ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬೀವು

ವಿಕಿಸೋರ್ಸ್ದಿಂದ

ಬೀವು

ಕುರಿಯ ಕರುಳಿನ ಲೋಳೆಪೊರೆ ಅಡಿ ಊತಕವನ್ನು ತೆಗೆದು ಶುದ್ಧೀಕರಿಸಿ ರಾಸಾಯನಿಕ ದ್ರವಗಳಲ್ಲಿ ಅದ್ದಿ ಹುರಿ ಮಾಡಿ ಸಾಧಾರಣವಾಗಿ ನಂಜು ಕಳೆದ ಗಾಜಿನ ನಳಿಗೆಗಳಲ್ಲಿ ಮೊಹರು ಮಾಡಿ ತುಂಬಿಸಿಟ್ಟಿರುವ ದಾರದಂಥ ವಸ್ತು (ಕ್ಯಾಟ್‍ಗಟ್). ಇದರಲ್ಲಿ ವಿಧ ವಿಧದ ಗಾತ್ರಗಳು ಬರುತ್ತವೆ. ಬೀವಿನಲ್ಲಿ ಸಾದಾ (ಪ್ಲೇನ್) ಹಾಗೂ ಕ್ರೋಮಿಕ್ ಎಂಬ ಎರಡು ಬಗೆ ಉಂಟು. ಕ್ರೋಮಿಕ್ ಆಮ್ಲದಲ್ಲಿ ಅದ್ದಿದುದೇ ಈ ಎರಡನೆಯ ಬಗೆ. ಇದಲ್ಲದೆ ಬೆಳ್ಳಿ ಸಂಯುಕ್ತ ದ್ರವದಲ್ಲಿ ಅದ್ದಿ ಬೆಳ್ಳಿ ಬೀವನ್ನೂ ತಯಾರಿಸುವುದುಂಟು. ಈ ತರದ ಬೀವುಗಳಿಗೆ ಅಧಿಕ ಬಲನರೋಧಕ ತ್ರಾಣ ಇರುತ್ತದೆ.

ಶಸ್ತ್ರ ಚಿಕಿತ್ಸೆಯಲ್ಲಿ ಕತ್ತರಿಸಿದ ಭಾಗ ಹೊಲಿಯಲು ಹಾಗೂ ರಕ್ತನಾಳಗಳನ್ನು ಕಟ್ಟಲು ಬೀವಿನ ಉಪಯೋಗವಿದೆ. ಸಾಮಾನ್ಯ ಬೀವು ಶರೀರದಲ್ಲಿ ಹತ್ತು ದಿನ ಪರ್ಯಂತ ಇದ್ದು ಅನಂತರ ವಿಲೀನವಾಗುತ್ತದೆ. ಆದರೆ ಕ್ರೋಮಿಕ್ ಬೀವು ಎರಡು ವಾರಗಳಿಗೆ ಮೇಲ್ಪಟ್ಟು ತನ್ನ ಅಸ್ತಿತ್ವ ಉಳಿಸಿಕೊಳ್ಳುತ್ತದೆ. ಬೀವು ಪ್ರೋಟೀನ್ ಪದಾರ್ಥವಾದ್ದರಿಂದ ಶರೀರದ ಇತರ ಪ್ರೋಟೀನ್ ಪದಾರ್ಥಗಳಂತೆ ಕ್ರಮೇಣ ದೇಹದಲ್ಲಿ ಜೀರ್ಣಿಸಲ್ಪಡುತ್ತದೆ. ಬೀವನ್ನು ಹುರಿಮಾಡಿ ಪಿಟೀಲು, ಟೆನ್ನಿಸ್ ದಾಂಡು ಹಾಗೂ ತಂತಿ ವಾದ್ಯಗಳಲ್ಲಿ ಬಳಸುತ್ತಾರೆ.

(ಟಿ.ಎನ್.ವಿ.)