ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬೂಕರೆಸ್ಟ್‌

ವಿಕಿಸೋರ್ಸ್ದಿಂದ

ಬೂಕರೆಸ್ಟ್ - ರುಮೇನಿಯಾ ಸಮಾಜವಾದಿ ಗಣರಾಜ್ಯದ ರಾಜಧಾನಿ. ಡಾನ್ಯೂಬಿನ ಉಪನದಿಯಾದ ಡಿಂಬವೀಟ್ಸಾನದಿಯ ಎರಡೂ ದಂಡೆಗಳ ಮೇಲೆ ಇರುವ ನಗರ. ಉ.ಅ. 44025 ಮತ್ತು ಪೂ.ರೇ. 26010 ನಲ್ಲಿರುವ ಈ ನಗರ ಉದ್ಯಾನ ನಗರವೆಂದು ಹೆಸರುಗಳಿಸಿದೆ. ರಮಣೀಯ ಪ್ರಾಕೃತಿಕ ಪರಿಸರದಿಂದ ಹಸಿರ ಸಿರಿವಂತಿಕೆಯಿಂದ ಹಾಗೂ ಸುಂದರ ಸರೋವರಗಳಿಂದ ಕೂಡಿದ್ದು ಪ್ರವಾಸಿಗಳನ್ನು ಆಕರ್ಷಿಸುವ ವಿಶ್ರಾಂತಿಧಾಮವೂ ವಿಹಾರ ತಾಣವೂ ಆಗಿದೆ. ಈ ನಗರವನ್ನು ಎಂಟು ಆಡಳಿತ ಘಟಕಗಳಾಗಿ ವಿಂಗಡಿಸಿದೆ. ಉಪನಗರ ಪ್ರದೇಶವನ್ನೊಳಗೊಂಡಂತೆ ಇದರ ವಿಸ್ತಾರ 605 ಚಕಿ.ಮೀ. ಜನಸಂಖ್ಯೆ 18,61,007 (1980).

ಪುರಾತತ್ವ ಶೋಧನೆಗಳಿಂದ ಪ್ರಾಚೀನ ಶಿಲಾಯುಗ, ಕಂಚಿನ ಹಾಗೂ ಕಬ್ಬಿಣ ಯುಗಗಳಿಗೆ ಸಂಬಂಧಿಸಿದ ಮತ್ತು ರೋಮನರ ಕಾಲದ ಅವಶೇಷಗಳು ಸಿಕ್ಕಿದ್ದು ಅವು ಈ ನಗರದ ಪ್ರಾಚೀನತೆಯನ್ನು ತಿಳಿಸುತ್ತವೆ. ಆದರೆ ಈ ನಗರದ ಪ್ರಥಮ ಉಲ್ಲೇಖ ಕ್ರಿ. ಶ. 1459 ಸೆಪ್ಟೆಂಬರ್ 30ಕ್ಕೆ ಸೇರಿದುದು. ಕೋಟೆಗೋಡೆಯಿಂದ ಆವೃತವಾಗಿದ್ದ ಈ ನಗರವನ್ನು 1595ರಲ್ಲಿ ತುರ್ಕರು ನಾಶ ಮಾಡಿದರು. ಮತ್ತೆ ಹೊಸಗೋಡೆ ಕಟ್ಟಲಾಯಿತು. ಮುಂದಿನ ಶತಮಾನದಲ್ಲಿ ವಲೇಕೀಯಾ ಸಂಸ್ಥಾನದ ರಾಜಧಾನಿಯಾದ ಈ ನಗರ 18-19ನೆಯ ಶತಮಾನಗಳಲ್ಲಿ ತುರ್ಕ್, ರಷ್ಯನ್, ಮತ್ತು ಆಸ್ಟ್ರಿಯನ್ನರ ಕೈ ಸೇರಿತು. 1861ರಲ್ಲಿ ಮಾಲ್ಡೇವೀಯಾ ಮತ್ತು ವಲೇಕೀಯಾ ಒಂದಾಗಿ ರುಮೇನಿಯಾ ರಾಷ್ಟ್ರ ರೂಪುಗೊಂಡಾಗ ಬೂಕರೆಸ್ಟ್ ಅದರ ಅಧಿಕೃತ ರಾಜಧಾನಿಯಾಯಿತು. 1916ರಲ್ಲಿ ಹೋರಾಟವಿಲ್ಲದೆ ಬೂಕರೆಸ್ಟ್ ಜರ್ಮನ್ ಮತ್ತು ಬಲ್ಗೇರಿಯನ್ ಸೈನಿಕರ ವಶವಾಗಿತ್ತು. ಇಲ್ಲಿನ ಅರಮನೆ 1844ರ ಬಾಂಬ್ ದಾಳಿಗೆ ಸಿಕ್ಕಿ ಭಾಗಶಃ ಹಾನಿಹೊಂದಿತು.

