ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬಾಲಕೃಷ್ಣ ಟಿ ಎನ್

ವಿಕಿಸೋರ್ಸ್ದಿಂದ

ಬಾಲಕೃಷ್ಣ ಟಿ ಎನ್ ( -1995). ಸುಮಾರು ಆರು ದಶಕಗಳ ಕಾಲ ಕನ್ನಡ ರಂಗಭೂಮಿ ಮತ್ತು ಚಲನಚಿತ್ರ ಕ್ಷೇತ್ರಗಳಲ್ಲಿ ಗಣನೀಯ ಸೇವೆಸಲ್ಲಿಸಿರುವ ಟಿ.ಎನ್.ಬಾಲಕೃಷ್ಣ, ಹಾಸ್ಯ ಪಾತ್ರಗಳ ಅಭಿನಯಕ್ಕೆ ಹೆಸರಾದವರು. ಅವರ ಅಭಿನಯವನ್ನು ಕೇವಲ ಹಾಸ್ಯ ಪಾತ್ರಗಳ ಚೌಕಟ್ಟಿಗೆ ಸೀಮಿತಗೊಳಿಸುವುದು ಸರಿಯಲ್ಲ. ಅವರ ಪಾತ್ರಾಭಿನಯದ ವ್ಯಾಪ್ತಿ ವಿಸ್ತಾರವಾದುದು. ಕಲಾಭೀಷ್ಮ; ಅವರ ಬಣ್ಣದ ಬದುಕ ವೈವಿಧ್ಯಪೂರ್ಣ. ಯಾವುದೇ ನಾಟಕೀಯ ಘಟನೆಗಳಿಂದ ಕೂಡಿದ ಚಿತ್ರವೂ ಅವರ ನಿಜ ಜೀವನದ ಮುಂದೆ ಪೇಲವ.

ಬಾಲಕೃಷ್ಣ ಹುಟ್ಟಿದ್ದು ಅರಸೀಕೆರೆಯಲ್ಲಿ, ತಂದೆ ತಾಯಿಗಳು ಯಾರು? ಗೊತ್ತಿಲ್ಲ. ಹುಟ್ಟಿದ ದಿನ? ಗೊತ್ತಿಲ್ಲ. ಹೆಸರಿಗೆ ಟಿ.ಎನ್.ಹೇಗೆ ಅಂಟಿತು? ಗೊತ್ತಿಲ್ಲ; ಅದರ ಅರ್ಥವೂ ಗೊತ್ತಿಲ್ಲ. ಎರಡು ವರ್ಷದ ಮಗುವನ್ನು ಎಂಟಾಣೆಗೆ ಮಾರಿದರಂತೆ. ಸಾಕು ತಾಯಿಯ ಮಡಿಲಲ್ಲಿ ಬೆಳೆದ. ನಾಟಕದ ಗೀಳು ಹತ್ತಿದ ಬಾಲಕ, ಎಂಟನೆಯ ತರಗತಿ ದಾಟಲಿಲ್ಲ. ಕೆಲಸಕ್ಕೆ ಬಾರದವನೆಂಬ ಹಣೆಪಟ್ಟಿ. ಬೇಸತ್ತ ಸಾಕು ತಾಯಿಯ ಆಶ್ರಯವೂ ತಪ್ಪಿತು. ಬಾಲಕೃಷ್ಣ ಧೃತಿಗೆಡಲಿಲ್ಲ. ಬೀದಿಗೆ ಬಿದ್ದ ಬಾಲಕ ಹೊಟ್ಟೆ ಪಾಡಿಗಾಗಿ ಬಣ್ಣಬಳಿದ, ಬೋರ್ಡ್ ಬರೆದ, ವಾರಿಗೆಯ ಹುಡುಗರನ್ನು ಹಿಡಿದು ದೇವಾಲಯದ ಆವರಣದಲ್ಲಿ ನಾಟಕವಾಡಿದ. ಅರಸೀಕೆರೆಯಲ್ಲಿ ಮೊಕ್ಕಾಂ ಮಾಡಿದ್ದ ಹಾರ್ಮೋನಿಯಂ ಮಾಸ್ಟರ್ ಗಿರಿಗೌಡರ ಕಂಪನಿಗೆ ಸೇರ್ಪಡೆ. ಗೇಟ್‍ಕೀಪರ್; ಪರದೆ ಎಳೆವ, ಸೈಡ್ ವಿಂಗ್ ಜೋಡಿಸುವ, ಬಣ್ಣಹಚ್ಚುವ, ಕೆಲಸಗಳನ್ನು ಮಾಡಿದ್ದಾಯಿತು. ಕೊನೆಗೆ ಬಣ್ಣಹಚ್ಚಿಕೊಂಡು ಸಣ್ಣಪುಟ್ಟ ಪಾತ್ರಗಳನ್ನೂ ಮಾಡುವ ಅವಕಾಶವೂ ದೊರೆಯಿತು.

ಅನಂತರ ಲಕ್ಷ್ಮಾಸಾನಿ ನಾಟಕ ಮಂಡಲಿ, ಜಯಗೌರೀಶಂಕರ ನಾಟಕ ಮಂಡಲಿ, ಚಾಮುಂಡೇಶ್ವರಿ ನಾಟಕ ಮಂಡಲಿ, ಭಾರತಮಾತಾ ನಾಟಕ ಸಭಾ ಭಗವತಿ ನಾಟಕ ಸಭಾ, ಕರ್ನಾಟಕ ನಾಟಕ ಸಭಾ, ಗುಬ್ಬಿ ಕಂಪನಿ-ಮುಂತಾದ ಪ್ರಸಿದ್ಧ ವೃತ್ತಿ ನಾಟಕ ಮಂಡಲಿಗಳಲ್ಲಿ ದುಡಿದರು, ರಂಗಭೂಮಿಯನ್ನೂ ಶ್ರೀಮಂತಗೊಳಿಸಬೇಕೆಂಬ ಹಂಬಲದಿಂದ 'ಭಾರತಲಕ್ಷ್ಮಿ, 'ಬೇಡರ ಕಣ್ಣಪ್ಪ ಮತ್ತು 'ರಾಮ-ರಾವಣ' ಎಂಬ ನಾಟಕಗಳನ್ನು ಸ್ವತಃ ರಚಿಸಿ ರಂಗಭೂಮಿ ಮೇಲೆ ಪ್ರಯೋಗ ಮಾಡಿದರು. ಇವರು ಗುಬ್ಬಿ ಕಂಪನಿಯಲ್ಲಿದ್ದ ಅವಧಿಯಲ್ಲಿ 'ಕಾಲಚಕ್ರ ಎಂಬ ನಾಟಕವನ್ನು ರಚಿಸಿದರು. ನಾಟಕ ನೋಡಿದ ಕೆಲ ಸಂಪ್ರದಾಯಶೀಲರ ಕೋಪಕ್ಕೆ ತುತ್ತಾದರು. ಈ ನಾಟಕದ ಕಥಾವಸ್ತುವಿನ ಬಗ್ಗೆ ಬಹಳಷ್ಟು ಜನರ ಟೀಕೆ, ಆದರೂ ಈ ನಾಟಕ ರಂಗಭೂಮಿಯ ಅಸಂಖ್ಯಾತ ಅಭಿಮಾನಿಗಳ ಮೆಚ್ಚಿಗೆ ಗಳಿಸಿಕೊಂಡಿತು.

