ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬಾಸ್ಟನ್

ವಿಕಿಸೋರ್ಸ್ದಿಂದ

ಬಾಸ್ಟನ್ ಅಮೆರಿಕ ಸಂಯುಕ್ತ ಸಂಸ್ಥಾನದ ಮೆಸಾಚ್ಯುಸೆಟ್ಸ್ ರಾಜ್ಯದ ಮತ್ತು ಸಫೋಕ್ ಕೌಂಟಿಯ ಆಡಳಿತ ಕೇಂದ್ರ ಮತ್ತು ಒಂದು ಮಹಾನಗರ. ಅಟ್ಲಾಂಟಿಕ್ ಸಾಗರದ ಒಂದು ಪ್ರಮುಖ ಬಂದರು. ಚಾಲ್ರ್ಸ್, ಮಿಸ್ಟಿಕ್, ಚೆಲ್ಸೀ ಮತ್ತು ನೆಪಾನಸೆಟ್ ನದೀ ಮುಖಜ ಭೂಮಿಯಲ್ಲಿ ವಿಸ್ತರಿಸಿಕೊಂಡಿರುವ ಈ ನಗರ ನ್ಯೂಯಾರ್ಕ್ ನಗರದ ಈಶಾನ್ಯಕ್ಕೆ ಸುಮಾರು 368 ಕಿಮೀ ದೂರದಲ್ಲಿದೆ. ವಿಸ್ತೀರ್ಣದ ದೃಷ್ಟಿಯಿಂದ ಬಾಸ್ಟನ್ ಮಹಾನಗರ ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಐದನೆಯದು, ನಗರ 15ನೆಯದು. ನಗರ ವಿಸ್ತೀರ್ಣ 132 ಚಕಿಮೀ, ಜನಸಂಖ್ಯೆ 6,41,071 ಮಹಾನಗರ ವಿಸ್ತೀರ್ಣ 3,458 ಚಕಿಮೀ ಜನಸಂಖ್ಯೆ 28,89,101 (1975).

ಬಾಸ್ಟನ್ ಎಚ್ಚೆತ್ತ ಅಮೆರಿಕದ ಲಾಂಛನ. ಅಮೆರಿಕ ಕ್ರಾಂತಿಯ ಮತ್ತು ರಾಷ್ಟ್ರದ ಮೂಲಸ್ಥಾನ ಮತ್ತು ಅಮೆರಿಕದ ಸಾಂಸ್ಕøತಿಕ ಕೇಂದ್ರ. ಶೈಕ್ಷಣಿಕ, ವೈದ್ಯಕೀಯ, ವೈಜ್ಞಾನಿಕ ಚಟುವಟಿಕೆಗಳ ಅತ್ಯಂತ ವೈವಿಧ್ಯಮಯ ಹಾಗೂ ಕ್ರಿಯಾತ್ಮಕ ಸಂಯೋಗದ ಕೇಂದ್ರ ನಗರವೆಂದು ಹೆಸರು ಪಡೆದಿದೆ.

