ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬೂಡಪೆಸ್ಟ್‌

ವಿಕಿಸೋರ್ಸ್ದಿಂದ

ಬೂಡಪೆಸ್ಟ್ ಹಂಗರಿ ಗಣರಾಜ್ಯದ ರಾಜಧಾನಿ; ಆಡಳಿತ ಕೇಂದ್ರ ನಗರ. ಹಾಗೆಯೇ ಪೆಸ್ಟ್ ಕೌಂಟಿ ಮತ್ತು ಬೂಡಜಿಲ್ಲೆಗಳ ಆಡಳಿತ ಕೇಂದ್ರ. ಬೂಡಪೆಸ್ಟ್ ನಗರ ಮಧ್ಯ ಡ್ಯಾನ್ಯೂಬ್ ನದಿ ಹರಿಯುತ್ತದೆ. ಇದರ ಪೂರ್ವ ಪಶ್ಚಿಮ ದಂಡೆಗಳ ಮೇಲೆ ನಗರ ಬೆಳೆದಿದೆ. ಪೂರ್ವದಂಡೆಯ ಮೇಲಿನ ಪೆಸ್ಟ್ ಮತ್ತು ಪಶ್ಚಿಮ ದಂಡೆಯ ಮೇಲಿನ ಬೂಡ ನಗರಗಳನ್ನು 1872ರಲ್ಲಿ ಒಂದುಗೂಡಿಸಿ ಏಕನಗರವಾಗಿ ಪರಿಗಣಿಸಲಾಗಿದೆ. ಎರಡೂ ನಗರಭಾಗಗಳಿಗೆ ನದಿಯ ಮೇಲಣ ಎರಡು ರೈಲು ಮತ್ತು ಆರು ರಸ್ತೆ ಸೇತುವೆಗಳು ಸಂಬಂಧ ಕಲ್ಪಿಸಿವೆ. ಉ.ಅ.470 30, ಪೂ.ರೇ. 190 5 ನಲ್ಲಿರುವ ಈ ಮಹಾ ನಗರದ ವಿಸ್ತೀರ್ಣ ಸುಮಾರು 525 ಚಕಿಮೀ. ಜನಸಂಖ್ಯೆ 20,85,615 (1978).

ಬೃಹತ್ ಹಂಗರಿ ಮೈದಾನದ ಪಾಶ್ಚಾತ್ಯ ಮಾರ್ಗಗಳ ಮೇಲೆ ಬೂಡಪೆಸ್ಟ್ ಇರುವುದರಿಂದ ಇದರ ಸ್ಥಾನ ಮಹತ್ತ್ವದ್ದಾಗಿದೆ. ಸಮಶೀತೋಷ್ಣ ವಾಯುಗುಣವೆನ್ನಬಹುದು. ವಾರ್ಷಿಕ ಸರಾಸರಿ ಉಷ್ಣತೆ 110 ಸೆ. ಜುಲೈ ತಿಂಗಳಲ್ಲಿ 28 ಇದ್ದರೆ ಜನವರಿ ತಿಂಗಳಲ್ಲಿ -10 ಸೆ. ವಾರ್ಷಿಕ ಮಳೆ ಸರಾಸರಿ 600 ಮಿಮೀ. ಪ್ರಪಂಚದ ಅತಿ ಸುಂದರ ಪಟ್ಟಣಗಳಲ್ಲಿ ಒಂದೆಂದು ಪರಿಗಣಿಸಿರುವ ಈ ನಗರವನ್ನು ಒಂದು ಕಾಲದಲ್ಲಿ ಡ್ಯಾನ್ಯೂಬಿನ ರಾಣಿ ಎಂದು ಕರೆಯುತ್ತಿದ್ದರು. ಇದು ಮಧ್ಯ ಯೂರೊಪಿನ ಅತಿ ದೊಡ್ಡ ನಗರ. ಆರ್ಥಿಕ ಮಹತ್ತ್ವವೊಂದೇ ಇದಕ್ಕೆ ಕಾರಣವಲ್ಲ, ಇದರ ಆಯಕಟ್ಟಿನ ಸ್ಥಾನ, ಸೊಗಸಾದ ನೈಸರ್ಗಿಕ ಹಿನ್ನೆಲೆ, ಐತಿಹಾಸಿಕ ಅವಶೇಷ ಮತ್ತು ಸಂಗ್ರಹಗಳು, ಪ್ರಸಿದ್ಧ ಬಿಸಿನೀರಿನ ಊಟೆಗಳು, ಅಂತಾರಾಷ್ಟ್ರೀಯ ಸುಗಮ್ಯತೆ ಎಲ್ಲವೂ ಬೆಸುಗೆಗೊಂಡು ಈ ಮಹಾನಗರ ರೂಪುಗೊಂಡಿದೆ. 1970ರ ದಶಕದ ಸುಮಾರಿನಲ್ಲಿ ವಾರ್ಷಿಕ ಸುಮಾರು 3,000,000 ನಗರ ಸಂದರ್ಶಕರು ಬರುತ್ತಿದ್ದರೆನ್ನಲಾಗಿದೆ.

