ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬೂಕ್, ಕ್ರಿಶ್ಚನ್ ಲಿಯೊಪೋಲ್ಡ್‌ಫಾನ್

ವಿಕಿಸೋರ್ಸ್ದಿಂದ

ಬೂಕ್, ಕ್ರಿಶ್ಚನ್ ಲಿಯೊಪೋಲ್ಡ್‍ಫಾನ್

	1774-1853. ಜರ್ಮನಿಯ ಭೂ ಹಾಗೂ ಭೂಗೋಳ ವಿಜ್ಞಾನಿ. ಜನನ 26.4.1774. ಮರಣ: ಮಾರ್ಚ್ 1853. ಹದಿನೆಂಟನೆಯ ಶತಮಾನದ ಉತ್ತರಾರ್ಧದಲ್ಲಿ ಭೂವಿಜ್ಞಾನಕ್ಕೆ ಸ್ವತಂತ್ರ ಆಸ್ತಿತ್ವವಿರಲಿಲ್ಲ. ಜ್ವಾಲಾಮುಖಿಗಳ ಹುಟ್ಟು. ಬೆಳೆವಣಿಗೆ ಕುರಿತಂತೆ ವೈಜ್ಞಾನಿಕ ಚಿಂತನೆಗಳು ಆಗ ಶೈಶವಸ್ಥೆಯಲ್ಲಿದ್ದುವು. ಭೂಮಿಯ ಮೇಲೆ ಕಂಡುಬರುವ ಶಿಲೆಗಳೆಲ್ಲವೂ ನೀರಿನಿಂದಲೇ ಜನಿಸಿದವೆಂದು ವಾದಿಸುವ ಒಂದು ಪಂಥ ಆಗ ಹುಟ್ಟಿದ್ದು ಶಿಲೆಗಳ ಜಲಜನಿತವಾದಕ್ಕೆ ಹೆಚ್ಚಿನ ಪುರಸ್ಕಾರ ಲಭಿಸಿತ್ತು. ಇತ್ತ ಶಿಲೆಗಳು ಶಾಖಜನಿತವಾಗಿರಲು ಸಾಧ್ಯವೆಂದು ಸಕಾರಣವಾಗಿ ಊಹಿಸಿದ ಮತ್ತೊಂದು ಪಂಥವೂ ಈ ವೇಳೆಗೆ ಭೂವಿಜ್ಞಾನದ ಕ್ಷೇತ್ರದಲ್ಲಿ ಬೆಳೆಯತೊಡಗಿತ್ತು. ಈ ಅಭಿಪ್ರಾಯ ಭೇದ ತಾತ್ಕಾಲಿಕವಾಗಿ ಭೂವಿಜ್ಞಾನದ ಇತರ ಅಂಗಗಳ ಅಧ್ಯಯನಕ್ಕೆ ತೊಡಕಾಗಿ ಸುಮಾರು ಮೂರು ದಶಕಗಳ ಕಾಲ ವಿಜ್ಞಾನಿಗಳು ವಾದವಿವಾದದಲ್ಲೇ ಕಾಲಹರಣ ಮಾಡತೊಡಗಿದರು. 

