ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬೀವರ್

ವಿಕಿಸೋರ್ಸ್ದಿಂದ

ಬೀವರ್ ಮ್ಯಾಮೇಲಿಯ ವರ್ಗದ ರಾಡೆಂಷಿಯ ಗಣದ, ಕ್ಯಾಸ್ಟೊರಿಡೀ ಕುಟುಂಬಕ್ಕೆ ಸೇರಿದ ಜಲವಾಸಿ ದಂಶಕ. ಈ ಜಾತಿಯ ವೈಜ್ಞಾನಿಕ ಹೆಸರು ಕ್ಯಾಸ್ಟರ್. ಇದರಲ್ಲಿ ಕೆನಡೆನ್ಸಿಸ್ ಮತ್ತು ಫೈಬರ್ ಎಂಬ ಎರಡು ಪ್ರಭೇದಗಳುಂಟು. ಮೊದಲನೆಯದು ನವೀನ ಪ್ರಪಂಚದ (ನ್ಯೂವಲ್ರ್ಡ್) ಬೀವರ್. ಉತ್ತರ ಅಮೆರಿಕದಲ್ಲಿ ಮಾತ್ರ ಕಾಣದೊರೆಯುವ ಇದು ಹಿಂದೆ ಉತ್ತರ ಮೆಕ್ಸಿಕೋದಿಂದ ಹಿಡಿದು ಆರ್ಕ್‍ಟಿಕ್‍ವರೆಗಿನ ವಿಸ್ತಾರ ಪ್ರದೇಶದಲ್ಲಿ ಜೀವಿಸಿತ್ತು. ತುಪ್ಪುಳಿನ ಆಸೆಗಾಗಿ ಇದನ್ನು ವ್ಯಾಪಕವಾಗಿ ಬೇಟೆಯಾಡಿದ್ದರಿಂದ ಇದರ ಸಂಖ್ಯೆ ಕ್ಷೀಣಿಸುತ್ತ ಬಂದು ಅಮೆರಿಕ ಸಂಯುಕ್ತ ಸಂಸ್ಥಾನಗಳ ಉತ್ತರ ಭಾಗ ಹಾಗೂ ಕೆನಡಗಳಲ್ಲಿ ಈ ಬೀವರ್ ಬದುಕುವಂತಾಗಿದೆ. ಈಗ ಇದರ ಬೇಟೆಯನ್ನು ನಿಷೇಧಿಸಿರುವುದರಿಂದ ಇದಕ್ಕೆ ಸಾಕಷ್ಟು ರಕ್ಷಣೆ ದೊರೆತಿದೆ. ಎರಡನೆಯ ಪ್ರಭೇದವಾದ ಫೈಬರ್ ಯೂರೊಪಿನ ಎಲ್ಬೆ ಮತ್ತು ರೋನ್ ನದೀಹರವುಗಳಲ್ಲಿ ವಾಸಿಸುತ್ತಿದ್ದು ಪ್ರಾಚೀನ ಪ್ರಪಂಚದ (ಓಲ್ಡ್ ವಲ್ರ್ಡ್) ಬೀವರ್ ಎಂದು ಪ್ರಸಿದ್ಧವಾಗಿದೆ. ಇದಕ್ಕೂ ಕಾನೂನಿನ ರಕ್ಷಣೆ ಉಂಟು.

ಬೀವರ್ ದಷ್ಪಪುಷ್ಟ ಪ್ರಾಣಿ; ಸುಮಾರು 1.3 ಮೀ ಉದ್ದವೂ 30 ಕೆಜಿ ಭಾರವೂ ಇರುತ್ತದೆ. 0.3 ಮೀ ಉದ್ದದ ದೋಣಿಯ ಹುಟ್ಟಿನಂತೆ ಚಪ್ಪಟೆಯಾದ ಬಾಲವುಂಟು. ಬಾಲದ ಮೇಲೆ ಕೂದಲುಗಳ ಬದಲು ಶಲ್ಕಗಳ ಹೊದಿಕೆಯಿದೆ. ದೇಹದ ಮೇಲೆ ಮೃದುವಾದ ದಟ್ಟವಾದ ಉಣ್ಣೆಯಂಥ ತುಪ್ಪುಳು ಉಂಟು.ಮೈಬಣ್ಣ ಹೊಳೆಯುವ ಹಳದಿಕಂದು. ಉದರ ಭಾಗ ತಿಳಿಕಂದು ಬಾಲ ಹಾಗೂ ಪಾದಗಳು ಕಪ್ಪು ಬಣ್ಣದವು. ಕಿವಿಗಳು ಗುಂಡಗೂ ಕಿರಿಗಾತ್ರದವೂ ಆಗಿವೆ. ಕಾಲುಗಳು ಮೋಟು. ಹಿಂಗಾಲಿನಲ್ಲಿ ಜಾಲಪಾದಗಳುಂಟು. ಗಂಡು ಹೆಣ್ಣುಗಳೆರಡರಲ್ಲೂ ಗುದದ್ವಾರದ ಬಳಿ ಪುನುಗಿನ ಗ್ರಂಥಿಗಳಿವೆ. ಇದರಿಂದ ಕ್ಯಾಸ್ಟೋರಿಯಮ್ ಎಂಬ ಸುವಾಸನಾಯುಕ್ತ ದ್ರವ ಉತ್ಪತ್ತಿಯಾಗುತ್ತದೆ. ಇದನ್ನು ಸುಗಂಧ ತಯಾರಿಕೆಯಲ್ಲಿ ಬಳಸುವುದಿದೆ.

ಬೀವರುಗಳು ಸಾಮಾನ್ಯವಾಗಿ ಸಣ್ಣಪುಟ್ಟ ನದಿ, ಹಳ್ಳ ಹಾಗೂ ಝರಿಗಳ ದಂಡೆಗಳಲ್ಲಿ ವಾಸಿಸುವುವು. ಅರಣ್ಯಗಳ ಅಂಚಿನಲ್ಲಿರುವ ಸರೋವರಗಳ ದಡಗಳಲ್ಲೂ ವಾಸಿಸುವುದುಂಟು. ತಮ್ಮ ಬಾಚಿಹಲ್ಲುಗಳ ಸಹಾಯದಿಂದ ಮರಗಿಡಗಳನ್ನು ಕಡಿದು ನದಿ, ಹಳ್ಳಗಳ ಹರಿವಿಗೆ ಅಡ್ಡಲಾಗಿ ಇಟ್ಟು, ಕೆಸರು ಕಲ್ಲು, ಸೊಪ್ಪು ಸೆದೆಗಳನ್ನು ಮೆತ್ತಿ ಬಲವಾದ ಅಣೆಗಳನ್ನು ಕಟ್ಟುವ, ಕೌತುಕಮಯ ಗುಣವನ್ನು ಬೀವರ್‍ಗಳು ತೋರುವುವು. ಕಡ್ಡಿ, ಕೆಸರುಗಳನ್ನು ಬಳಸಿಕೊಂಡು ನದಿ ದಂಡೆಗಳಲ್ಲಿ ಕೊಳಗಳ ಅಂಚಿನಲ್ಲಿ ತಮ್ಮ ವಾಸದ ಮನೆಗಳನ್ನು (ಲಾಡ್ಜ್) ಕೂಡ ಇವು ಕಟ್ಟಿಕೊಳ್ಳುವುವು. ಇಂಥ ಗುಣದಿಂದಾಗಿ ಬೀವರುಗಳನ್ನು ಪ್ರಾಣಿಪ್ರಪಂಚದ ಇಂಜಿನಿಯರುಗಳು ಎಂದು ಕರೆಯುವುದಿದೆ. ಇವು ನಿರ್ಮಿಸುವ ಅಣೆಗಳು ಸುಮಾರು 25 ಮೀಟರುಗಳಿಂದ 600 ಮೀಟರು ಉದ್ದ ಇರುವುದುಂಟು. ಇಂಥ ಒಡ್ಡುಗಳಿಂದಾಗಿ ನದಿಗಳಲ್ಲಿ ಅಲ್ಲಲ್ಲಿ ಭಾರಿಯಾದ ಹಲವಾರು ಎಕರೆ ವಿಸ್ತೀರ್ಣದ ಮಡುಗಳು ರೂಪುಗೊಳ್ಳುವುವು. ಒಡ್ಡುಗಳನ್ನು ಆಗಾಗ ರಪೇರಿ ಮಾಡುತ್ತ ಹಲವಾರು ವರ್ಷಗಳ ಕಾಲ ಕಾಪಾಡಿಕೊಳ್ಳುವುದರಿಂದ ಮಡುಗಳಲ್ಲಿ ಹೂಳು ಸಂಗ್ರಹಗೊಳ್ಳುತ್ತ ಬಂದು ಕಾಲಕ್ರಮೇಣ ಹುಲ್ಲುಗಾವಲುಗಳು ರಚಿತವಾಗುವುದುಂಟು. ಇವುಗಳ ವಾಸದ ಮನೆಗಳು ಕೂಡ ಭಾರೀ ರಚನೆಗಳೇ; ಸುಮಾರು 1.8 ಮೀ ಎತ್ತರದ, 12 ಚಮೀ ವಿಸ್ತೀರ್ಣದ ಗೋಪುರಾಕೃತಿಯ ಈ ಬಿಲಗಳಲ್ಲಿ ವೀವರುಗಳು ಮಲಗಳು ಬಳಸುವ ಪ್ರತ್ಯೇಕ ಕೋಣೆಯೂ ಇರುವುದುಂಟು. ಒಂದೊಂದು ಮನೆಯಲ್ಲೂ ಹೆಣ್ಣು, ಗಂಡು ಹಾಗೂ ಹಲವಾರು ಮರಿಗಳು ವಾಸಿಸುವುವು. ಇಂಥ ಅನೇಕ ಮನೆಗಳು ಒಟ್ಟಿಗಿದ್ದು ಬೀವರುಗಳ ವಸಾಹತುಗಳೇ ರೂಪುಗೊಂಡಿರುವುದುಂಟು.