ಬಾಲಕೃಷ್ಣ ಅವರು ಚಲನಚಿತ್ರರಂಗ ಪ್ರವೇಶಿಸಿದ್ದು ತ್ರಿಭಾಷಾ ತಾರೆ ಎಂ.ವಿ.ರಾಜಮ್ಮ ನಿರ್ಮಿಸಿದ ಕನ್ನಡ ಚಿತ್ರ ರಾಧಾರಮಣ (1943) ಮೂಲಕ. ಬಿ.ವಿಠಲಾಚಾರ್ಯ ನಿರ್ಮಿಸಿದ `ಕನ್ಯಾದಾನ ದಲ್ಲಿನ ದಳ್ಳಾಳಿ ಸೀತಾರಾಮಯ್ಯನ ಪಾತ್ರದ ಪ್ರೌಢ ಅಭಿನಯದಿಂದ ಪ್ರೇಕ್ಷಕರ ವೃಂದವನ್ನು ಬೆರಗುಗೊಳಿಸಿದರು. `ಪಂಚರತ್ನ, `ಕಲಿತರೂ ಹೆಣ್ಣೆ, `ಭೂದಾನ `ಕಣ್ತೆರೆದು ನೋಡು, `ರಣಧೀರ ಕಂಠೀರವ, `ಇಮ್ಮಡಿ ಪುಲಿಕೇಶಿ, `ಮಯೂರ, `ನಮ್ಮ ಸಂಸಾರ, `ನಾ ನಿನ್ನ ಮರೆಯಲಾರೆ, ಹೀಗೆ ಸಾಗುತ್ತದೆ. ಅವರ ಪ್ರತಿಭೆಯನ್ನು ಅನಾವರಣಗೊಳಿಸುವ ಚಿತ್ರಗಳ ಪಟ್ಟಿ. ಚಲನ ಚಿತ್ರರಂಗದ ಐವತ್ತುವರ್ಷಗಳ ಸುದೀರ್ಘ ಕಾಲದಲ್ಲಿ ಸುಮಾರು 500ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ ತ್ರಿವಿಕ್ರಮ, ಬಾಲಕೃಷ್ಣ ನಿರ್ವಹಿಸಿರುವ ಪಾತ್ರಗಳು ವೈವಿಧ್ಯಮಯ. ನಾಯಕ, ಖಳನಾಯಕ, ಹೀಗೆ ಎಲ್ಲ ಬಗೆಯ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಎಲ್ಲ ಪಾತ್ರಗಳಿಗೂ ಹಾಸ್ಯದ ಲೇಪನ ಮಾಡಿ `ಬದುಕಿನ, ವಿಷಾದ ಸಂತಸ, ಧೂರ್ತತನ ಮತ್ತು ಉದಾತ್ತ ಭಾವನೆಗಳನ್ನು ಅನಾವರಣಗೊಳಿಸುವ ಧೀಮಂತರಾಗಿ ಮೆರೆದಿದ್ದಾರೆ. ಶ್ರವಣ ಶಕ್ತಿಯನ್ನು ಕಳೆದುಕೊಂಡ ಕಲಾವಿದ ಸಂಭಾಷಣೆಯನ್ನು ಬರೆದು ಹೇಳಿಕೊಡಬೇಕು. ಜೊತೆ ಪಾತ್ರಧಾರಿಯ ತುಟಿ ಅಂಗಾಂಗ ಚಲನೆಯ ಮೂಲಕ ತಮ್ಮ ಪಾತ್ರವನ್ನು ಗ್ರಹಿಸಿ ತಮ್ಮ ಪಾತ್ರಕ್ಕೆ ಜೀವತುಂಬುತ್ತಿದ್ದ ಪ್ರತಿಭಾಶಾಲಿ.

ಬಾಲಕೃಷ್ಣ ಚಿತ್ರರಂಗದಲ್ಲಿ ಅಜಾತಶತ್ರು. ಎಲ್ಲರ ಪಾಲಿಗೂ ಅವರು `ಬಾಲಣ್ಣ ಈ `ಅಣ್ಣ ಚಿತ್ರರಂಗ, ಕನ್ನಡ ಚಿತ್ರರಂಗಕ್ಕೆ ಸ್ವಾಭಿಮಾನದ ಸ್ವಾವಲಂಬನೆಯ ಪಾಠ ಕಲಿಸಿದರು. ಐವತ್ತರ ದಶಕದಲ್ಲಿ ಕನ್ನಡ ಕಲಾವಿದರು ತಮ್ಮ ಬದುಕು ಸಾಗಿಸಲು ಕಷ್ಟವಾದಾಗ ಕನ್ನಡ ಕಲಾವಿದರ ಸಂಘವನ್ನು ಕಟ್ಟಿದವರಲ್ಲಿ ಬಾಲಕೃಷ್ಣ ಒಬ್ಬರು. ಡಾ.ರಾಜಕುಮಾರ್, ಜಿ.ವಿ.ಅಯ್ಯರ್, ಟಿ.ಆರ್.ನರಸಿಂಹರಾಜು, ಬಾಲಕೃಷ್ಣ ಈ ನಾಲ್ವರ ನೇತೃತ್ವದಲ್ಲಿ ಕನ್ನಡ ಕಲಾವಿದರು ನಾಟಕವಾಡಿ ಹಣ ಸಂಗ್ರಹಿಸಿದರು. ರಣಧೀರ ಕಂಠೀರವ ಚಿತ್ರ ನಿರ್ಮಿಸಿದರು. ಈ ಚಿತ್ರ ಯಶಸ್ವಿಯಾಯಿತು. ಕನ್ನಡ ಕಲಾವಿದರ ಜನಪ್ರಿಯತೆಯೂ ಹೆಚ್ಚಿತು. ಬಾಲಕೃಷ್ಣ ಚಿತ್ರಸಾಹಿತಿಯೂ ಹೌದು, `ಪಂಚರತ್ನ `ಭಕ್ತಮಲ್ಲಿಕಾರ್ಜುನ ಚಿತ್ರಗಳಿಗೆ ಕಥೆ, ಸಂಭಾಷಣೆ, ಹಾಡುಗಳನ್ನು ರಚಿಸಿದರು. 1963ರಲ್ಲಿ ತಮ್ಮ ಸ್ವಂತ ನಿರ್ಮಾಣವಾದ `ಕಲಿತರೂ ಹೆಣ್ಣೆ ಚಿತ್ರಕ್ಕೆ ಸಾಹಿತ್ಯ ನೀಡಿದರು.