ಶಿಲೆಗಳ ಜಲಜನಿತವಾದದ ಪ್ರವರ್ತಕ ಅಬ್ರಾಹಾಮ್ ಗಾಟ್ಲಬ್ ವರ್ನರ್ (1750-1817). ಜ್ವಾಲಾ ಮುಖಿಗಳಿಂದ ಉಕ್ಕುವ ಲಾವಾರಸವನ್ನೂ ಶಿಲಾಪಾಕದಿಂದ ಹೆಪ್ಪುಗಟ್ಟುವ ಗ್ರಾನೈಟ್ ಶಿಲೆಗಳನ್ನೂ ಈತ ಜಲಜನಿತ ಶಿಲೆಗಳೆಂದೇ ಪರಿಗಣಿಸಿದ. ಈ ಶಿಲೆಗಳ ಮೂಲ ಕಡಲನೀರೆಂಬುದು ಈತನ ನಂಬಿಕೆ. 1775ರಲ್ಲಿ ಜರ್ಮನಿಯ ಸಕ್ಸೋನಿಯದ ಫ್ರೇಬರ್ಗ್ ಗಣಿಶಾಲೆಯಲ್ಲಿ ಖನಿಜ ವಿಜ್ಞಾನದ ಪ್ರಾಧ್ಯಾಪಕನಾಗಿ ನೇಮಕಗೊಂಡ ವರ್ನರ್ ಖನಿಜಗಳ ಹಾಗೂ ಶಿಲೆಗಳ ವರ್ಗೀಕರಣಕ್ಕೆ ಪ್ರಥಮ ಬಾರಿಗೆ ಹೊಸ ಸೂತ್ರ ಬಳಸಿದ. ಈತನ ಅಭಿಪ್ರಾಯಕ್ಕೆ ಆಗ ವಿಶೇಷ ಮನ್ನಣೆ. ಆದರೆ ವ್ಯಾಪಕ ಆಧ್ಯಯನ ಮಾಡದೆ ಕೇವಲ ಜರ್ಮನಿಯ ಸೀಮಿತ ಅಧ್ಯಯನದಿಂದ ಲಭಿಸಿದ ಮಾಹಿತಿ ಆಧರಿಸಿ ಜಲಜನಿತವಾದ ಪ್ರತಿಪಾದಿಸಿದ್ದು ಈತನ ದೋಷ.

ಬೂಕ್ 1790ರಲ್ಲಿ ಫ್ರೇಬರ್ಗ್ ಗಣಿಶಾಲೆ ಪ್ರವೇಶಿಸಿದ. ಮೂರು ವರ್ಷ ವರ್ನರನ ಶಿಷ್ಯನಾಗಿ ಭೂವಿಜ್ಞಾನದಲ್ಲಿ ಪಾಂಡಿತ್ಯಗಳಿಸಿದ. ಈಗ ಹೊಸ ಹೊಸ ಪ್ರದೇಶಗಳ ಭೂ ಅಧ್ಯಯನ ಮಾಡತೊಡಗಿದ. ಆ ದಿನಗಳಂದು ವರ್ನರನ ಸಿದ್ಧಾಂತದಲ್ಲಿ ಈತನಿಗೆ ಅಚಲ ನಂಬಿಕೆ. 1798ರಲ್ಲಿ ಬೂಕ್‍ನಿಗೆ ಇಟಲಿಯ ವೆಸೂವಿಯಸ್ ಜ್ವಾಲಾಮುಖಿಯ ಅಧ್ಯಯನ ಮಾಡುವ ಅವಕಾಶ ಒದಗಿತು. ಅಲ್ಲಿ ಜ್ವಾಲಾಮುಖಿಯ ಬಾಯಿಯಿಂದ ಶಿಲಾಪಾಕ ಹೊರಹೊಮ್ಮಿ ಹೆಪ್ಪುಗಟ್ಟುತ್ತಿದ್ದುದನ್ನು ಕಣ್ಣಾರೆ ಕಂಡ. ಬಾಯಿಯ ಮೂಲಕ ಶಿಲಾಚೂರುಗಳು ಸ್ಫೋಟವಾಗುತ್ತಿದ್ದುವು. ಹೊರ ಚಿಮ್ಮಿ ತೂರಿ ಬರುತ್ತಿದ್ದ ಬೂದಿ ಜ್ವಾಲಾಮುಖಿಯ ತಪ್ಪಲಿನ ಸುತ್ತ ರಾಶಿ ರಾಶಿಯಾಗಿ ಸಂಗ್ರಹವಾಗುತ್ತಿತ್ತು. ವೆಸೂವಿಯಸ್ ಜ್ವಾಲಾಮುಖಿ ನಿರ್ಮಿಸಿದ ಗುಡ್ಡ ಶಂಕ್ವಾಕೃತಿ ತಳೆದಿತ್ತು. ಸಾಗರತಳದಿಂದ ಇದು ತಲೆಯೆತ್ತುವುದು ಅವಾಸ್ತವವೆಂದು ಬೂಕ್ ಬಗೆದ. ತನ್ನ ಗುರು ಪ್ರತಿಪಾದಿಸಿದ ಸಿದ್ಧಾಂತಕ್ಕೆ ವಿರುದ್ಧ ನೈಸರ್ಗಿಕ ಕ್ರಿಯೆ ಕಣ್ಣಾರೆ ಕಂಡ ಬಳಿಕ ಅದನ್ನು ತಿರಸ್ಕರಿಸಿ ಹೊಸತನ್ನು ಮಂಡಿಸುವುದೊಂದೇ ಹಾದಿ ಎಂದು ಬಗೆದ.

