ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬಯಕೆಗಳು
ಬಯಕೆಗಳು - ಮಾನವನ ಆರ್ಥಿಕ ಜೀವನದ ಪ್ರೇರಕಶಕ್ತಿ (ವಾಂಟ್ಸ್). ಅಭೀಷ್ಟ. ಅಭಿಲಾಷೆ, ಅಪೇಕ್ಷೆ, ಇಷ್ಟ ಮುಂತಾದವು ಪರ್ಯಾಯ ಪದಗಳು, ತನ್ನ ಅಗತ್ಯಗಳನ್ನು ಮಾನವ ಬಯಕೆಗಳ ಮೂಲಕ ವ್ಯಕ್ತಪಡಿಸುತ್ತಾನೆ. ಇವು ಸಹಜವಾದವು. ಆತನ ವಿವಿಧ ಚಟುವಟಿಕೆಗಳ ಮೂಲಕ ಅವನ ಬಯಕೆಗಳ ಪೂರೈಕೆಯೇ ಆಗಿದೆ. ಪ್ರಪಂಚದಲ್ಲಿ ಎಲ್ಲ ಬಗೆಯ ಉತ್ಪಾದನೆ ನಡೆಯುವುದು ಬಯಕೆಗಳ ತೃಪ್ತಿಗಾಗಿ, ಬಯಕೆ ಮತ್ತು ಅದರ ಪೂರೈಕೆ ಇವೆರಡೇ ಆರ್ಥಿಕ ಜೀವನದ ಮೂಲ ಪ್ರೇರಕಗಳೆನ್ನಬಹುದು.
ಬಯಕೆಯ ಲಕ್ಷಣಗಳ ಪೈಕಿ ಮೊದಲನೆಯದು ಅದರ ಅಪರಿಮಿತತೆ. ಅದಕ್ಕೆ ಕೊನೆ ಎಂಬುದೇ ಇಲ್ಲ. ಒಂದು ಬಯಕೆ ತೃಪ್ತಿಯಾದ ತತ್‍ಕ್ಷಣ ಮತ್ತೊಂದು ಹುಟ್ಟುಕೊಳ್ಳುತ್ತದೆ. ಆದ್ದರಿಂದ ಮಾನವನನ್ನು ಬಯಕೆಗಳ ಮುದ್ದೆ ಎನ್ನಬಹುದು. ಎರಡನೆಯದು, ಬಯಕೆಗಳು ಪರಸ್ಪರ ಪೂರಕವಾದವು. ಉದಾಹರಣೆಗೆ ಗಾಡಿಕೊಳ್ಳುವಾತ ಎತ್ತನ್ನೂ ಕೊಳ್ಳುತ್ತಾನೆ, ಡಾಟ್‍ಪೆನ್ ಕೊಳ್ಳುವಾತ ರಿಫಿಲ್ ಸಹ ಕೊಳ್ಳುತ್ತಾನೆ. ಸ್ಕೂಟರಿನಲ್ಲಿ ಪಯಣಿಸಬೇಕೆನ್ನುವವರು ಅದಕ್ಕೆ ಬೇಕಾದ ಪೆಟ್ರೋಲನ್ನೂ ಖರೀದಿಸಬೇಕು. ಗೆಳೆಯನಿಗೆ ಪತ್ರ ಬರೆಯಬೇಕೆಂಬ ಬಯಕೆ ಪೂರೈಕೆಗೆ ಕಾಗದ, ಪೆನ್ನು, ಪೆನ್ನಿನೊಳಗೆ ಶಾಯಿ ಇಷ್ಟೆಲ್ಲ ಬೇಕು. ಈ ಬಗೆಯ ಪರಸ್ಪರ ಪೂರಕ ಬಯಕೆಗಳೇ ಇಂದು ಹೆಚ್ಚಿ ಎಲ್ಲ ಬಗೆಯ ಆರ್ಥಿಕ ಚಟುವಟಿಕೆಗಳಿಗೂ ಸಂಬಂಧಗಳಿಗೂ ಕಾರಣ. ಮೂರನೆಯದು, ಬಯಕೆಗಳು ಸ್ಪರ್ಧಾತ್ಮಕ. ಅಪರಿಮಿತ ಬಯಕೆಗಳನ್ನು ತೃಪ್ತಿ ಪಡಿಸಲು ಇರುವ ಸಂಪನ್ಮೂಲಗಳು ಮತ್ತು ವೇಳೆ ಬಹಳ ಮಿತವಾದವು. ಹೀಗಾಗಿ ನಾವು ಬಯಸುವುದನ್ನೆಲ್ಲ ಏಕಕಾಲದಲ್ಲಿ ಪೂರೈಸಿಕೊಳ್ಳಲು ಸಾಧ್ಯವಾಗದು. ಉದಾಹರಣೆಗೆ, ಉಣ್ಣುವ ಮತ್ತು ನಿದ್ರಿಸುವ ಬಯಕೆಗಳು ಏಕಕಾಲಕ್ಕೆ ಉಂಟಾದರೂ ಅವುಗಳ ಪೈಕಿ ಮೊದಲಿಗೆ ಊಟವನ್ನೂ ತರುವಾಯ ನಿದ್ರೆಯನ್ನೂ ಪೂರೈಸಿಕೊಳ್ಳಬಹುದು. ಏಕಕಾಲದಲ್ಲಿ ಎರಡೂ ಬಯಕೆಗಳ ಪೂರೈಕೆ ಸಾಧ್ಯವಿಲ್ಲ. ಹಾಗೆಯೇ ಬರೆಯುವ ಮತ್ತು ಓದುವ ಬಯಕೆಗಳ ಪೂರೈಕೆ ಕೂಡ. ನಾಲ್ಕನೆಯದು, ಬಯಕೆಗಳನ್ನು ಇತರ ಮಾರ್ಗಗಳಿಂದ ತೃಪ್ತಿಪಡಿಸಿಕೊಳ್ಳಬಹುದು. ಉದಾಹರಣೆಗೆ ಬಾಯಾರಿಕೆ ಆದಾಗ ನೀರಿನ ಬಯಕೆ ಸಹಜ. ಆದರೆ ಕಾಫಿ, ಟೀ, ಹಾಲು. ಅಥವಾ ಎಳನೀರು ಯಾವುದನ್ನಾದರೂ ಕುಡಿಯುವುದಾದರೆ ದಾಹವನ್ನು ಹಿಂಗಿಸಬಹುದು. ಅಂದರೆ ಬಯಕೆಗಳಲ್ಲಿ ಬದಲಾವಣೆ ಸಾಧ್ಯ. ಕೊನೆಯದಾಗಿ, ಬಯಕೆಗಳು, ಪುನರಾವರ್ತಿಸುತ್ತಿರುತ್ತವೆ. ಉದಾಹರಣೆಗೆ ಹಸಿವು. ಹಸಿವಾದಾಗ ಉಣ್ಣುವ ಬಯಕೆ ಸಹಜ. ಉಂಡಾಗ ಹಸಿವಿನ ಬಯಕೆ ಪೂರೈಸಿ ತೃಪ್ತಿಯಾದರೆ ಸ್ವಲ್ಪ ಕಾಲಾನಂತರ ಆ ಬಯಕೆ ಪುನರಾವರ್ತಿಸುತ್ತದೆ. ಹಾಗೆಯೇ ಕೆಲವು ಬಯಕೆಗಳು ರೂಢಿಗೆ ಅಂಟಿ ಚಟವೇ ಆಗಬಹುದು. ಉದಾಹರಣೆಗೆ ಕಾಫಿ, ಟೀ, ಬೀಡಿ ಸೇವನೆ, ಮದ್ಯಪಾನ ಇತ್ಯಾದಿ. ಬಯಕೆಗಳು ವ್ಯಕ್ತಿಯಿಂದ ವ್ಯಕ್ತಿಗೆ, ಕಾಲದಿಂದ ಕಾಲಕ್ಕೆ ಹಾಗೂ ಪ್ರದೇಶದಿಂದ ಪ್ರದೇಶಕ್ಕೆ ಬದಲಾಗುತ್ತವೆ. ಉದಾಹರಣೆಗೆ ಒಬ್ಬ ವ್ಯಕ್ತಿಗೆ ಬೇಕಾಗಿರುವ ಸಿಗರೇಟು ಕಾಫಿ ಕೆಲವರಿಗೆ ಆಗದು, ಬೇಕಿಲ್ಲ. ಚಳಿಗಾಲದಲ್ಲಿ ಬಯಸುವ ಉಡುಪು, ಆಹಾರಗಳನ್ನು ಬೇಸಿಗೆ ಕಾಲದಲ್ಲಿ ಬಯಸುವುದಿಲ್ಲ. ಹಾಗೇ ಉಷ್ಣವಲಯದಲ್ಲಿ ಜೀವಿಸುವ ಮಂದಿಗೂ ಬಯಕೆಗಳು ಏಕರೀತಿಯಾಗಿರುವುದಿಲ್ಲ.
