ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬೂಖ್ನರ್, ಏಡುವಾರ್ಡ್

ವಿಕಿಸೋರ್ಸ್ದಿಂದ

ಬೂಖ್ನರ್, ಏಡುವಾರ್ಡ್ 1860-1917. ಜರ್ಮನಿಯ ಪ್ರಸಿದ್ಧ ರಸಾಯನವಿಜ್ಞಾನಿ. ಮ್ಯೂನಿಕ್ಕಿನಲ್ಲಿ ಜನನ, 20-5-1860. ವಿದ್ಯಾರ್ಥಿದೆಸೆಯಲ್ಲಿ ಯೋಹನ್ ಫ್ರೀಡ್ರಿಖ್ ವಿಲ್ಹೆಲ್ಮ್ ಬೇಯರ್‍ನ (1835-1917) ಬಳಿ ರಸಾಯನ ವಿಜ್ಞಾನವನ್ನೂ ಕಾರ್ಲ್ ವಿಲ್ಹೆಲ್ಮ್ ಫಾನ್ ನೇಗಲೀ (1817-91) ಬಳಿ ಸಸ್ಯ ವಿಜ್ಞಾನವನ್ನು ಅಭ್ಯಸಿಸಿದ. 1888ರಲ್ಲಿ ಪಿಎಚ್.ಡಿ. ಪದವಿ ಪಡೆದು 1893ರ ತನಕ ಬೇಯರನ ಸಹಾಯಕನಾಗಿದ್ದು ತರುವಾಯ ಕೀಯಲ್ ವಿಶ್ವವಿದ್ಯಾಲಯದಲ್ಲಿ ರಸಾಯನವಿಜ್ಞಾನದ ಪ್ರಾಧ್ಯಾಪಕನಾದ.

ವಿದ್ಯಾಭ್ಯಾಸ ಆರಂಭದಿಂದಲೇ ಅಣ್ಣ ಹ್ಯಾನ್ಸ್ ಬೂಖ್ನರನ (1850-1902) (ಬ್ಯಾಕ್ಟೀರಿಯ ವಿಜ್ಞಾನಿ) ಪ್ರಭಾವದಿಂದಾಗಿ ಏಡುವಾರ್ಡ್ ಹುದುಗುವಿಕೆಯ ಪ್ರಕ್ರಿಯೆ ಬಗ್ಗೆ ಆಸಕ್ತನಾದ. ಆ ದಿನಗಳಲ್ಲಿ ಹುದುಗುವಿಕೆ ಜೀವರಸಾಯನ ವಿಜ್ಞಾನದ ಪ್ರಾಚೀನತಮ ಹಾಗೂ ಅಧುನಾತಮ ಸಮಸ್ಯೆಗಳಲ್ಲಿ ಒಂದು ಎನಿಸಿತ್ತು. ಹಣ್ಣಿನ ರಸದಿಂದ ಮದ್ಯವನ್ನೂ ಹಿಟ್ಟಿನಿಂದ ಬ್ರೆಡ್ಡನ್ನೂ ತಯಾರಿಸುವ ಪ್ರಾಚೀನ ಪಾಕಕಲೆಗೆ ಹುದುಗುವಿಕೆ ಆಧಾರವಾಗಿದ್ದುದರಿಂದ ಅಂದಿನಿಂದಲೂ ಈ ಕ್ರಿಯೆಯ ಬಗ್ಗೆ ಸಂಶೋಧನೆ ನಡೆದೇ ಇತ್ತೆನ್ನಬಹುದು. ಫ್ರೆಂಚ್ ವಿಜ್ಞಾನಿ ಪೀಯೋನ್ (1795-1871) ಮಾಲ್ಟ್ ಸಾರದಿಂದ ಡಯಾಸ್ಟೇಸ್ ಕಿಣ್ವವನ್ನು ಬೇರ್ಪಡಿಸಿದ (1833). ತರುವಾಯ ಜರ್ಮನ್ ವಿಜ್ಞಾನಿ ತೀಯೋಡೋರ್ ಷ್ವಾನ್ (1810-82) ಜಠರದ ಗ್ರಂಥಿಗಳ ಸಾರದಿಂದ ಪೆಪ್ಸಿನ್ ಕಿಣ್ವವನ್ನು ಪ್ರತ್ಯೇಕಿಸಿದ (1836). ಅನಂತರ ರಸಾಯನವಿಜ್ಞಾನಿಗಳ ಕೈಗೆ ಹುದುಗುಕಾರಿಗಳು ಸಿಕ್ಕಿದಂತಾಗಿ ಹುದುಗುವಿಕೆಯ ಬಗ್ಗೆ ವೈಜ್ಞಾನಿಕ ಆಸಕ್ತಿ ಮೂಡುವಂತಾಯಿತು. ಹುದುಗುವಿಕೆಯಲ್ಲಿ ಜೀವನ ಪಾತ್ರವನ್ನು ಕುರಿತಂತೆಯೂ ಜಿಜ್ಞಾಸೆ ನಡೆದಿತ್ತು. ತನಗೇ ವಿಶಿಷ್ಟವಾದ ಕೆಲವೊಂದು ನಿಯಮಗಳಿಗೆ ಅನುಸಾರವಾಗಿ ಜೀವ ನಡೆಯುತ್ತದೆಯೇ ವಿನಾ ನಿರ್ಜೀವ ವಸ್ತುಗಳನ್ನು ಕುರಿತಂತೆ ಪ್ರಯೋಗಾಲಯದಲ್ಲಿ ತರ್ಕಿಸಲಾಗುವ ಸಾರ್ವತ್ರೀಕರಣಗಳನ್ನು ಜೀವಕ್ಕೆ ಅನ್ವಯಿಸಲಾಗದು ಎಂಬುದಾಗಿ ಜೀವತತ್ತ್ವವಾದಿಗಳು (ವೈಟಲಿಸ್ಟ್ಸ್) ಪ್ರಬಲರಾಗಿ ನಂಬಿದ್ದರು. ಫ್ರೀಡ್ರಿಕ್ ವಾಯಲರ್ (1800-82) ನಿರವಯವ ವಸ್ತು ಅಮೋನಿಯಮ್ ಸಯನೇಟಿನಿಂದ ಸಾವಯವ ವಸ್ತುವಾದ ಯೂರಿಯವನ್ನು ತಯಾರಿಸಿದ ತರುವಾಯ (ಅಂದರೆ ಅಜೀವ ವಸ್ತುವಿನಿಂದ ಜೈವಿಕ ಉತ್ಪನ್ನ ಸಾಧ್ಯವೆಂದು ತೋರಿಸಿದಾಗ (1828) ಜೀವತತ್ತ್ವವಾದದಲ್ಲಿ ಬಿರುಕು ಮೂಡಿತು. ಷ್ವಾನ್ ಮತ್ತಿತರರು ಪ್ರತ್ಯೇಕಿಸಿದ ಹುದುಗುಕಾರಿಗಳು ನಿರವಯವ ವಸ್ತುಗಳಂತೆಯೇ ಪ್ರಯೋಗ ನಳಿಕೆಗಳಲ್ಲೂ (1821) ಕಾರ್ಯವೆಸಗುವುದು ವ್ಯಕ್ತವಾಗಿತ್ತು. ಆದರೂ ಜೀವಕೋಶದೊಳಗೆ ನಡೆಯುವ ಹುದುಗುವಿಕೆ ಪಾತ್ರ (ಉದಾಹರಣೆಗೆ ಸಕ್ಕರೆ ಆಲ್ಕೊಹಾಲ್ ಆಗಿ ಪರಿವರ್ತಿತವಾಗುವುದು) ಪಚನಕ್ರಿಯೆಗಿಂತ ಭಿನ್ನವಾದ, ಜೀವದ ಪ್ರಭಾವ ಇಲ್ಲದಿದ್ದರೆ ಅಸಾಧ್ಯವಾದ ಕ್ರಿಯೆ ಎಂದೂ ಇದನ್ನು ಜಠರದಲ್ಲಿ ನಡೆಯುವ ಜೀರ್ಣಕಾರ್ಯಕ್ಕೆ ಹೋಲಿಸಲಾಗದೆಂದೂ ವಾದಿಸಿದ ಜೀವತತ್ತ್ವವಾದಿಗಳು ಹುದುಗುವಿಕೆಯನ್ನು ಜೀವತತ್ತ್ವವಾದದ ಭದ್ರ ಕೋಟೆಯಲ್ಲಿ ಬಂಧಿಸಿಡಲು ಪ್ರಯತ್ನಿಸಿದರು. ಹುದುಗುವಿಕೆಯ ಬಗ್ಗೆ ಬೂಖ್ನರನ ಆಸಕ್ತಿ ಕೆರಳಿದ್ದು ರಸಾಯನವಿಜ್ಞಾನ ಕ್ಷೇತ್ರದಲ್ಲಿ ಇಂಥ ಪರಿಸ್ಥಿತಿ ಇದ್ದಾಗ. ಆಲ್ಕೊಹಾಲ್ ಹುದುಕುವಿಕೆ ಜೀವದಿಂದ ಬೇರೆಯಾಗಿ ನಡೆಯದು ಎಂಬುದನ್ನು ಪ್ರಾಯೋಗಿಕವಾಗಿ ತೋರಿಸಲಾಗದೇ ಎಂಬುದರ ಬಗ್ಗೆ ಬೂಖ್ನರ್ ಯೋಚಿಸಿದ. ಇಂಥ ಪ್ರಯೋಗ ನಡೆಸುವ ಸಲುವಾಗಿ ಯೀಸ್ಟ್ ಜೀವಕೋಶಗಳನ್ನು ಮರಳಿನೊಂದಿಗೆ ಮಿಶ್ರಿಸಿ ಅರೆದು ಅವುಗಳ ಪೈಕಿ ಯಾವೊಂದು ಕೋಶವೂ ಜೀವಂತವಾಗಿರದಂತೆ ಮಾಡಿ ಸಕ್ಕರೆಯನ್ನು ಆಲ್ಕಹಾಲ್ ಆಗಿ ಪರಿವರ್ತಿಸುವ ಅವುಗಳ ಕಾರ್ಯವನ್ನು ನಿಲ್ಲಿಸಿ ಬಿಡುವ ನಿಲುವು ಆತನದಾಗಿತ್ತು. ಹಿರಿಯ ವಿಜ್ಞಾನಿಗಳು ವಿರೋಧವಿದ್ದರೂ ಈತ 1896ರಲ್ಲಿ ಜೀವಕೋಶರಹಿತ ಯೀಸ್ಟ್ ಸಾರವನ್ನು ತೆಗೆದು ಶೋಧಿಸಿ, ಬ್ಯಾಕ್ಟೀರಿಯ ಸೋಂಕು ಆಗದಂತೆ ತಡೆಯುವ ಸಲುವಾಗಿ, ಸಾರಕ್ಕೆ ಸಕ್ಕರೆಯ ಪರ್ಯಾಪ್ತ ದ್ರಾವಣ ಸೇರಿಸಿದ. ಕೊಂಚ ಸಮಯದ ನಂತರ ಸಕ್ಕರೆಯ ದ್ರಾವಣದಿಂದ ಕಾರ್ಬನ್ ಡೈ ಆಕ್ಸೈಡಿನ ಗುಳ್ಳೆಗಳೇಳುವುದು ಕಂಡಿತು. ಅಂದರೆ ಸತ್ತುಹೋದ ಯೀಸ್ಟ್ ರಸ ಸಕ್ಕರೆಯನ್ನು ಜೀವಂತ ಯೀಸ್ಟ್ ಕೋಶಗಳ ರೀತಿಯಲ್ಲೇ ಕಾರ್ಬನ್ ಡೈ ಆಕ್ಸೈಡ್ ಮತ್ತು ಆಲ್ಕಹಾಲ್ ಆಗಿ ಪರಿವರ್ತಿಸತೊಡಗಿದ್ದು ವ್ಯಕ್ತವಾಯಿತು.

ಬೂಖ್ನರ್ ತಾನು ಉದ್ದೇಶಿಸಿದ್ದ ಗುರಿಗೆ ವಿರುದ್ಧವಾದುದನ್ನು ಸಾಧಿಸಿದ್ದ. ಅಂತರಕೋಶೀಯ ಹುದುಗುವಿಕೆ ಮತ್ತು ಜೀವಗಳನ್ನು ಪ್ರತ್ಯೇಕಿಸಬಹುದೆಂದು ಈ ಪ್ರಯೋಗ ಸಾಬೀತುಗೊಳಿಸಿತಾಗಿ ಜೀವ ತತ್ತ್ವವಾದಿಗಳ ಅವೈಜ್ಞಾನಿಕ ಪೀಠ ಬುಡಮೇಲಾಯಿತು. ಜೀವಕೋಶಗಳ ಒಳಗೆ ನಡೆಯುವ ರಾಸಾಯನಿಕ ಕ್ರಿಯೆಗಳಿಗೂ ಕೋಶಗಳ ಹೊರಗೆ ನಡೆಯುವ ಕ್ರಿಯೆಗಳಿಗೂ ಯಾವ ವ್ಯತ್ಯಾಸವೂ ಇಲ್ಲ. ಅಂತರಕೋಶೀಯ ಕ್ರಿಯೆಗಳಿಗೆ ಯಾವ ಜೀವಂತ ಬಲದ ಅವಶ್ಯಕತೆಯೂ ಇಲ್ಲ ಎಂಬುದನ್ನು ಬೂಖ್ನರನ ಪ್ರಯೋಗ ಸಿದ್ಧಪಡಿಸಿತು. ಇದಕ್ಕಾಗಿ ಈತನಿಗೆ 1907ರ ನೊಬೆಲ್ ಪಾರಿತೋಷಿಕ ಲಭಿಸಿತು. ಇಂಥ ಪ್ರತಿಭಾವಂತ ವಿಜ್ಞಾನಿ ಮೊದಲ ಮಹಾಯುದ್ಧದಲ್ಲಿ ಸೈನಿಕನಾಗಿ ಭಾಗವಹಿಸಿ ರುಮೇನಿಯಾದ ಅಜ್ಞಾತ ಸ್ಥಳವೊಂದರಲ್ಲಿ ಗುಂಡಿಗೆ ಬಲಿಯಾಗಿ ನಿಧನನಾದ (24-12-1917).