ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬರೋಡ

ವಿಕಿಸೋರ್ಸ್ದಿಂದ

ಬರೋಡ ಗುಜರಾತ್ ರಾಜ್ಯದ ಒಂದು ಜಿಲ್ಲೆ ; ಆ ಜಿಲ್ಲೆಯ ಮುಖ್ಯ ಪಟ್ಟಣ. ವಡೋದರ ಎಂಬುದು ಇದರ ಈಗಿನ ಅಧಿಕೃತ ನಾಮ. ಬರೋಡ ಜಿಲ್ಲೆ ನರ್ಮದಾ ಮತ್ತು ಮಾಹಿ ನದಿಗಳ ನಡುವೆ ಹಬ್ಬಿದೆ. ಜಿಲ್ಲೆಯಲ್ಲಿರುವ ತಾಲ್ಲೂಕುಗಳು ವಡೋದರ (ಬರೋಡ), ಕರ್ಜನ್, ಪಾದ್ರ, ಸಾವ್ಲಿ, ವಾಘೋಡಿಯ, ದಾಭೋಯಿ, ಸಂಖೇಡ, ಜಬುಗಾಮ್, ಛೋಟಾ ಉದಯಪುರ, ನಸ್‍ವಾಡಿ, ತಿಲಕವಾಡಾ ಮತ್ತು ಸಿನೋರ್. ಜಿಲ್ಲೆಯ ವಿಸ್ತೀರ್ಣ 7,788 ಚ.ಕಿಮೀ. ಜನಸಂಖ್ಯೆ 2,558,092 (1981). ಇದು ಸ್ಥೂಲವಾಗಿ ಹಿಂದಿನ ಬರೋಡ ಸಂಸ್ಥಾನದ ಬರೋಡ ಜಿಲ್ಲೆಯ ಪ್ರದೇಶವನ್ನೊಳಗೊಂಡಿದೆ. ಬರೋಡ ಸಂಸ್ಥಾನದಲ್ಲಿ ಈ ಪ್ರದೇಶವಲ್ಲದೆ ದಕ್ಷಿಣದಲ್ಲಿ ತಪತಿ ನದಿ ಕಣಿವೆ ಮತ್ತು ಅದರ ಆಚೆಗಿನ ಪ್ರದೇಶವೂ ಕಾಠಿಯಾವಾಡ್ ಮತ್ತು ಉತ್ತರ ಗುಜರಾತ್ ಭಾಗಗಳೂ ಸೇರಿದ್ದುವು. ಸ್ವಾತಂತ್ರ್ಯಾನಂತರದ ಅವಧಿಯಲ್ಲಿ ಈ ಜಿಲ್ಲೆಯಲ್ಲಿ ಪತ್ತೆಯಾದ ತೈಲನಿಕ್ಷೇಪಗಳಿಂದಾಗಿ ಈ ಜಿಲ್ಲೆಗೆ ಹೊಸ ಮಹತ್ತ್ವ ಪ್ರಾಪ್ತವಾಗಿದೆ. ಬರೋಡ ನಗರದಲ್ಲಿ ತೈಲ ಮತ್ತು ನೈಸರ್ಗಿಕ ಅನಿಲ ಕಾರ್ಯಗಾರವಿದೆ. ಅಲ್ಲದೆ ತೈಲ ಶುದ್ಧೀಕರಣ, ರಸಗೊಬ್ಬರ ಮತ್ತು ಸಿಮೆಂಟ್ ಕಾರ್ಖಾನೆಗಳು ಸ್ಥಾಪಿತವಾಗಿವೆ. ಈ ಜಿಲ್ಲೆಯಲ್ಲಿ ಫ್ಲೂರೈಡ್ ಧಾತುವಿನ ನಿಕ್ಷೇಪಗಳಿವೆ.

