ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬಂಜೆತನ

ವಿಕಿಸೋರ್ಸ್ದಿಂದ

ಬಂಜೆತನ ಸಂಭೋಗದ ಫಲವಾಗಿ ಸಂತಾನಪ್ರಾಪ್ತಿ ಎಂದೂ ಆಗದಿರುವ ಸ್ಥಿತಿ (ಸ್ಟರಿಲಿಟಿ, ಇನ್‍ಫರ್ಟಿಲಿಟಿ). ಬಂಜೆತನ ಗಂಡಿಗೂ ಇರಬಹುದು. ಹೆಣ್ಣಿಗೂ ಇರಬಹುದು. ಪುರುಷ ಮತ್ತು ಸ್ತ್ರೀ ಇಬ್ಬರೂ ಮಾನಸಿಕವಾಗಿ ಹಾಗೂ ದೈಹಿಕವಾಗಿ ಆರೋಗ್ಯವಾಗಿದ್ದರೆ ಮಾತ್ರ ಸಂಭೋಗದ ಫಲವಾಗಿ ಅವರಿಗೆ ಮಕ್ಕಳಾಗಲು ಸಾಧ್ಯ. ಗರ್ಭಧಾರಣೆ ಆಗಬೇಕಾದರೆ ಗಂಡಿನ ವೀರ್ಯದಲ್ಲಿ ಸಾಕಷ್ಟು ಸುಪುಷ್ಟ ವೀರ್ಯಾಣುಗಳಿರಬೇಕು. ಇವು ಶಿಶ್ನದ ಮುಖಾಂತರ ಹೆಣ್ಣಿನ ಯೋನಿಯಲ್ಲಿ ಚೆಲ್ಲಲ್ಪಟ್ಟು ಅಲ್ಲಿ ಶೇಖರವಾಗಬೇಕು. ಹೆಣ್ಣಿನ ಗರ್ಭದ್ವಾರ, ಗರ್ಭಕೋಶ, ಡಿಂಬನಳಿಕೆಗಳಲ್ಲಿ ಅಡಚಣೆಯೇನೂ ಇರಬಾರದು. ಇಷ್ಟು ಮಾತ್ರವಲ್ಲ, ಅಂಡಾಣುವೂ ಆರೋಗ್ಯಕರವಾಗಿರಬೇಕು. ಭ್ರೂಣ ಬೆಳೆಯಲು ಗರ್ಭಕೋಶದ ಒಳಪದರ ವಿಶಿಷ್ಟ ರೀತಿಯ ಮಾರ್ಪಾಡು ಹೊಂದಿ ದಪ್ಪಗಿರಬೇಕು. ಇವುಗಳಲ್ಲಿ ಯಾವುದೊಂದರ ಕೊರತೆಯಿದ್ದರೂ ಅಂಥ ಸ್ತ್ರೀ ಪುರುಷರ ಸಂಭೋಗದಿಂದ ಮಕ್ಕಳಾಗುವುದಿಲ್ಲ.

