ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬಾಂಬೆ ಗೆಜೆಟ್

ವಿಕಿಸೋರ್ಸ್ದಿಂದ

ಬಾಂಬೆ ಗೆಜೆಟ್ - 1791 ಜೂನಿನಲ್ಲಿ ಈ ಪತ್ರಿಕೆಯ ಪ್ರಾರಂಭ. ಬ್ರಿಟಿಷ್ ಆಡಳಿತಕ್ಕೆ ವಿಧೇಯವಾಗಿರುವುದಾಗಿ ಇದರ ಸಂಪಾದಕನಿಂದ ಸರ್ಕಾರ ಬರೆಸಿಕೊಂಡಿತ್ತು. ಆದರೆ ಅನತಿ ಕಾಲದಲ್ಲೇ ಪತ್ರಿಕೆ ಅಧಿಕಾರಿಗಳ ಅವಕೃಪೆಗೆ ಗುರಿಯಾಗಬೇಕಾಗಿ ಬಂತು. 1791 ಸೆಪ್ಟೆಂಬರಿನಲ್ಲಿ ಪೊಲೀಸ್ ಕಮಿಷನರ್ ಅಂಡರ್‍ಸನ್ ವಿರುದ್ಧ ಮಾನಹಾನಿಕರ ಲೇಖನ ಪ್ರಕಟವಾದ ಆಪಾದನೆ ಮಾಡಿ ಪತ್ರಿಕೆ ತನ್ನ ಪ್ರಕಟಣೆಯ ಕರಡೆಲ್ಲವನ್ನೂ ಮುಂಬಯಿ ಸರ್ಕಾರದ ಕಾರ್ಯದರ್ಶಿಯ ಪರಿಶೀಲನೆಗೆ ಒಪ್ಪಿಸಬೇಕೆಂದು ಆಜ್ಞೆ ಮಾಡಲಾಯಿತು. 1792ರಲ್ಲಿ ಬಾಂಬೆ ಹೆರಾಲ್ಡ್ ಈ ಪತ್ರಿಕೆಯಲ್ಲಿ ವಿಲೀನಕೊಂಡಿತು. ಮುಂದೆ ನಷ್ಟದ ಕಾರಣ ಪತ್ರಿಕೆ ಸರ್ಕಾರದ ಆರ್ಥಿಕ ಸಹಾಯ ಬೇಡಿ ಸರ್ಕಾರದ ಮುಖವಾಣಿ ಆಯಿತು. ಸರ್ಕಾರೀ ಸುದ್ದಿ, ಪ್ರಕಟಣೆಗಳು ಮತ್ತು ಜಾಹಿರಾತುಗಳು ಹೆಚ್ಚು ಸ್ಥಳವನ್ನು ಆಕ್ರಮಿಸಿಕೊಂಡವು.

1824ರ ಜುಲೈ ತಿಂಗಳಲ್ಲಿ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರನ್ನು ಈ ಪತ್ರಿಕೆ ಟೀಕಿಸಿದ್ದಕ್ಕಾಗಿ ಸಂಪಾದಕ ಸಿ.ಜೆ. ಫೇರ್‍ಗೆ 20.000 ರೂಪಾಯಿಗಳ ಭದ್ರತಾ ಠೇವಣಿ ಮತ್ತು 10,000 ರೂಪಾಯಿಗಳ ಎರಡು ಮುಚ್ಚಳಿಕೆಗಳನ್ನು ಕೊಡಬೇಕೆಂದು ಸರ್ಕಾರ ಕೇಳಿತು. ಅವನ್ನು ನೀಡಿದ ಸಂಪಾದಕರನ್ನು ಭಾರತದಿಂದ ಗಡೀಪಾರು ಮಾಡಲಾಯಿತು.