ಜಿಲ್ಲೆಯಲ್ಲಿ ವರ್ಷಕ್ಕೆ ಸರಾಸರಿ 762 ಮಿಮೀ. ಮಳೆಯಾಗುತ್ತದೆ. ಫಲವತ್ತಾದ ಭೂಮಿ ಇರುವ ಈ ಜಿಲ್ಲೆಯ ಮುಖ್ಯ ಬೆಳೆಗಳು ಗೋದಿ, ಜೋಳ, ಬಾಜ್ರ, ದ್ವಿದಳ ಧಾನ್ಯಗಳು, ಎಣ್ಣೆಕಾಳು, ಸಜ್ಜೆ, ಬತ್ತ, ಹತ್ತಿ, ಕಬ್ಬು, ತಂಬಾಕು ಮತ್ತು ಹಣ್ಣು, ಬೇಸಾಯ, ಶಿಕ್ಷಣ, ಆರೋಗ್ಯ ಮತ್ತು ಕೈಗಾರಿಕಾರಂಗಗಳಲ್ಲಿ ಸಾಧಿಸಿದ ಪ್ರಗತಿಯಿಂದಾಗಿ ಈ ಜಿಲ್ಲೆ ಗುಜರಾತಿನ ಇತರ ಜಿಲ್ಲೆಗಳಿಗಿಂತ ಮುಂದುವರಿದಿದೆ.

ಬರೋಡ (ವಡೋದರ) ನಗರ ಈ ಜಿಲ್ಲೆಯ ಮುಖ್ಯ ಪಟ್ಟಣ. ವಿಶ್ವಾಮಿತ್ರಿ ನದಿಯ ಎರಡೂ ದಂಡೆಗಳ ಮೇಲೆ ಹಬ್ಬಿರುವ ಈ ನಗರ ಮುಂಬೈಯಿಂದ ಉತ್ತರಕ್ಕೆ ರೈಲಿನಲ್ಲಿ 390 ಕಿಮೀ. ಮತ್ತು ಅಹಮದಾಬಾದಿನಿಂದ ಆಗ್ನೇಯಕ್ಕೆ 105 ಕಿಮೀ ದೂರದಲ್ಲಿದೆ. ಇದು 25.17 ಚಕಿಮೀ ವಿಸ್ತಾರವಾಗಿದೆ. ಭಾರತದ ಮಹತ್ತ್ವದ ನಗರಗಳಲ್ಲೊಂದೆಂದು ಪ್ರಖ್ಯಾತವಾದ ಈ ನಗರ ಆಧುನಿಕವಾದ್ದು. ಇದರ ಜನಸಂಖ್ಯೆ 734,473 (1981). ಇದು ವಿಶಾಲವಾದ ರಸ್ತೆಗಳಿಂದಲೂ ಸುಂದರವಾದ ಉದ್ಯಾನಗಳಿಂದಲೂ ಭವ್ಯವಾದ ಕಟ್ಟಡಗಳಿಂದಲೂ ಕೂಡಿದೆ. ಇಲ್ಲಿರುವ ಐತಿಹಾಸಿಕ ಕಟ್ಟಡಗಳ ಪೈಕಿ ಮುಖ್ಯವಾದ್ದು ಹಜಿರಾ ಎಂಬುದು. ಇದು ಮೊಗಲರ ಕಾಲದ್ದು (16ನೆಯ ಶತಮಾನ). ಹಳೆಯ ನಗರಭಾಗದ ಮಧ್ಯದಲ್ಲಿರುವ ಮಾಂಡ್ವಿದ್ವಾರ 1736ರಲ್ಲಿ ನಿರ್ಮಿತವಾಯಿತು. ಮೊಗಲರ ಮೇಲೆ ಮರಾಠರು ಗಳಿಸಿದ ವಿಜಯದ ಸ್ಮಾರಕವಾಗಿ ಇದನ್ನು ದಾಮಾಜಿ ಗಾಯಕವಾಡ್ ಕಟ್ಟಿಸಿದ. ಭಾದರ್ ಅರಮನೆ ಮುಸ್ಲಿಂ ಆಳ್ವಿಕೆಯ ಕಾಲದಲ್ಲಿ ನಿರ್ಮಿತವಾಯಿತು. ಇದರ ಅಮೃತಶಿಲೆಯ ಕಮಾನು ಗವಾಕ್ಷ ಅತ್ಯಂತ ಸುಂದರವಾಗಿದೆ.