ಬಾಲಣ್ಣ, ನರಸಿಂಹ ರಾಜು ಒಂದು ಅಪೂರ್ವ ಹಾಸ್ಯ ಜೋಡಿ. ಕನ್ನಡ ಚಿತ್ರರಂಗದ ಆರಂಭದ ದಿನಗಳಲ್ಲಿ ಈ ಜೋಡಿಯ ಹಾಸ್ಯದ ಮೋಡಿ, ಮುಖ್ಯ ಆಕರ್ಷಣೆಯಾಗಿತ್ತು. ಅಸ್ಥಿರತೆಯ ಆ ದಿನಗಳಲ್ಲಿ ಕನ್ನಡ ಚಿತ್ರಗಳ ಬೆಳವಣಿಗೆಗೆ ಈ ಜೋಡಿಯ ಕೊಡುಗೆ ಗಣನೀಯ. ಕನ್ನಡದ ಹಲವಾರು ಚಿತ್ರಗಳಿಗೆ ಬಾಲಕೃಷ್ಣ ಹಾಸ್ಯ ಭಾಗಗಳನ್ನು ರಚಿಸಿದ್ದಾರೆ. ಕನ್ನಡ ಚಿತ್ರರಂಗ ಕರ್ನಾಟಕದಲ್ಲಿ ಕಾಲೂರಬೇಕೆಂಬುದು ಅವರ ಕಳಕಳಿ. ಕೆಂಗೇರಿ ಬಳಿ ಅಭಿಮಾನ್‍ಸ್ಟುಡಿಯೋ ಸ್ಥಾಪನೆ, ಜನಸಾಮಾನ್ಯರಿಂದ ನೂರು ರೂಪಾಯಿನಂತೆ ಸಾಲ ಎತ್ತಿದರು. ಸ್ಟುಡಿಯೋ ಕಟ್ಟಿದರು. ಅವರ ನಿರೀಕ್ಷೆಯಂತೆ ಸ್ಟುಡಿಯೋ ಬೆಳೆಯಲಿಲ್ಲ. ಇದೊಂದೇ ಅವರ ಬದುಕಿನ ಹತಾಶೆ, ದುರಂತವೂ ಕೂಡ.

ಸಾಹಸಿ ಬಾಲಣ್ಣ 1995 ಜುಲೈ 19ರಂದು ವಿಧಿವಶರಾದರು. `ಬಂಗಾರದ ಮನುಷ್ಯ ಚಿತ್ರದ ರಾಚೂಟಪ್ಪನ ಪಾತ್ರಕ್ಕಾಗಿ ಕರ್ನಾಟಕ ಸರಕಾರದ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಪಡೆದರು. ರಾಜ್ಯ ಸಂಗೀತ ನಾಟಕ ಅಕಾಡೆಮಿ ಪುರಸ್ಕಾರ, ಶಂಕರೆಗೌಡ ಸ್ಮಾರಕ ರಂಗಭೂಮಿ ಪ್ರಶಸ್ತಿ ಲಭಿಸಿದೆ. ಕನ್ನಡ ಚಿತ್ರರಂಗಕ್ಕೆ ಸ್ವಾವಲಂಬನೆಯ ಹಾದಿ ತೋರಿದ ಈ ಭೀಷ್ಮನಿಗೆ ರಾಜ್ಯ ಸರಕಾರ 1989-90ನೇ ಸಾಲಿನ ಪುಟ್ಟಣ್ಣ ಕಣಗಾಲ್ ಪ್ರಶಸ್ತಿ ನೀಡಿ ಗೌರವಿಸಿದೆ.

ಬಾಲಣ್ಣ ಅವರ ಬದುಕು ಸಾಧನೆಗಳನ್ನು ನಿರೂಪಿಸುವ `ಕಲಾಭಿಮಾನಿ ಚಿತ್ರ. ಈ ಕಲಾಭೀಷ್ಮನ ಬದುಕು ಸಾಧನೆ, ಅಭಿನಯ ಕೌಶಲವನ್ನು ನಿರೂಪಿಸುವ ಸಾಕ್ಷ್ಯ ಚಿತ್ರವಾಗಿದೆ. *