ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬಬ್ಬೂರುರಂಗ

ವಿಕಿಸೋರ್ಸ್ದಿಂದ

ಬಬ್ಬೂರುರಂಗ ಸು. 1750. ಅಂಬಿಕಾ ವಿಜಯ ಮತ್ತು ಪರಶುರಾಮ ರಾಮಾಯಣಗಳ ಕರ್ತೃ. ಸ್ಥಳ ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನ ಸಮೀಪದಲ್ಲಿರುವ ಬಬ್ಬೂರು. ಕುಲದೇವತೆ ರಂಗನಾಥ. ತಂದೆ ಹಿರಿಯೂರಿನ ಕರಣಿಕ ರಂಗ. ತಾಯಿ ರುಕ್ಮಿಣಿ. ಜಾತಿಯಿಂದ ಸ್ಮಾರ್ತ ಬ್ರಾಹ್ಮಣ.

ತನ್ನ ಗ್ರಂಥದಲ್ಲಿ ಕುಮಾರವ್ಯಾಸ, ಕುಮಾರ ವಾಲ್ಮೀಕಿ, ಲಕ್ಷ್ಮೀಶ ಇವರನ್ನು ನೆನೆಯುತ್ತ ತನ್ನನ್ನೂ ಅವರೊಂದಿಗೆ ಹೋಲಿಸಿಕೊಳ್ಳುತ್ತಾನಾದರೂ ಈತನ ಕೃತಿಗಳು ಅವರವಷ್ಟು ಸತ್ತ್ವಯುತವೂ ಪುಷ್ಟವೂ ಆಗಿಲ್ಲ. ಅಂಬಿಕಾವಿಜಯ ಭಾಮಿನೀ ಷಟ್ಪದಿಯಲ್ಲಿದೆ. ಆದಿಶಕ್ತಿಯಾದ ದೇವಿ ರಕ್ತಬೀಜಾಸುರನನ್ನು ಸಂಹರಿಸಿದ ಕಥೆಯನ್ನೂ ಮಾರ್ಕಂಡೇಯ ಚರಿತವನ್ನೂ ಇಲ್ಲಿ ವಿವರಿಸಿದೆ. ವಾರ್ಧಕ ಷಟ್ಪದಿಯ ಪರಶುರಾಮ ರಾಮಾಯಣದಲ್ಲಿ ಪರಶುರಾಮನ ವೃತ್ತಾಂತವಿದೆ. (ಡಿ.ಕೆ.ಎಸ್.)