ಮರಗಿಡಗಳ ತೊಗಟೆ, ಚಿಗುರು, ಮೊಗ್ಗು, ಬೇರು ಮುಂತಾದವು ಇವುಗಳ ಆಹಾರ. ರೆಂಬೆ ಕೊಂಬೆಗಳನ್ನು ಸಣ್ಣಗಾತ್ರದ ದಿಮ್ಮಿಗಳನ್ನು ಇವು ತಳದ ಕೆಸರಿನಲ್ಲಿ ಹೂತಿಟ್ಟಿದ್ದು ಚಳಿಗಾಲದಲ್ಲಿ ಇವನ್ನು ಆಹಾರವಾಗಿ ಬಳಸುವುದೂ ಉಂಟು.

ಇವು ಸಂತಾನವೃದ್ಧಿ ಚಟುವಟಿಕೆಯಲ್ಲಿ ತೊಡಗುವ ಶ್ರಾಯ ಚಳಿಗಾಲ. ಹೆಣ್ಣು ಗಂಡುಗಳು ಆಜೀವ ಪರ್ಯಂತ ಸಂಸಾರ ನಡೆಸುವುವು. ನಾಲ್ಕು ತಿಂಗಳ ಗರ್ಭಾವಸ್ಥೆಯ ಅನಂತರ ಒಂದು ಸೂಲಿಗೆ 2-8 (ಸಾಮಾನ್ಯವಾಗಿ ನಾಲ್ಕು) ಮರಿಗಳು ಹುಟ್ಟುತ್ತವೆ. ಎರಡರಿಂದ ಮೂರು ವರ್ಷಗಳ ಕಾಲ ತಂದೆ ತಾಯಿಗಳೊಡನೆಯೇ ಇದ್ದು ಅನಂತರ ಮರಿಗಳು ಬೇರೆಯಾಗುವುವು. ಬೀವರುಗಳ ಆಯಸ್ಸು 15-20 ವರ್ಷ. ಸಾಧು ಸ್ವಭಾವದ ಪ್ರಾಣಿಗಳಿವು. ಸಾಮೂಹಿಕವಾಗಿ ಕಲೆತು ಸಹಕಾರದಿಂದ ಒಡ್ಡುಗಳ ನಿರ್ಮಾಣದಲ್ಲಿ ತೊಡಗುವುವು. ಅಪಾಯ ಒದಗಿದಾಗ ಗಾಬರಿಯಿಂದ ನೀರನ್ನು ಬಾಲದಿಂದ ಹೊಡೆದು ನೀರಿಗೆ ನೆಗೆದು ಬಿಲಗಳನ್ನು ಸೇರಿಕೊಳ್ಳುತ್ತವೆ. ಕರಡಿ, ತೋಳ, ನೀರುನಾಯಿ, ಲಿಂಕ್ಸ್, ಮುಂತಾದ ಮಾಂಸಹಾರಿಗಳು ಇವುಗಳ ಮುಖ್ಯ ಶತ್ರುಗಳು.

ತುಪ್ಪಳಿಗಾಗಿ, ಚರ್ಮಕ್ಕಾಗಿ, ಮಾಂಸಕ್ಕಾಗಿ ಬೀವರುಗಳನ್ನು ಬೇಟೆಯಾಡುವುದಿತ್ತು.

(ಟಿ.ವಿ.ಎಚ್.ಎ.)