ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬುಕ್ಕ 1

ವಿಕಿಸೋರ್ಸ್ದಿಂದ

ಬುಕ್ಕ 1

1356-77 ವಿಜಯನಗರ ಸಂಗಮ ವಂಶದ ಅರಸು. ಸಂಗಮನ ಮಗ. ತನ್ನ ಅಣ್ಣ ಒಂದನೆಯ ಹರಿಹರನೊಡನೆ ಸಹಕರಿಸಿ ವಿಜಯನಗರ ಸಾಮ್ರಾಜ್ಯಕ್ಕೆ ಭದ್ರವಾದ ತಳಹದಿ ಹಾಕಿದ. ಒಂದನೆಯ ಹರಿಹರನ ಅನಂತರ 1356ರಲ್ಲಿ ಸಿಂಹಾಸನವೇರಿದ, ರಾಜ್ಯವನ್ನು ವಿಸ್ತರಿಸಿ ಆಡಳಿತವನ್ನು ವ್ಯವಸ್ಥೆಗೊಳಿಸಿದ. ತಮಿಳುನಾಡಿನ ರಾಜನಾರಾಯಣ ಶಂಬುವರಾಯ ಮತ್ತು ಅವನ ಮಗನನ್ನು ಸೋಲಿಸಿ ದಕ್ಷಿಣ ಪೆನ್ನಾರ್ ಮತ್ತು ಕೊಲ್ಲಡಂ ನದಿಗಳವರೆಗೆ ರಾಜ್ಯ ವಿಸ್ತರಿಸಿದ (1362). ಇವನ ಮಗ ಕಂಪಣ ವಿಜಯನಗರದ ಪ್ರತಿನಿಧಿಯಾಗಿ ತಮಿಳುನಾಡಿನ ಭಾಗಗಳನ್ನು ಆಳಲಾರಂಭಿಸಿದ. ಮಧುರೆಯ ಸುಲ್ತಾನನ ಮೇಲೆ ಕಂಪಣನ ನಾಯಕತ್ವದಲ್ಲಿ ವಿಜಯನಗರ ಸೇನೆ ಸಮಯವರಂ ಎಂಬಲ್ಲಿ ಯುದ್ಧ ಮಾಡಿ ಜಯ ಗಳಿಸಿತು. ಮಧುರೆಯ ಸುಲ್ತಾನ ಸೋತು ಮರಣವಪ್ಪಿದ (1371). ಇದರಿಂದಾಗಿ ರಾಮೇಶ್ವರವರೆಗಿದ್ದ ಮಧುರೆಯ ರಾಜ್ಯ ವಿಜಯನಗರಕ್ಕೆ ಸೇರಿತು. ಬಹುಮನೀ ಸುಲ್ತಾನ ಒಂದನೆಯ ಮಹಮ್ಮದನು ರಾಯಚೂರು ಮುದ್ಗಲ್ ಕೋಟೆಗಳನ್ನು ಮತ್ತು ಸುತ್ತಲ ಕೆಲವು ಪ್ರದೇಶಗಳನ್ನು ತೆರವು ಮಾಸಬೇಕೆಂದು ವಿಜಯನಗರವನ್ನು ಕೇಳಿ ಯುದ್ಧಕ್ಕೆ ಎಳೆದ. ಯುದ್ಧ 1365ರ ಹೊತ್ತಿಗೆ ಕೊನೆಗೊಂಡು ಮಹಮ್ಮದ್ ರಾಯಚೂರು ದೋಅಬ್ ಪ್ರದೇಶದ ಒಡೆತನ ವಿಜಯನಗರಕ್ಕೆ ಸೇರಿದ್ದೆಂದು ಒಪ್ಪಿಕೊಂಡನೆಂದು ಹೇಳುವರು. ರೆಡ್ಡಿ ರಾಜ್ಯದ ಮೇಲೆ ದಂಡೆತ್ತಿ ಹೋಗಿ ಕೊಂಡವೀಡು ಮೊದಲಾದ ಪ್ರಾಂತ್ಯಗಳನ್ನು ಬುಕ್ಕ ವಶಪಡಿಸಿಕೊಂಡ. ಅಲ್ಲದೆ ತನ್ನ ಸಾಮ್ರಾಜ್ಯದ ಪರವಾಗಿ ಚೀನಾ ದೇಶಕ್ಕೆ ಒಬ್ಬ ರಾಯಭಾರಿಯನ್ನು ಕಳುಹಿಸಿದ. ವಿದ್ಯಾರಣ್ಯ, ಮಾದರಸ, ಕ್ರಿಯಾಶಕ್ತಿ ಮುಂತಾದವರು ಇವನ ಆಸ್ಥಾನದಲ್ಲಿದ್ದರು. ಬುಕ್ಕ 1377ರಲ್ಲಿ ಮೃತನಾದ. (ಜಿ.ಆರ್.ಆರ್.)