ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬಾಸ್ಕೆಟ್ ಬಾಲ್

ವಿಕಿಸೋರ್ಸ್ದಿಂದ

ಬಾಸ್ಕೆಟ್ ಬಾಲ್ ಚಳಿಗಾಲದಲ್ಲಿ ಆಡುವ ಒಂದು ಒಳಾಂಗಣ ಆಟ. ಅಮೆರಿಕ ಸಂಯುಕ್ತ ಸಂಸ್ಥಾನದ ಮೆಸಾಚ್ಯುಸೆಟ್ಟಿನ ಪ್ಲೇನಫ್ಲೀಲ್ಡ್‍ನಲ್ಲಿ ಅಧ್ಯಾಪಕರಾಗಿದ್ದ ಜೇಮ್ಸ್ ನೇಸ್ಮಿತ್ ಇದರ ಮೊದಲ ಪ್ರಯೋಗವನ್ನು 1891ರಲ್ಲಿ ನಡೆಸಿದ. ಚೆಂಡನ್ನು ಹಾಕಲು ಗೋಲಿಗಾಗಿ ಹಣ್ಣಿನ ಬಾಸ್ಕೆಟ್ಟನ್ನು ಉಪಯೋಗಿಸಿದ್ದರಿಂದ ಆರಂಭದಲ್ಲಿ ಒಬ್ಬ ಆಟಗಾರ ಇದನ್ನು ಬಾಸ್ಕೆಟ್ ಬಾಲ್ ಎಂದು ಕರೆದ. ಮುಂದೆ ಇದೇ ಹೆಸರು ಉಳಿಯಿತು. ಮೊದಲಿಗೆ ಚೆಂಡನ್ನು ಕೈಯಿಂದ ಕೈಗೆ ಕೊಡುತ್ತ ಹೋಗುವುದು ರೂಢಿಯಾಯಿತು. ಒಂದೊಂದು ಪಂಗಡದಲ್ಲಿ 10, 9, 7 ಹೀಗೆ ಆಟಗಾರರನ್ನು ತೆಗೆದುಕೊಂಡು ಪ್ರಯೋಗ ಮಾಡಲಾಯಿತು. ಪೆಟ್ಟಿಗೆಯಲ್ಲಿ ಬಿದ್ದ ಚೆಂಡನ್ನು ತೆಗೆಯಲು ಏಣಿ ಬೇಕಾಯಿತು. ಅದನ್ನು ತಪ್ಪಿಸಲು ತಳವಿಲ್ಲದ ಬುಟ್ಟಿಯನ್ನು ಉಪಯೋಗಿಸಲಾಯಿತು. ಹೀಗೆ ಅನೇಕ ಬದಲಾವಣೆಗಳಾಗುತ್ತ ಈ ಆಟ ಇಂದಿನ ರೂಪ ತಾಳಿದೆ.

1892ರ ಹೊತ್ತಿಗೆ ನೇಸ್ಮಿತ್ ಈ ಆಟದ ನಿಯಮಗಳನ್ನು ನಿರ್ಧರಿಸಿ ಆಡಿಸಿ ಪ್ರದರ್ಶಿಸಿದ. ಚಳಿವಲಯದ ಚಿಕ್ಕ ಕ್ರೀಡಾಂಗಣ, ಕಡಿಮೆ ವೆಚ್ಚದ ಉಪಕರಣಗಳು ಇದರಿಂದಾಗಿ ಇದು ಬಲು ಬೇಗ ಜನಪ್ರಿಯವಾಗಿ ವಿದೇಶಗಳಿಗೂ ಹರಡಿತು. ವೈ.ಎಂ.ಸಿ.ಎ ಕ್ಲಬ್‍ಗಳು ಇದಕ್ಕೆ ಬಹು ಕಾರಣ.

