆರಿಕ ದೇಶದಲ್ಲಿ ಈ ಶತಮಾನದ ಪೂರ್ವಾರ್ಧದಲ್ಲಿ ಪ್ರಖ್ಯಾತನಾದ ಪ್ರಮುಖ ವೈದ್ಯವಿಜ್ಞಾನಿ. ಜನನ 25-3-1863. ಮರಣ 2-5-1946. ಆಮಶಂಕೆಕಾರಕ ಏಕಾಣು ಮತ್ತು ಪೋಲಿಯೊ ಮೈಯಲೈಟಿಸ್‍ಕಾರಕ ವೈರಸ್ ಇವುಗಳ ವಿಚಾರದಲ್ಲಿ ಗಹನ ಸಂಶೋಧನೆಗಳನ್ನು ಮಾಡಿದವ; ಮಿದುಳು ಪೊರೆ ಉರಿಯೂತಕ್ಕೆ (ಸೆರಿಬ್ರೊಸ್ಪೈನಲ್ ಮೆನಿನ್‍ಜೈಟಿಸ್) ಚಿಕಿತ್ಸಾಲಸಿಕೆಯನ್ನು ಆವಿಷ್ಕರಿಸಿದವ; ಪ್ರಸಿದ್ಧ ರಾಕ್‍ಫೆಲ್ಲರ್ ವೈದ್ಯಸಂಶೋಧನ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿಯಾಗಿ ಹದಿನೈದು ವರ್ಷ ಕೆಲಸ ಮಾಡಿ ನೊಗುಚಿ, ಅಲೆಕ್ಸಿಸ್ ಕ್ಯಾರೆಲ್, ಲೋಯೆಬ್. ಕೌಸ್ ಮುಂತಾದ ಪ್ರಪಂಚ ವಿಖ್ಯಾತ ವೈದ್ಯಕೀಯ ಸಂಶೋಧಕರನ್ನು ಮುಂದಕ್ಕೆ ತಂದು ಕೊನೆಗೆ 1935ರಲ್ಲಿ ಸದ್ದು ಗದ್ದಲವಿಲ್ಲದೆ ಕೆಲಸಕ್ಕೆ ರಾಜಿನಾಮೆ ಕೊಟ್ಟು ವಿಶ್ರಾಂತಜೀವನ ಮುಂದುವರಿಸುತ್ತ ಮಾಸಿಹೋದವ.

ಸೈಮನ್ ಫ್ಲೆಕ್ಸ್‍ನರ್ ಚೆಕೊಸ್ಲೊವಾಕಿಯಾದಿಂದ ಕೆಂಟಕಿಗೆ ವಲಸೆ ಬಂದ ಮಾರಿಸ್ ಫ್ಲೆಕ್ಸ್‍ನರ್ ಎಂಬ ಯಹೂದಿಯ ನಾಲ್ಕನೆಯ ಮಗ. ತಾಯಿ ಅಲ್ಸಾಸ್ ಪ್ರಾಂತ್ಯಕ್ಕೆ ಸೇರಿದ ಎಸ್ತರ್ ಏಬ್ರಹ್ಯಾಮ್ ಎಂಬಾಕೆ. ಮಾರಿಸ್ ತನ್ನ ಜೀವನವನ್ನು ಬೀದಿ ಮಾರಾಟಗಾರನಾಗಿ ಪ್ರಾರಂಭಿಸಿ ಕೊನೆಗೆ ಗಣ್ಯ ಸಗಟು ವ್ಯಾಪಾರಿ ಆಗಿ ಗೌರವಾನ್ವಿತ ವ್ಯಕ್ತಿ ಆದವ. ಇವನ ಹಿರಿಯಮಗ ದೊಡ್ಡ ಔಷಧ ವ್ಯಾಪಾರಿ. ಸೈಮನ್ನನಿಗಿಂತಲೂ ಇವನ ತಮ್ಮ ಏಬ್ರಹ್ಯಾಮ್ ಪ್ರಮುಖನಾದ ವ್ಯಕ್ತಿ-ಪ್ರಖ್ಯಾತ ವೈದ್ಯ ಶಿಕ್ಷಣತಜ್ಞನಾಗಿದ್ದು ಅಮೆರಿಕದ ವೈದ್ಯಕೀಯ ವಿದ್ಯಾಲಯಗಳಲ್ಲೆಲ್ಲ ಯೂರೊಪಿನ ಜರ್ಮನಿ ಫ್ರಾನ್ಸ್‍ಗಳಂತೆ ಆರ್ಥಪೂರ್ಣ ವೈದ್ಯಶಿಕ್ಷಣಕ್ರಮವನ್ನು ಏರ್ಪಡಿಸಿದವ.

