ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬೀರಬಲ್

ವಿಕಿಸೋರ್ಸ್ದಿಂದ
ಬೀರಬಲ್

1528?-86. ಮುಗಲ್ ಚಕ್ರವರ್ತಿ ಅಕ್ಬರನ ಆಸ್ಥಾನದಲ್ಲಿದ್ದ ಒಬ್ಬ ಕವಿ. ಯೋಧ ಮತ್ತು ಮುತ್ಸದ್ದಿ. ಬೀರಬಲ್ಲನನ್ನು ಕುರಿತಂತೆ ನಿಖರವಾದ ಸಂಗತಿಗಳೇನೂ ತಿಳಿದು ಬರುವುದಿಲ್ಲ. ಇವರ ಬುದ್ಧಿ ಚಾತುರ್ಯಕ್ಕೆ ನಿದರ್ಶನವಾಗುವ ಅನೇಕ ಕಥೆಗಳು ಜನಪ್ರಿಯವಾಗಿವೆ. ಅವುಗಳಿಂದ ಇವನ ಬಗ್ಗೆ ಕೆಲವು ವಿಷಯಗಳು ಅಸ್ಪಷ್ಟವಾಗಿ ತಿಳಿದುಬರುತ್ತದೆ. ಅಕ್ಬರನ ನಿಕಟವರ್ತಿಯೂ ಅಚ್ಚು ಮೆಚ್ಚಿನವನೂ ಆಗಿದ್ದ ಇವನ ಹೆಸರು ಮಹೇಶದಾಸ್ ಬೀರಬಲ್. ಇವನೊಬ್ಬ ರಜಪೂತ ಮುಖಂಡನೆಂದೂ ಹೇಳುವರು. ಉತ್ತರ ಪ್ರದೇಶ ರಾಜ್ಯದ ನೈಋತ್ಯ ದಿಕ್ಕಿನಲ್ಲಿ ಯಮುನಾನದಿ ದಡದ ಮೇಲಿರುವ ಕಾಲ್ಪೇ ಎಂಬ ಗ್ರಾಮದಲ್ಲಿ (ಈಗ ಒಂದು ಪಟ್ಟಣ) ಕ್ರಿ.ಶ.1528ರಲ್ಲಿ ಜನಿಸಿದನೆಂದು ತಿಳಿದುಬರುತ್ತದೆಯಾದರೂ ಈತನ ಜನ್ಮಸ್ಥಳ ಕುರಿತು ವಾದವಿವಾದಗಳಿವೆ. ಈತ ಕವನಕಾರನಾಗಿ ತನ್ನ ಜೀವನ ಪ್ರಾರಂಭಿಸಿದನೆಂದೂ ಚಕ್ರವರ್ತಿ ಮತ್ತು ಅಬುಲ್ ಫಜಲರ ಪ್ರೀತಿ ವಿಶ್ವಾಸಗಳಿಗೆ ಪಾತ್ರನಾಗಿದ್ದನೆಂದೂ ತಿಳಿದುಬರುವುದು. ಈತ ಸಾಧಾರಣ ಲೆಕ್ಕಿಗನ ಸ್ಥಾನದಿಂದ ಸ್ವಪ್ರತಿಭೆ, ಪರಿಶ್ರಮ ಹಾಗೂ ಚತುರತೆಯ ಫಲವಾಗಿ ರಾಜನ ಪ್ರೀತಿಗೆ ಪಾತ್ರನಾಗಿ ಉನ್ನತ ಪದವಿಗೇರಿದನೆಂದು ಹೇಳುವರು. ಅಕ್ಬರನ ಸಖ್ಯ ಗಳಿಸುವುದಕ್ಕೆ ಮೊದಲು ಬೀರಬಲ್ ಕೆಲಕಾಲ ಭಥಾದ ರಾಜಾರಾಮಚಂದ್ರನ ಸೇವೆಯಲ್ಲೂ ಅನಂತರ ಅಂಬರರಾಜನ ಆಸ್ಥಾನದಲ್ಲೂ ಇದ್ದನೆಂದು ಹೇಳುವುದಲ್ಲದೆ ಅಕ್ಬರನ ದೃಷ್ಟಿಗೆ ಈತ ಹೇಗೆ ಬಿದ್ದ ಮತ್ತು ಇವರಿಬ್ಬರ ಮಧ್ಯೆ ಗೆಳೆತನ ಹೇಗೆ ಬೆಳೆಯಿ ತೆಂಬುದಕ್ಕೆ ಕೆಲವು ಕಲ್ಪಿತವೆನ್ನುವ ಹೇಳಿಕೆಗಳೂ ಉಂಟು. ಒಟ್ಟಿನಲ್ಲಿ ಪ್ರೌಢ ವಿದ್ಯಾಭ್ಯಾಸವಿಲ್ಲದಿದ್ದರೂ ಬೀರಬಲ್ ತನ್ನ ಚಾಕಚಕ್ಯತೆ ಮತ್ತು ಹಾಸ್ಯ ಪ್ರವೃತಿಯಿಂದಾಗಿ ಅಕ್ಬರನ ಸೇವೆಯಲ್ಲಿದ್ದ ಪ್ರಮುಖ ಆಸ್ಥಾನಿಕರಲ್ಲಿ ಒಬ್ಬನಾಗಿದ್ದನೆನ್ನಬಹುದು. ಈತನ ಹಾಸ್ಯ ಚಟಾಕಿಗಳ ಚತುರತೆಯ ಕಥೆಗಳು ಪ್ರಸಿದ್ಧವಾಗಿವೆ. ಕವಿಯಾದ ಈತನಿಗೆ ಅಕ್ಬರ್ ಕವಿಪ್ರಿಯನೆಂಬ ಬಿರುದನ್ನು ನೀಡಿದ್ದ. ಹಿಂದಿಯಲ್ಲಿ ಈತ ಕವಿತೆ ಗಳನ್ನು ರಚಿಸಿದ್ದನೆನ್ನುವರು. ಹಿಂದಿನ ಪಂಜಾಬ್ ಪ್ರಾಂತ್ಯದ ಕಾಂಗ್ರ ಜಿಲ್ಲೆಯ ನಾಗರಕೋಟ್‍ನ ಜಹಗೀರಿಯನ್ನು ಪಡೆದಿದ್ದಲ್ಲದೆ ರಾಜನೆಂಬ ಬಿರುದನ್ನು ಪಡೆದು ರಾಜಬೀರಬಲ್ ಎಂದು ಗೌರವಿಸಲ್ಪಟ್ಟ ಕೂಡ. ಮುಂದೆ ಕಲೆಂಜರ್ ಮತ್ತು ಬುಂದೇಲ್ ಖಂಡ ಪ್ರದೇಶವನ್ನು ಜಹಗೀರಿಯಾಗಿ ಪಡೆದ. ಕಾಲಕ್ರಮದಲ್ಲಿ 2,000 ಸೈನಿಕ ಪಡೆಯ ಅಧಿಕಾರಿಯಾಗಿ ಬಡ್ತಿಗೊಂಡ. ಬಾದ್‍ಷಹನಿಂದ ನ್ಯಾಯಪಾಲನೆಯ ಮುಖ್ಯ ಅಧಿಕಾರಿಯಾಗಿ 1583ರಲ್ಲಿ ನೇಮಕಗೊಂಡ. ಆಸ್ಥಾನದ ದಿನನಿತ್ಯದ ಹಣದ ವಹಿವಾಟನ್ನು ನೋಡಿ ಕೊಳ್ಳುತ್ತಿದ್ದ. ಅನೇಕ ಸಂದರ್ಭಗಳಲ್ಲಿ ಹಿಂದೂ ರಾಜನ ಜೊತೆ ಸಂಧಾನ ನಡೆಸಲೂ ಇವನನ್ನು ಅಕ್ಬರ್ ಕಳಿಸಿಕೊಡುತ್ತಿದ್ದ. ಎಲ್ಲಕ್ಕೂ ಮಿಗಿಲಾಗಿ ಅಕ್ಬರನ ನಿಕಟವರ್ತಿ ಆಗಿದ್ದ.