ಗಂಡಿನ ಬಂಜೆತನಕ್ಕೆ ಕಾರಣಗಳು ಹಲವಾರು. ವೃಷಣದ ಹಾಲೆಗಳಲ್ಲಿ ಉತ್ಪತ್ತಿಯಾಗುವ ವೀರ್ಯಾಣುಗಳು ಎಪಿಡಿಡಿಮಸಿನಲ್ಲಿ ಶೇಖರವಾಗಿದ್ದು ಸಂಭೋಗ ಕಾಲದಲ್ಲಿ ವಾಹಕನಾಳವನ್ನು ಸೇರುವುವು. ಅಲ್ಲಿಂದ ಇವು ವೀರ್ಯಕೋಶ ಮತ್ತು ಪ್ರಾಸ್ಟೇಟ್ ಗ್ರಂಥಿಗಳ ಸ್ರಾವದ ಜೊತೆಗೂಡಿ ವೀರ್ಯವಾಗಿ ಇದು ಮೂತ್ರನಾಳ ತಲಪುತ್ತದೆ. ಬಳಿಕ ಶಿಶ್ನದ ಮುಖಾಂತರ ಈ ಸ್ರಾವ ಹೊರಕ್ಕೆ ದಾಟುತ್ತದೆ. ಆದ್ದರಿಂದ ಮೇಲಿನ ಯಾವುದೇ ಅವಯವಗಳಲ್ಲಿ ಏನು ತೊಂದರೆಯಾಗಿ ವೀರ್ಯಾಣುಗಳ ಉತ್ಪಾದನೆಗೆ ಮತ್ತು ವಾಹಕತೆಗೆ ತೊಂದರೆ ಉಂಟಾದರೂ ಪುರುಷನಿಗೆ ಬಂಜೆತನ ಪ್ರಾಪ್ತವಾಗುತ್ತದೆ. ವೃಷಣದ ಸೋಂಕಾದರೆ ವೀರ್ಯಾಣುಗಳ ಉತ್ಪತ್ತಿ ಕುಗ್ಗುತ್ತದೆ. ಪಿಟ್ಯುಟರಿ ಮತ್ತು ತೈರಾಯಿಡ್ ಗ್ರಂಥಿಗಳ ಶೋಭೆ, ಪೋಷಕಗಳ ಕೊರತೆ, ಲೈಂಗಿಕ ಅವಯವಗಳ ಸೋಂಕು ಮುಂತಾದವು ವೀರ್ಯಾಣು ಉತ್ಪಾದನೆಯನ್ನು ತಗ್ಗಿಸಬಹುದು. ಗದ್ದಗಟ್ಟು, ಸಿಫಿಲಿಸ್, ಗಾನೊರೀಯಾ ಮತ್ತು ಕ್ಷಯರೋಗಗಳಲ್ಲಿ ವೃಷಣದ ಸೋಂಕು ಉಂಟಾಗಿ ವೀರ್ಯಾಣುಗಳು ಇಳಿಮುಖವಾಗುತ್ತವೆ. ಕೆಲವು ಆಜನ್ಮ ದೋಷಗಳಲ್ಲಿ ವೃಷಣದಿಂದ ವೀರ್ಯಾಣು ಉತ್ಪಾದನೆಯೇ ಆಗುವುದಿಲ್ಲ. ವೀರ್ಯವನ್ನು ಸೂಕ್ಷ್ಮದರ್ಶಕದ ಅಡಿಯಲ್ಲಿಟ್ಟು ಪರೀಕ್ಷಿಸಿ ವೀರ್ಯಾಣುಗಳ ಸಂಖ್ಯೆ ಹಾಗೂ ಚಲನೆಯನ್ನು ಗುರುತಿಸುವುದು ಸಾಧ್ಯ. ಗರ್ಭಧಾರಣೆ ಆಗಬೇಕಾದರೆ ಒಂದು ಘನ ಸೆಂಟಿಮೀಟರಿನಲ್ಲಿ 50-100 ದಶಲಕ್ಷ ವೀರ್ಯಾಣುಗಳಾದರೂ ಇರಬೇಕು. ವೀರ್ಯಾಣುವಿನ ಮಿಲನ ಸಾಮಥ್ರ್ಯದ ದ್ಯೋತಕವೇ ಚಲನೆ. ಒಟ್ಟು ವೀರ್ಯಾಣುಗಳಲ್ಲಿ ಚೆನ್ನಾಗಿ ಚಲಿಸುವವು 80% ಇದ್ದರೆ ಅಂಡಾಣುವಿನೊಡನೆ ವೀರ್ಯಾಣು ಮಿಲನವಾಗಿ ಗರ್ಭಧಾರಣೆಯಾಗಲು ಸಹಕಾರಿ. ಚಲನೆ ಕಡಿಮೆ ಇರುವ ಮತ್ತು ಅಪಕ್ವ ವೀರ್ಯಾಣುಗಳೂ ಅಸಹಜ ವೀರ್ಯಾಣುಗಳೂ ಇದ್ದರೆ ಹಾಗೂ ವೀರ್ಯಾಣು ಸಂಖ್ಯೆ 50 ದಶಲಕ್ಷಕ್ಕಿಂತ ಕಡಿಮೆಯಿದ್ದರೆ ಬಂಜೆತನ ಉಂಟಾಗುತ್ತದೆ. ಸೋಂಕಿನಿಂದ ಉಂಟಾದ ಉರಿಯೂತ, ಅಪಘಾತಗಳು, ವಾಹಕ ನಾಳದಲ್ಲಿ ಅಡಚಣೆ ಮಾಡಬಹುದು. ಹೀಗಾದಾಗಲೂ ವೀರ್ಯಾಣುವಿಗೆ ತಡೆ ಉಂಟಾಗುವುದರಿಂದ ಬಂಜೆತನ ಸಂಭವಿಸುತ್ತದೆ. ಒಂದು ವೇಳೆ ಗಂಡು ಆರೋಗ್ಯವಂತ ವೀರ್ಯಾಣುಗಳನ್ನು ಉತ್ಪಾದನೆ ಮಾಡಿದರೂ ಶಿಶ್ನದ ನಿಮಿರಿಕೆಯ ತೊಂದರೆಯಿದ್ದರೆ ಅವು ಹೆಣ್ಣಿನ ಯೋನಿಯನ್ನು ಸೇರಲಾರವು. ಹಾರ್ಮೋನುಗಳ ಕೊರತೆ ಹಾಗೂ ಮಿದುಳಿನ ಕಾಯಿಲೆಗಳಾದಾಗ ಶಿಶ್ನದ ನಿಮಿರುವಿಕೆಯೇ ಇರುವುದಿಲ್ಲ. ಪುಂಸತ್ವ ಕಡಿಮೆ ಇರುವವರಿಗೆ ಶಿಶ್ನ ನಿಮಿರಿದರೂ ಅದನ್ನು ಹೆಚ್ಚು ಹೊತ್ತು ಉಳಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ವಾಸ್ತವವಾಗಿ ಇದು ನಪುಂಸಕತ್ವ. ನಿಜವಾಗಿ ಈ ವ್ಯಕ್ತಿ ಬಂಜೆ (ಸ್ಪರೈಲ್) ಅಲ್ಲ.

ಗಂಡಿನಲ್ಲಿ ಬಂಜೆತನಕ್ಕೆ ಕಾರಣ ಅರಿತರೆ ಚಿಕಿತ್ಸೆಯೂ ಸುಲಭ. ಹಾರ್ಮೋನು ಹಾಗೂ ಪೋಷಕಗಳ ಕೊರತೆ ಇದ್ದರೆ ಅದನ್ನು ಸರಿಪಡಿಸಬೇಕು. ಸಿಫಿಲಿಸ್, ಗಾನೋರೀಯಾ ಮುಂತಾದ ಮೇಹರೋಗಗಳ ಚಿಹ್ನೆ ಕಂಡುಬಂದೊಡನೆ ಅದಕ್ಕೆ ಯುಕ್ತ ಚುಚ್ಚುಮದ್ದು ತೆಗೆದುಕೊಳ್ಳಬೇಕು. ವಾಹಕನಾಳದ ಅಡಚಣೆಯನ್ನು ಶಸ್ತ್ರಕ್ರಿಯೆಯಿಂದ ನಿವಾರಿಸಲು ಸಾಧ್ಯ. ನಿಮಿರಿಕೆಯ ತೊಂದರೆ ಇರುವವರು ಯೋಗ್ಯ ವ್ಯಾಯಾಮಗಳನ್ನು ಮಾಡಿ ತಮ್ಮ ದೇಹ ತ್ರಾಣವನ್ನು ವೃದ್ಧಿಪಡಿಸಿಕೊಳ್ಳಬೇಕು. ವೃಷಣ ವೀರ್ಯಾಣುಗಳನ್ನೇ ಉತ್ಪತ್ತಿ ಮಾಡದಿದ್ದರೆ ಅದಕ್ಕೆ ಯಾವ ಚಿಕಿತ್ಸೆಯೂ ಇಲ್ಲ. ಅಂಥ ದಂಪತಿ ಅನ್ಯವೀರ್ಯದಾನದ ಮೊರೆಹೊಗಬೇಕಾದೀತು.