ಅಲೆಕ್ಸಾಂಡರ್ ಹಂಬೋಲ್ಟ್ (1779-1859) ವರ್ನರನ ಮತ್ತೊಬ್ಬ ಶಿಷ್ಯ. ಈತ ಬೂಕ್‍ನಿಗಿಂತ ಎರಡು ವರ್ಷ ತಡವಾಗಿ ಫ್ರೇಬರ್ಗ್ ಗಣಿಶಾಲೆ ಸೇರಿದ. ಈತನಿಗೂ ಬೂಕ್‍ನಂತೆ ಹೊಸ ಪ್ರದೇಶ ಅನ್ವೇಷಿಸಿ ಅಲ್ಲಿಯ ಭೂವಿಜ್ಞಾನ ಅಭ್ಯಸಿಸುವುದರಲ್ಲಿ ಅಪಾರಾಸಕ್ತಿ. ಬದುಕಿನ ಹೆಚ್ಚಿನ ವೇಳೆಯನ್ನು ಜ್ವಾಲಾಮುಖಿಗಳ ಅಧ್ಯಯನಕ್ಕೇ ಮೀಸಲಾಗಿಟ್ಟ. ಮಧ್ಯ ಹಾಗೂ ದಕ್ಷಿಣ ಅಮೆರಿಕ, ಸೋವಿಯತ್ ರಷ್ಯ, ಸೈಬೀರಿಯ, ಯೂರೋಪ್ ರಾಷ್ಟ್ರಗಳಲ್ಲಿ ಸುತ್ತಿ ಜ್ವಾಲಾಮುಖಿಗಳ ಅಧ್ಯಯನ ಮಾಡಿದ. ಈ ಅವಧಿಯಲ್ಲಿ ಈತ ವರ್ನರನ ಜಲಜನಿತ ಸಿದ್ಧಾಂತದಲ್ಲಿ ಪೂರ್ಣವಾಗಿ ನಂಬಿಕೆ ಕಳೆದುಕೊಂಡ. ಬೂಕ್ ಹಾಗೂ ಹಂಬೋಲ್ಟ್ ಜೀವನದುದ್ದಕ್ಕೂ ಆತ್ಮೀಯ ಗೆಳೆಯರಾಗಿದ್ದರು. 1791ರ ಅನಂತರ ಒಟ್ಟಿಗೇ ಕಲೆತು ಸಿರಿಯ ಹಾಗೂ ಆಲ್ಪ್ಸ್ ಪರ್ವತಶ್ರೇಣಿಗಳ ಕೂಲಂಕಷ ಅಧ್ಯಯನ ಕೈಗೊಂಡರು. ಬೂಕ್ 1802ರಲ್ಲಿ ದಕ್ಷಿಣ ಫ್ರಾನ್ಸಿನ ಅವರ್ನೆ ಜಿಲ್ಲೆಯ ಭೂಲಕ್ಷಣಗಳನ್ನು ಅಧ್ಯಯನ ಮಾಡಿದ. ಜ್ವಾಲಾಮುಖಿಗಳು ಕೆರಳುವಾಗ ಭೂಪದರವನ್ನು ಒತ್ತರಿಸುತ್ತವೆ. ಆ ಭಾಗದಲ್ಲಿ ಹೊರಪದರ ಬಾಗಿ ಒಳಗಿರುವ ಶಿಲಾಪಾಕ ತಳೆಯುವ ರೂಪ ಆಧರಿಸಿ ವಿವಿಧ ಬಾಹ್ಯ ರೂಪ ತಳೆಯುತ್ತದೆ. ಇಂಥ ಜ್ವಾಲಾಮುಖಿಗಳಿಗೆ ಬಾಯಿ ಇರುವುದಿಲ್ಲ. ಒಂದು ವೇಳೆ ಹೀಗೆ ರೂಪುಗೊಂಡ ಗುಡ್ಡದ ತುದಿ ಬಿರುಕು ಬಿಟ್ಟರೆ ಅದರೊಳಗೆ ಕುಸಿಯುವ ಶಿಲಾ ಚೂರುಗಳು ಬಿರುಕನ್ನು ಹಿಗ್ಗಲಿಸಿ ಅನಂತರ ಈ ಬಿರುಕುಗಳೇ ಬಾಯಿಯೂ ಆಗಿ ಪರಿವರ್ತಿತವಾಗುತ್ತದೆ. ವಾಸ್ತವ ನಿದರ್ಶನಗಳನ್ನಾಧರಿಸಿ ಬೂಕ್ ತಳೆದ ಅಭಿಪ್ರಾಯವಿದು. ಮುಂದೆ ಇದನ್ನು ಪರಿಷ್ಕರಿಸಲಾಯಿತು. ಜ್ವಾಲಾಮುಖಿಗಳಿಂದಲೇ ನಿರ್ಮಿತವಾದ ಬಾಯಿಗಳ ಬಗ್ಗೆ ಭೂವಿಜ್ಞಾನಿಗಳು ಜೀವಂತ ಸಾಕ್ಷಿ ಒದಗಿಸಿದರು. ಎರಡು ವರ್ಷಗಳ ಕಾಲ ಬೂಕ್ ಸ್ಕಾಂಡಿನೇವಿಯ ದ್ವೀಪಗಳ ಅಧ್ಯಯನ ಮುಂದುವರಿಸಿದ. ಉತ್ತರ ಜರ್ಮನಿಯ ಮೈದಾನಗಳಲ್ಲಿ ಅಸಂಖ್ಯತ ಹೆಬ್ಬಂಡೆಗಳು ಉರುಳಿ ಬಿದ್ದಿದ್ದುವು. ಇವು ಎಲ್ಲಿಂದ ಬಂದಿರಬಹುದೆಂದು ಯಾರೂ ಸಕಾರಣವಾಗಿ ಅಂದು ಊಹಿಸಿರಲಿಲ್ಲ. ಬೂಕ್‍ನ ಅಧ್ಯಯನ ಇವು ಸ್ಕಾಂಡಿನೇವಿಯದ ಮೂಲದಿಂದ ಬಂದವೆಂದು ರುಜುವಾತು ಪಡಿಸಿತು. ಇದರ ಜೊತೆಗೆ ಭೂ ಹೊರಪದರದ ಕಾಲಕಾಲಕ್ಕೆ ತೋರುವ ಏರಿಳಿತಗಳ ಅಧ್ಯಯನದತ್ತ ಬೂಕ್ ತನ್ನ ಗಮನ ಹರಿಸಿದ. ಸ್ವೀಡನ್ ಸಾರಗಮಟ್ಟದಿಂದ ಮಂದಗತಿಯಲ್ಲಿ ಮೇಲೇರುತ್ತಿದೆ ಎಂಬ ವೈಜ್ಞಾನಿಕ ಅಂಶವನ್ನು ಪ್ರಥಮ ಬಾರಿಗೆ ಪುಸ್ತಕ ರೂಪದಲ್ಲಿ 1810ರಲ್ಲಿ ಪ್ರಕಟಿಸಿದ. ನಾರ್ವೆಯ ಸಸ್ಯ ವಿಜ್ಞಾನಿ ಕ್ರಿಶ್ಚಿಯನ್ ಸ್ಮಿತ್ ಜೊತೆಗೂಡಿ ಕನರಿ ದ್ವೀಪಗಳ ಮೇಲ್ಮೈ ಲಕ್ಷಣ ಕುರಿತು ಆಳವಾಗಿ ಅಧ್ಯಯನ ಮಾಡಿದ (1815). 1832ರಲ್ಲಿ ಪ್ರಕಟಿಸಿದ ಜರ್ಮನಿಯ ಭೂವೈಜ್ಞಾನಿಕ ನಕ್ಷೆ ಈತ ಮಾಡಿದ ಅತ್ಯಂತ ಗಮನಾರ್ಹ ಕೆಲಸ. ಜ್ವಾಲಾಮುಖಿಗಳ ಬಗ್ಗೆ ಬೂಕ್ ಕೈಗೊಂಡ ಅಧ್ಯಯನ ಇಂದಿಗೂ ವೈಜ್ಞಾನಿಕ ನಿಖರತೆಗೆ ಹೆಸರಾಗಿದೆ. (ಟಿ.ಆರ್.ಎ.)