ಬೂಕರೆಸ್ಟಿನ ಬಹುಭಾಗ ಆಧುನಿಕ ಕಾಲದ್ದಾಗಿದೆ. ಇಲ್ಲಿಯ ವಿಶ್ವವಿದ್ಯಾಲಯ 1864ರಲ್ಲಿ ಸ್ಥಾಪಿತವಾಯಿತು. ದಿ ಲೈಬ್ರರಿ ಆಫ್ ದಿ ಅಕಾಡೆಮಿ ಆಫ್ ಸೋಷಿಯಲಿಸ್ಟ್ ರಿಪಬ್ಲಿಕ್ ಆಫ್ ರುಮೇನಿಯಾ ಮತ್ತು ಸೆಂಟ್ರಲ್ ಸ್ಟೇಟ್ ಲೈಬ್ರರಿಗಳಲ್ಲಿ ಅಮೂಲ್ಯ ಚಾರಿತ್ರಿಕ ದಾಖಲೆಗಳಿವೆ. ಲಲಿತಕಲೆಗಳ ಬೀಡಾದ ಈ ನಗರದಲ್ಲಿ ಮೂವತ್ಮೂರಕ್ಕೂ ಹೆಚ್ಚು ವಸ್ತುಸಂಗ್ರಹಾಲಯಗಳಿವೆ. ಕ್ಯಾತೊಲಿಕ್ ಹಾಗೂ ಪ್ರಾಟೆಸ್ಟೆಂಟ್ ಪಂಥಗಳಿಗೆ ಸೇರಿದ ಹಲವಾರು ಚರ್ಚುಗಳಿವೆ. ಇವುಗಳಲ್ಲಿ ಹೆಚ್ಚಿನವು ಚಿಕ್ಕವು ಹಾಗೂ ಬಿeóÁನ್‍ಟಿಯನ್ ಶೈಲಿಗೆ ಸೇರಿದವು. ನಗರದ ಪಾರ್ಕ್ ಆಫ್ ಕಲ್ಚರ್ ಅಂಡ್ ರೆಸ್ಟ್ ಉದ್ಯಾನ ಬಹು ವಿಶಾಲವಾದುದು. 23 ಆಗಸ್ಟ್ ಎಂಬ ನಗರ ಅತಿ ದೊಡ್ಡ ಕ್ರೀಡಾರಂಗದಲ್ಲಿ ಸುಮಾರು ಎಂಬತ್ತು ಸಾವಿರ ಜನರಿಗೆ ಸ್ಥಳಾವಕಾಶವಿದೆ. ಅಕಾಡೆಮಿ ಆಫ್ ಸೈನ್ಸ್ (1855) ರುಮೇನಿಯನ್ ಅಕಾಡೆಮಿ (1860), ಬೂಕರೆಸ್ಟ್ ಹಿಸ್ಟರಿ ಮ್ಯೂಸಿಯಮ್ (1884) ಮ್ಯೂಸಿಯಮ್ ಆಫ್ ಫೋಕ್ ಆರ್ಟ್ (1905) ಮುಂತಾದ ಹಲವಾರು ಸಂಘ ಸಂಸ್ಥೆಗಳು ಇಲ್ಲಿವೆ. ನಗರದ ಆಧುನಿಕ ಕಟ್ಟಡಗಳಲ್ಲಿ ಒಂದಾದ ಇಂಟರ್‍ಕಾಂಟಿನೆಂಟಲ್ ಹೋಟೆಲ್ ಇಪ್ಪತ್ತೈದು ಅಂತಸ್ತುಗಳ ಅತಿ ಎತ್ತರದ ಕಟ್ಟಡ.

ಬೂಕರೆಸ್ಟ್ ಪ್ರಮುಖ ವಾಣಿಜ್ಯೋದ್ಯಮ ಕೇಂದ್ರ. ರಾಸಾಯನಿಕ ಪದಾರ್ಥಗಳು, ಪೀಠೋಪಕರಣ ವಸ್ತುಗಳು, ಇಟ್ಟಿಗೆ, ಸಾಬೂನು, ಲೋಹದ ವಸ್ತುಗಳು ಕಾಗದ ಮುಂತಾದವು ಇಲ್ಲಿ ತಯಾರಾಗುತ್ತವೆ. ಎಣ್ಣೆ ಮತ್ತು ಟೆಕ್ಸ್‍ಟೈಲ್ ಉದ್ಯಮವೂ ಗಮನಾರ್ಹವಾಗಿ ಬೆಳೆದಿದೆ. ಬಟ್ಟೆ ಕಾರ್ಖಾನೆ ಹಿಟ್ಟಿನ ಗಿರಣಿ. ಮಾಂಸವನ್ನು ಡಬ್ಬಗಳಿಗೆ ತುಂಬುವ ಕೇಂದ್ರ, ಮದ್ಯ ತಯಾರಿಕಾ ಕೇಂದ್ರ ಮುಂತಾದವು ಹೆಚ್ಚಿನ ಸಂಖ್ಯೆಯಲ್ಲಿವೆ. ಬೂಕರೆಸ್ಟ್ ನಗರ ಸೌಂದರ್ಯಕ್ಕೆ, ವಿಲಾಸಕ್ಕೆ ಹೆಸರಾಗಿ ಇದನ್ನು ಲಿಟಲ್ ಪ್ಯಾರಿಸ್ ಎಂದು ಕರೆಯುವುದುಂಟು.

(ಎಚ್.ಎಂ.ಎನ್.ಆರ್.)