1897ರ ಹೊತ್ತಿಗೆ ಅಂತರಾಷ್ಟ್ರೀಯ ಮ್ಯಾಚುಗಳನ್ನು ಸಂಘಟಿಸಲಾಯಿತು. ಅಮೆಚೂರ್ ಅಥ್ಲೆಟಿಕ್ ಯೂನಿಯನ್ ಹಾಗೂ ಯಂಗ್ ಮ್ಯಾನ್ ಕ್ರಿಶ್ಚಿಯನ್ ಅಸೋಸಿಯೇಷನ್ ಸಂಘದವರು ಕೂಡಿ 1915ರಲ್ಲಿ ಬಾಸ್ಕೆಟ್ ಬಾಲಿನ ವಿಷಯಗಳನ್ನು ವಿಮರ್ಶಿಸಿ ರೂಪಿಸಿದರು. 1932ರಲ್ಲಿ ಇದರ ಅಂತರಾಷ್ಟ್ರೀಯ ಫೆಡರೇಷನ್ ಕೂಡ ಸ್ಥಾಪಿಸಲಾಯಿತು.

ಬಾಸ್ಕೆಟ್ ಬಾಲ್ ಆಟವನ್ನು ಒಲಿಂಪಿಕ್ ಆಟಗಳಲ್ಲಿ ಸಮಾವೇಶ ಮಾಡುವುದಕ್ಕಾಗಿ ಪ್ಯಾರಿಸ್, ಸೇಂಟ್ ಲೂಯಿ ಮೊದಲಾದ ಒಲಿಂಪಿಕ್ ಕ್ರೀಡೆಗಳಲ್ಲಿ ಪ್ರದರ್ಶನ ಮಾಡಲಾಯಿತು. ಇದರಿಂದ 1936ರಲ್ಲಿ ಬರ್ಲಿನ್ ಒಲಿಂಪಿಕ್‍ನಲ್ಲಿ ಇದು ಒಂದು ಆಟವಾಗಿ ಸೇರ್ಪಡೆಯಾಯಿತು.

ಹೆಣ್ಣು ಮಕ್ಕಳನ್ನು ಸೇರಿಸಿಕೊಂಡು ಈ ಆಟವನ್ನು 1920ರಲ್ಲಿ ಆಡಿಸಲಾಯಿತು. ಮುಂದೆ ಫ್ರಾನ್ಸಿನಲ್ಲಿ ಸ್ತ್ರೀಯರಿಗಾಗಿ ಅಂತಾರಾಷ್ಟ್ರೀಯವಾಗಿ ಮ್ಯಾಚ್‍ಗಳನ್ನು ಆಡಿಸಲಾಯಿತು (1923). ಜಾಗತಿಕವಾಗಿ 1952ರಲ್ಲಿ ಸ್ತ್ರೀಯರ ಬಾಸ್ಕೆಟ್ ಬಾಲ್ ಪಂದ್ಯಗಳನ್ನು ಚಿಲಿಯಲ್ಲಿ ಸಂಘಟಿಸಲಾಯಿತು.

1920ರಲ್ಲಿ ವೈ.ಎಂ.ಸಿ.ಎ. ಕೆಲಸಗಾರರು ಇದನ್ನು ಮದ್ರಾಸಿನಲ್ಲಿ ಮೊದಲು ಪ್ರಾರಂಭಿಸಿದರು. 1932ರಲ್ಲಿ ಭಾರತದ ಒಲಿಂಪಿಕ್ ಕಮಿಟಿಯವರು ಇದಕ್ಕೆ ಮನ್ನಣೆ ಕೊಟ್ಟರು; ಮತ್ತು ದೆಹಲಿಯಲ್ಲಿ 1934ರಲ್ಲಿ ಅಖಿಲ ಭಾರತ ಬಾಸ್ಕೆಟ್‍ಬಾಲ್ ಟೂರ್ನಮೆಂಟ್ ನಡೆಸಿದರು. 1951ರಲ್ಲಿ ಬಾಸ್ಕೆಟ್‍ಬಾಲ್ ಫಡರೇಷನ್ ಆಫ್ ಇಂಡಿಯಾ ಸಂಸ್ಥೆ ಪ್ರಾರಂಭವಾಯಿತು. ಅಂದಿನಿಂದ ಪ್ರತಿ ವರ್ಷ ಪುರುಷರಿಗೆ ಟಾಡ್ ಮೆಮೊರಿಯಲ್ ಟ್ರೋಫಿ ಹಾಗೂ ಸ್ತ್ರೀಯರಿಗೆ ಬಸಾಲತ್ ಝಾ ಟ್ರೋಫಿ ಬಾಲಕರಿಗೆ ಏಬ್ರಹಾಮ್ಸ್ ಟ್ರೋಫಿ ಟೂರ್ನಮೆಂಟುಗಳು ನಡೆಯುತ್ತಲಿವೆ. ಎರಡನೆಯ ಪ್ರಪಂಚ ಬಾಸ್ಕೆಟ್‍ಬಾಲ್ ಚಾಂಪಿಯನ್ ಷಿಪ್ ಪಂದ್ಯ 1967ರಲ್ಲಿ ಭಾರತದಲ್ಲಿ ನಡೆಯಿತು. ಪುರುಷರ ಪಂದ್ಯಗಳಲ್ಲಿ ಬ್ರೆಜಿóಲ್ ಹಾಗೂ ಸ್ತ್ರೀಯರ ಪಂದ್ಯಗಳಲ್ಲಿ ರಷ್ಯ ಜಯಗಳಿಸಿತು.

ನಿಯಮಗಳು: ಬಾಸ್ಕೆಟ್ ಬಾಲ್ ಆಟ ಎರಡು ಪಂಗಡಗಳ ನಡುವೆ ಜರಗುವ ಆಟ. ಒಂದೊಂದು ಪಂಗಡದಲ್ಲಿ ತಲಾ ಐದು ಮಂದಿ ಆಟಗಾರರು. ಒಬ್ಬ ಕೇಂದ್ರದಲ್ಲಿ. ಇಬ್ಬರು ಮುಂದಣ ಆಟಗಾರರು ಹಾಗೂ ಇಬ್ಬರು ರಕ್ಷಕರು. ಆಟದ ಉದ್ದೇಶ ಎದುರು ಪಂಗಡದ ಬಾಸ್ಕೆಟ್‍ಗೆ ಚೆಂಡನ್ನು ಹಾಕುವುದು ಮತ್ತು ತಮ್ಮ ಬಾಸ್ಕೆಟ್‍ಗೆ ಎದುರಾಳಿಗಳು ಚೆಂಡನ್ನು ಹಾಕದಂತೆ ತಡೆಯುವುದು. ಬಾಲನ್ನು ಎಸೆಯಬುಹುದು, ಒಬ್ಬರಿಗೊಬ್ಬರು ಹಸ್ತಾಂತರಿಸಬಹುದು. ಉರುಳಿಸಬಹುದು, ಹಾಗೂ ಟ್ರಿಬಲ್ ಮಾಡಬಹುದು. ಆದರೆ ಇವೆಲ್ಲವು ಕೆಲವಾರು ನಿರ್ಬಂಧಗಳನ್ನೊಳಗೊಂಡಿವೆ.

ಆಟದ ಮೈದಾನ: ಆಟದ ಮೈದಾನ ಗಟ್ಟಿಯಾಗಿದ್ದು ಆಯತಾಕಾರವಾಗಿ ಇರಬೇಕು. ಹುಲ್ಲು ಅಥವಾ ಮರಳುಗಳಿಂದ ಕೂಡಿರಬಾರದು. ಸಿಮೆಂಟು ಹಾಕಿದ್ದಾದರೂ ಇರಬಹುದು.

ಮೈದಾನದ ಉದ್ದ 26 ಮೀಟರ್ ಅಗಲ 14 ಮೀಟರ್. ಮೈದಾನದ ಮೇಲುಗಡೆ 7 ಮೀಟರ್ ಗಳಷ್ಟು ಯಾವುದೇ ಅಡೆತಡೆಯಿಲ್ಲದೆ ಜಾಗ ಇರಬೇಕು.

ಈ ಆಟದ ಅವಧಿ ಪುರುಷರಿಗೆ 20 ನಿಮಿಷ ಅನಂತರ 10 ನಿಮಿಷ ವಿಶ್ರಾಂತಿ ಪುನಃ 20 ನಿಮಿಷ. ಇದು ನಿಜವಾಗಿ ಆಟ ನಡೆಯುವಂಥ ಅವಧಿ-ಮಧ್ಯದಲ್ಲಿ ಆಟ ನಿಂತಾಗ ಗಡಿಯಾರವನ್ನು ನಿಲ್ಲಿಸುತ್ತಾರೆ. ಮಹಿಳೆಯರಿಗೆ 15 ನಿಮಿಷ. 10 ನಿಮಿಷ ವಿಶ್ರಾಂತಿ-ಅನಂತರ ಪುನ: 15 ನಿಮಿಷ ಆಟ. ಈ ಆಟ ಸಂಪೂರ್ಣವಾಗಿ ಒಬ್ಬರನ್ನೊಬ್ಬರು ಮುಟ್ಟುವಿಕೆಯಿಂದ ಹೊರತಾದ್ದು. ಇದರಲ್ಲಿ ಆಟವನ್ನು ಮುನ್ನೆಡೆಸಲು ಇಬ್ಬರು ತೀರ್ಪುಗಾರರು, ಒಬ್ಬ ಗುಣಲೇಖಕ, ಒಬ್ಬ ಸಮಯ ನೋಡಿಕೊಳ್ಳುವವ, 30 ಸೆಕೆಂಡುಗಳನ್ನು ನೋಡುವವ ಈ ರೀತಿ ಐದು ಮಂದಿ ಇರುತ್ತಾರೆ.

ಒಂದು ಪಂಗಡದಲ್ಲಿ ಹತ್ತು ಮಂದಿ ಆಟಗಾರರು ಇರುತ್ತಾರೆ. ಬದಲಿ ಆಟಗಾರರು ಸೇರಿ 5 ಮಂದಿ ಆಟಕ್ಕೆ ಇಳಿಯುತ್ತಾರೆ. ಆಟವನ್ನು ಪ್ರಾರಂಭ ಮಾಡುವಾಗ ಇಬ್ಬರು ಆಟಗಾರರನ್ನು (ಎರಡೂ ಪಂಗಡದಿಂದ ತಲಾ ಒಬ್ಬರಂತೆ) ಕರೆದು ಮಧ್ಯದ ವೃತ್ತದಿಂದ ತೀರ್ಪುಗಾರ ಚೆಂಡನ್ನು ಮೇಲಕ್ಕೆ ಹಾರಿಸಿ ಆಟವನ್ನು ಪ್ರಾರಂಭಿಸುತ್ತಾನೆ. ಚೆಂಡು ರಬ್ಬರಿನದು ಅಥವಾ ರಬ್ಬರ್ ಬ್ಲಾಡರ್ ಹೊರಗಡೆ ಚರ್ಮದ ಹೊದಿಕೆ ಇರುವಂಥದ್ದು. ಚೆಂಡಿನ ಸುತ್ತಳತೆ 75 ಸೆಂಮೀ. ನಿಂದ 78 ಸೆಂಮೀ. ತೂಕ 600 ರಿಂದ 650 ಗ್ರ್ರಾಮ್. (ಬಿ.ಎಸ್.ಬಿ.)

ಹೊರಾಂಗಣದಲ್ಲೂ ಈ ಆಟ ಆಡಬಹುದು. ಆಟದ ಅಂಗಣ ಆಯತಾಕಾರವಾಗಿದ್ದು ಸಾಮಾನ್ಯವಾಗಿ 26ಮೀ ಉದ್ದ 14 ಮೀ ಅಗಲವಿರುತ್ತದೆ. ಉದ್ದ ಅಗಲದಲ್ಲಿ 2 ಮತ್ತು 1 ಮೀ ನಷ್ಟು ವ್ಯತ್ಯಾಸಮಾಡಿಕೊಳ್ಳಬಹುದು. ಎರಡು ಕಡೆಯ ಅಂಗಣಗಳನ್ನೂ ಪ್ರತ್ಯೇಕಿಸಲು ಮಧ್ಯೆ ಒಂದು ಗೆರೆ ಇರುತ್ತದೆ. ಕೇಂದ್ರಭಾಗದಲ್ಲಿ 1.8 ಮೀ ತ್ರಿಜ್ಯದ ವೃತ್ತವಿರುತ್ತದೆ. ಅಂಗಣದ ಉದ್ದ ಬದಿಯಲ್ಲಿರುವುದನ್ನು ಪಾಶ್ರ್ವಗೆರೆಗಳೆಂದೂ ಗಿಡ್ಡ ಬದಿಗಳಲ್ಲಿರುವುದನ್ನು ತುದಿ ಗೆರೆಗಳೆಂದೂ ಕರೆಯುತ್ತಾರೆ.

