ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬೂಟೀಸ್

ವಿಕಿಸೋರ್ಸ್ದಿಂದ

ಬೂಟೀಸ್

ಉತ್ತರಾಕಾಶದ ನಕ್ಷತ್ರ ಪುಂಜಗಳ ಪೈಕಿ ಒಂದು. ಸನ್ನಿಹಿತ ವಿಷುವದಂಶ 15 ಗಂಟೆ: ಘಂಟಾವೃತ್ತಾಂಶ+30o. ಸಪ್ತರ್ಷಿ ಮಂಡಲ (ಅರ್ಸ ಮೇಜರ್) ಮತ್ತು ಸರ್ಪೆನ್ಜ್ ಪುಂಜದ ನಡುವೆ ಇದೆ. ಬಾಲ ಕಟ್ಟಿರುವ ಗಾಳಿಪಟದಂತೆ ಇದರ ಆಕಾರ. ಇದನ್ನು ಹಡ್ರ್ಸ್‍ಮನ್ (ಗೊಲ್ಲ) ಎಂದೂ ಕರೆಯುವುದುಂಟು. ಈ ಪುಂಜವನ್ನು ಭೂಮಿಯ ಉತ್ತರಗೋಳಾರ್ಧದ ಯಾವುದೇ ಭಾಗದಿಂದ ಮತ್ತು ದಕ್ಷಿಣ ಗೋಳಾರ್ಧದ ಬಹುತೇಕ ಭಾಗಗಳಿಂದ ವೀಕ್ಷಿಸಬಹುದು. ಕಿತ್ತಲೆ ಬಣ್ಣದ ಸ್ವಾತೀ ನಕ್ಷತ್ರ ಅಲ್ಪ ಬೂಟೀಸ್ (ಆಕ್ರ್ಟುರಸ್) ಈ ಪುಂಜದ ಪ್ರಮುಖ ತಾರೆ (ಕಾಂತಿಮಾನ 0.24, ವಿಷುವದಂಶ 14 ಗಂ 14ಮೀ; ಘಂಟಾವೃತ್ತಾಂಶ+19 20). ಇದಲ್ಲದೆ ಮಸಕು ಪ್ರಕಾಶ ಬೀರುವ ಹಲವಾರು ನಕ್ಷತ್ರಗಳೂ ಇವೆ. ಈ ಪುಂಜದಲ್ಲಿ ದೂರದರ್ಶಕೀಯ ಆಸಕ್ತಿ ಉಂಟುಮಾಡುವ, ವೈದೃಶ್ಯ ವರ್ಣಗಳ ಯಮಳ ತಾರೆಗಳು ಉಂಟು.

ಗ್ರೀಕ್ ಪುರಾಣದ ರೀತ್ಯ, ನೇಗಿಲು ಹೊಡೆಯುವವನು (ಪ್ಲೋಮನ್) ಎಂದು ಇದರ ಅರ್ಥ. ಜೂಪಿಟರ್ ಮತ್ತು ಅಪ್ಸರೆ ಕಲಿಸ್ಟೋ ಇವರ ಮಗ ಈತ. ಉತ್ತರ ಖಗೋಳೀಯ ಧ್ರುವದ (ಧ್ರುವ ನಕ್ಷತ್ರ) ಸುತ್ತಲೂ ನೇಗಿಲ್ಲನ್ನು ಹೊಡೆಯುವವನೀತ. ಕೆಲವೊಂದು ಸಂಪ್ರದಾಯಗಳಲ್ಲಿ ಇವನನ್ನು ಎರಡು ಬೇಟೆ ನಾಯಿಗಳನ್ನು ಹಿಡಿದುಕೊಂಡು ಕರಡಿಯ ಬೇಟೆಗಾಗಿ ಹೊರಟಿರುವವನೆಂದೂ ವರ್ಣಿಸಲಾಗಿದೆ.

ಅಟ್ಲಾಸ್ ಎಂಬುದು ಈ ನಕ್ಷತ್ರ ಪುಂಜಕ್ಕೆ ಹಿಂದೆ ಇದ್ದ ಹೆಸರು. ಗ್ರೀಕ್ ಮಹಾಪುರಾಣಗಳ ಕರ್ತೃ ಹೋಮರನ ಕೃತಿಗಳಲ್ಲಿ ಈ ಪುಂಜದ ಹೆಸರು ಇದೆ. ಸಹದೇವ ಎಂಬುದು ಇದರ ಪರ್ಯಾಯನಾಮ.