ಸೈಮನ್ನನ ಶಿಕ್ಷಣ ಲ್ಯೂಯಿಸ್‍ವಿಲ್ ನಗರದ ಶಾಲೆಗಳಲ್ಲಿ ಪ್ರಾರಂಭವಾಯಿತು. ಅನಂತರ ಅವನು ಒಬ್ಬ ಔಷಧ ವ್ಯಾಪಾರಿಯ ಹತ್ತಿರ ಶಿಷ್ಯವೃತ್ತಿಗೆ (ಅಪ್ರೆಂಟಿಸ್) ಸೇರಿದ. ಈತ ಸೈಮನ್ನನನ್ನು ಲೂಯಿಸ್‍ವಿಲ್ ಕಾಲೇಜ್ ಆಫ್ ಫಾರ್ಮಸಿಗೆ ಸೇರಿಸಿ 1882ರಲ್ಲಿ ಅವನು ಫಾರ್ಮಸಿ ಪದವೀಧರನಾಗುವಂತೆ ಮಾಡಿದ. ಆಮೇಲೆ ಸೈಮನ್ ತನ್ನ ಹಿರಿ ಅಣ್ಣನ ಔಷಧ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಕಾಲೇಜಿನಲ್ಲಿ ಇವನಿಗೆ ಸೂಕ್ಷ್ಮದರ್ಶಕ ಮುಂತಾದ ಪರಿಕರಗಳ ಸೌಲಭ್ಯ ದೊರೆಯದಿದ್ದರೂ ಹೇಗೋ ಒಂದು ಸೂಕ್ಷ್ಮದರ್ಶಕವನ್ನು ಸಂಪಾದಿಸಿ ಸ್ವಂತ ಶ್ರಮದಿಂದ ರೋಗಗ್ರಸ್ತ ಅಂಗಾಂಶಗಳ ಸೂಕ್ಷ್ಮ ಪರಿಚಯ ಮಾಡಿಕೊಳ್ಳುವುದು. ಆಣ್ಣನ ವೈದ್ಯ ಗಿರಾಕಿಗಳಿಗೆ ಬೇಕಾದಂಥ ಸೂಕ್ಷ್ಮದರ್ಶಕ ಪರೀಕ್ಷೆಗಳನ್ನು ಮಾಡಿಕೊಡುವುದು ಮುಂತಾದ ಚಟುವಟಿಕೆಗಳಲ್ಲೂ ನಿರತನಾದ. ಜೊತೆಗೆ 1889ರಲ್ಲಿ ಲ್ಯೂಯಿಸ್‍ವಿಲ್ಲಿನ ಎಂ.ಡಿ.ಡಿಗ್ರಿ ಪಡೆದು ವೈದ್ಯಪದವೀಧರನೂ ಆದ. 1890ರ ಅಂದಾಜಿಗೆ ಬಾಲ್ಟಿಮೋರಿನ ಜಾನ್ಸ್‍ಹಾಪ್‍ಕಿನ್ಸ್ ಆಸ್ಪತ್ರೆಯಲ್ಲಿ ರೋಗನಿದಾನತಜ್ಞನಾಗಿದ್ದ ಪ್ರಸಿದ್ಧ ವಿಲಿಯಮ್ ವೆಲ್ಷ್ ಎಂಬಾತನ ಕೈಕೆಳಗೆ ತನ್ನ ತಮ್ಮ ಏಬ್ರಹ್ಯಾಮನ ಸಲಹೆ ಮೇರೆಗೆ ರೋಗನಿದಾನಶಾಸ್ತ್ರ ಕಲಿಯಲು ಹೊರಟ. 1892ರಲ್ಲಿ ಜಾನ್ಸ್ ಹಾಪ್‍ಕಿನ್ಸ್ ವೈದ್ಯವಿದ್ಯಾಶಾಲೆ ಪ್ರಾರಂಭವಾದಾಗ ಗುರು ಈ ಅನ್ಯಾದೃಶ ಶಿಷ್ಯನನ್ನು ತನ್ನ ಮುಖ್ಯ ಸಹಾಯಕನಾಗಿ ನೇಮಿಸಿಕೊಂಡ. 