ಆಧುನಿಕ ಬರೋಡವನ್ನು ನಿರ್ಮಿಸಿದವರು ಗಾಯಕವಾಡ ವಂಶದ ದೊರೆಗಳು. 1856-70ರಲ್ಲಿ ರಾಜ್ಯವಾಳಿದ ಖಂಡೇರಾಯನಿಗಾಗಿ ಮಕರ್‍ಪುರ ಅರಮನೆಯ ನಿರ್ಮಾಣವಾಯಿತು. ಮಲ್ಹಾರ ರಾಯನಿಗಾಗಿ (ಆ. 1870-75) ನಿರ್ಮಿತವಾದ ನಜರ್‍ಬಾಗ್ ಅರಮನೆ ಇನ್ನೊಂದು ಪ್ರಮುಖ ಕಟ್ಟಡ. ಮೂರನೆಯ ಸಯಾಜಿ ರಾವ್‍ಗಾಗಿ 1890ರಲ್ಲಿ ಲಕ್ಷ್ಮೀವಿಲಾಸ ಅರಮನೆಯನ್ನು ಕಟ್ಟಲಾಯಿತು. ಗುಜರಾತಿನ ಮುಸ್ಲಿಂ ಆಡಳಿತಗಾರನಾಗಿದ್ದ ಜಫಾರ್‍ಖಾನ್ ಸುಲೇಮಾನಿಯಿಂದ 1405ರಲ್ಲಿ ನಿರ್ಮಿತವಾದ ನವಲಖಿ ತಾಲ್ ಅಥವಾ ಮೆಟ್ಟಲು ಕೊಳ ಈ ಅರಮನೆಯ ಒಳಗೆ ಸೇರಿದೆ. ಬರೋಡ ನಗರಕ್ಕೆ ಆಧುನಿಕ ಸ್ವರೂಪ ಬಂದದ್ದು 3ನೆಯ ಸಯಾಜಿ ರಾವ್ ಆಳ್ವಿಕೆಯ ಕಾಲದಲ್ಲಿ (1875-1939). ಇವರು 1918ರಲ್ಲಿ ಕಟ್ಟಿಸಿದ ಪ್ರತಾಪವಿಲಾಸ ಅರಮನೆಯೀಗ ರೈಲ್ವೆ ಸಿಬ್ಬಂದಿ ಕಾಲೇಜ್ ಆಗಿದೆ. ಆಗಿನ ಇತರ ನಿರ್ಮಾಣಗಳ ಪೈಕಿ ಬರೋಡ ಕಾಲೇಜ್ (1885), ವಿಶ್ವವಿದ್ಯಾಲಯದ ತಂತ್ರವಿದ್ಯೆ ಮತ್ತು ಎಂಜಿನಿಯರಿಂಗ್ ವಿಭಾಗವಿರುವ ಕಲಾಭವನ (1922) ಕೀರ್ತಿಮಂದಿರ, ನ್ಯಾಯಮಂದಿರ (1895), ಖಂಡೇರಾವ್ ಮಾರುಕಟ್ಟೆ (1907), ಸೂರಸಾಗರ್, ಸಯಾಜಿ ಆಸ್ಪತ್ರೆ ಮುಖ್ಯವಾದವು. ಬರೋಡ ನಗರದಲ್ಲಿ ವಸ್ತುಸಂಗ್ರಹಾಲಯ ಮತ್ತು ಚಿತ್ರಪ್ರದರ್ಶನಾಲಯವೂ ಪ್ರಾಣಿಸಂಗ್ರಹಾಲಯವೂ ಇವೆ. ಮಹಾರಾಜ ಸಯಾಜಿ ರಾವ್ ವಿಶ್ವವಿದ್ಯಾಲಯ 1949ರಲ್ಲಿ ಸ್ಥಾಪಿತವಾಯಿತು. ಮುಂಬಯಿಯ ಶ್ರೀಮತಿ ನಾಥಿಬಾಯಿ ದಾಮೋದರ್ ಥ್ಯಾಕರ್‍ಸೇ ಮಹಿಳಾ ವಿಶ್ವವಿದ್ಯಾಲಯದ ಮನ್ನಣೆ ಪಡೆದ ಕಾಲೇಜೊಂದು ಇಲ್ಲಿದೆ.