1.8 ಮೀ ಉದ್ದ: 1.2 ಮೀ ಅಗಲದ ಬಿಳಿಬಣ್ಣದ ಹಲಗೆಯನ್ನು ಅದರ ಕೆಳ ಅಂಚು ನೆಲದಿಂದ 2.75 ಮೀ ಎತ್ತರದಲ್ಲಿರುಂತೆ ನಿಲ್ಲಿಸುತ್ತಾರೆ. 45 ಸೆಂಮೀ ನಷ್ಟು ಒಳವ್ಯಾಸವಿರುವ ಕಬ್ಬಿಣದ ಉಂಗುರದಿಂದ ನೇತಾಡುವ ಬಿಳಿ ಬಲೆಯೇ ಆಟದ ಬುಟ್ಟಿ.

ಆಟದಲ್ಲಿ ಚೆಂಡನ್ನು ಎಸೆಯಬಹುದು. ಕೈಯಿಂದ ತಟ್ಟಬಹುದು ಅಥವಾ ನೆಲಕ್ಕೆ ಅಪ್ಪಳಿಸಿ ಪುಟ ಏಳಿಸಬಹುದು. ಆದರೆ ಒದೆಯುವುದು ಎತ್ತಿಕೊಂಡು ಹೋಗುವುದು ಮಾಡಬಾರದು. ಉಂಗುರದೊಳಗಿನಿಂದ ಚೆಂಡು ಕೆಳಗೆ ಬಿದ್ದರೆ ಗೋಲ್ ಆದಂತೆ. ಎದುರಾಳಿಗಳು ಆಡುತ್ತಿರುವಾಗ ಚೆಂಡನ್ನು ಹೊಡೆದು ಗೋಲ್ ಮಾಡಿದರೆ ಅದನ್ನು ಫೀಲ್ಡ್ ಗೋಲ್ ಎನ್ನುತ್ತಾರೆ. ಇದಕ್ಕೆ ಗೆಲ್ಲಂಕ ಎರಡು. ಆಟಗಾರ ತಪ್ಪುಮಾಡಿದಾಗ ಎದುರು ಪಕ್ಷದವರಿಗೆ ಸಿಗುವ ಸ್ವಚ್ಛಂದ (ಪೆನಾಲ್ಟಿ) ಎಸೆತದಿಂದ ಗೋಲಿಗೆ ಚೆಂಡನ್ನು ಹಾಕಿದರೆ ಗೆಲ್ಲಂಕ ಒಂದು ಸಿಗುತ್ತದೆ.