1893ರಲ್ಲಿ ಸೈಮನ್ ವಾನ್‍ರೆಕ್ಲಿಂಗ್ ಹೌಸೆನ್ ಎಂಬ ಪ್ರಸಿದ್ಧ ವೈದ್ಯನ ಕೈಕೆಳಗೆ ಕೆಲಸ ಮಾಡಲು ಯೂರೊಪಿನ ಸ್ಟ್ರಾಸ್‍ಬರ್ಗಿಗೆ ತೆರಳಿದ. ಅನಂತರ ಕೆಲಕಾಲ ಪ್ಯಾರಿಸ್ಸಿನ ಪಾಸ್ತರ್ ಸಂಸ್ಥೆಯಲ್ಲಿ ಕೆಲಸ ಮಾಡಿ 1895ರಲ್ಲಿ ಬಾಲ್ಟಿಮೂರಿಗೆ ವಾಪಸಾದ. ಜಾನ್ಸ್ ಹಾಪ್‍ಕಿನ್ಸ್ ವೈದ್ಯಶಾಲೆಯಲ್ಲಿ ರೋಗನಿದಾನ ವಿಜ್ಞಾನದ ದ್ವಿತೀಯ ಪ್ರಾಧ್ಯಾಪಕನಾಗಿ (ಅಸೊಸಿಯೇಟ್ ಪ್ರೊಫೆಸರ್) ನೇಮಕಗೊಂಡ. ಮೂರು ವರ್ಷ ಈ ಸ್ಥಾನದಲ್ಲಿದ್ದು ಮುಂದಿನ ವರ್ಷ ರೋಗ ಅಂಗವಿಜ್ಞಾನದ (ಪ್ಯಾಥಲಾಜಿಕಲ್ ಅನಾಟಮಿ) ಪ್ರಾಧ್ಯಾಪಕನಾದ. 1899ರಲ್ಲಿ ಫ್ಲೆಕ್ಸ್‍ನರ್ ಫಿಲಡೆಲ್ಫಿಯ ವಿಶ್ವವಿದ್ಯಾಲಯದಲ್ಲಿ ರೋಗನಿದಾನ ವಿಜ್ಞಾನದ ಪ್ರಾಧ್ಯಾಪಕನಾಗಿ ನೇಮಿತನಾದ. ಈ ಕಾಲದಲ್ಲೇ ಅವನು, ವೈದ್ಯವಿದ್ಯಾಭ್ಯಾಸಕ್ಕಾಗಿ ಜಪಾನಿನಿಂದ ಬರಿಗೈಯಲ್ಲಿ ಹೇಳದೆಕೇಳದೆ ಓಡಿಬಂದಿದ್ದ ಹಿಡೆಯೊ ನೊಗುಚಿಗೆಗೆ, ಆಶ್ರಯ ಉತ್ತೇಜನವಿತ್ತು ಆತ ಪ್ರಸಿದ್ಧ ವೈದ್ಯವಿಜ್ಞಾನಿ ಆಗಲು ಸಹಾಯಕನಾದದ್ದು. 1902ರಲ್ಲಿ ಜಾನ್ ಡಿ. ರಾಕ್‍ಫೆಲ್ಲರ್ ತಂದೆ ಮತ್ತು ಮಗ ನ್ಯೂಯಾರ್ಕಿನಲ್ಲಿ ಒಂದು ಆಧುನಿಕ ವೈದ್ಯಕೀಯ ಸಂಶೋಧನಾ ಸಂಸ್ಥೆ ಪ್ರಾರಂಭಿಸಬೇಕೆಂದಿದ್ದರು. ಆಗ ಸೈಮನ್ ಫ್ಲೆಕ್ಸ್‍ನರ್ ಫಿಲಡೆಲ್ಫಿಯ ಬಿಟ್ಟು ನ್ಯೂಯಾರ್ಕಿಗೆ ಬಂದು (1903) ರಾಕ್‍ಫೆಲ್ಲರ್ ಸಂಸ್ಥೆ ಅತ್ಯಂತ ಸುವ್ಯವಸ್ಥಿತ ರೀತಿಯಲ್ಲಿ ಸ್ಥಾಪನೆ ಆಗುವಂತೆ ತನ್ನ ತಮ್ಮ ಏಬ್ರಹ್ಯಾಮನೊಡನೆ ಶ್ರಮಿಸಿದ. 1903ರಿಂದ ಮುಂದಿನ ಮೂವತ್ತೆರಡು ವರ್ಷ ಪರ್ಯಂತ ಆ ಸಂಸ್ಥೆಯ ನೆರವಿನಿಂದ ನಡೆಸಲ್ಪಡುತ್ತಿದ್ದ ಎಲ್ಲ ಪ್ರಯೋಗಾಲಯಗಳ ಮೇಲ್ವಿಚಾರಕನಾಗಿದ್ದುಕೊಂಡು ಬುದ್ಧಿವಂತ ತರುಣ ವೈದ್ಯವಿಜ್ಞಾನಿಗಳನ್ನು ಕಲೆಹಾಕಿ ಅವರು ಬಲುಮೇಲುಮಟ್ಟದ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ವ್ಯಾಪಕವಾಗಿ ಉಪಯುಕ್ತವಾದ ವ್ಯಾಸಂಗ ಕೈಗೊಳ್ಳುವುದಕ್ಕೂ ಘನ ಆವಿಷ್ಕಾರ ಮಾಡುವುದಕ್ಕೂ ಕಾರಣನಾದ. ದಕ್ಷ ಅನ್ವೇಷಕರಿಗೆ ಸ್ವತಂತ್ರವಾಗಿ ಸಂಶೋಧನೆ ಮಾಡಲು ಅವಕಾಶಕೊಟ್ಟು ಮಿಕ್ಕವರಿಗೆ ತಕ್ಕ ಮಾರ್ಗದರ್ಶನ ಮಾಡುತ್ತ ಎಲ್ಲರಿಗೂ ಅಚ್ಚುಮೆಚ್ಚಿನ ನಾಯಕನಾಗಿದ್ದ ಇವನು ಮತ್ತು ಈ ತರುಣ ವಿಜ್ಞಾನಿಗಳ ಶ್ರಮದ ಫಲವಾಗಿ ರಾಕ್‍ಫೆಲ್ಲರ್ ಸಂಸ್ಥೆ ವೈರಸ್ ಸಂಶೋಧನ ವ್ಯಾಸಂಗ ಕುರಿತಂತೆ ಪ್ರಪಂಚದಲ್ಲೇ ಮೊದಲು ಮನ್ನಣೆ ಗಳಿಸಿತು.

ಇದೇ ಕಾಲದಲ್ಲಿ ಫಿಲಿಪ್ಪೈನ್ ದ್ವೀಪಗಳು ಅಮೆರಿಕದ ಆಡಳಿತದಲ್ಲಿದ್ದುವು. ಅಲ್ಲಿಯ ಜನತಾ ಆರೋಗ್ಯದ ಸಮೀಕ್ಷೆ ಮಾಡಲು 1900ರಲ್ಲಿ ಸರ್ಕಾರದಿಂದ ನೇಮಿತವಾಗಿ ರಾಕ್‍ಫೆಲ್ಲರ್ ಸಂಸ್ಥೆಯಿಂದ ಹೊರಡ ತಂಡದ ಮುಂದಾಳಾಗಿ ಫ್ಲೆಕ್ಸ್‍ನರನೇ ಇದ್ದ. ಆ ದ್ವೀಪಗಳಲ್ಲಿ ಕಂಡುಬಂದ ವಿಶಿಷ್ಟ ಆಮಶಂಕೆಗೆ ಒಂದು ಏಕಾಣುಜಾತಿ ಕಾರಣವೆಂದು ಈತ ತೋರಿಸಿದ. ಉಷ್ಣವಲಯದ ವೈಶಿಷ್ಟ್ಯವಾದ ಆಮಶಂಕೆಗೆ ಏಕಾಣುಗಳೇ ಕಾರಕಗಳೆಂದು ಶೀಗ ಎಂಬ ಏಕಾಣುವಿಜ್ಞಾನಿ ಮುಂಚೆಯೇ ವಿಶದಪಡಿಸಿದ್ದು ಅವನ ಗೌರವಾರ್ಥವಾಗಿ ಈ ಏಕಾಣುಗಳಿಗೆ ಶೀಗೆಲ್ಲ ಎಂದು ನಾಮಕರಣ ಮಾಡಿದ್ದರು. ಫ್ಲೆಕ್ಸ್‍ನರ್ ಆವಿಷ್ಕರಿಸಿದ ಆಮಶಂಕೆಕಾರಕ ಏಕಾಣುವೂ ಇದೇ ಗುಂಪಿಗೆ ಸೇರಿದ್ದ ಬೇರೆ ಜಾತಿ ಕ್ರಿಮಿ ಆಗಿದ್ದುದು ಸ್ಪಷ್ಟವಾಗಿ ಇದಕ್ಕೆ ಶೀಗೆಲ್ಲ ಫ್ಲೆಕ್ಸ್‍ನೆರಿ ಎಂದು ಹೆಸರಿಟ್ಟು ಈತನನ್ನು ಗೌರವಿಸಲಾಯಿತು. ಸ್ಯಾನ್‍ಫ್ರಾನ್ಸಿಸ್ಕೊದಲ್ಲಿ 1901ರಲ್ಲಿ ಕಂಡು ಬಂದಿದ್ದ ಪಿಡುಗನ್ನು ವ್ಯಾಸಂಗಿಸಲು ಸರ್ಕಾರ ಇವನನ್ನು ನೇಮಿಸಿತು. ಫ್ಲೆಕ್ಸ್‍ನರ್ ಅಲ್ಲಿಗೆ ತೆರಳಿ ಪಿಡುಗಿಗೆ ಕಾರಣ ಪ್ಲೇಗ್ ವಿಷಾಣುಗಳು ಎಂದು ತೋರಿಸಿ ಪ್ಲೇಗಿನ ನಿರ್ಮೂಲನಕ್ಕೆ ತಕ್ಕ ಸಲಹೆ ಮಾಡಿ ಮರಳಿದ. 1907ರಲ್ಲಿ ಇವನು ಮಿದುಳು ಮತ್ತು ಮಿದುಳು ಬಳ್ಳಿಗಳ ಹೊರಪೊರೆಯ ಉರಿಯೂತದ ಚಿಕಿತ್ಸೆಗೆ ಲಸಿಕೆ ಶೋಧಿಸಿದ. ಸಲ್ಫಗುಂಪಿಗೆ ಸೇರಿದ ಔಷಧಗಳ ಉಪಜ್ಞೆ 1930ರ ದಶಕಗಳಲ್ಲಿ ಆಗುವ ತನಕ ಈ ಮಾರಕ ವ್ಯಾಧಿಯ ಚಿಕಿತ್ಸೆಗೆ ಇದ್ದ ಔಷಧ ಇದೊಂದೇ ಲಸಿಕೆ. ರಾಕ್‍ಫೆಲ್ಲರ್ ಸಂಸ್ಥೆಯಲ್ಲಿ ಈತ ಡಿಫ್ತೀರಿಯ ರೋಗಾಣುಗಳ ಮೇಲೂ ಹಾವಿನ ವಿಷಗಳ ಮೇಲೂ ಪ್ರಯೋಗ ಕೈಗೊಂಡದ್ದು ಉಂಟು. ಈ ವರ್ಷಗಳಲ್ಲಿ ಪೋಲಿಯೊಮೈಯಲೈಟಿಸ್ (ಮಕ್ಕಳ ಪಾಶ್ರ್ವವಾಯು) ರೋಗದ ತನಿಖೆಗಾಗಿ ಒಂದು ಸಂಶೋಧಕ ಮಂಡಲಿ ಏರ್ಪಟ್ಟು ಅದಕ್ಕೆ ಫ್ಲೆಕ್ಸ್‍ನರನೇ ಮುಂದಾಳಾಗಿದ್ದ. ಇವನ ಮತ್ತು ಇವನ ಸಹಾಯಕರ ಪರಿಶ್ರಮದಿಂದ ಪೋಲಿಯೊ ರೋಗಕ್ಕೆ ಕಾರಣವಾದ ವೈರಸ್ಸನ್ನು ಪ್ರತ್ಯೇಕಿಸಿ ಗುರುತಿಸಲಾಯಿತು. ಅದು ಮೂಗು ಹಾಗೂ ಮೂಗಿನ ನರಗಳ ಮೂಲಕ ಸಾಗಿ ನರಮಂಡಲ ಆಕ್ರಮಿಸಿ ಪಾಶ್ರ್ವವಾಯುವಿಗೆ ಕಾರಣವಾಗುತ್ತದೆ ಎಂಬುದನ್ನೂ ತೋರಿಸಲಾಯಿತು. (ಇಂದು ಈ ಆಭಿಪ್ರಾಯವನ್ನು ಶಂಕಿಸಲಾಗಿದೆ; ಆದರೆ ಅದು ಬೇರೆ ವಿಷಯ). 