ಬಾಸ್ಟನ್ ಸಮುದ್ರ ಪಾತಳಿಯಿಂದ 6.4 ಮೀ ಎತ್ತರದಲ್ಲಿದೆ. ನಗರ ಮಿಸ್ಟಿಕ್, ಚೆಲ್ಸೀ ಮತ್ತು ಚಾಲ್ರ್ಸ್ ನದಿಗಳ ಸಂಯೋಜಿತ ಹರಿವಿನಿಂದ ಪ್ರವಾಹಗಳು ಬೇರ್ಪಟ್ಟು ದ್ವೀಪದಂತಿರುವ ಭೂಭಾಗ ಮತ್ತು ಚಾಲ್ರ್ಸ್ ನದಿಯಿಂದ ಬೇರ್ಪಟ್ಟು ಇರುವ ಚಾಲ್ರ್ಸ್ ಟೌನ್ ಮತ್ತು ಚಾಲ್ರ್ಸ್ ನದಿ ಮತ್ತು ಬಂದರುಗಳ ನಡುವೆ ಪಶ್ಚಿಮದತ್ತ ಹಬ್ಬಿರುವ ಮುಖ್ಯ ಬಾಸ್ಟನ್ ಪ್ರದೇಶಗಳನ್ನು ಒಳಗೊಂಡಿದೆ. ಮೊದಲಲ್ಲಿ ಪ್ರತ್ಯೇಕ ಪಟ್ಟಣಗಳೇ ಆಗಿದ್ದ ಪೂರ್ವ ಬಾಸ್ಟನ್, ಚಾಲ್ರ್ಸ್ ಟೌನ್, ಬೀಕನ್‍ಹಿಲ್, ಬ್ಯಾಕ್‍ಬೇ, ಜಮೈಕಾಪ್ಲೇನ್, ರಾಕ್ಸ್‍ಬರಿ, ಸೌತ್ ಬಾಸ್ಟನ್, ಡಾರ್ಬೆಸ್ಟರ್, ಹೈಡ್‍ಪಾರ್ಕ್, ಬ್ರೈಟನ್ ಮುಂತಾದ ಪಟ್ಟಣಗಳು ಬಾಸ್ಟನ್‍ನಲ್ಲಿ ಸೇರಿಹೋಗಿವೆ.

ಈ ಮಹಾನಗರಕ್ಕೆ ಸೇರಿರುವ ಸುಮಾರು 6.5 ಮೀ ಎತ್ತರವಿರುವ ಗುಡ್ಡ ಪಶ್ಚಿಮ ರಾಕ್ಸ್ ಬರಿಯಲ್ಲಿದೆ. ಬಾಸ್ಟನ್ನಿನ ಹವಾಗುಣ ಸಾಮಾನ್ಯವಾಗಿ ಹಿತವಾಗಿದ್ದು ಜನವರಿ ತಿಂಗಳಲ್ಲಿ -20 ಸೆ ವರೆಗೂ ಇಳಿದು ಜುಲೈ ತಿಂಗಳಲ್ಲಿ 220 ಸೆ. ವರೆಗೂ ಏರುವುದುಂಟು. ಸರಾಸರಿ ಮಳೆ 188 ಸೆಂಮೀ ಬೀಳುತ್ತದೆ.

ಬಾಸ್ಟನ್ ಮಹಾನಗರ ಬ್ಯಾಂಕ್ ವ್ಯವಹಾರ, ವಿಮೆ, ಬಂಡವಾಳ ನಿರ್ವಹಿಸುವಿಕೆ ಮತ್ತು ಇತರ ಆರ್ಥಿಕ ಹಾಗೂ ವ್ಯವಹಾರ ಸೇವಾ ಚಟುವಟಿಕೆಗಳ ಈಶಾನ್ಯ ಕೇಂದ್ರ. 50 ವಿಮಾ ಸಂಸ್ಥೆಗಳ ನೆಲೆ. 12,264 (1972) ಶತಕೋಟಿ ಡಾಲರುಗಳ ಠೇವಣಿ ಹೊಂದಿರುವ ನ್ಯೂ ಇಂಗ್ಲೆಂಡಿನ ಬ್ಯಾಂಕ್ ವ್ಯವಹಾರದ ಕೇಂದ್ರ. ಆಹಾರ ಪದಾರ್ಥಗಳು, ಉಡುಪು, ಮುದ್ರಣ, ಪ್ರಕಾಶನ ಮತ್ತು ವಿದ್ಯುತ್ ಸಾಮಾನುಗಳಿಗೆ ನಗರ ಪ್ರಸಿದ್ಧ. ಎರಡನೆಯ ಮಹಾಯುದ್ಧದ ಅನಂತರ ತಲೆಯೆತ್ತಿರುವ ಸಂಶೋಧನೆ ಮತ್ತು ಅಭಿವೃದ್ಧಿ ಚಟುವಟಿಕೆಯ ಅಧಿಕ ಪಾಲು ಬಾಸ್ಟನ್ ಮಹಾನಗರ ಪ್ರದೇಶದಲ್ಲಿ ಬೆಳೆದುಕೊಂಡಿವೆ.