ಫೀಲ್ಡ್ ಗೋಲ್ ಆದಾಗ ಎದುರು ಪಕ್ಷದವರ ಕೈ ಚೆಂಡು ಬಂದು ಅವರ ಕಡೆಯ ಆಟಗಾರನೊಬ್ಬ ಕೊನೆಯ ಗೆರೆಯಿಂದ ಚೆಂಡನ್ನು ಹೊರಕ್ಕೆ ತೆಗೆದುಕೊಂಡು ಹೋಗುತ್ತಾನೆ. ಆತ 5 ಸೆಕೆಂಡುಗಳೊಳಗೆ ಚೆಂಡನ್ನು ತನ್ನ ಕಡೆಯ ಆಟಗಾರನಿಗೆ ಎಸೆದಿರಬೇಕು. ಆಟಗಾರರು ಪರಸ್ಪರ ತಳ್ಳುವುದು ಅಥವಾ ಹಿಡಿದುಕೊಳ್ಳುವುದು ನಿಷಿದ್ಧ. ಆಗ ರೆಫರಿ ಚೆಂಡನ್ನು ತಡೆಹಿಡಿದು ವೈಯಕ್ತಿಕ ತಪ್ಪು (ಫಾಲ್ಟ್) ಎಂದು ಘೋಷಿಸುತ್ತಾನೆ. ತಪ್ಪು ಗಂಭೀರವಾದದ್ದೆ ಅಥವಾ ಸಾಮಾನ್ಯವಾದದ್ದೆ ಎಂಬುದನ್ನು ಗಣನೆಗೆ ತೆಗೆದುಕೊಂಡು ಎದುರು ಪಕ್ಷದವರಿಗೆ ಎರಡು ಮುಕ್ತ ಎಸೆತ ಇಲ್ಲವೆ ಪಾಶ್ವಗೆರೆಯಿಂದ ಒಂದು ಒಳ ಎಸೆತಕ್ಕೆ ಅವಕಾಶ ಕೊಡುತ್ತಾನೆ. ವಿಶೇಷ ತಪ್ಪುಮಾಡಿದಾಗ ಆಟಗಾರನನ್ನು ರೆಫರಿ ಹೊರಕ್ಕೆ ಕಳುಹಿಸುತ್ತಾನೆ. ಹೀಗೆ ಐದು ವೈಯಕ್ತಿಕ ತಪ್ಪು ಮಾಡಿದರೆ ಅಂಥ ಆಟಗಾರ ಆಟದಿಂದ ಹೊರಗೆ ಉಳಿಯಬೇಕಾಗುತ್ತದೆ. ಅವನ ಬದಲಿಗೆ ಬೇರೊಬ್ಬ ಆಟಗಾರ ಬರುತ್ತಾನೆ. ತನ್ನ ಅಂಗಣದಲ್ಲಿ ಐವರಿಗಿಂತ ಹೆಚ್ಚು ಆಟಗಾರರನ್ನು ನಿಲ್ಲಿಸಿಕೊಳ್ಳುವುದು ಆಟವನ್ನು ನಿಧಾನ ಮಾಡುವುದು ಇವೆಲ್ಲ ತಾಂತ್ರಿಕ ತಪ್ಪುಗಳೆಂದು ಗಣಿಸಲಾಗುತ್ತದೆ. ಆಟಗಾರರು ಚೆಂಡನ್ನು ಹಿಡಿದುಕೊಂಡು ಓಡುವಂತಿಲ್ಲ. ಎರಡೂ ಕಡೆಯ ಇಬ್ಬರು ಏಕಕಾಲದಲ್ಲಿ ತಪ್ಪನ್ನು ಮಾಡಿದರೆ ಚೆಂಡನ್ನು ಕೇಂದ್ರ ಬಿಂದುವಿನಿಂದ ಎಸೆಯಲಾಗುತ್ತದೆ.

ಬಾಸ್ಕೆಟ್ ಬಾಲ್ ಪಂದ್ಯ ವೇಗದ ಆಟವಾದ್ದರಿಂದ ದೊಡ್ಡ ಪಂದ್ಯಗಳಲ್ಲಿ 7 ಬಾರಿ ಆಟಗಾರರನ್ನು ಬದಲಾಯಿಸುವ ಅವಕಾಶವಿದೆ. ರೆಫರಿ, ಅಂಪೈರ್ ಆಟದ ಮುಖ್ಯ ಅಧಿಕಾರಿಗಳು. ಒಬ್ಬ ಕಾಲನಿರ್ದೇಶಕ ಇನ್ನೊಬ್ಬ ಅಂಕಗಳ ಗುಣಿಕ (ಸ್ಕೋರರ್) ಇವರಿಗೆ ಸಹಾಯಕರಾಗಿರುತ್ತಾರೆ.

1936ರಲ್ಲಿ ಬಾಸ್ಕೆಟ್ ಬಾಲ್ ಒಲಿಂಪಿಕ್ ಸ್ಥಾನ ಪಡೆಯಿತು. 1968ರ ತನಕ ಅಮೆರಿಕ ಸತತ ವಿಜಯಗಳಿಸಿತು. 1972ರಲ್ಲಿ ಮ್ಯೂನಿಕ್ ಒಲಿಂಪಿಕ್ಸ್‍ನಲ್ಲಿ ಅಮೆರಿಕದ ತಂಡವನ್ನು ರಷ್ಯ ಸೋಲಿಸಿತು.

ರಾಷ್ಟ್ರೀಯ ಬಾಸ್ಕೆಟ್ ಬಾಲ್ ಚಾಂಪಿಯನ್ ಷಿಪ್ ಪಂದ್ಯಗಳಲ್ಲಿ ಮೈಸೂರು ತಂಡ ಐದು ಬಾರಿ ಸತತವಾಗಿ ಗೆದ್ದಿದೆ.