ಹೆಣ್ಣಿನ ಬಂಜೆತನಕ್ಕೂ ಹಲವಾರು ಕಾರಣಗಳಿವೆ. ಸ್ತ್ರೀಯಲ್ಲಿ ಗರ್ಭಧಾರಣೆಯಾಗಬೇಕಾದರೆ ಅಂಡಾಣು ಆರೋಗ್ಯವಂತರಾಗಬೇಕು. ಗರ್ಭಕೋಶ ಅಥವಾ ಡಿಂಬನಳಿಕೆಗಳಲ್ಲಿ ಎಲ್ಲೂ ಅಡಚಣೆ ಇರಬಾರದು ಮತ್ತು ಭ್ರೂಣದ ನೆಲಸುವಿಕೆಗಾಗಿ ಗರ್ಭಕೋಶದ ಒಳಪದರ ಚೆನ್ನಾಗಿ ಬೆಳೆವಣಿಗೆಯಾಗಬೇಕು. ಮೇಲಿನ ಯಾವುದೊಂದರ ದೋಷವಿದ್ದರೂ ಅಂಥ ಸ್ತ್ರೀಗೆ ಬಂಜೆತನ ಉಂಟಾಗುತ್ತದೆ. ತಿಂಗಳಿಗೊಂದರಂತೆ ಅಂಡಾಣು ಪಕ್ವವಾಗಿ ಅಂಡಾಶಯದಿಂದ ಹೊರಬರುತ್ತದೆ. ಡಿಂಬನಳಿಕೆಯ ಚಾಚು ಬೆರಳುಗಳಲ್ಲಿರುವ ಲೋಮಗಳು ಅಂಡಾಣುವನ್ನು ಆಕರ್ಷಿಸಿ ನಾಳದೊಳಗೆ ಎಳೆದುಕೊಳ್ಳುತ್ತದೆ. ಯೋನಿಯ ಮುಖಾಂತರ ಗರ್ಭಕೋಶವನ್ನು ಹಾದು ಡಿಂಬನಳಿಕೆಗೆ ವೀರ್ಯಾಣು ಬಂದರೆ ಅಂಡಾಣು ವೀರ್ಯಾಣುಗಳು ಪರಸ್ಪರ ಮಿಲಾಯಿಸಿ ಒಂದಾಗುತ್ತವೆ. ಇದೇ ಯುಗ್ಮ. ಹೀಗೆ ಫಲಿತ ಡಿಂಬ ಅಥವಾ ಯುಗ್ಮ ಅನಂತರ ಗರ್ಭಕೋಶಕ್ಕೆ ಚಲಿಸಿ ಅಲ್ಲಿ ನೆಲೆಗೊಂಡು ಭ್ರೂಣವಾಗಿ ಮಗುವಾಗುತ್ತದೆ. ಹಾರ್ಮೋನಿನ ದೋಷವಿರುವ ಸ್ತ್ರೀಯರಲ್ಲಿ ಅಂಡಾಣು ಪಕ್ವವಾಗಿ ಹೊರಬರುವುದೇ ಇಲ್ಲ. ಅಂಡಾಣುವೇ ಇಲ್ಲದಿದ್ದ ಮೇಲೆ ಮಗುವಾಗುವುದೂ ಸಾಧ್ಯವಿಲ್ಲ, ಜನನೇಂದ್ರೀಯಗಳ ಸೋಂಕಿದ್ದರೆ ವೀರ್ಯಾಣು ಮುಂದೆ ಚಲಿಸಲು ಅವಕಾಶವಿರುವುದಿಲ್ಲ. ಯೋನಿಸೋಂಕಿನಲ್ಲಿ ಸಂಭೋಗವೇ ಕಷ್ಟವಾಗುತ್ತದೆ. ಗರ್ಭದ್ವಾರದ ಸೋಂಕಾದರೆ ರಂಧ್ರ ಮುಚ್ಚಿಕೊಳ್ಳುವುದು. ಅಂಜಿಕೆಯ ಸ್ವಭಾವದ ಹೆಂಗಸರಿಗೆ ಯೋನಿಸ್ನಾಯುಗಳು ವಿಪರೀತ ಸಂಕೋಚಿಸಿಕೊಳ್ಳುವುದರಿಂದ ಸಂಭೋಗ ಸಫಲವಾಗದೆ ಬಂಜೆತನ ಉಂಟಾಗುತ್ತದೆ. ಯೋನಿ ಹಾಗೂ ಗರ್ಭಕೋಶಗಳ ಆಜನ್ಮ ದೋಷಗಳಲ್ಲಿ ಯೋನಿ ಅಥವಾ ಗರ್ಭಕೋಶ ಪೂರ್ಣ ಬೆಳೆವಣಿಗೆಗೊಂಡಿರುವುದಿಲ್ಲ. ಅನೇಕ ಬಾರಿ ಯೋನಿ ಅಥವಾ ಗರ್ಭಕೋಶದ ಮಧ್ಯೆ ಸ್ನಾಯುಗೋಡೆಗಳು ಉಳಿದುಬಿಟ್ಟಿರುತ್ತವೆ. ಇವೂ ಬಂಜೆತನಕ್ಕೆ ಮೂಲ. ಗರ್ಭಕೋಶದಲ್ಲಿ ಗಡ್ಡೆಯಿದ್ದರೆ ಭ್ರೂಣ ನೆಲೆಗೊಳ್ಳಲು ಜಾಗವೇ ಇರುವುದಿಲ್ಲವಾದುದರಿಂದ ಬಂಜೆತನ ಸಹಜ. ಡಿಂಬನಳಿಕೆಯ ಸೋಂಕು ಇರುವಾಗ ನಾಳದಲ್ಲಿ ಅಡಚಣೆ ಉಂಟಾಗುತ್ತದೆ. ತತ್ವರಿಣಾಮವಾಗಿ ವೀರ್ಯಾಣು ಅಥವಾ ಅಂಡಾಣು ಚಲನೆಗೆ ಅವಕಾಶವಿಲ್ಲ, ಕ್ಷಯ, ಸಿಫಿಲಿಸ್, ಗಾನೊರೀಯಾ, ಸ್ಟ್ರೆಪ್ಟೊಕಾಕಸ್ ಮತ್ತು ಸ್ಟೆಫಲೋಕಾಕಸ್ ಕ್ರಿಮಿಗಳ ಸೋಂಕು ಇಲ್ಲಿ ಪ್ರಮುಖವಾದವು. ಬಂಜೆಯಲ್ಲಿ ಪ್ರತಿ ತಿಂಗಳೂ ಅಂಡಾಣು ಪಕ್ವವಾಗುವುದೋ ಇಲ್ಲವೋ ಎಂಬುದನ್ನು ತಿಳಿಯಲು ಉಷ್ಣತಾ ಮಾಪಕ ಪಟ್ಟಿಯೊಂದನ್ನು ಇಟ್ಟು ಪರೀಕ್ಷಿಸಬಹುದು. ಮುಟ್ಟಾದ ಮೊದಲ ಹದಿನಾಲ್ಕು ದಿವಸಗಳು ಮುಂಜಾನೆ ಎಚ್ಚರಾದ ಕೂಡಲೆ ಸ್ತ್ರೀಯ ದೇಹದ ಉಷ್ಣತೆ 97(-98(ಈ ಇರುತ್ತದೆ. ಅಂಡಾಣು ಪಕ್ವಗೊಂಡು ಹೊರಬೀಳುವ ಸಮಯದಲ್ಲಿ ದೇಹದ ಉಷ್ಣತೆ 98(-99(ಈ ವರೆಗೆ ಏರುತ್ತದೆ. ಒಂದು ವೇಳೆ ಇಡೀ ತಿಂಗಳು ದೇಹದ ಉಷ್ಣತೆಯಲ್ಲಿ ಈ ರೀತಿಯ ಏರುವಿಕೆ ಕಾಣದೆ ಹೋದರೆ ಆ ತಿಂಗಳು ಅಂಡಾಣು ಪಕ್ವವಾಗಿ ಹೊರಬಂದಿಲ್ಲ ಎಂದು ಅರ್ಥ. ಅಂಡಾಣು ಪಕ್ವವಾಗಿದೆ ಎಂದು ತಿಳಿದರೆ ಆ ಬಳಿಕ ಒಂದೆರಡು ದಿವಸಗಳಲ್ಲಿ ದಂಪತಿ ಸಂಭೋಗಿಸಿದರೆ ಮಗುವಾಗುವ ಸಾಧ್ಯತೆ ಉಂಟು.

