ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಫ್ಲೆಮಿಂಗ್, ಅಲೆಕ್ಸಾಂಡರ್

ವಿಕಿಸೋರ್ಸ್ದಿಂದ

ಫ್ಲೆಮಿಂಗ್, ಅಲೆಕ್ಸಾಂಡರ್ 1881-1955. ಬ್ರಿಟನ್ನಿನ ವೈದ್ಯ ಹಾಗೂ ವಿಖ್ಯಾತ ಏಕಾಣು ವಿಜ್ಞಾನಿ, ಪೆನಿಸಿಲಿನ್ನಿನ ಆವಿಷ್ಕರ್ತೃ. ಈ ಆವಿಷ್ಕಾರಕ್ಕಾಗಿ ಇವನಿಗೂ ಫ್ಲೋರಿ ಮತ್ತು ಚೆಯ್ನ್ ಎಂಬ ವಿಜ್ಞಾನಿಗಳಿಗೂ ಒಟ್ಟಾಗಿ 1945ರಲ್ಲಿ ದೇಹಕ್ರಿಯಾವಿಜ್ಞಾನ ಹಾಗೂ ವೈದ್ಯವಿಜ್ಞಾನ ವಿಭಾಗದ ನೊಬೆಲ್ ಪಾರಿತೋಷಿಕ ಲಭಿಸಿತು. ಸ್ಕಾಟ್ಲೆಂಡಿನ ಕೃಷಿಕರ ಕುಟುಂಬದಲ್ಲಿ ಅಲೆಕ್ಸಾಂಡರನ ಜನನ, 6-8-1881, ಆರ್ಥಿಕ ಮುಗ್ಗಟ್ಟು ಬಾಳ ಸಂಗಾತಿ. ವ್ಯವಸ್ಥಿತ ಶಿಕ್ಷಣ ಅಲಭ್ಯ. ನೌಕಾಸಂಸ್ಥೆಯಲ್ಲಿ ಉದ್ಯೋಗ. 1900ರಲ್ಲಿ ಬೋಯರ್ ಯುದ್ಧದಲ್ಲಿ ಭಾಗಿಯಾಗಲು ಸೇನೆ ಸೇರಿದ. ಆದರೆ ಅಷ್ಟರಲ್ಲೇ ಕದನ ಕೈದಾದ್ದರಿಂದ ಆಫ್ರಿಕಾ ಪ್ರಯಾಣರದ್ದಾಯಿತು. ಇಪ್ಪತ್ತರ ಹರೆಯದಲ್ಲಿ ದತ್ತಿ ಹಣವೊಂದು ದೊರೆತಾಗ ವೈದ್ಯಕೀಯಧ್ಯಯನ ನಡೆಸಲೋಸ್ಕರ ಸ್ಪರ್ಧಾಪರೀಕ್ಷೆಗೆ ಕುಳಿತು ಯಶಸ್ವಿಯಾದ. ವಿದ್ಯಾರ್ಥಿ ವೇತನವೂ ದೊರೆಯಿತು. ಮುಂದೆ ವೈದ್ಯಕೀಯ ವ್ಯಾಸಂಗಕ್ಕೆ ಈತ ಲಂಡನ್ನಿನ ಸೇಂಟ್‍ಮೇರಿ ಆಸ್ಪತ್ರೆ ಸೇರಿ 1906ರಲ್ಲಿ ಫಿಸಿಶಿಯನ್ನುಗಳ ಹಾಗೂ ಸರ್ಜನ್ನುಗಳ ರಾಯಲ್ ಕಾಲೇಜುಗಳ ಜಂಟಿ ಡಿಪ್ಲೊಮ್‍ವನ್ನೂ 1908ರಲ್ಲಿ ಲಂಡನ್ ವಿಶ್ವವಿದ್ಯಾಲಯದ ಎಂ.ಬಿ.ಬಿ.ಎಸ್. ಪದವಿಯನ್ನೂ ಪಡೆದ. 1906ರಲ್ಲಿ ಅದೇ ಆಸ್ಪತ್ರೆಯಲ್ಲಿ ತನ್ನ ಗುರು ಆಲ್ಮರಾತ್ ರೈಟನ ಕೈಕೆಳಗೆ ಏಕಾಣುವಿಜ್ಞಾನ ವಿಭಾಗದಲ್ಲಿ ಕೆಲಸಕ್ಕೆ ಸೇರಿದ ಈತ 1955ರಲ್ಲಿ ವಿಶ್ರಾಂತಿ ಹೊಂದುವ ತನಕವೂ ಆ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸಿದ. 1909ರಲ್ಲಿ ರಾಯಲ್ ಕಾಲೇಜ್ ಆಫ್ ಸರ್ಜನ್ನಿನ ಫೆಲೊಶಿಪ್ ಗಳಿಸಿದ, ಪಾಲ್ ಅರ್ಲಿಕ್ಕಿನಿಂದ ಉಪಜ್ಞಿಸಲ್ಪಟ್ಟಿದ್ದು ಅದರ ಗುಣಾವಗುಣಗಳ ವರದಿಗಾಗಿ ರೈಟನಿಗೆ ಕೊಡಲಾಗಿದ್ದ ಸ್ಯಾಲ್‍ವರ್‍ಸಾನ್ ಎಂಬ ರಾಸಾಯನಿಕವನ್ನು 1909ರಲ್ಲಿ ಪರಂಗಿ ರೋಗಗ್ರಸ್ತರಲ್ಲಿ ಚುಚ್ಚುಮದ್ದಾಗಿ ಪ್ರಯೋಗಿಸಿ ಅದು ನಿಜವಾಗಿ ಪರಿಣಾಮಕಾರಿ ರಾಸಾಯನಿಕ ಚಿಕಿತ್ಸಕ (ಕೀಮೊಥಿರಾಪ್ಯೂಟಿಕ್) ಎಂದು ತೋರಿಸಿದ. ಸ್ಯಾಲ್‍ವರ್‍ಸಾನನ್ನು ಬಳಸಿದ ಯದಲಿಗರಲ್ಲಿ ಫ್ಲೆಮಿಂಗ್ ಒಬ್ಬ.

ಒಂದನೆಯ ಮಹಾಯುದ್ಧ ಕಾಲದಲ್ಲಿ (1914-18) ರೈಟ್ ಮತ್ತು ಫ್ಲೆಮಿಂಗ್ ಇಬ್ಬರೂ ಸೈನ್ಯದ ವೈದ್ಯ ಪಡೆ ಸೇರಿ ಗಾಯಾಳುಗಳ ಗಾಯಚಿಕಿತ್ಸೆಗೆ ಉಪಯುಕ್ತವಾಗುವ ಔಷಧಗಳ ತನಿಖೆ ಆವಿಷ್ಕಾರಗಳಲ್ಲಿ ಅವಕ್ಕೆಂದೇ ಬೊಲೋನ್ ನಗರದಲ್ಲಿ ಸ್ಥಾಪಿಸಲ್ಪಟ್ಟಿದ ಸಂಸ್ಥೆಯಲ್ಲಿ ನಿರತರಾಗಿದ್ದರು. ಆಗ ಕೀತಗಾಯಗಳನ್ನು ಚಿಕಿತ್ಸಿಸಲು ಪೂತಿನಾಶಕಗಳನ್ನು (ಆಂಟಿಸೆಪ್ಟಿಕ್ಸ್) ಬಳಸಲಾಗುತ್ತಿತ್ತು. ಸಾಮಾನ್ಯವಾಗಿ ಇವು ಏಕಾಣುಗಳನ್ನೇ ಅಲ್ಲದೆ ರಕ್ತದ ವರ್ಣರಹಿತ ಕಣಗಳನ್ನೂ ನಾಶಪಡಿಸುತ್ತಿದ್ದುವು. ಆದ್ದರಿಂದ ಇವನ್ನು ಅಪಧಮನಿಯೊಳಗೆ ಚುಚ್ಚುಮದ್ದಾಗಿ ಉಪಯೋಗಿಸುವಂತಿರಲಿಲ್ಲ. ಪ್ರಕ್ಷಾಳನ ಲೇಪನಗಳಿಗಾಗಿ ಮಾತ್ರ ಬಳಸಿದರೂ ಅನೇಕವೇಳೆ ಇವುಗಳಿಂದ ದೇಹಕ್ಕೆ ಅನುಕೂಲವಾಗುವ ಬದಲು ಅನನುಕೂಲವೇ ಆಗುತ್ತಿತ್ತು. ಕೀತಗಾಯಗಳ ಚಿಕಿತ್ಸೆಗೆ ಪೂತಿನಾಶಕಗಳನ್ನು ಬಳಸುವುದೇ ತಪ್ಪು. ಅದರ ಬದಲು ವರ್ಣರಹಿತಕಣಗಳ ಸಾಮಥ್ರ್ಯ ವೃದ್ಧಿಮಾಡಬಲ್ಲ ವಸ್ತುಗಳು ಹಾಗೂ ಕ್ರಮಗಳನ್ನು ಪತ್ತೆಹಚ್ಚಬೇಕೆಂದು ರೈಟ್ ಹಾಗೂ ಫ್ಲೆಮಿಂಗ್ ಸಾರಿ ಹೇಳಹತ್ತಿದ್ದರು. ಆದರೆ ಸಮಕಾಲೀನ ವೈದ್ಯರು ಈ ವಾದಸರಣಿಯನ್ನು ಒಪ್ಪದೆ ಅಧಿಕಾರಸ್ಥಾನದಿಂದ ಲೇವಡಿಮಾಡುತ್ತ ಬಂದುದರಿಂದ ಇತರ ವಿಜ್ಞಾನಿಗಳಿಂದ ಬೇರೆ ಬೇರೆ ಕ್ರಿಮಿನಾಶಕಗಳ ಆವಿಷ್ಕಾರಗಳು ಮುಂದುವರಿದುವು. ಇದಲ್ಲದೆ ಏಕಾಣುಕೃತ ಸೋಂಕು ರೋಗಗಳು ಬಾರದಂತೆ ರಕ್ಷಿಸುವ ಲಸಿಕೆಗಳು ತಿಳಿದಿದ್ದುವೇ ಹೊರತು ಸೋಂಕುರೋಗ ಅಂಟಿದ ಮೇಲೆ ರೋಗಕಾರಕ ಕ್ರಿಮಿಗಳನ್ನು ನಾಶಮಾಡಿ ಗುಣಪಡಿಸಬಲ್ಲ ಔಷಧಗಳು ಗೊತ್ತಿರಲಿಲ್ಲ. ದೇಹಕ್ಕೆ ಸುರಕ್ಷಿತವಾದ ಪೂತಿನಾಶಕಗಳನ್ನು ಆವಿಷ್ಕರಿಸಿದಲ್ಲಿ ಕೀತಗಾಯಗಳನ್ನೇ ಅಲ್ಲದೆ ಸೋಂಕು ರೋಗಗಳನ್ನೂ ಚಿಕಿತ್ಸಿಸಬಹುದು ಎಂದು ಫ್ಲೆಮಿಂಗ್ ಯೋಚಿಸಿ ಯುದ್ಧದಿಂದ ವಾಪಸಾದ ಮೇಲೆ ಸೇಂಟ್‍ಮೇರಿ ಆಸ್ಪತ್ರೆಯಲ್ಲಿ ಈ ದಿಶೆಯಲ್ಲಿ ಪ್ರಾಯೋಗಿಕ ವ್ಯಾಸಂಗಗಳನ್ನು ಕೈಗೊಂಡ. ಇಂಥ ಗುಣವುಳ್ಳ ಮತ್ತು ಲೈಸೊಸೈಮ ಎಂದು ನಾಮಕರಣ ಮಾಡಲ್ಪಟ್ಟ ವಸ್ತುವೊಂದನ್ನು 1922ರಲ್ಲಿ ಆವಿಷ್ಕರಿಸಲಾಯಿತು. ಉದ್ದೇಶಕ್ಕೆ ತಕ್ಕಂತೆ ಪ್ರಯತ್ನಪೂರ್ವಕವಾಗಿಯೇ ವ್ಯಾಸಂಗ ಜರಗುತ್ತಿದ್ದರೂ ಲೈಸೊಸೈಮಿನ ಆವಿಷ್ಕಾರವಾದುದ್ದು ವಾಸ್ತವವಾಗಿ ಆಕಸ್ಮಿಕವಾಗಿಯೇ 1921ರಲ್ಲಿ ನೆಗಡಿಯಿಂದ ಭಾಧಿತನಾಗಿದ್ದ ಫ್ಲೆಮಿಂಗ್ ಏಕಾಣುಗಳನ್ನು ಬೆಳೆಸಿದ್ದ ಕೃಷಿಫಲಕ ಒಂದನ್ನು ಅವಲೋಕಿಸುತ್ತಿದ್ದಾಗ. ಅವನ ಮೂಗಿನಿಂದ ಒಂದು ತೊಟ್ಟು ದ್ರವ ಕೃಷಿಫಲಕದ ಮೇಲೆ ಬಿತ್ತು. ಶೀಘ್ರದಲ್ಲೆ ಆ ಸ್ಥಳದಲ್ಲಿ ಏನೋ ವ್ಯತ್ಯಾಸ ಕಂಡುಬಂದಂತೆ ತೋರಿತು. ಪರೀಕ್ಷಿಸಿ ನೋಡಿದಾಗ ಅಲ್ಲಿ ಏಕಾಣುಗಳು ನಾಶಹೊಂದಿದ್ದುದು ತಿಳಿಯಿತು. ಮೂಗಿನ ದ್ರವದಲ್ಲಿ ಏಕಾಣುನಾಶಕ ವಸ್ತು ಒಂದು ಇರಬೇಕೆನಿಸಿತು. ಮುಂದಿನ ವ್ಯಾಸಂಗಗಳಿಂದ ಈ ವಸ್ತು ಆ ದ್ರವದಲ್ಲೆ ಅಲ್ಲದೆ ಕಂಬನಿ, ಜೊಲ್ಲು, ತತ್ತಿಯ ಲೋಳೆ, ಹಾಲು ಇವುಗಳಲ್ಲಿ ಸಹಜವಾಗಿಯೇ ಇರುವುದು ಗೊತ್ತಾಯಿತು. ನೈಸರ್ಗಿಕವಾಗಿಯೇ ಇರುವ ಈ ವಸ್ತು ದೇಹಕ್ಕೆ ಸುರಕ್ಷಿತವಾಗಿರುವುದರಲ್ಲಿ ಸಂದೇಹವಿಲ್ಲ ಎಂಬುದು ಆದರೂ ಅದು ಅನೇಕ ಬಗೆಯ ರೋಗಕಾರಕ ಏಕಾಣುಗಳಿಗೆ ಮಾರಕವಾಗಿರುವುದೂ ವಿಶದವಾಯಿತು. ಆದರೆ ಲೈಸೊಸೈಮನ್ನು ಪ್ರತ್ಯೇಕಿಸಿ ಶುದ್ಧೀಕರಿಸಿ ಬಳಕೆಗೆ ತರುವಷ್ಟು ಮಟ್ಟಿಗೆ ವ್ಯಾಸಂಗವನ್ನು ಫ್ಲೆಮಿಂಗ್ ಮುಂದುವರಿಸಲಿಲ್ಲ ಅದರ ಆವಿಷ್ಕಾರ, ಗುಣ, ಉಪಯುಕ್ತತೆ ಇವುಗಳ ಬಗ್ಗೆ ಸುಧೀರ್ಘ ಲೇಖನ ಬರೆದು 1922ರಲ್ಲಿ ವೈದ್ಯಕೀಯ ನಿಯತಕಾಲಿಕ ಒಂದರಲ್ಲಿ ಪ್ರಕಟಿಸಿದ ಮಾತ್ರ, ಅನಂತರ ಸಹವಿಜ್ಞಾನಿಗಳು ಮನಸ್ಸಿಲ್ಲದ ಮನಸ್ಸಿನಿಂದ ಫ್ಲೆಮಿಂಗನ ವಾದವನ್ನು ಒಪ್ಪುವಂತಾದರು. 1928ರಲ್ಲಿ ಫ್ಲೆಮಿಂಗನಿಂದ ಇದೇರೀತಿ ಆಕಸ್ಮಿಕವಾಗಿ ಫೆನಿಸಿಲಿನ್ನಿನ ಆವಿಷ್ಕಾರವಾಯಿತು. ಕೀವುರೋಗಕಾರಕ ಏಕಾಣು ಎನ್ನಿಸಿದ ಸ್ಟಾಫಿಲೊಕಾಕಸ್ ಎಂಬ ಏಕಾಣುವಿನ ಕೃಷಿಯಲ್ಲಿ ತೊಡಗಿದ್ದಾಗ ಒಂದು ಕೃಷಿಫಲಕದಲ್ಲಿ ಏಕಾಣು ಬೆಳೆಯ ನಡುವೆ ಆಕಸ್ಮಾತ್ತಾಗಿ ಬೂಷ್ಟು ಬೆಳೆಯಿತು. ಆ ಭಾಗದಲ್ಲಿ ಏಕಾಣು ಬೆಳೆ ನಷ್ಟವಾಗಿ ಹೋದದ್ದರಿಂದ ಕೃಷಿ ಕೆಟ್ಟು ಹೋಯಿತೆಂದು ಕೃಷಿಫಲಕವನ್ನು ಇನ್ನೇನು ಬಿಸಾಡಬೇಕು. ಅಷ್ಟರಲ್ಲೆ ಫ್ಲೆಮಿಂಗನಿಗೆ ಇದೂ ಲೈಸೊಸೈಮಿನ ಪ್ರಸಂಗದಂತೆ ಇದ್ದುದು ಜ್ಞಾಪಕಕ್ಕೆ ಬಂತು. ಪರೀಕ್ಷಿಸಿ ನೋಡಿದಾಗ ಬೂಷ್ಟಿನ ಸುತ್ತಲೂ ಅಷ್ಟು ದೂರ ಏಕಾಣು ನಾಶವಾಗಿದ್ದುದು ಕಂಡಿತು. ಆದ್ದರಿಂದ ಇದೇ ವ್ಯಾಸಂಗವನ್ನು ಮುಂದುವರಿಸಬೇಕೆಂದು ನಿರ್ಧರಿಸಿದ. ಬೂಷ್ಟನ್ನು ಪ್ರತ್ಯೇಕಿಸಿ ಪರೀಕ್ಷಿಸಿದಾಗ ಅದು ಫೆನಿಸಿಲಿಯಮ್ ಜಾತಿಗೆ ಸೇರಿದ ನೋಟೇಟಮ್ ಎಂಬ ಪ್ರಭೇದವೆಂದು ತಿಳಿಯಿತು ಪೆನಿಸಿಲಿಯಮ್ ನೊಟೇಟಮನ್ನೇ ಕೃಷಿಮಾಡಿ ಆ ಬೆಳೆಯ ಸುತ್ತಲೂ ವಿವಿಧ ಏಕಾಣು ಪ್ರಭೇದಗಳನ್ನು ಬಿತ್ತಿದಾಗ ಕೆಲವು ಮಾತ್ರ ಬೆಳೆದವು ಅದು ಈ ಏಕಾಣು ಬೆಳೆಯನ್ನು ತಡೆಹಿಡಿದಿದೆ, ಅಲ್ಲದೆ ಅದು ಕೃಷಿಮಾಧ್ಯಮದಲ್ಲಿ ವಿಲೀನವಾಗಿರಬೇಕು ಎನ್ನಿಸಿತು. ಕೃಷಿಮಾಧ್ಯಮವನ್ನು ಏಕಾಣು ಬೆಳೆಯ ಮೇಲೆ ಹಾಕಿದರೆ ಏಕಾಣು ನಾಶವಾಗುವುದು ಕಂಡಿತು. ಕೃಷಿಮಾಧ್ಯಮದಲ್ಲಿರುವ ಈ ಏಕಾಣುನಾಶಕವಸ್ತುವಿಗೆ ಫ್ಲೆಮಿಂಗ್ ಪೆನಿಸಿಲಿನ್ ಎಂದು ನಾಮಕರಣ ಮಾಡಿದ. ಬೇರೆ ವಿಜ್ಞಾನಿಗಳ ಸಹಾಯ ಪಡೆದರೂ ಇದನ್ನು ಪ್ರತ್ಯೇಕಿಸಿ ಸಾಂದ್ರೀಕರಿಸುವ ಪ್ರಯತ್ನ ಮಾತ್ರ ಫಲಿಸಲಿಲ್ಲ. ಆದ್ದರಿಂದ ಬೂಷ್ಟನ್ನು ಬೆಳೆಸಿದ ಕೃಷಿ ಮಾಧ್ಯಮವನ್ನೇ ಏಕಾಣುನಾಶಕವಾಗಿ ಬಳಸಬಹುದೆಂದೂ ಸ್ವಾಭಾವಿಕವಾಗಿಯೇ ಕೀತಗಾಯಗಳಿಗೆ ಮಾತ್ರ ಚಿಕಿತ್ಸಕವಾಗಿ ಬಳಸುವುದು ಸುರಕ್ಷಿತವೆಂದೂ ಪ್ರಕಟಿಸಿದ. ಆದರೂ ಮುಂದೆ ಶುದ್ದೀಕರಣ ಸಾಧ್ಯವಾಗಬಹುದೆಂಬ ಆಸೆಯಿಂದಲೋ ಏನೋ ಪೆನಿಸಿಲಿಯಮ್ ನೊಟೇಟಮ್ಮಿನ ಕೃಷಿ ಮಾಡುತ್ತ ಪ್ರಯೋಗಾಲಯದಲ್ಲಿ ಆ ತಳಿಯನ್ನು ಉಳಿಸಿಕೊಂಡಿದ್ದ.

ಲೈಸೊಸೈಮಿನ ಆವಿಷ್ಕಾರಾವಾದ 10-12 ವರ್ಷಗಳ ಬಳಿಕ ಆಕ್ಸ್‍ಫರ್ಡಿನಲ್ಲಿ ಪ್ಲೋರಿ ಎಂಬ ವೈದ್ಯವಿಜ್ಞಾನ ನೈಸರ್ಗಿಕವಾಗಿಯೇ ಇರುವ ಏಕಾಣುನಾಶಕಗಳ ವ್ಯಾಸಂಗ ಕೈಗೊಂಡಾಗ ಅವನ ಗಮನ ಲೈಸೊಸೈಮಿನ ಮೇಲೆ ಬಿತ್ತು. ಅದನ್ನು ಶುದ್ಧವಾಗಿ ಪಡೆದು ಅದರ ಉಪಯುಕ್ತತೆಯನ್ನು ವಿಶದೀಕರಿಸಿದ್ದಾಯಿತು. ಅನಂತರ ಅವನು ಪೆನಿಸಿಲಿನ್ನಿನ ವಿಚಾರವಾಗಿ ಸಂಶೋಧನೆಗಳನ್ನು ಪ್ರಾರಂಭಿಸಿದ. ಸಹವ್ಯಾಸಂಗಿ ಚಿಯ್ನ್ ಎಂಬ ಜೀವರಸಾಯನ ವಿಜ್ಞಾನಿ ಪಿನಿಸಿಲಿನ್ನನ್ನು ಶುದ್ಧವಾಗಿ ಪಡೆಯುವ ವಿಧಾನ ಕಂಡುಹಿಡಿದ. ಏಕಾಣು ಸೋಂಕಿನಿಂದ ನರಳುತ್ತಿದ್ದ ರೋಗಿಗಳಲ್ಲಿ ಶುದ್ದಪೆನಿಸಿಲಿನ್ನನ್ನು ಚುಚ್ಚುಮದ್ದಾಗಿ ಪ್ರಯೋಗಿಸಿ ಅದು ಸುರಕ್ಷಿತ ಹಾಗೂ ಒಂದು ಅದ್ಭುತ ಏಕಾಣುನಾಶಕ ಎಂದು ತೋರಿಸಿದ್ದಾಯಿತು. ಆಗ ಎರಡನೆಯ ಮಹಾಯುದ್ಧ ನಡೆಯುತ್ತಿದ್ದ ಕಾಲ (1942). ಗಾಯಗೊಂಡ ಹಾಗೂ ರೋಗಗ್ರಸ್ತ ಸೈನಿಕರ ಚಿಕಿತ್ಸೆಗಾಗಿ ಆಗಾಧಪ್ರಮಾಣದಲ್ಲಿ ಪೆನಿಸಿಲಿನ್ನಿನ ತಯಾರಿಕೆ ಅಗತ್ಯ ಎನ್ನುವುದು ಸ್ಪಷ್ಟವಾಯಿತು. ಸ್ಥಳ, ಧನ, ಜನ, ಉದ್ಯಮ ಜ್ಞಾನ ಈ ಎಲ್ಲ ಸೌಕರ್ಯಗಳಿದ್ದ ಅಮೆರಿಕದಲ್ಲಿ ಮಾತ್ರ ಇದು ಸಾಧ್ಯ ಎಂದು ಫ್ಲೋರಿಗೆ ಗ್ರಹಿಕೆಯಾಯಿತು. ಅಮೆರಿಕಕ್ಕೆ ತೆರಳಿ ಖುದ್ಧಾಗಿ ಪ್ರಯತ್ನಿಸಿ ಕೈಗಾರಿಕಾ ಪ್ರಮಾಣದಲ್ಲಿ ಪೆನಿಸಿಲಿನ್ನನ್ನು ಪಡೆಯಲು ಸಮರ್ಥನಾದ. 1943ರಲ್ಲಿ ಫ್ಲೆಮಿಂಗನನ್ನು ರಾಯಲ್ ಕಾಲೇಜ್ ಆಫ್ ಸರ್ಜನ್ಸ್ ಹಾಗೂ ರಾಯಲ್ ಕಾಲೇಜ್ ಆಫ್ ಫಿಸಿಶಿಯನ್ಸ್ ಈ ಸಂಸ್ಥೆಗಳ ಫೆಲೊ ಆಗಿ ಆಯ್ಕೆ ಮಾಡಿ ಗೌರವಿಸಲಾಗಿತ್ತು. 1944ರಲ್ಲಿ ಬ್ರಿಟಿಷ್ ಸರ್ಕಾರ ಇವನಿಗೆ ಸರ್ ಎಂಬ ಬಿರುದು ನೀಡಿತು. ನೊಬೆಲ್ ಪಾರಿತೋಷಕ ದೊರೆತ ಮೇಲೆ ಲೋಕಾದ್ಯಂತ ಇವನಿಗೆ ಗೌರವ ಆದರ ಬರತೊಡಗಿದುವು. ಮೊದಲು ಇವನ್ನು ಸ್ವೀಕರಿಸಲು ಇವನು ಹಿಂಜರಿಯುತ್ತಿದ್ದ. ಪೆನಿಸಿಲಿನ್ ನೈಸರ್ಗಿಕವಾಗಿಯೇ ಇರುವ ವಸ್ತು, ತಾನು ಅದನ್ನು ಪ್ರಕಟಿಸಿದುದು ಮಾತ್ರ, ಅದೂ ಆಕಸ್ಮಿಕ ಸಂದರ್ಭ ಒಂದರಿಂದ ಹೊಳೆದ ವಿಚಾರಸರಣಿ ಮುಂದುವರಿಸಿ ಕೈಗೊಂಡ ವ್ಯಾಸಂಗದಿಂದ ಎಂದು ಪದೇ ಪದೇ ಹೇಳುತ್ತಿದ್ದ. ಅತಿ ಶೀಘ್ರ ಕಾಲದಲ್ಲಿ ಲೋಕವಿಖ್ಯಾತಿಗಳಿಸಿದ ಪೆನಿಸಿಲಿನ್ನಿನ ಆವಿಷ್ಕಾರವಾದ ಸ್ಥಳ ಮತ್ತು ಆವಿಷ್ಕರಿಸಿದ ವಿಜ್ಞಾನಿಗಳ ದರ್ಶನಕ್ಕಾಗಿ ಪ್ರಪಂಚದ ಹಲವು ಕಡೆಗಳಿಂದ ವಿಜ್ಞಾನಿಗಳು ಬಂದು ಸೆಂಟ್‍ಮೇರಿ ಆಸ್ಪತ್ರೆಗೆ ಭೇಟಿಕೊಟ್ಟರು. ಯಾವ ಆಡಂಬರ ಡೌಲೂ ಇಲ್ಲದೆ ಹಳೆಯ ಕಾಲದ ಪನಸಾರೆ ಅಂಗಡಿಯ ಹಿಂದಿನ ಕೋಣೆಯಂತಿದ್ದು ಪ್ರಯೋಗಾಲಯ ಎನ್ನಿಸಿಕೊಂಡ ಒಂದು ಸಣ್ಣ ಕೊಠಡಿಯಲ್ಲಿ ಮಾಡಿದ ಪ್ರಯೋಗಗಳಿಂದ ಇಂಥ ಮಹತ್ತರವಾದ ಔಷಧವಸ್ತುವಿನ ಆವಿಷ್ಕಾರವಾದದ್ದು ಎಲ್ಲರಿಗೂ ಅದರಲ್ಲೂ ಸ್ವೇಚ್ಛೆಯಾಗಿ ಹಣಸುರಿದು ಗಾಳಿ, ಬೆಳಕು, ಸ್ವಚ್ಛತೆ, ಅನುಕೂಲತೆಗಳ ಬಗ್ಗೆ ಅತ್ಯಾಧುನಿಕ ರೀತಿಯಲ್ಲಿ ಸಜ್ಜುಗೊಳಿಸಿದ ಪ್ರಯೋಗಾಲಯಗಳುಳ್ಳ ಅಮೆರಿಕದ ವಿಜ್ಞಾನಿಗಳಿಗೆ ಅತ್ಯಾಶ್ಚರ್ಯ, ಆದರೆ ಲೋಕಮನ್ನಣೆ ಸ್ವೀಕರಿಸಲು ಫ್ಲೆಮಿಂಗ್ ಪ್ರವಾಸಕೈಗೊಂಡು ಅಂಥ ಆಧುನಿಕ ಪ್ರಯೋಗಾಲಯಗಳಿಗೆ ಭೇಟಿಕೊಟ್ಟಾಗ ತನಗೆ ಅಂಥವುಗಳಲ್ಲಿ ಕೆಲಸಮಾಡುವ ಸೌಕರ್ಯವಿದ್ದಿದ್ದರೆ ಪೆನಿಸಿಲಿನ್ನಿನ ಆವಿಷ್ಕಾರವನ್ನು ಮಾಡುವುದಕ್ಕೇ ಆಗುತ್ತಿರಲಿಲ್ಲ ಎಂದು ಹೇಳಿದ. ಏಕೆಂದರೆ ಅಂಥ ಪ್ರಯೋಗಾಲಯಗಳಲ್ಲಿ ಏಕಾಣು ಕೃಷಿ ಫಲಕದಮೇಲೆ ಕಲುಷಿತವಾಗಿ ಬೂಷ್ಟು ಬೆಳೆಯುವುದಕ್ಕೆ ಅವಕಾಶವಿರುತ್ತಿರಲಿಲ್ಲ. ಜೊತೆಗೆ ಒಬ್ಬ ಮುಖ್ಯ ವಿಜ್ಞಾನಿಯ ನಿರ್ದೇಶಗಳಂತೆ ಅನೇಕ ಬಗೆಯ ಆದರೆ ಪರಸ್ಪರ ಸಂಬಂಧವಿರುವ ವ್ಯಾಸಂಗಗಳನ್ನು ಏಕಕಾಲಿಕವಾಗಿ ಬಹು ವಿಜ್ಞಾನಿಗಳು ಒಟ್ಟಿಗೆ ಕೈಗೊಳ್ಳಬಹುದಾದ ದೊಡ್ಡ ಪ್ರಯೋಗಾಲಯದಲ್ಲಿ ಕೆಲಸಮಾಡುವವನಾಗಿದ್ದರೆ, ಬೂಷ್ಟು ಬೆಳೆದು ನಿಷ್ಟ್ರಯೋಜಕವಾಯಿತು ಎನ್ನಿಸಿರಬಹುದಾದ ಏಕಾಣು ಕೃಷಿಫಲಕವನ್ನು ನಿರ್ಯೋಚನೆಯಿಂದ ಎಸೆದು ಬಿಡುತ್ತಿದ್ದ. ತಾನೊಬ್ಬನೇ ಪ್ರಯೋಗಿಯಾಗಿದ್ದು ವ್ಯಾಸಂಗ ವಿಷಯಕ್ರಮಗಳನ್ನು ಸ್ವತಂತ್ರವಾಗಿ ಏರ್ಪಡಿಸಿಕೊಳ್ಳುವಂತಿದ್ದುದರಿಂದ ಮಾತ್ರ ಪೆನಿಸಿಲಿನ್ನಿನ ಆವಿಷ್ಕಾರದಂಥ ಮೇಲು ಮಟ್ಟದ ಆವಿಷ್ಕಾರ ಸಾಧ್ಯ. ಆದದ್ದೂ ಹಾಗೆಯೇ ಎಂದು ಹೇಳುತ್ತಿದ್ದ. ಆದರೂ ಪೆನಿಸಿಲಿನ್ನಿನ ಪ್ರಪಂಚ ವ್ಯಾಪಕಕೀರ್ತಿ ಬಳಕೆಗಳಿಗೆ ಫ್ಲೋರಿ ಮತ್ತು ಸಂಗಡಿಗರು ಮಾಡಿದ ಮುಂದಿನ ವ್ಯಾಸಂಗಗಳೇ ಕಾರಣ. ಅವರು ಮಾಡಿದ ಸ್ತೋಮವ್ಯಾಸಂಗದಿಂದ (ಟೀಮ್‍ಸ್ಟಡಿ) ಮಾತ್ರ ಅದು ಸಾಧ್ಯವಾಯಿತು ಎಂದು ಫ್ಲೆಮಿಂಗ್ ಒಪ್ಪಿಕೊಳ್ಳುತಿದ್ದ ಆಲ್ಮ್‍ರಾತ್ ರೈಟನ ಕೆಳಗೆ ಕೆಲಸಕ್ಕೆ 1906ರಲ್ಲಿ ಸೇಂಟ್ ಮೇರಿ ಆಸ್ಪತ್ರೆಗೆ ಸೇರಿದ ಫ್ಲೆಮಿಂಗ್ ಮುಂದೆ ಸುಮಾರು 50 ವರ್ಷ ಪರ್ಯಂತ ಅಲ್ಲಿಯೇ ಕೆಲಸಮಾಡಿದ. 1921ರಲ್ಲಿ ಚುಚ್ಚು ಮದ್ದು ಪ್ರಯೋಗಕ್ಕೆಂದೇ ಅಲ್ಲಿ ತೆರೆಯಲಾಗಿದ್ದ ಒಂದು ಭಾಗದ ಉಪನಿರ್ದೇಶಕನಾಗಿ ನೇಮಕಗೊಂಡ, 1933ರಲ್ಲಿ ಈ ಭಾಗ ರೋಗನಿದಾನ ವಿಜ್ಞಾನದಲ್ಲಿ ಸಂಶೋಧನೆಗಳಿಗಾಗಿ ಮೀಸಲಾದ ಒಂದು ಪ್ರತ್ಯೇಕ ಸಂಸ್ಥೆ ಆಗಿ ಅದಕ್ಕೆ ರೈಟ್ ಮುಖ್ಯಸ್ಥನೂ ಫ್ಲೆಮಿಂಗ್ ಅವನು ಸಹಾಯಕನೂ ಆಗಿ ನೇಮಿಸಲ್ಪಟ್ಟರು. 1928ರಿಂದಲೇ ಫ್ಲೆಮಿಂಗ್ ಲಂಡನ್ ವಿಶ್ವವಿದ್ಯಾಲಯದಲ್ಲಿ ರೋಗನಿದಾನ ವಿಜ್ಞಾನದ ಪ್ರಾಧ್ಯಾಪಕನಾಗಿದ್ದ. 1946ರಲ್ಲಿ ರೈಟ್ ನಿವೃತ್ತನಾದ ಬಳಿಕ ಫ್ಲೆಮಿಂಗನೇ ಆ ಸಂಸ್ಥೆಯ ಮುಖ್ಯಸ್ಥನಾದ. 1948ರಲ್ಲಿ ಇದನ್ನು ರೈಟನ ಸ್ಮಾರಕ ಸಂಸ್ಥೆ ಎಂದು ನಾಮಕರಣ ಮಾಡಿದರು. ನಿವೃತ್ತಿ ಹೊಂದಿದಮೇಲೂ ಫ್ಲೆಮಿಂಗ್ ಈ ಸಂಸ್ಥೆಯ ಮುಖ್ಯಸ್ಥನಾಗಿ 1955 ಜನವರಿಯ ತನಕವೂ ಮುಂದುವರಿದು ಅನಂತರ ವಿಶ್ರಾಂತನಾದ. ಮುಂದೆ ಎರಡೇ ತಿಂಗಳಾದಮೇಲೆ ಹಠಾತ್ತಾಗಿ ಗುಂಡಿಗೆ ಧಮನಿಯಲ್ಲಿ ರಕ್ತಗರಣೆ ಕಟ್ಟಿದುದರಿಂದ ಲಂಡನ್ನಿನಲ್ಲಿ ಮರಣ ಹೊಂದಿದ. (ಎಸ್.ಆರ್.ಆರ್.)