ಬರೋಡದಿಂದ ಮುಂಬಯಿ ಅಹಮದಾಬಾದ್ ಮತ್ತು ದೆಹಲಿಗೆ ರೈಲ್ವೆ ಸಂಪರ್ಕವಿದೆ. ಜಿಲ್ಲೆಯ ಹಲವು ಸ್ಥಳಗಳನ್ನು ಇದರೊಂದಿಗೆ ಕೂಡಿಸುವ ನ್ಯಾರೊಗೇಜ್ ರೈಲುಮಾರ್ಗಗಳೂ ಇಲ್ಲಿ ಸಂಧಿಸುತ್ತವೆ. ಇಲ್ಲೊಂದು ವಿಮಾನ ನಿಲ್ದಾಣವುಂಟು. ಬರೋಡದ ಮುಖ್ಯ ಕೈಗಾರಿಕೆಗಳು ರಸಾಯನ, ಹತ್ತಿ ಮತ್ತು ಉಣ್ಣೆ ಜವಳಿ, ಲೋಹ ತಯಾರಿಕೆ, ಹರಳೆಣ್ಣೆ ತಯಾರಿಕೆ.

ಬರೋಡದ ಬಗ್ಗೆ ನಮಗೆ ದೊರಕಿರುವ ಅತ್ಯಂತ ಪ್ರಾಚೀನ ಉಲ್ಲೇಖವೆಮದರೆ 812ರದು ಇದಕ್ಕೆ ವಡಪತ್ರಕ ಎಂಬ ಹೆಸರಿತ್ತು. ಇದು ಆಗ ಉಚ್ಛ್ರಾಯ ಸ್ಥಿತಿಯಲ್ಲಿದ್ದ ಅಂಕೊಟ್ಟಕ ಎಂಬ ಪಟ್ಟಣಕ್ಕೆ ಸೇರಿದ ಒಂದು ಹಳ್ಳಿಯಾಗಿತ್ತು. 10ನೆಯ ಶತಮಾನದ ವೇಳೆಗೆ ಇದು ಅಂಕೊಟ್ಟಕವನ್ನೇ ಮಸುಳಿಸಿ ಬೆಳೆಯಿತು. ಇದನ್ನು ರಜಪೂತ ದೊರೆ ಚಂದನ ಎಂಬುವನು ವಶಪಡಿಸಿಕೊಂಡಿದ್ದರಿಂದ ಇದಕ್ಕೆ ಚಂದನಾವತಿ ಎಂದೂ ಹೆಸರಿತ್ತು. ವಾರವತಿ, ವಟಪತ್ರಕ ಎಂಬವು ಇದರ ಇನ್ನೆರಡು ಹೆಸರುಗಳು. ವಟಪತ್ರಕದಿಂದ ಬರೋಡ ಎಂಬ ಹೆಸರು ಬಂತೆಂದು ಹೇಳಲಾಗಿದೆ.

1297ರ ವರೆಗೆ ಬರೋಡ ಹಿಂದೂ ರಾಜರ ವಶದಲ್ಲಿತ್ತು. ಅನಂತರ 15ನೆಯ ಶತಮಾನದ ಆರಂಭದವರೆಗೆ ಇದು ದೆಹಲಿಯ ಸುಲ್ತಾನರ ಆಳ್ವಿಕೆಗೆ ಒಳಪಟ್ಟಿತ್ತು. ಅನಂತರ 16ನೆಯ ಶತಮಾನದ ಮೂರನೆಯ ಪಾದದ ವರೆಗೆ ಇದನ್ನು ಸ್ವತಂತ್ರ ಸುಲ್ತಾನರು ಆಳಿದರು. 1572ರ ಸುಮಾರಿನಿಂದ 1734ರ ವರೆಗೆ ಇದು ಮೊಗಲ್ ಚಕ್ರಾಧಿಪತ್ಯಕ್ಕೆ ಸೇರಿತ್ತು. ಅನಂತರ, 1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಲಭಿಸುವವರೆಗೆ ಇದು ಮರಾಠಾ ವಂಶದವರ ಆಳ್ವಿಕೆಯಲ್ಲಿತ್ತು. 1734ರಲ್ಲಿ ಮೊಗಲರಿಂದ ಗುಜರಾತನ್ನು ವಶಪಡಿಸಿಕೊಂಡ ಗಾಯಕವಾಡ ಮನೆತನದ ಅರಸರಿಗೆ ಬರೋಡ ರಾಜಧಾನಿಯಾಗಿತ್ತು. ಗುಜರಾತು ಬ್ರಿಟಿಷರ ವಶವಾಯಿತು. ಬರೋಡದಲ್ಲಿ ಗಾಯಕವಾಡ ಮನೆತನದ ಆಳ್ವಿಕೆ ಮುಂದುವರಿಯಿತು. ಬರೋಡ ಬ್ರಿಟಿಷ್ ಆಶ್ರಿತ ಸಂಸ್ಥಾನವಾಯಿತು.

