ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬಾಗೆ

ವಿಕಿಸೋರ್ಸ್ದಿಂದ

ಬಾಗೆ - ಫ್ಯಾಬೇಸೀ (ಲೆಗ್ಯುಮಿನೇಸೀ) ಕುಟುಂಬದ ಮೈಮೋಸೀ ಉಪಕುಟುಂಬಕ್ಕೆ ಸೇರಿದ ಮರ. ಅಲ್ಬೀಜಿಯ ಲೆಬಕ್ ಇದರ ವೈಜ್ಞಾನಿಕ ಹೆಸರು. ಭಾರತವೇ ಇದರ ತವರು ಎಂದು ಭಾವಿಸಲಾಗಿದೆ. ಶಿರೀಷ ಇದರ ಸಂಸ್ಕøತ ಹೆಸರು. ಇಂಗ್ಲಿಷ್‍ನಲ್ಲಿ ಇದನ್ನು ಈಸ್ಟ್ ಇಂಡಿಯನ್ ವಾಲ್ನಟ್ ಅಥವಾ ಫ್ರೈ ಟ್ರೀ ಎನ್ನುತ್ತಾರೆ. ದಕ್ಷಿಣ ಭಾರತದ ಮೈದಾನ ಪ್ರದೇಶಗಳಲ್ಲಿ ಬೆಳೆಯುತ್ತದೆ. ಉಪ ಹಿಮಾಲಯ ಭಾಗಗಳಲ್ಲಿ 5,000 ಅಡಿ ಎತ್ತರದವರೆಗೆ ಕಾಣಸಿಗುತ್ತದೆ. ಈಜಿಪ್ಟ್‍ನಲ್ಲಿ ಹಾಗೂ ಸಮಶೀತೋಷ್ಣ ವಲಯದ ದೇಶಗಳಲ್ಲೂ ಉಂಟು. ಬೌದ್ಧರಿಗೆ ಪವಿತ್ರವೆನಿಸುವ ಮರಗಳಲ್ಲಿ ಇದೂ ಒಂದು.

ಬಾಗೆ ಮರ ಎತ್ತರಕ್ಕೆ ಬೆಳೆಯುತ್ತದೆ. ಇದರ ತೊಗಟೆ ಬೂದು ಅಥವಾ ಕಂದು ಬಣ್ಣದ್ದು, ಎಲೆಗಳು ಸಂಯುಕ್ತ ರೀತಿಯವು. ಒತ್ತೊತ್ತಾಗಿರುವ ಚೆಂಡಿನಾಕಾರದ ಪುಷ್ಟಗುಚ್ಛಗಳಿವೆ. ಹೂಗಳು ಮಾಸಲು ಬಿಳಿಬಣ್ಣದವು; ಹೆಚ್ಚು ಆಕರ್ಷಕವಲ್ಲ. ಹೂಗಳಲ್ಲಿ ಉದ್ದವಾದ ಕೇಸರಗಳಿವೆ. ಹೂ ಬಿಡುವ ಸಮಯ ಏಪ್ರಿಲ್ - ಮೇ. ಹೂಗಳು ಪರಿಮಳಯುಕ್ತ. ಸಾಧಾರಣ ಸೆಪ್ಟೆಂಬರ್ — ಅಕ್ಟೋಬರ್ ವೇಳೆಗೆ ಮರದಲ್ಲಿ ಫಲಗಳು ಮಾಗುವುವು. ಆಗ ಮರ ಎಲೆಗಳನ್ನು ಉದುರಿಸಿರುತ್ತದೆ. ಫಲಗಳು ಪಾಡ್ ರೀತಿಯವು. ಶುಷ್ಕ ಫಲಗಳು ಗಾಳಿಯಲ್ಲಿ ಅಲ್ಲಾಡಿದಾಗ ಮಾಂಸವನ್ನು ಹುರಿವ ಶಬ್ದವನ್ನು ಹೋಲುವ ಸದ್ದು ಉಂಟಾಗುವುದರಿಂದ ಈ ಮರಕ್ಕೆ ಫ್ರೈಟ್ರೀ ಎಂಬ ಹೆಸರು ಬಂದಿದೆ.

ಬಾಗೆ ಬೇಗನೆ ಬೆಳೆಯುವ ಮರವಾದುದರಿಂದ ರಸ್ತೆಯ ಬದಿಗಳಲ್ಲಿ ಸಾಲುಮರವಾಗಿ ಬೆಳೆಸಲು ಬಲು ಯೋಗ್ಯ. ಇದನ್ನು ಗೆಲ್ಲುಗಳಿಂದ ಬೆಳೆಸಬಹುದು. ಕಾಫಿ, ಟೀ ಪ್ಲಾಂಟೇಷನ್‍ಗಳಲ್ಲಿ ನೆರಳು ಮರವಾಗಿ ಸಹ ಇದನ್ನು ಬೆಳಸುವುದಿದೆ. ಬಾಗೆ ಮರದಿಂದ ಸಾಧಾರಣ ದರ್ಜೆಯ ಚೌಬೀನೆ ದೊರೆಯುತ್ತದೆ. ಮನೆಗಳ ಒಳ ಅಲಂಕಾರಗಳಲ್ಲಿ, ಚಕ್ರ, ಕಬ್ಬುಗಾಣ, ಎಣ್ಣೆ ಮಿಲ್ಲು, ರೈಲ್ವೆ ಕ್ಯಾರಿಯೇಜ್, ಕೃಷಿ ಮತ್ತು ಉದ್ಯಮ ಹತ್ಯಾರುಗಳಲ್ಲಿ ಕಿಟಕಿ ಹಾಗೂ ಬಾಗಿಲುವಾಡಗಳಲ್ಲಿ ಇದು ಉಪಯುಕ್ತ. ಮರದಿಂದ ಉದುರುವ ತರಗೆಲೆಗಳು ಒಳ್ಳೆಯ ಗೊಬ್ಬರ. ಮರದಿಂದ ಒಂದು ತರದ ಅಂಟು ದೊರೆಯುತ್ತದೆ. ತೊಗಟೆ ಪುಡಿಯನ್ನು ಸಾಬೂನು ಬದಲು ಬಳಸುವುದುಂಟು. ತೊಗಟೆಯಿಂದ ಟ್ಯಾನಿನ್ ವಸ್ತು ಮತ್ತು ಔಷಧಿ ದೊರೆಯುತ್ತವೆ. ಈ ಟ್ಯಾನಿನ್ನಿನಿಂದ ಮೀನಿನ ಬಲೆಗಳನ್ನು ಟ್ಯಾನ್ ಮಾಡುವುದಿದೆ. ಎಲೆ ಗೆಲ್ಲುಗಳು ಜಾನುವಾರುಗಳಿಗೆ ಒಳ್ಳೆಯ ಮೇವೂ ಹೌದು. (ಪಿ.ಕೆ.ಆರ್.ಜಿ)