1910ರಲ್ಲಿ ಈ ವಿಷಾಣುಗಳನ್ನು ಕೋತಿಗಳ ಮೂಗು, ಮೂಗಿನ ನರಗಳು ಇತ್ಯಾದಿ ಸ್ಥಳಗಳಲ್ಲಿ ಚುಚ್ಚುಮದ್ದಾಗಿ ಪ್ರಯೋಗಿಸಿ ಪೋಲಿಯೊ ರೋಗ ಕೃತಕವಾಗಿ ಅವಕ್ಕೆ ಅಂಟುವಂತೆ ಮಾಡುವುದರಲ್ಲಿ (ಸ್ವಾಭಾವಿಕವಾಗಿ ಕೋತಿಗಳಿಗೆ ಪೋಲಿಯೊ ರೋಗ ಬರುವುದಿಲ್ಲ) ಯಶಸ್ವಿ ಆದ. ಕೃತಕವಾಗಿ ಇದನ್ನು ಕೋತಿಗಳಿಗೆ ಅಂಟಿಸುವ ಪ್ರಯತ್ನಗಳಲ್ಲಿ ಮೊತ್ತ ಮೊದಲಾಗಿ ಸಫಲನಾದವನು ಈತನೇ. ಫ್ಲೆಕ್ಸ್‍ನರನ ಸಾಧನೆಯಿಂದ ಇನ್ನೊಂದು ಪ್ರಯೋಜನವೂ ಸಿದ್ಧಿಸುವಂತಾಯಿತು. ಪೋಲಿಯೊ ವಿಷಾಣುಗಳ ವಿರುದ್ಧ ಲಸಿಕೆ ತಯಾರಿಸುವ ಪ್ರಯತ್ನಗಳಿಗೆ ಹೊಸ ಹೊಸದಾಗಿ ವಿಷಾನುತಳಿಗಳ ಆವಶ್ಯಕತೆ ಇದೆ. ಹೊಸ ಹೊಸದಾಗಿ ವೈರಸ್‍ತಳಿಗಳನ್ನು ಎಬ್ಬಿಸುವ ಕೃಷಿವಿಧಾನ ಕಷ್ಟ ಮತ್ತು ದುಬಾರಿ. ಆದರೆ ಕೋತಿಗಳಿಗೆ ಕೃತಕವಾಗಿ ಪೋಲಿಯೊ ರೋಗವನ್ನು ಉಂಟು ಮಾಡಿ ಅವುಗಳಿಂದ ವ್ಯಾಸಂಗ ಹಾಗೂ ಪ್ರಯೋಗಗಳಿಗೆ ಬೇಕೆಂದಾಗ ಬೇಕಾದಷ್ಟು ಪೋಲಿಯೊ ವಿಷಾಣುಗಳನ್ನು ಸುಲಭವಾಗಿಯೂ ವಿಶೇಷ ಖರ್ಚಿಲ್ಲದೆಯೂ ಪಡೆಯಬಹುದಾಯಿತು. ಪೋಲಿಯೊ ಕೃಷಿವಿಧಾನದ ಬದಲು ಕೋತಿಗಳಿಗೆ ಕೃತಕವಾಗಿ ರೋಗ ಉಂಟುಮಾಡಿಕೊಂಡು ಬರುವ ವಿಧಾನದಿಂದ ವಿಷಾಣುಗಳ ದೀರ್ಘಕಾಲಿಕ ಠೇವಣಿ ಇಟ್ಟಂಥ ಸೌಕರ್ಯ ದೊರಕಿತು. ಇದರಿಂದ ಪೋಲಿಯೊ ರೋಗದ ವಿರುದ್ಧ ಲಸಿಕೆಯ ಅವಿಷ್ಕಾರಕ್ಕೆ ಹಾದಿ ಸುಗಮಗೊಂಡು ಅಂತಿಮವಾಗಿ ಲಸಿಕೆಯ ಆವಿಷ್ಕಾರವೂ ಆಯಿತು.