ಡಿ ಅಂಡ್ ಸಿ ಶಸ್ತ್ರಚಿಕಿತ್ಸೆಯೂ ಅನೇಕ ಬಂಜೆಯರಿಗೆ ಸಹಾಯ ಮಾಡುತ್ತದೆ. ಗರ್ಭದ್ವಾರವನ್ನು ಹಿಗ್ಗಿಸಿ ಗರ್ಭಕೋಶವನ್ನು ಕೆರೆಯುವುದೇ ಇದರ ಉದ್ದೇಶ. ಸಾಧಾರಣವಾಗಿ ಹೆಣ್ಣು ಮುಟ್ಟಾದ ಮೂರನೆಯ ವಾರ ಈ ಶಸ್ತ್ರಚಿಕಿತ್ಸೆ ಮಾಡುತ್ತಾರೆ. ಗರ್ಭಕೋಶದ ಒಳಪದರವನ್ನು ಕೆರೆದು ಸೂಕ್ಷ್ಮದರ್ಶಕದ ಕೆಳಗೆ ಪರೀಕ್ಷಿಸಿದಾಗ ಪ್ರೊಜೆಸ್ಟಿರಾನ್ ಹಾರ್ಮೋನ್ ಸ್ರಾವವಾಗಿದೆಯೇ ಇಲ್ಲವೇ ಎಂಬುದು ತಿಳಿಯುತ್ತದೆ. ಪ್ರೊಜೆಸ್ಟಿರಾನ್ ಸ್ರಾವ ಸಾಲದಿದ್ದರೆ ಗರ್ಭಕೋಶ ಗರ್ಭ ತಾಳಲಾರದು. ಯೋನಿ, ಗರ್ಭಕೋಶ ಡಿಂಬನಳಿಕೆಗಳ ಸೋಂಕನ್ನು ಪ್ರತಿಜೈವಿಕಗಳ ನೆರವಿನಿಂದ ಪೂರ್ಣ ಹತೋಟಿಗೆ ತಂದುಕೊಳ್ಳಬಹುದು. ಸೋಂಕಿನಿಂದ ಡಿಂಬನಳಿಕೆ ಮುಚ್ಚಿಕೊಂಡಿದ್ದರೆ ಶಸ್ತ್ರಕ್ರಿಯೆಯಿಂದ ಆ ಅಡಚಣೆಯನ್ನು ನಿವಾರಿಸಬೇಕು. ಡಿಂಬನಳಿಕೆ ಮುಚ್ಚಿಕೊಂಡಿದೆಯೇ ಇಲ್ಲವೇ ಎಂಬುದನ್ನು ಅರಿಯಲು ಎರಡು ವಿಧಾನಗಳಿವೆ: ಎಕ್ಸ್‍ಕಿರಣ ಪರೀಕ್ಷಣೆ ಮತ್ತು ನಳಿಕೆ ಪರೀಕ್ಷಣೆ (ಟ್ಯೂಬ್ ಟೆಸ್ಟಿಂಗ್). ಎಕ್ಸ್‍ಕಿರಣಕ್ಕೆ ಪಾರದರ್ಶಕವಲ್ಲದ ಡಯಡೋನ್ ಎಂಬ ದ್ರವವನ್ನು ಗರ್ಭದ್ವಾರದ ಮುಖಾಂತರ ಗರ್ಭಕೋಶದೊಳಗೆ ತೂರಿಸಿ ಎಕ್ಸ್‍ಕಿರಣ ಚಿತ್ರ ತೆಗೆಯಬೇಕು. ಇದರಿಂದ ಗರ್ಭಕೋಶ ಹಾಗೂ ಡಿಂಬನಳಿಕೆಗಳ ಚಿತ್ರ ಕಾಣಸಿಗುತ್ತದೆ. ಡಿಂಬನಳಿಕೆಯಲ್ಲಿ ಅಡಚಣೆಯಿದ್ದರೆ ದ್ರವ ಮುಂದೆ ಹೋಗದೆ ಅಲ್ಲೇ ನಿಲ್ಲುತ್ತದೆ. ನಳಿಕೆ ಪರೀಕ್ಷಣೆಯಲ್ಲಿ ಗರ್ಭದ್ವಾರದ ಮುಖಾಂತರ ವಾಯು ತೂರಿಸಿ ಅದು ಎರಡೂ ಡಿಂಬನಳಿಕೆಗಳ ಮೂಲಕ ಹೊರಗೆ ಬರುವುದೋ ಇಲ್ಲವೋ ಎಂಬುದನ್ನು ಗಮನಿಸುತ್ತಾರೆ. ಎಷ್ಟೋ ಸಲ ಈ ಪರೀಕ್ಷೆ ಮಾಡುವಾಗಿನ ವಾಯು ಒತ್ತಡದಿಂದಾಗಿಯೇ ಮುಚ್ಚಿಕೊಂಡಿರುವ ನಳಿಕೆ ತೆರೆದುಕೊಳ್ಳುವುದುಂಟು.

ಗಂಡಿನಲ್ಲಿ ಶಿಶ್ನ ನಿಮಿರಿಕೆಯ ತೊಂದರೆಯಿದ್ದರೆ ಕೃತಕ ವೀರ್ಯಾದಾನ ಅಗತ್ಯವಾಗುತ್ತದೆ. ಗಂಡಿನ ಶಿಶ್ನ ನಿಮಿರದೆ ಹೋದಾಗ, ಪುಂಸತ್ತ್ವ ಕಡಿಮೆ ಇದ್ದಾಗ ಅಥವಾ ಬೇಗ ವೀರ್ಯಾಪತನವಾದರೆ ಆತ ವೀರ್ಯಾಣುಗಳನ್ನು ಹೆಣ್ಣಿನ ಯೋನಿಯಲ್ಲಿಡಲು ಅಸಮರ್ಥನಾಗುತ್ತಾನೆ. ಆಗ ಆತನ ವೀರ್ಯವನ್ನು ಸಂಗ್ರಹಿಸಿ ಸಿರಿಂಜಿನ ಮೂಲಕ ಆತನ ಪತ್ನಿಯ ಯೋನಿಯೊಳಗೆ ಹಾಕುವಿಕೆ ಕೃತಕ ವೀರ್ಯದಾನ. ಹೆಂಡತಿಯ ಅಂಡಾಣು ಹೊರಬರುವ ವೇಳೆಯನ್ನು ತಿಳಿದುಕೊಂಡು ಇಂಥ ವೀರ್ಯದಾನ ಮಾಡಬೇಕು. ಒಂದು ವೇಳೆ ಗಂಡನ ವೀರ್ಯದಲ್ಲಿ ವೀರ್ಯಾಣುಗಳು ಇಲ್ಲದಿದ್ದರೆ, ಪರಪುರುಷನ ವೀರ್ಯ ಸಂಗ್ರಹಿಸಿ ಅದನ್ನು ಹೆಣ್ಣಿನ ಯೋನಿಯೊಳಗೆ ಹಾಕುವುದು ಅಗತ್ಯ. ಆದರೆ ಇಂಥ ಸನ್ನಿವೇಶಗಳು ಹಲವಾರು ಮಾನವೀಯ ಹಾಗೂ ನೈತಿಕ ಸಮಸ್ಯೆಗಳಿಗೆ ಕಾರಣವಾಗುತ್ತವೆ. (ಎ.ಎನ್.)