ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬೀರೂರು

ವಿಕಿಸೋರ್ಸ್ ಇಂದ
Jump to navigation Jump to search

ಬೀರೂರು ಕರ್ನಾಟಕ ರಾಜ್ಯದ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ಹೋಬಳಿ ಕೇಂದ್ರ ಮತ್ತು ಪಟ್ಟಣ. ಕಡೂರಿನ ವಾಯವ್ಯಕ್ಕೆ 7 ಕಿಮೀ ದೂರದಲ್ಲಿದೆ. ಜನಸಂಖ್ಯೆ 18,081 (1981) ಬೆಂಗಳೂರು ಪುಣೆ ರೈಲು ಮಾರ್ಗ ಮತ್ತು ಬೆಂಗಳೂರು-ಹೊನ್ನಾವರ ರಸ್ತೆ ಈ ಊರಿನ ಮೂಲಕ ಹಾದುಹೋಗುತ್ತವೆ.

ಇದೊಂದು ಪ್ರಮುಖ ವಾಣಿಜ್ಯ ಕೇಂದ್ರ. ಶಿವಮೊಗ್ಗ ಜಿಲ್ಲೆಯ ತೀರ್ಥ ಹಳ್ಳಿ ಪ್ರಾಮುಖ್ಯಕ್ಕೆ ಬರುವ ತನಕವೂ ಬೀರೂರು ಅಡಿಕೆ ವ್ಯಾಪಾರಕ್ಕೆ ಪ್ರಸಿದ್ಧವಾಗಿತ್ತು. ತೆಂಗಿನ ಕಾಯಿ, ಅಡಿಕೆ, ದಿನಸಿ ಸಾಮಾನುಗಳ ವ್ಯಾಪಾರ ಈಗ ಗಣನೀಯ ಪ್ರಮಾಣದಲ್ಲಿ ನಡೆಯುತ್ತದೆ. ವ್ಯವಸಾಯಕ್ಕೆ ಸಂಬಂಧಿಸಿದ ಉಪಕರಣಗಳು, ಬಳೆ, ಸುಣ್ಣ ಮುಂತಾದವು ಇಲ್ಲಿ ತಯಾರಾಗುತ್ತದೆ. ಕಂಬಳಿ ತಯಾರಿಸುವ ಮಗ್ಗಗಳೂ ಇವೆ. ಪ್ರಥಮ ದರ್ಜೆ ಕಾಲೇಜು, ಆಸ್ಪತ್ರೆ, ಪಶು ವೈದ್ಯಶಾಲೆ ಮೊದಲಾದವುಗಳಿವೆ. ಪಟ್ಟಣ ಪುರಸಭಾಡಳಿತಕ್ಕೆ ಸೇರಿದೆ.

ಕನ್ನಿಕಾಪರಮೇಶ್ವರಿ, ರಾಮದೇವರು, ಆಂಜನೇಯ, ವೀರಭದ್ರ, ಜೈನ ದೇವಾಲಯಗಳಿವೆ. ಪ್ರತಿ ವರ್ಷ ಫೆಬ್ರವರಿ ತಿಂಗಳಲ್ಲಿ ವೀರಭದ್ರಸ್ವಾಮಿ ಜಾತ್ರೆ ನಡೆಯುವುದು. ಸುಗ್ಗಿಯ ಕಾಲದಲ್ಲಿ ನಡೆಯುವ ಅಂತರಕಟ್ಟಪ್ಪನ ಜಾತ್ರೆ ರೈತರಿಗೆ ಮುಖ್ಯವಾದುದು. ದಸರ ಸಮಯದಲ್ಲಿ ಮೈಲಾರಿ ಲಿಂಗನ ಜಾತ್ರೆ ನಡೆಯವುದು.

ಕದಂಬ ವಿಷ್ಣುವರ್ಮನ ಕಾಲದ (5ನೆಯ ಶತಮಾನ) ಒಂದು ತಾಮ್ರಶಾಸನ ಈ ಊರಿನಲ್ಲಿ ದೊರೆತಿದೆ. ಇದರಲ್ಲಿ ಕರ್ನಾಟಕ ಪ್ರದೇಶವೆಂಬ ಉಲ್ಲೇಖವಿರುವುದು ಗಮನಾರ್ಹ. ಇಲ್ಲಿರುವ ಹೊಯ್ಸಳ ಎರಡನೆಯ ವಿನಯಾದಿತ್ಯನ ಶಾಸನದಿಂದ ಈ ಊರು ಹನ್ನೊಂದನೆಯ ಶತಮಾನದಲ್ಲಿ ಒಂದು ಪ್ರಮುಖ ಪಟ್ಟಣವಾಗಿತ್ತೆಂದು ತಿಳಿದುಬರುತ್ತದೆ. ಅಲ್ಲದೆ ಶಾಸನದಲ್ಲಿ ಹೊಯ್ಸಳ ದಂಡನಾಯಕ ಪೊಚಿಮಯ್ಯ ಇಲ್ಲಿ ಪೋಚೇಶ್ವರ ದೇವಾಲಯ ಕಟ್ಟಿಸಿದುದರ ಉಲ್ಲೇಖವಿದೆ. ಹೊಯ್ಸಳರ ಕಾಲದಲ್ಲಿ ಇದು ಸ್ಥಳೀಯ ಆಡಳಿತದ ಮುಖ್ಯ ಕೇಂದ್ರವಾಗಿತ್ತು.