ಮೇಲುನೋಟಕ್ಕೆ ದರ್ಪ ಅಧಿಕಾರಿಯಂತೆ ಕಾಣುತ್ತಿದ್ದರೂ ಫ್ಲೆಕ್ಸ್‍ನರ್ ನಿಜವಾಗಿ ಮೃದುಹೃದಯಿ. ಬಾಲ್ಟಿಮೋರಿನ ಗಣ್ಯ ಕ್ವೇಕರ್ ಮನೆತನದ ಹೆಲೆನ್ ತಾಮಸ್ ಎಂಬಾಕೆಯನ್ನು 1903ರಲ್ಲಿ ಮದುವೆ ಆದಾಗಿನಿಂದ ಆಕೆಯ ಪ್ರಭಾವದ ಫಲವಾಗಿ ಫ್ಲೆಕ್ಸ್‍ನರನ ಆಸ್ಥೆ ವೈದ್ಯಕೀಯ ಸಂಶೋಧನೆಗಳನ್ನು ಮೀರಿ ಸಾಹಿತ್ಯಕಲೆಗಳ ಕಡೆಗೂ ಪಸರಿಸಿತು. ಇವರಿಗೆ ಇಬ್ಬರು ಗಂಡುಮಕ್ಕಳು: ವಿಲಿಯಮ್ಸ್ ಭೌತವಿಜ್ಞಾನ, ಜೇಮ್ಸ್‍ತಾಮಸ್ ಗಣ್ಯಲೇಖಕ ಮತ್ತು ಅಮೆರಿಕದ ಸಾಂಸ್ಕøತಿಕ ಇತಿಹಾಸದ ಕರ್ತೃ.

ಸಂಶೋಧಕ ತಂಡದ ಮುಖ್ಯಸ್ಥನಾಗಿ ಫ್ಲೆಕ್ಸ್‍ನರ್ ಸಹಜವಾಗಿಯೇ ಅನೇಕ ವೈಜ್ಞಾನಿಕ ಲೇಖನಗಳನ್ನು ಬರೆದನೆಂಬುದು ವ್ಯಕ್ತ. ಅಮೆರಿಕದಲ್ಲಿ ವೈದ್ಯವಿಜ್ಞಾನದ ಬೆಳವಣಿಗೆಯ ವಿಚಾರವಾಗಿ ಮತ್ತು ಅದಕ್ಕೆ (ತಾನು ಬಹುಗೌರವ ಭಾವದಿಂದ ಕಾಣುತ್ತಿದ್ದ ತನ್ನ ಗುರು ವೆಲ್ಷನ ಕೊಡುಗೆಯ ವಿಚಾರವಾಗಿ ಒಂದು ಗ್ರಂಥವನ್ನೂ ಪ್ರಕಟಿಸಿದ. ಕೇವಲ ಬೇಸರದಿಂದ ವೆಲ್ಷನು ಜರ್ನಲ್ ಆಫ್ ಎಕ್ಸ್‍ಪೆರಿಮೆಂಟಲ್ ಮೆಡಿಸನ್ ಎಂಬ ನಿಯತಕಾಲಿಕದ ಸಂಪಾದಕತ್ವವನ್ನು ಬಿಟ್ಟ ಮೇಲೆ, 1902ರಿಂದ ಸುಮಾರು ಹದಿನೈದು ವರ್ಷ, ಫ್ಲೆಕ್ಸ್‍ನರನೇ ಸಂಪಾದಕತ್ವದ ಹೊಣೆ ಹೊತ್ತಿದ್ದು ಉಂಟು. ಅಮೆರಿಕದ ನ್ಯಾಷನಲ್ ರಿಸರ್ಚ್ ಕೌನ್ಸಿಲ್ ಅಭ್ಯರ್ಥಿಗಳನ್ನು ಆಕರ್ಷಿಸಲು ವೇತನ ಕೊಡುವಂತೆ ಫ್ಲೆಕ್ಸ್‍ನರ್ ಬಹುವಾಗಿ ಶ್ರಮಿಸಿದ್ದು ಅವನ ಒಂದು ಮುಖ್ಯ ಆದರೆ ಬಹಳ ಜನಕ್ಕೆ ಗೊತ್ತಿರುವ ಕಾರ್ಯ. (ಎಸ್.ಆರ್.ಆರ್.)