ಈ ಮಹಾನಗರದ ಆಡಳಿತ ನಾಲ್ಕು ವರ್ಷಗಳ ಅವಧಿಗೆ ಚುನಾಯಿತರಾಗುವ ಮೇಯರ್ ಮತ್ತು 9 ಮಂದಿ ಸದಸ್ಯರಿಂದ ಕೂಡಿರುವ ನಗರಸಭೆಯ ಕೈಯಲ್ಲಿದೆ. ಇಲ್ಲಿಯ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಭೂಗತ ಮತ್ತು ನೆಲದ ಮೇಲಿನ ಹಾಗೂ ಎತ್ತರದ ರೈಲು ಮಾರ್ಗಗಳನ್ನು ಅವಲಂಬಿಸಿದೆ. ಖಾಸಗಿ ಬಸ್ಸುಗಳೂ ಉಂಟು. ಮೆಸಾಚ್ಯುಸೆಟ್ಸ್ ಬಂದರು ಪ್ರಾಧಿಕಾರಕ್ಕೆ ಪೂರ್ವ ಬಾಸ್ಟನ್ನಿನಲ್ಲಿರುವ ಲೋಗನ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಬಾಸ್ಟನ್ ಬಂದರು ಸೇರಿವೆ. ಐದು ಅಂತರರಾಜ್ಯ ಹೆದ್ದಾರಿಗಳು ಈ ನಗರವನ್ನು ಹಾದುಹೋಗುತ್ತದೆ. ಬಾಸ್ಟನ್ ನಗರದಲ್ಲಿ ಪದವಿಗಳನ್ನು ನೀಡುವ 16 ಸಂಸ್ಥೆಗಳೂ ಮಹಾನಗರದಲ್ಲಿ 47 ಸಂಸ್ಥೆಗಳೂ ಇವೆ. 1898ರಲ್ಲಿ ಸ್ಥಾಪಿತವಾದ ಬಾಸ್ಟನ್ ವಿಶ್ವವಿದ್ಯಾಲಯ, ಸಫಾಕ್ ವಿಶ್ವವಿದ್ಯಾಲಯ (1906), ಸಿಮ್ಮನ್ಸ್ (1899), ಇಮಾನ್ಯುಯೇಲ್ (1919) ಮತ್ತು ಎಮರ್ಸನ್ (1880) ಕಾಲೇಜುಗಳು ಹಾಗೂ ಹಾರ್ವರ್ಡ್ ವಿಶ್ವವಿದ್ಯಾಲಯದ ಔಷಧವೈದ್ಯ ದಂತಚಿಕಿತ್ಸೆ, ಸಾರ್ವಜನಿಕ ಆರೋಗ್ಯ ಮತ್ತು ವ್ಯವಹಾರ ನಿರ್ವಾಹ ಶಾಖೆಗಳು ನಗರದೊಳಗಿವೆ. ಹಾರ್ವರ್ಡ್ ವಿಶ್ವವಿದ್ಯಾಲಯದ ಉಳಿದ ಶಾಖೆಗಳು ರಾಡ್ ಕ್ಲಿಫ್ ಕಾಲೇಜು (1879) ಮತ್ತು ಯಂತ್ರ ಕಲಾಶಾಸ್ತ್ರದ ಮೆಸಾಚ್ಯುಸೆಟ್ಸ್ ಸಂಸ್ಥೆ (1861) ಚಾಲ್ರ್ಸ್ ನದಿಯು ಆಚೆಗೆ ಕೇಂಬ್ರಿಡ್ಜಿನಲ್ಲಿವೆ. ಟಿಫ್ಟ್ಸ್ ವಿಶ್ವವಿದ್ಯಾಲಯದ (1852) ವೈದ್ಯಕೀಯ ಶಾಲೆ ಕೂಡ ಇಲ್ಲಿಯೇ ಇದೆ. ಅತಿ ಪುರಾತನ ಆಸ್ಪತ್ರೆಗಳಲ್ಲೊಂದಾಗಿರುವ ಮೆಸಾಚ್ಯುಸೆಟ್ಸ್ ಜನರಲ್, ಬೆತ್ ಇಸ್ರೇಲ್ ಚಿಲ್ಡ್ರನ್ಸ್ ಡೀಕಾನೆಸ್ ಮತ್ತು ಪೀಟರ್ ಬೆಂಟ್‍ಬ್ರಿಗ್ ಹ್ಯಾಮ್ ಆಸ್ಪತ್ರೆ ಹಾಗೂ ನ್ಯೂ ಇಂಗ್ಲೆಂಡ್ ವೈದ್ಯಕೀಯ ಕೇಂದ್ರ ಮುಂತಾದವುಗಳಿವೆ.