ಬಾಸ್ವೆಲ್, ಜೇಮ್ಸ್: 1740-95. ಇಂಗ್ಲಿಷ್ ಜೀವನ ಚರಿತ್ರಕಾರ. ಏಡಿನ್ ಬರೋದಲ್ಲಿ ಜನನ. ಅಲ್ಲಿಯ ಶಾಲೆಯಲ್ಲಿ ಓದಿದ ಈತ ಮುಂದೆ ಏಡಿನ್ ಬರೋ, ಗ್ಲಾಸ್‍ಗೋ, ಯುಟ್ರೆಚ್ ವಿಶ್ವವಿದ್ಯಾಲಯಗಳಲ್ಲಿ ವ್ಯಾಸಂಗ ಮಾಡಿದ. ಇಷ್ಟವಿಲ್ಲದೆ ನ್ಯಾಯ ಶಾಸ್ತ್ರವನ್ನು ಓದಿ ಇಂಗ್ಲೆಂಡಿಗೆ ಬಂದ. ಇಪ್ಪತ್ತೊಂದನೆಯ ವಯಸ್ಸಿನಲ್ಲಿ ಅನಾಮಧೇಯ ಹೆಸರಿನಲ್ಲಿ ಓಡ್ ಟು ಟ್ರ್ಯಾಜಿಡಿ ಎಂಬ ಪುಸ್ತಕವನ್ನು ಪ್ರಕಟಿಸಿದ. 1773ರಲ್ಲಿ ಲಂಡನ್ನಿನ ಪುಸ್ತಕದಂಗಡಿ ಒಂದರಲ್ಲಿ ಸ್ಯಾಮ್ಯುಯಲ್ ಜಾನ್‍ಸನ್ನನ ಪರಿಚಯವಾಯಿತು. 1773ರಲ್ಲಿ ಇಬ್ಬರೂ ಹೆಬ್ರಿಡೀಸ್‍ನ ಪ್ರವಾಸ ಕೈಗೊಂಡರು. 1785ರಲ್ಲಿ ಬಾಸ್ ವೆಲ್ ನ ಎ ಜರ್ನಲ್ ಆಫ್ ಎ ಟೂರ್ ಟು ದಿ ಹೇಬ್ರಿಡೀಸ್ (ಹೆಬ್ರಿಡೀಸ್ ಪ್ರವಾಸ) ಮತ್ತು 1791ರಲ್ಲಿ ಲೈಫ್ ಆಫ್ ಸ್ಯಾಮ್ಯುಯಲ್ ಜಾನ್‍ಸನ್ (ಸಾಮ್ಯುಯಲ್ ಜಾನ್‍ಸನ್‍ನ ಜೀವನಚರಿತ್ರೆ) ಪ್ರಕಟಣೆಗೊಂಡುವು. ಇದು ಇಂಗ್ಲಿಷ್ ಭಾಷೆಯಲ್ಲಿ ಅತಿ ಶ್ರೇಷ್ಠಲ ಜೀವನ ಚರಿತ್ರೆ ಎಂದು ಪ್ರಸಿದ್ಧವಾಗಿದೆ. ಜಾನ್‍ಸನ್ ರೇನಾಲ್ಡ್ಸ್ ಬರ್ಕ್, ಗೋಲ್ಡ್ ಸ್ಮಿತ್ ಮುಂತಾದ ಪ್ರತಿಭಾವಂತರು ರೂಪಿಸಿದ್ದ ಲಿಟರರಿ ಕ್ಲಬ್‍ನ ಸದಸ್ಯನಾದ. 1857ರಲ್ಲಿ ಈತನ ಪತ್ರಗಳು ಪ್ರಕಟಗೊಂಡುವು.