ಅಕ್ಬರನ ದೀನ್-ಇ-ಇಲಾಹಿ ಹೊಸ ಧರ್ಮವನ್ನು ಅಂಗೀಕರಿಸಿದ ಪ್ರಮುಖರಲ್ಲಿ ಬೀರಬಲ್ ಒಬ್ಬ. ಬೀರಬಲ್ ಸೂರ್ಯನ ಆರಾಧಕನಾಗಿದ್ದು ಅಕ್ಬರನೂ ಸೂರ್ಯ ನಮಸ್ಕಾರ ಮಾಡುವಂತೆ ಪ್ರಭಾವ ಬೀರಿದ್ದನೆಂದು ಹೇಳುವುದುಂಟು. ಅಕ್ಬರ್ ಏರ್ಪಡಿಸುತ್ತಿದ್ದ ಧರ್ಮ ಸಂಬಂಧಿತ ಚರ್ಚೆಗಳಲ್ಲಿ ಈತ ಪಾಲ್ಗೊಳ್ಳುತ್ತಿದ್ದ. ಅಕ್ಬರ್ ಹಿಂದೂ ಧರ್ಮದ ಬಗ್ಗೆ ಗೌರವ ತಳೆಯುವಂತೆ ಮಾಡುವಲ್ಲಿ ಬೀರಬಲ್ ಅಪಾರ ಪ್ರಾಭಾವ ಬೀರಿದ್ದ. 1586ರಲ್ಲಿ ಯೂಸುಫ್ ಜಾ ಮೇಲಿನ ಕಾರ್ಯಾಚರಣೆಯಲ್ಲಿ ಮುಗಲ್ ಸೈನ್ಯದ ಮುಂದಾಳಾಗಿ ಕಾದಾಡುತ್ತಿದ್ದಾಗ ಮರಣ ಹೊಂದಿದನೆಂದು ತಿಳಿದು ಬರುವುದು. ಆದರೆ ಬೀರಬಲ್ಲನ ಮೃತದೇಹ ಸಿಗದೆ ಅದಕ್ಕೆ ಸಂಸ್ಕಾರವನ್ನು ಮಾಡಲಾಗದಿದ್ದಕ್ಕಾಗೆ ಅಕ್ಬರ್ ಪರಿತಪಿಸಿದನೆಂದೂ ಹೇಳುವರು. ತನ್ನ ಜೀವಿತ ಕಾಲದಲ್ಲಿ ಬೀರಬಲ್ ಉದಾರಬುದ್ಧಿಗೆ ಹೆಸರಾಗಿದ್ದ. ಈತ ಹಾಸ್ಯ ವಿಡಂಬನೆಗಳ ಅನೇಕ ಕವಿತೆಗಳ ಕರ್ತೃವಾಗಿದ್ದನೆಂದೂ ಈತನ ಕಾವ್ಯ ನಾಮ ಬ್ರಹ್ಮದಾಸ್ ಎಂದೂ ಹೇಳುವರು. ಬೀರಬಲ್ಲನ ಮರಣದ ಅನಂತರ ಅವನ ಹಿರಿಯ ಮಗ ಲಾಲನನ್ನು ಅಕ್ಬರ್ ತನ್ನ ಆಸ್ಥಾನದಲ್ಲಿ ಮನ್ಸಬ್ದಾರನನ್ನಾಗಿ ನೇಮಿಸಿಕೊಂಡನೆಂದು ತಿಳಿದುಬರುವುದು. (ಜಿ.ಆರ್.ಆರ್.)