ಬಯಕೆಗಳನ್ನು ಅವುಗಳ ತೀವ್ರತೆಯ ಅನುಸಾರ ಬದುಕಿಗೆ ಅಗತ್ಯವಾದವು. ಉದಾಹರಣೆಗೆ ನೀರು, ಆಹಾರ ಹಸಿವಿನ ಬಯಕೆ ಪೂರೈಸುವಂಥವು ಹಾಗೂ ಜೀವನಾಧಾರವಾದವು. ಇವು ಅಗತ್ಯ ಬಯಕೆಗಳು. ಸಂಸ್ಕøತಿ ಸಂಬಂಧ ಬಯಕೆಗಳು ಅಗತ್ಯ ಬಯಕೆಗಳನ್ನು ಹಿಂಬಾಲಿಸುತ್ತವೆ. ಉದಾಹರಣೆಗೆ ಮನೋರಂಜನೆಯ ಬಯಕೆ ಪೂರೈಸುವ ರೇಡಿಯೋ, ದೂರದರ್ಶನ, ಸಿನಿಮಾ ಇತ್ಯಾದಿ. ಅಗತ್ಯ ಬಯಕೆಗಳನ್ನು ಪೂರೈಸಿಕೊಳ್ಳುವುದಕ್ಕಾಗಿ ಅಗತ್ಯ ಸರಕುಗಳನ್ನೂ ಸಂಸ್ಕøತಿ ಸಂಬಂಧ ಬಯಕೆಗಳ ತೃಪ್ತಿಗಾಗಿ ಭೋಗಸಾಮಗ್ರಿಗಳನ್ನು ಉತ್ಪಾದಿಸಲಾಗುತ್ತದೆ. ಹೀಗೆ ಎಲ್ಲ ಚಟುವಟಿಕೆಗಳೂ ಬಯಕೆಗಳನ್ನು ತೃಪ್ತಿಪಡಿಸಲು ನಿರಂತರ ಉತ್ಪಾದನೆಯಲ್ಲಿ ಕೇಂದ್ರೀಕೃತವಾಗಿವೆ. ಆದ್ದರಿಂದ ಬಯಕೆಗಳ ತೃಪ್ತಿಗಾಗಿ ಪ್ರಯತ್ನವೆಂದರೆ ಉತ್ಪಾದನೆ ಮತ್ತು ಅನುಭೋಗ ಎನ್ನಬಹುದು. ವಿಜ್ಞಾನದ ಮುನ್ನಡೆ, ಹೊಸ ಹೊಸ ಆವಿಷ್ಕಾರಗಳು ಎಲ್ಲವೂ ಮಾನವ ಬಯಕೆಗಳ ವಿಭಿನ್ನ ರೂಪಗಳು, ಒಟ್ಟಿನಲ್ಲಿ ಬಯಕೆಯಿಲ್ಲದ ಬಯಲಿಲ್ಲವೆನ್ನುವಂತೆ ಇಡೀ ಮಾನವ ಕುಲಕ್ಕೆ ಮತ್ತು ಆರ್ಥಿಕ ಚಟುವಟಿಕೆಗೆ ಪ್ರೇರಕಶಕ್ತಿಯಾಗಿ ಬಯಕೆ ನಿಂತಿದೆ. (ಸಿ.ಕೆ.ಆರ್.; ಬಿ.ಎಸ್.ಎಸ್.ಜಿ.)