ಬಾಸ್ಟನ್ನಿನಲ್ಲಿ ಸಮೃದ್ಧ ಹಾಗೂ ವೈವಿಧ್ಯಮಯ ಜೀವನಕ್ಕೆ ಅವಕಾಶವಿದೆ. ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಎಲ್ಲ ಬಗೆಯ ಪ್ರೇಕ್ಷಣೀಯ ಸೌಲಭ್ಯಗಳಿವೆ. 1881ರಲ್ಲಿ ಸ್ಥಾಪಿತವಾದ ಬಾಸ್ಟನ್ ಸಿಂಪೊನಿ ಆರ್ಕೆಸ್ಟ್ರಾ ಬಾಸ್ಟನ್ನಿನ ಪ್ರಧಾನ ಸಂಗೀತ ಆಕರ್ಷಣೆ. ನ್ಯೂ ಇಂಗ್ಲೆಂಡ್ ಕಾನ್ಸರ್ವೇಟರಿ ಆಫ್ ಮ್ಯೂಸಿಕ್ ಮತ್ತು ಇತರ ಅನೇಕ ಸಂಗೀತ ಶಾಲೆಗಳೂ ಇವೆ. ಬಾಸ್ಟನ್ ಪಾಪ್ಸ್ ಆರ್ಕೆಸ್ಟ್ರಾ ಹ್ಯಾಟ್ ಸ್ಮಾರಕ ಕಟ್ಟಡದಲ್ಲಿ ಅನೇಕ ವಾದ್ಯಗೋಷ್ಟಿಗಳನ್ನು ನಡೆಸುತ್ತದೆ. 1870 ರಲ್ಲಿ ಸಂಘಟಿತವಾದ ಲಲಿತ ಕಲೆಗಳ ಸಂಗ್ರಹಾಲಯದಲ್ಲಿ ಈಜಿಪ್ಟಿನ ಮತ್ತು ಅಂತರರಾಷ್ಟ್ರೀಯ ಪ್ರಖ್ಯಾತಿಯ ಪ್ರದರ್ಶನವಸ್ತುಗಳನ್ನು ಹಾಗೂ ವರ್ಣಚಿತ್ರ, ಮುದ್ರಣ ಬಟ್ಟೆ ಮತ್ತು ಆಲಂಕಾರಿಕ ಕಲೆಗಳ ನಿದರ್ಶನಗಳನ್ನು ಕಾದಿಡಲಾಗಿದೆ. ಇಸಾಬೆಲ್ಲಾ ಸ್ಟೂಆರ್ಟ್‍ಗಾಡ್ರ್ನರ್ ವಸ್ತು ಸಂಗ್ರಹಾಲಯದಲ್ಲಿ ಇಟಲಿಯ ಪುನರುಜ್ಜೀವನಕಾಲದ ವರ್ಣಚಿತ್ರಗಳಿವೆ. ಹಾರ್ವರ್ಡಿನಲ್ಲಿ ವಿಜ್ಞಾನ ಮತ್ತು ಪ್ರಕೃತಿ ಚರಿತ್ರೆಗಳಿಗೆ ಮಿಸಲಾಗಿರುವ ಒಂದು ಲಲಿತ ಕಲೆಗಳ ವಸ್ತುಸಂಗ್ರಹಾಲಯ ಸೇರಿದಂತೆ ಅನೇಕ ವಸ್ತು ಸಂಗ್ರಹಾಲಯಗಳಿವೆ. ಮಕ್ಕಳ ಶಿಕ್ಷಣಕ್ಕೆ ಯೋಗ್ಯವಾದ ಚಾರ್ಲಸ್ ನದಿಯ ಬೋಗುಣಿಯ ಮೇಲಿರುವ ವಿಜ್ಞಾನ ಉದ್ಯಾನದಲ್ಲಿರುವ ವಿಜ್ಞಾನ ವಸ್ತುಸಂಗ್ರಹಾಲಯ ಹಾಗೂ ಜಮೈಕಾ ಪ್ಲೇನಿನಲ್ಲಿ ಮಕ್ಕಳ ವಸ್ತುಸಂಗ್ರಹಾಲಯಗಳಿವೆ. ಅನೇಕ ಕಾಲೇಜುಗಳ ಮತ್ತು ವಿಶ್ವವಿದ್ಯಾಲಯಗಳ ವಾಚನಾಲಯಗಳ ಜೊತೆ 1854ರಲ್ಲಿ ಸ್ಥಾಪಿತವಾದ ಬಾಸ್ಟನ್ ಸಾರ್ವಜನಿಕ ವಾಚನಾಲಯ ನಗರದ ಉದ್ದಕ್ಕೂ ಹರಡಿರುವ ತನ್ನ ಶಾಖೆಗಳ ಮೂಲಕ ಕಾರ್ಯ ನಿರ್ವಹಿಸುತ್ತದೆ. 1807ರಲ್ಲಿ ಸ್ಥಾಪಿತವಾದ ಖಾಸಗಿ ಬಾಸ್ಟನ್ ಆ್ಯಥಿನೀಯಮ್ ಮತ್ತು ರಾಜ್ಯವಾಚನಾಲಯಗಳಿವೆ.

ಬಾಸ್ಟನ್ನಿನಲ್ಲಿ ನೆಲಸಿದ ಮೊದಲ ಶ್ವೇತ ಜನಾಂಗದವರಲ್ಲಿ ವಿಲಿಯಮ್ ಬ್ಲಾಕ್ ಸ್ಟೋನ್ ಎಂಬ ಪಾದ್ರಿ ಮೊದಲಿಗ. ಈತ ಕೆಲವು ಸಾಹಸಿಗಳೊಡನೆ 1620ರಲ್ಲಿ ಬಾಸ್ಟನ್ನಿಗೆ ಬಂದು ನೆಲಸಿದ. ಅನಂತರ ಜಾನ್ ವಿಂತ್ರಾಪ್‍ನ ಮುಂದಾಳುತನದಲ್ಲಿ 1630ರಲ್ಲಿ ಇಂಗ್ಲಿಷ್ ಪ್ಯೂರಿಟನ್ನರ ಗುಂಪೊಂದು ಬಂದಿತು. ವಸಾಹತುಗಾರರು ಮೊದಲು ಟ್ರಿಮಾಂಟೇನ್ ಎಂದು ಕರೆದವರಾದರೂ 1630 ಸೆಪ್ಟೆಂಬರ್ 17ರಂದು ಬಾಸ್ಟನ್ ಎಂದು ಅಧಿಕೃತವಾಗಿ ಹೆಸರಿಟ್ಟರು. ಮೆಸಾಚ್ಯುಸೆಟ್ಸ್ ಬೇ ವಸಾಹತಿನ ಆಡಳಿತ ಸ್ಥಳವಾಗಿದ್ದ ಬಾಸ್ಟನ್ ನ್ಯೂ ಇಂಗ್ಲೆಂಡಿನ ಪ್ರಧಾನ ನಗರವಾಯಿತು. 