ಮುಂಬಯಿಯ ಗವರ್ನಿಂಗ್ ಪರಿಷತ್ತಿನ ಸದಸ್ಯ ಫ್ರಾನ್ಸಿಸ್ ವಾರ್ಡನ್ ಬಾಂಬೆ ಗೆಜೆಟ್ ಮತ್ತು ಬಾಂಬೆ ಕೋರಿಯರ್ ಪತ್ತಿಕೆಗಳ ಮಾಲೀಕ. ತನ್ನ ಅಧಿಕೃತ ಹುದ್ದೆಯನ್ನು ತನ್ನ ಮಾಲೀಕತ್ವದ ಪತ್ರಿಕೆಗಳ ಅನುಕೂಲಕ್ಕಾಗಿ ಬಳಸಿಕೊಂಡನೆಂಬ ಆಪಾದನೆ ಅವನ ಮೇಲಿತ್ತು. ಆ ಸುದ್ದಿಯನ್ನು ಸರ್ವೋಚ್ಚನ್ಯಾಯಾಲಯದ ಕೆಲವು ನ್ಯಾಯಾಧೀಶರು ಲಂಡನ್ನಿನಲ್ಲಿದ್ದ ಬಕಿಂಗ್‍ಹ್ಯಾಮಿನ ಓರಿಯಂಟಲ್ ಹೆರಾಲ್ಡ್ ಪತ್ರಿಕೆಗೆ ನೀಡಿದ್ದಾರೆಂದು ವಾರ್ಡನ್ ಆಪಾದಿಸಿದ. ಅವನ ಅಧಿಕಾರಸ್ಥಾನದ ಫಲವಾಗಿ ಯಾವುದೇ ಕಾನೂನು ಕ್ರಮದ ವಿರುದ್ಧ ರಕ್ಷಣೆ ಇದ್ದುದರಿಂದ ವಾರ್ಡನ್ ವಿರುದ್ಧ ಕ್ರಮಕೈಗೊಳ್ಳಲು ನ್ಯಾಯಾಧೀಶರಿಗೆ ಸಾಧ್ಯವಾಗಲಿಲ್ಲ. ಮುಖ್ಯ ನ್ಯಾಯಾಧೀಶರಾಗಿದ್ದ ಎಡ್ವರ್ಡ್ ವೆಸ್ಟ್ ಆಗಿನ ನಿಯಮಗಳಂತೆ ಪರಿಷತ್ತಿನ ಸದಸ್ಯನೊಬ್ಬ ಪತ್ರಿಕಾಮಾಲೀಕನಾಗಲು ಸಾಧ್ಯವಿದೆ ಎಂದರು. ಈ ಘಟನೆಯಿಂದ ಅಸಹನೆಗೊಂಡವರೆಲ್ಲ ನಿರ್ದೇಶಕರ ಮಂಡಳಿಗೆ ಅಹವಾಲು ಸಲ್ಲಿಸಿದರು. ಮಂಡಳಿ ಕಂಪನಿಯ ಸೇವೆಯಲ್ಲಿದ್ದ ನಾಗರಿಕ. ನೌಕಾದಳದ ಹಾಗೂ ಮಿಲಿಟರಿಯ ಅಧಿಕಾರಿಗಳು, ಸರ್ಜನ್ನರು ಮತ್ತಿತರರು ಯಾವುದೇ ಪತ್ರಿಕೆಯ ಅಥವಾ ನಿಯತಕಾಲಿಕದೊಂದಿಗೆ ಸಂಪರ್ಕ ಇರಿಸಿಕೊಳ್ಳಬಾರದೆಂದು ಆದೇಶಿಸಿತು. ಸಾಹಿತ್ಯ ಮತ್ತು ವಿಜ್ಞಾನಕ್ಕೆ ಸಂಬಂಧಪಟ್ಟ ಪತ್ರಿಕೆಗಳಿಗೆ ಈ ನಿಯಮದಿಂದ ವಿನಾಯಿತಿ ನೀಡಲಾಯಿತು. ಕಂಪನಿಯ ನೌಕರರು ಯಾವುದೇ ಪತ್ರಿಕೆಯ ಅಥವಾ ನಿಯತಕಾಲಿಕದ ಪೂರ್ಣ ಇಲ್ಲವೇ ಭಾಗಶಃ ಮಾಲೀಕನಾಗಿರುವುದನ್ನು ನಿಷೇಧಿಸಲಾಯಿತು. ಈ ಆಜ್ಞೆ ತಲುಪಿದ ಆರು ತಿಂಗಳಿನಲ್ಲಿ ಪತ್ರಿಕೋದ್ಯಮದ ಜೊತೆ ತಮ್ಮ ಸಂಬಂಧ ಕಡಿದುಕೊಳ್ಳದ ನೌಕರರನ್ನು ಉದ್ಯೋಗದಿಂದ ತೆಗೆದು ಹಾಕುವುದಾಗಿ ಬೆದರಿಸಲಾಯಿತು. ಮದರಾಸು, ಬಂಗಾಳ ಮತ್ತು ಮುಂಬಯಿ ಪ್ರಾಂತಗಳ ಆಡಳಿತಗಾರರಿಗೆ ಈ ಆಜ್ಞೆ ಅನ್ವಯವಾಗುವ ಅಧಿಕಾರಿಗಳ ಪಟ್ಟಿಕಳುಹಿಸುವಂತೆ ಆದೇಶಿಸಲಾಯಿತು.

ಬಾಂಬೆ ಗೆಜೆಟ್ ಪಾರ್ಸಿ ಸಮುದಾಯದ ನೇತಾರ ಮಾಣಿಕಜೀ ಕಸೇಟಾಜೀ ಷ್ರಾಫ್ 1835ರಲ್ಲಿ ರಾಯಲ್ ಏಷಿಯಾಟಿಕ್ ಸೊಸೈಟಿಯ ಅನಿವಾಸಿ ಸದಸ್ಯರಾಗಿ ಆಯ್ಕೆ ಆದುದನ್ನು ಕಟುವಾಗಿ ಟೀಕಿಸಿತು. ಇದು ಪಾರ್ಸಿ ಸಮುದಾಯಕ್ಕೆ ಅವಮಾನ ಎಂದು ಬಗೆದ ಪಾರ್ಸೀ ಓದುಗರು ಪತ್ರಿಕೆಯನ್ನು ಓದುವುದನ್ನೇ ನಿಲ್ಲಿಸಿದರು. ಮಾಣಿಕಜೀ ಪತ್ರಿಕೆಯ ವಿರುದ್ಧ ಮಾನಹಾನಿ ಮೊಕದ್ದಮೆ ಹೂಡಿದ್ದರು. ಮತ್ತು 1838ರಲ್ಲಿ ಪತ್ರಿಕೆ ಮಾನಹಾನಿ ಮೊಕದ್ದಮೆಯಲ್ಲಿ ಸಿಲುಕಿತು. ಭಾರತೀಯ ನೌಕಾದಳದ ಜಾನ್ ಮಾಲ್ಕಮ್‍ನ ಹೆಸರಿಗೆ ಕಳಂಕ ತಂದದಕ್ಕಾಗಿ ಗೆಜೆಟ್ ಸಂಪಾದಕನಿಗೆ ಜೈಲುವಾಸ ಮತ್ತು ದಂಡ ಎರಡನ್ನೂ ವಿಧಿಸಲಾಯಿತು. ಇಬ್ಬರು ಪಾರ್ಸಿಗಳು ಕ್ರೈಸ್ತಮತಕ್ಕೆ ಮತಾಂತರ ಹೊಂದಿದುದನ್ನು ಬೆಂಬಲಿಸಿದ ಪತ್ರಿಕೆ ಮತ್ತೊಮ್ಮೆ ಪಾರ್ಸಿಗಳ ಆಗ್ರಹಕ್ಕೆ ತುತ್ತಾಯಿತು. ಸಾಲದೆಂಬಂತೆ 1840ರಲ್ಲಿ ಮಾಣಿಕಜೀ ಕರ್ಸೆಟ್‍ಜೀ ಷ್ರಾಫ್ ಅವರು ರಾಯಲ್ ಏಷಿಯಾಟಿಕ್ ಸೊಸೈಟಿಯ ಮುಂಬಯಿ ಶಾಖೆಗೆ ಆಯ್ಕೆಯಾದುದನ್ನು ನಿಂದಿಸಿತು. ಇದರಿಂದ ಅದರ ಭಾರತ ವಿರೋಧೀ ಧೋರಣೆ ಸ್ಪಷ್ಟಗೊಂಡಿತು.

1837ರ ಸ್ವಾತಂತ್ರ್ಯ ಸಂಗ್ರಾಮದಿಂದ ಭೀತಗೊಂಡ ಬ್ರಿಟಿಷ್ ಸರ್ಕಾರ ಕಠಿಣವಾದ ಪತ್ರಿಕಾ ಶಾಸನವನ್ನು ಜಾರಿಗೆ ತಂದಾಗ ಪತ್ರಿಕೆಯ ಆಗಿನ ಸಂಪಾದಕ ಚಾನ್ ಕ್ಯಾನನ್ ಆ ಶಾಸನ ವಿರೋಧಿಸಿ ಬ್ರಿಟಿಷ್ ಸರ್ಕಾರಕ್ಕೆ ಪತ್ರ ಬರೆದ. ಕಾನೂನು ಈಗಾಗಲೇ ಜಾರಿಗೆ ಬಂದದ್ದರಿಂದ ಇನ್ನೇನನ್ನೂ ಮಾಡಲು ಸಾಧ್ಯವಿಲ್ಲ ಎಂದು ಸರ್ಕಾರ ಉತ್ತರಿಸಿತು.