ಈತ ಜಾನ್‍ಸೆನ್‍ನನ್ನು ಕಾಣುವುದಕ್ಕಿಂತ ಮೊದಲೇ ಅವನಲ್ಲಿ ವಿಶೇಷವಾದ ಗೌರವ ಭಾವನೆಯನ್ನು ಬೆಳೆಸಿಕೊಂಡಿದ್ದ. ಬಾಸ್‍ವೆಲ್ ಹಲವು ಮೂಲಗಳಿಂದ ಸಾಮಗ್ರಿ ಶೇಖರಿಸಿದ್ದ. 1772ರಲ್ಲಿಯೇ ಜಾನ್ ಸನ್ನನಿಗೆ ತನ್ನ ಉದ್ದೇಶ ತಿಳಿಸಿದ. ಅವನ ಜೊತೆಯಲ್ಲಿದ್ದಾಗ ಟಿಪ್ಪಣಿಗಳನ್ನು ಗುರುತು ಹಾಕಿಕೊಂಡು, ಅವನ ಅಭಿಪ್ರಾಯ ಮತ್ತು ತೀಕ್ಷ್ಣ ಬುದ್ಧಿಶಕ್ತಿಗಳನ್ನು ಹೊರತರಲು ತಾನೇ ಸನ್ನಿವೇಶಗಳನ್ನೂ ಸೃಷ್ಟಿಸಿದ. ಬಾಸ್ ವೆಲ್ ಪ್ರತಿಭಾವಂತನಲ್ಲ, ಆದರೂ ಹಲವು ಗುಣಗಳು ಅವನಿಗೆ ಯುಶಸ್ಸನ್ನು ತಂದವು. ಶ್ರದ್ಧೆ, ಅಸಾಧಾರಣ ಜ್ಞಾಪಕ ಶಕ್ತಿ, ವಿವರಗಳನ್ನು ಗಮನಿಸುವ ದೃಷ್ಟಿ ಮತ್ತು ತಾನು ಹಿನ್ನಲೆಯಲ್ಲಿ ಉಳಿಯುವ ಪ್ರವೃತ್ತಿ. ಬಾಸ್ ವೆಲ್ ಆ ತನಕ ಪ್ರಕಟವಾಗುತ್ತಿದ್ದ ಜೀವನ ಚರಿತ್ರೆಗಳ ಮಾದರಿ ಅನುಸರಿಸಿದುದಲ್ಲದೆ ಅದರೊಂದಿಗೆ ಕಿರುಗತೆಗಳನ್ನು ಸೇರಿಸಿ ಹೊಸತಂತ್ರವನ್ನು ರೂಪಿಸಿದ. ಈತ ಜಾನ್‍ಸನ್ನನ ಶ್ರೇಷ್ಠ ಗುಣಗಳನ್ನು ಹೇಳುವುದರ ಜೊತೆಗೆ ಅವನ ದೋಷಗಳನ್ನೂ ಹೇಳಿದ್ದಾನೆ. ಹೀಗಾಗಿ ಪ್ರತಿ ಪುಟಗಳಲ್ಲೂ ಜಾನ್‍ಸನ್ನನ ರೂಪ, ಧ್ವನಿಗಳೇ ಕಾಣುವಂತೆ ಮಾಡಿದ್ದಾನೆ.

ಜಾನ್‍ಸನ್ನನನ್ನು ಬಾಸ್‍ವೆಲ್ ಭೇಟಿ ಮಾಡಿದಾಗ ಜಾನ್‍ಸನ್ನನಿಗೆ 54 ವರ್ಷ. ಅನಂತರದ 21 ವರ್ಷಗಳಲ್ಲಿ ಅವರಿಬ್ಬರೂ ಒಟ್ಟಿಗೆ ಇದ್ದುದು 270 ದಿನಗಳು. ಆದರೂ ಜಾನ್‍ಸನ್‍ನ ಸಮಗ್ರ ಮತ್ತು ಅವನ ವ್ಯಕ್ತಿತ್ವದ ಸಂಪೂರ್ಣ ಪರಿಚಯವನ್ನು ಮಾಡಿಕೊಡುವುದರಲ್ಲಿ ಬಾಸ್ ವೆಲ್ ಯಶಸ್ವಿಯಾಗಿದ್ದಾನೆ. ಈ ಜೀವನ ಚರಿತ್ರೆಯನ್ನು ಬಿಟ್ಟು ಈತನ ಉಳಿದ ಕೃತಿಗಳಲ್ಲಿ ಸತ್ವವೇನೂ ಇಲ್ಲ. ಬಾಸ್‍ವೆಲ್‍ನಿಂದ ಜಾನ್‍ಸನ್ನನ ವ್ಯಕ್ತಿತ್ವ ಉಳಿದುಬಂದಂತೆ ಜಾನ್‍ಸನ್‍ನಿಂದ ಬಾಸ್‍ವೆಲ್‍ನ ಹೆಸರು ಉಳಿಯಿತೆನ್ನುವುದೂ ಸತ್ಯ. (ಎಲ್.ಎಸ್.ಎಸ್.)