18ನೆಯ ಶತಮಾನದ ಮಧ್ಯದ ತನಕವೂ 13 ಇಂಗ್ಲಿಷ್ ವಸಾಹತುಗಳ ಅತಿ ದೊಡ್ಡ ನಗರವಾಗಿ ಉಳಿಯಿತು. ಅಲ್ಪಕಾಲದಲ್ಲಿ ಅದು ಮೀನುಗಾರಿಕೆಯ ಹಾಗೂ ಯೂರೊಪ್ ಆಫ್ರಿಕ ಮತ್ತು ವಸ್ಟ್ ಇಂಡೀಸುಗಳ ವ್ಯಾಪಾರ ಕೇಂದ್ರವಾಯಿತು. 17ನೆಯ ಶತಮಾನದ ಇಂಗ್ಲಿಷ್ ಆಂತರಿಕ ಕಲಹದಲ್ಲಿ ಬಾಸ್ಟನ್ ರಾಜಕೀಯವಾಗಿ ರಾಜವಿರೋಧಿಯಾಗಿತ್ತು. 1688ರಲ್ಲಿ ಎರಡನೆಯ ಜೇಮ್ಸ್ ನೇಮಿಸಿದ ಸರ್ ಎಡ್ಮಂಡ್ ಜೇಮ್ಸ್‍ನನ್ನು ಪದಚ್ಯುತಿ ಮಾಡಿ ಸೆರೆಯಲ್ಲಿಡಲಾಯಿತು. ವಸಾಹತುಗಳಲ್ಲೇ ಅತಿ ಮೊದಲಿನ ಟಂಕಶಾಲೆ, ಅಂಚೆ ಕಚೇರಿ ಮತ್ತು ಬ್ಯಾಂಕುಗಳ ಸ್ಥಾಪನೆ ಬಾಸ್ಟನ್ನಿನಲ್ಲಾಯಿತು. 18ನೆಯ ಶತಮಾನದಲ್ಲಿ ವಸಾಹತುಗಳ ಸ್ವಾತಂತ್ರ್ಯ ಹೋರಾಟದಲ್ಲಿ ಬಾಸ್ಟನ್ ಮಹತ್ತರ ಪಾತ್ರ ವಹಿಸಿತು. ಅನೇಕ ಪ್ರತಿಭಟನೆಗಳು ನಡೆದುವು. ಬಾಸ್ಟನ್ ಜನರ ಅಸಮಾಧಾನ ಸ್ಟಾಂಪ್ ಕಾಯಿದೆ ವಿರುದ್ಧ 1765ರಲ್ಲಿ ಉಂಟಾದ ಗಲಭೆಗಳಲ್ಲಿ ವ್ಯಕ್ತಗೊಂಡಿತು. ಸ್ಯಾಮ್ಯುಯಲ್ ಆಡಮ್ಸ್, ಜಾನ್ ಹ್ಯಾನ್ ಕಾಕ್ ಮತ್ತು ಜೇಮ್ಸ್ ಒಟಿಸ್ ಇವರ ನೇತೃತ್ವದಲ್ಲಿ ಬಾಸ್ಟನ್ ಬ್ರಿಟಿಷರ ವಿರುದ್ಧ ಚಳವಳಿಯ ಕೇಂದ್ರವಾಯಿತು. ಸ್ಟಾಂಪ್ ಕಾಯಿದೆ ರದ್ದಾದ ಅನಂತರ ಜಾರಿಯಲ್ಲಿ ಬಂದ ಡಿಕ್ಲರೇಟರಿ ಕಾಯಿದೆ ಮೂಲಕ ಪಾರ್ಲಿಮೆಂಟು ವಸಾಹತುಗಳ ಮೇಲೆ ತನಗೆ ತೆರಿಗೆ ಹೇರುವ ಅಧಿಕಾರ ಇದೆಯೆಂದು ಸಾರಿತು. ಅನೇಕ ತೆರಿಗೆಗಳು