ಉದಾರವಾದೀ ಪತ್ರಿಕೆ ಬಾಂಬೆ ಟೈಮ್ಸ್‍ನೊಡನೆ ಗೆಜೆಟ್ ಆಗಾಗ್ಗೆ ಕದನದಲ್ಲಿ ತೊಡಗುತ್ತಿತ್ತು. ಬಾಂಬೆ ಟೈಮ್ಸ್ ಪತ್ರಿಕೆಯ ಸಂಪಾದಕ ರಾಬರ್ಟ್ ನೈಟ್ ಗೆಜೆಟ್ ಪತ್ರಿಕೆಯ ಕಟು ಟೀಕೆಗೆ ಒಳಗಾದ. ಗೆಜೆಟ್‍ನ ಸಂಪಾದಕನಾಗಿ 1869ರಿಂದ 1880ರ ತನಕ ಜಿ.ಎಮ್. ಮೆಕ್‍ಲೀನ್ ಕಾರ್ಯ ನಿರ್ವಹಿಸಿದ. ಸರ್ಕಾರ ವಲಯದಲ್ಲಿ ಅತ್ಯಂತ ಪ್ರಭಾವಶಾಲೀ ವ್ಯಕ್ತಿಯಾಗಿದ್ದು ಈತನಿಗೆ ಭಾರತೀಯರನ್ನು ಕಂಡರೆ ಒಳ್ಳೆಯ ಮನೋಭಾವ ಇರಲಿಲ್ಲ. ಮೆಕ್‍ಲೀನ್ 1880ರಲ್ಲಿ ಸಂಪಾದಕ ಹುದ್ದೆ ತ್ಯಜಿಸಿ ಬ್ರಿಟಿಷ್ ಸಂಸತ್ತಿನ ಸದಸ್ಯನಾದ. ಗೆಜೆಟ್ 1906ರಲ್ಲಿ ವ್ಯಕ್ತಿ ಮಾಲೀಕತ್ವದಿಂದ ಕಂಪನಿಯೊಂದರ ಮಾಲೀಕತ್ವಕ್ಕೆ ಒಳಗಾಯಿತು.

ಅನಂತರವೂ ಸರ್ಕಾರಿ ಪತ್ರಿಕೆಯಾಗಿಯೇ ಉಳಿದ ಬಾಂಬೆ ಗೆಜೆಟ್ ಫಿರೋಜ್ ಷಾ ಮೆಹ್ತಾ ಅವರನ್ನು ಕಟುವಾಗಿ ಟೀಕಿಸಿತು. ಅವರ ರಾಷ್ಟ್ರೀಯವಾದಿ ಧೋರಣೆಗಳನ್ನು ಖಂಡಿಸಿತು. ಇದರಿಂದ ಖತಿಗೊಂಡ ಮೆಹ್ತಾ ಗೆಜೆಟ್ ಪತ್ರಿಕೆಯನ್ನು ಪ್ರತಿರೋಧಿಸಲೆಂದೇ ಬಾಂಬೆ ಕ್ರಾನಿಕಲ್ ಪತ್ರಿಕೆಯನ್ನು 1913ರಲ್ಲಿ ಬೆಂಜಮಿನ್ ಗೈ ಹಾರ್ನಿಮನ್‍ರ ಸಂಪಾದಕತ್ವದಲ್ಲಿ ಪ್ರಾರಂಭಿಸಿದರು. ರಾಷ್ಟ್ರೀಯ ಅಂದೋಲನ ಕಾವೇರಿದಂತೆ ಬ್ರಿಟಿಷರ ಮುಖವಾಣಿಯಾಗಿದ್ದ ಬಾಂಬೆ ಗೆಜೆಟ್ ಪ್ರಕಟಣೆ ನಿಲ್ಲಿಸಿತು. (ಕೆ.ವಿ.ಎನ್.)