ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬುಂದೇಲಿ

ವಿಕಿಸೋರ್ಸ್ದಿಂದ

ಬುಂದೇಲಿ - ಇಂಡೋಯೂರೊಪಿಯನ್ ಭಾಷಾಪರಿವಾರದ ಇಂಡೊ ಆರ್ಯನ್ ಭಾಷಾವರ್ಗಕ್ಕೆ ಸೇರಿದ ಹಿಂದಿ (ಪಶ್ಚಿಮೀ ಹಿಂದಿ) ಭಾಷೆಯ ಉಪಭಾಷೆ. ಇದನ್ನು ಬುಂದೇಲ್ ಖಂಡಿ ಎಂದೂ ಕರೆಯುತ್ತಾರೆ. ಝಾನ್ಸಿ, ಹಮೀರ್‍ಪುರ, ಗ್ವಾಲಿಯರ್, ಭೂಪಾಲ್, ಓರ್ಛಾ, ಸಿವನಿ, ಹೋಷಂಗಾಬಾದ್ ಮುಂತಾದ ಕಡೆಗಳಲ್ಲಿ ಈ ಭಾಷೆ ಹೆಚ್ಚು ಪ್ರಚಲಿತವಾಗಿದೆ. ಮಾತಾಡುವವರ ಸಂಖ್ಯೆ ಸುಮಾರು ಒಂದು ಕೋಟಿ. ಈ ಭಾಷೆ ಶೌರಸೇನಿ ಅಪಭ್ರಂಶದಿಂದ ವಿಕಾಸಗೊಂಡಿದೆ. ಬ್ರಜ, ಕನ್ನೌಜಿ, ಅವಧಿ, ಬಫೇಲಿ, ಮರಾಠಿ ಭಾಷೆಗಳು ತಮ್ಮ ಪ್ರಭಾವ ಬೀರಿವೆ. ಬುಂದೇಲಿ ಆಡುಭಾಷೆಯಲ್ಲಿ ಸಂಯುಕ್ತ ಸ್ವರಗಳಿಲ್ಲ. ಹಿಂದಿ ಭಾಷೆಯಲ್ಲಿ ಕಂಡುಬರುವ ಎಲ್ಲ ವ್ಯಂಜನ ಧ್ವನಿಗಳು ಉಚ್ಚಾರಣೆಯಲ್ಲಿ ಹೆಚ್ಚು ಸ್ಪಷ್ಟವಾಗಿಲ್ಲ. ಸಮೀಕರಣದಿಂದಾಗಿ ವ್ಯಂಜನ ದ್ವಿತ್ವಗಳು ಸಾಧಿತವಾಗುತ್ತವೆ. ಅನುಕರಣಾತ್ಮಕ ಶಬ್ದಗಳೂ ತದ್ಭವಗಳೂ ಹೆಚ್ಚಿನ ಸಂಖ್ಯೆಯಲ್ಲಿವೆ. ಅಲ್ಲದೆ ತುರ್ಕಿ, ಅರಬ್ಬಿ, ಪಾರ್ಸ ಭಾಷೆಯ ಅನೇಕ ಪದಗಳು ಈ ಭಾಷೆಗೆ ಸೇರ್ಪಡೆಯಾಗಿವೆ. ಎರಡು ಬಗೆಯ ಲಿಂಗ ವ್ಯವಸ್ಥೆ ವಚನ ವ್ಯವಸ್ಥೆ ಉಂಟು. ಸಾಹಿತ್ಯಕವಾಗಿ ಅಪಾರ ಜನಪದ ಸಾಹಿತ್ಯವಿದೆ. ಇಸುರಿಯ ಫಾಗುಗಳು ಐನ್‍ಸಾಂಯಿಯ ದಾರ್ಶನಿಕ ಕವನಗಳು ಹೆಚ್ಚು ಪ್ರಸಿದ್ಧವಾಗಿವೆ. ಹಿಂದಿಯ ಹೆಸರಾಂತ ವೀರಕಾವ್ಯ ಅಲ್ಹಾ ಮೂಲತಃ ಬುಂದೇಲಿಯ ಒಂದು ಪ್ರಭೇದವಾದ ಬನಾಫರಿ ಎಂಬುದರಲ್ಲಿ ಇತ್ತೆಂದು ವಿದ್ವಾಂಸರ ಊಹೆ.

   (ಕೆ.ಕೆ.ಜಿ.)