ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬಾರ್ಥೋಲಮ್ಯೂ, ಸಂತನ ದಿನ
ಬಾರ್ಥೋಲಮ್ಯೂ, ಸಂತನ ದಿನ ಫ್ರಾನ್ಸಿನಲ್ಲಿ ಪ್ರತಿ ವರ್ಷ ಆಗಸ್ಟ್ ತಿಂಗಳ 24 ರಂದು ಈ ಸಂತನ ದಿನಾಚರಣೆ ನಡೆಯುತ್ತದೆ, 1562 ರಿಂದ ಮೊದಲಾಗಿ 32 ವರ್ಷ ನಡೆದ ಫ್ರಾನ್ಸ್ ದೇಶದ ಯಾದವೀ ಕಲಹದಲ್ಲಿ 1572 ಆಗಸ್ಟ್ 24 ಪರ್ವದಿನ. ಫ್ರಾನ್ಸ್ ದೇಶದ ಆಗಿನ ಅರಸ ಒಂಬತ್ತನೆಯ ಚಾರಲ್ಸ್ ತನ್ನ ತಾಯಿ ರಾಜಮಾತೆ ಕ್ಯಾತರೀನ್ ಡಿ ಮೆಡಿಚಿಯ ದುರ್ಬೋಧನೆಗೆ ಒಳಗಾಗಿ ರೋಮನ್ ಕ್ಯಾತೊಲಿಕ್‍ರಂತೆಯೇ ಅರಸನನ್ನು ತಮ್ಮ ಪ್ರಭಾವಕ್ಕೆ ಒಳಪಡಿಸಿಕೊಳ್ಳಬೇಕೆಂದು ಯತ್ನಿಸುತ್ತಿದ್ದ ಹ್ಯೂಚೊನಾಟರನ್ನು ದ್ವೇಷಿಗಳೆಂದೂ ರಾಜ ದ್ರೋಹಿಗಳೆಂದೂ ಎಣಿಸಿದ. ಬೆಳಗಾಗುವುದರೊಳಗಾಗಿ ಪ್ಯಾರಿಸಿನಲ್ಲಿ ಇತರ ನಗರಗಳಲ್ಲಿ ಹ್ಯೂಚೊನಾಟರನ್ನು ಒಬ್ಬರನ್ನು ಬಿಡದೆ ಕೊಲೆಗೈಯಲು ಆಜ್ಞೆ ಮಾಡಿದ. ಆ ದುರ್ದಿನ ಬಾರ್ಥೋಲಮ್ಯೂ ದಿನವಾಗಿತ್ತು. ಒಂದು ವಾರ ನಡೆದ ಈ ಕಗ್ಗೊಲೆಯಿಂದಾಗಿ ಕೊಲೆಗಡುಕರೇ ಅಸಹ್ಯಪಟ್ಟು ನಿಧಾನವಾಗಿ ಕೊಲೆ ನಿಲ್ಲಿಸಿದರು. ದೇಶಾದ್ಯಂತ ಕೊಲೆಗೀಡಾದವರ ಸಂಖ್ಯೆ 70,000 ದಿಂದ ಲಕ್ಷದವರೆಗೆ ಎನ್ನಲಾಗಿದೆ. ಬಾರ್ಥೋಲಮ್ಯೂ ದಿನದಿಂದ ಆರಂಭವಾದ ಹತ್ಯಾಕಾಂಡದ ಜಗಳ ರೋಮನ್ ಕ್ಯಾತೊಲಿಕ್ ಬೆಂಬಲಿಗರಿಗೂ ಪ್ರಾಟೆಸ್ಟಂಟರಾದ ಹ್ಯೂಜೊನಾಟರ ಬೆಂಬಲಿಗರಿಗೂ 32 ವರ್ಷ ಕಾಲ ಅವ್ಯಾಹತವಾಗಿ ನಡೆದೇ ಇತ್ತು.