ಶತ್ರುಗಳ ಆಕ್ರಮಣವಾದಾಗಲೆಲ್ಲ ಬರೋಡ ನಗರ ಅದರ ಪರಿಣಾಮವನ್ನು ಅನುಭವಿಸಿದೆ. 1451ರಲ್ಲಿ ಮಾಳ್ವದ ಸುಲ್ತಾನ 1ನೆಯ ಖಿಲ್ಜಿ ಮಹಮೂದ್ ಇದನ್ನು ಲೂಟಿ ಮಾಡಿದ. 1459-1511ರಲ್ಲಿ ಗುಜರಾತಿನ ಸುಲ್ತಾನನಾಗಿದ್ದ ಮಹಮೂದ್ ಬೇಗಾರ ಈಗಿನ ನಗರದ ಹೃದಯಭಾಗವನ್ನು ನಿರ್ಮಿಸಿದ. ಇದರ ನಾಲ್ಕೂ ಕಡೆ ನಾಲ್ಕು ಮಹಾದ್ವಾರಗಳನ್ನು ಕಟ್ಟಿಸಿದ. 1734ರಲ್ಲಿ ಮರಾಠರು ಇದನ್ನು ಸೂರೆ ಮಾಡಿದರು. ಪಿಲಾಜಿ ಗಾಯಕವಾಡ ಇದನ್ನು ವಶಪಡಿಸಿಕೊಂಡ. 1768ರಲ್ಲಿ ಇದು ಗಾಯಕವಾಡ ಮನೆತನದ ರಾಜಧಾನಿಯಾಯಿತು. 3ನೆಯ ಸಯಾಜಿ ರಾವ್ ಆಳ್ವಿಕೆಯ ಕಾಲದಲ್ಲಿ ನಗರಕ್ಕೆ ಆಧುನಿಕ ರೂಪ ಪ್ರಾಪ್ತವಾಯಿತು. ಅನೇಕ ಭವ್ಯ ಭವನಗಳೂ ಉದ್ಯಾನವೇ ಮುಂತಾದವೂ ಇಲ್ಲಿ ನಿರ್ಮಿತವಾದುವು. ಬರೋಡ ಜಿಲ್ಲೆಯ ಇತರ ಪ್ರಮುಖ ಸ್ಥಳಗಳ ಪೈಕಿ ಒಂದು ದಭೋಯಿ. ಇದು ಬರೋಡಕ್ಕೆ ಆಗ್ನೇಯದಲ್ಲಿ 27 ಕಿಮೀ. ದೂರದಲ್ಲಿದೆ. ಬಹುಶಃ 13ನೆಯ ಶತಮಾನದ ಒಂದು ವಿಶಾಲವಾದ ಕೋಟೆ ಇಲ್ಲಿದೆ. ಇದರ ನಾಲ್ಕು ಮಹಾದ್ವಾರಗಳೂ ಸುಂದರವಾಗಿವೆ; ಸುಸ್ಥಿತಿಯಲ್ಲಿ ಉಳಿದು ಬಂದಿವೆ. ಇಲ್ಲಿ ಮೂರು ಸುಂದರ ದೇವಾಲಯಗಳಿವೆ. (ಬಿ.ಎ.ಎಸ್.)