ಹೇರಲ್ಪಟ್ಟವು. ಬಾಸ್ಟನ್ನಿನ ವ್ಯಾಪಾರಿಗಳು ಬ್ರಿಟಿಷ್ ಸರಕುಗಳಿಗೆ ಬಹಿಷ್ಕಾರ ಹಾಕಿದಾಗ ಎರಡು ಸೈನಿಕದಳಗಳನ್ನು ಬಾಸ್ಟನ್ನಿಗೆ ರವಾನಿಸಲಾಯಿತು. ಆ ದಳಗಳನ್ನು ಅಲ್ಲಿಯೇ ಇಡುವುದಕ್ಕೆ ನಡೆದ ಪ್ರಯತ್ನ 1770ರಲ್ಲಿ ನಡೆದ ಬಾಸ್ಟನ್ ಕಗ್ಗೊಲೆಯಲ್ಲಿ ಅಂತ್ಯಗೊಂಡಿತು. 1773 ಡಿಸೆಂಬರ್ 16 ರಂದು ಹೆಚ್ಚು ತೆರಿಗೆ ಹೇರಲಾಗಿದ್ದ ಬ್ರಿಟಿಷ್ ಟೀ ಸೊಪ್ಪಿನ ನಾಶದ ಘಟನೆ ಬಾಸ್ಟನ್ ಟೀ ಪಾರ್ಟಿ ಎಂದು ಹೆಸರಾಯಿತು. ಈ ಘಟನೆಯ ಪರಿಣಾಮವಾಗಿ ಬಂದರು ಮುಚ್ಚಲ್ಪಟ್ಟು ಬಾಸ್ಟನ್ನನ್ನು ಬ್ರಿಟಿಷ್ ಸೈನ್ಯ ಆಕ್ರಮಿಸಿತು. 1776ರ ಮಾರ್ಚಿಯಲ್ಲಿ ಆಕ್ರಮಣ ಅಂತ್ಯಗೊಂಡಿತು. 1830 ರಿಂದ 1860ರ ತನಕ ಬಾಸ್ಟನ್ ಗುಲಾಮಗಿರಿಯನ್ನು ಹತ್ತಿಕ್ಕುವುದಕ್ಕೆ ನಡೆದ ಚಳುವಳಿಯ ಮುಖ್ಯ ಕಾರ್ಯಸ್ಥಾನವಾಗಿತ್ತು.

ಬಾಸ್ಟನ್ ಅಮೆರಿಕ ಸಂಯುಕ್ತ ಸಂಸ್ಥಾನಗಳ ಅತಿ ಸುಂದರ ನಗರಗಳಲ್ಲೊಂದಾಗಿದ್ದು ವಾಸ್ತುಶಿಲ್ಪದ ಅನೇಕ ಶ್ರೇಷ್ಠ ಮಾದರಿಗಳನ್ನು ಒಳಗೊಂಡಿದೆ. ಟ್ರಿನಿಟಿ ಚರ್ಚ್ (1872) ಮತ್ತು ರೋಮನ್ ಕ್ಯಾಥೊಲಿಕ್ ಆರಾಧನಾ ಮಂದಿರ ಮುಖ್ಯವಾದುವು. ವಸಾಹತುಕಾಲದ ಅನೇಕ ಪ್ರೇಕ್ಷಣೀಯ ಕಟ್ಟಡಗಳು ಇಂದೂ ಬಾಸ್ಟನ್ನಿನಲ್ಲಿದ್ದು ಪ್ರವಾಸಿಗಳನ್ನು ಆಕರ್ಷಿಸುತ್ತವೆ. (ಜಿ.ಕೆಯು.)