ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬೂಗನ್ ವಿಲ

ವಿಕಿಸೋರ್ಸ್ದಿಂದ

ಬೂಗನ್ ವಿಲ - ಪಶ್ಚಿಮ ಪೆಸಿಫಿಕ್ ಸಾಗರದ ಸಾಲೊಮನ್ ದ್ವೀಪ ಶ್ರೇಣಿಗೆ ಸೇರಿದ ಒಂದು ದೊಡ್ಡ ದ್ವೀಪ. ನ್ಯೂಗಿನಿಯ ಪೂರ್ವಕ್ಕಿದೆ. ಇದರ ಉದ್ದ 204 ಕಿಮೀ, ಅಗಲ 78.4 ಕಿಮೀ. ದ್ವೀಪದ ಒಟ್ಟು ವಿಸ್ತೀರ್ಣ 10,049 ಚಕಿಮೀ. ಜನಸಂಖ್ಯೆ 78,000 (1970). ಕೀಯೆಟ ಆಡಳಿತ ಕೇಂದ್ರ.

ದಟ್ಟ ಅರಣ್ಯಗಳು ಮತ್ತು ಬೆಟ್ಟ ಶ್ರೇಣಿಗಳು ಹಬ್ಬಿವೆ. ಮಣ್ಣು ಫಲವತ್ತಾಗಿದೆ. ಉತ್ತರದಲ್ಲಿ ಎಂಪರರ್ ಪರ್ವತ ಶ್ರೇಣಿ ಹಾದುಹೋಗುತ್ತದೆ. ಬಾಲ್ಟೀ ಜ್ವಾಲಾಮುಖಿಯ ಶಿಖರ ಇದರಲ್ಲಿ ಅತ್ಯುನ್ನತ ಬಿಂದು, ಎತ್ತರ 2591 ಮೀ. ದಕ್ಷಿಣದಲ್ಲಿ ಕ್ರೌನ್ ಪ್ರಿನ್ಸ್ ಪರ್ವತ ಶ್ರೇಣಿಯಿದೆ. ಇದರಲ್ಲಿಯ ಅತ್ಯುನ್ನತ ಶಿಖರ ತಕೂಮ, ಎತ್ತರ 2325 ಮೀ. ಕರಾವಳಿಯ ಉದ್ದಕ್ಕೂ ಹವಳದ ದಿಬ್ಬಗಳಿವೆ. ಕೀಯೊಟ ಬಳಿಯ ಪಂಗನ ಎಂಬಲ್ಲಿ ತಾಮ್ರ ನಿಕ್ಷೇಪವಿದೆ.

ಲೂಯಿಸ್ ಅಂಟೋನಿ ಡ ಬೂಗನ್ ವಿಲ ಎಂಬಾತ ಇದನ್ನು ಮೊದಲು ಪತ್ತೆ ಮಾಡಿದವ (1768). ಎಂದೇ ಇದಕ್ಕೆ ಆತನ ಹೆಸರು. 1898ರಲ್ಲಿ ಈ ದ್ವೀಪ ಜರ್ಮನ್ ಸರ್ಕಾರದ ಅಧೀನಕ್ಕೊಳಪಟ್ಟಿತು. ಆಂಗ್ಲೊಜರ್ಮನ್ ಒಪ್ಪಂದಕ್ಕೆ ಅನುಗುಣವಾಗಿ 1914ರಲ್ಲಿ ಇದನ್ನು ಆಸ್ಟ್ರೇಲಿಯಾ ಸೈನ್ಯ ತನ್ನ ವಶಕ್ಕೆ ತೆಗೆದುಕೊಂಡಿತು. 1920ರಲ್ಲಿ ನ್ಯೂಗಿನಿಯಾದೊಡನೆ ಸೇರಿಸಲಾಯಿತು. ಎರಡನೆಯ ಮಹಾ ಯುದ್ಧಕಾಲದಲ್ಲಿ ಜಪಾನೀಯರ ಆಕ್ರಮಣಕ್ಕೊಳಗಾಯಿತು. 1947ರಲ್ಲಿ ಇತರ ಕೆಲವು ದ್ವೀಪಗಳನ್ನು ಸೇರಿಸಿ ಬೂಗನ್ ವಿಲ ಜಿಲ್ಲೆ ರಚಿಸಲಾಯಿತು. ಅಲ್ಲಿಂದೀಚೆಗೆ ಇದು ವಿಶ್ವಸಂಸ್ಥೆಯ ವಿಶ್ವಸ್ಥಮಂಡಳಿಯ ಪರವಾಗಿ ಆಸ್ಟ್ರೇಲಿಯದ ರಕ್ಷಣಾಡಳಿತಕ್ಕೆ ಸೇರಿದೆ.

ಹೆಚ್ಚಾಗಿ ತೆಂಗಿನ ಮತ್ತು ಅಲ್ಲಲ್ಲಿ ಕಾಫಿ ಕೋಕ ತೋಟಗಳು ಇವೆ. ಜ್ವಾಲಾಮುಖಿಗಳಿಂದ ಮತ್ತು ಒಳನಾಡ ಸಂಪರ್ಕ ಕೊರತೆಯಿಂದಾಗಿ ಒಳನಾಡಿನಲ್ಲಿ ಜನ ಸಂದಣಿ ಕಡಿಮೆ. ದ್ವೀಪದ ಕರಾವಳಿ ದೇಶದ ಪಟ್ಟಣಗಳು ಜನಭರಿತವಾಗಿವೆ. ಬಂದರು ಮತ್ತು ಆಡಳಿತ ಕೇಂದ್ರವಾದ ಕೀಯೆಟದಲ್ಲಿ ವಿಮಾನ ನಿಲ್ದಾಣವಿದೆ. ಬೂಕ ಮತ್ತು ಬೂಯೀನ್ ಇತರ ಮುಖ್ಯ ಬಂದರುಗಳು.

ಈ ದ್ವೀಪದ ದಕ್ಷಿಣಕ್ಕಿರುವ ಷ್ವಾಜûಲ್ ದ್ವೀಪಕ್ಕೂ ನಡುವೆ 46 ಕಿಮೀ ಗಳಷ್ಟು ಅಗಲವಾದ ಬೂಗನ್ ವಿಲ ಜಲಸಂಧಿ ಇದೆ. (ಡಿ.ಎಸ್.ಜೆ.)