ಬೂಡಪೆಸ್ಟ್ ಇರುವ ಪ್ರದೇಶದಲ್ಲಿ ಕಂಚು ಯುಗದ ಹಾಗೂ ಕೆಲ್ಟಿಕ್ ಜನಾಂಗದ ವಸತಿಯ ಕುರುಹುಗಳು ದೊರೆತಿವೆ. ರೋಮನ್ನರ ಕಾಲದಲ್ಲಿ ನದಿಯ ಪಶ್ಚಿಮ ದಂಡೆಯ ಮೇಲೆ ಒಂದು ಊರನ್ನು ಕಟ್ಟಲಾಗಿತ್ತು. ಅದು ಅನಾಗರಿಕ ಬುಡಕಟ್ಟಿನ ಜನರ ಧಾಳಿಯಿಂದ ಹಾಳಾಯಿತಾದರೂ ಅದು ಒಬುಡಾ ವಸತಿಯ ಮೂಲವಾಯಿತು. ಒಬುಡಾ ಹಾಗೂ ನದಿಯ ಪೂರ್ವದಂಡೆಯ ಮೇಲೆ ಸ್ಥಾಪಿತವಾಗಿದ್ದ ಪೆಸ್ಟ್ ಟಾರ್ಟರರಿಂದ ನೆಲಸಮಗೊಂಡ ಬಳಿಕ 4ನೆಯ ಬೇಲಾ ಬೂಡದಲ್ಲಿ ಕೋಟೆಯೊಂದನ್ನು ಕಟ್ಟಿದ. ಅದು ಮುಂದಿನ ರಾಜನ ವಾಸಸ್ಥಾನವಾಯಿತು. 16ನೆಯ ಶತಮಾನದಲ್ಲಿ ಬೂಡ ಮತ್ತು ಪೆಸ್ಟ್ ಎರಡೂ ತುರ್ಕಿಗಳ ವಶವಾಗಿ 1686ರ ತನಕವೂ ಅವರ ವಶದಲ್ಲೇ ಉಳಿದುವು. ಅನಂತರ ಅವು ಹ್ಯಾಪ್ಸ್‍ಬಗ್ರ್ಸನವರ ಆಳ್ವಿಕೆಗೆ ಒಳಗಾದುವು. ಮುಂದೆ ವಿಯೆನ್ನಾ ಆಡಳಿತದಲ್ಲಿ ನಗರ ಬೆಳೆದು ಈಗ ಉಳಿದಿರುವ ಮತ್ತು ಹೆಚ್ಚಾಗಿ ಬರಾಕ್ ಶೈಲಿಯಲ್ಲಿರುವ ಕಟ್ಟಡಗಳು ಆಗಲೇ ನಿರ್ಮಿತವಾದುವು. ಬೂಡದ ಬೆಳೆವಣಿಗೆ ಗುಡ್ಡಗಾಡು ಭೂಮಿಯಿಂದಾಗಿ ಕುಂಠಿತಗೊಂಡಿತು. ಆದರೆ ಬಯಲು ಪ್ರದೇಶದಲ್ಲಿದ್ದ ಪೆಸ್ಟ್ ಶೀಘ್ರಗತಿಯಲ್ಲಿ ಬೆಳೆಯಿತು. ಮೊದಲನೆಯ ಮಹಾಯುದ್ಧದ ಅನಂತರ ಬೂಡಪೆಸ್ಟ್ ಮೊದಲಿಗೆ ಬಾಲ್ಸೆಮಿಕ್ಕರ್ ಆಮೇಲೆ 1919ರಲ್ಲಿ ರುಮೇನಿಯನ್ನರ ಆಡಳಿತಕ್ಕೆ ಒಳಗಾಯಿತು. ಎರಡನೆಯ ಮಹಾಯುದ್ಧಧ ಕಾಲದಲ್ಲಿ ಜರ್ಮನ್ನರ ಮತ್ತು ಹಂಗೇರಿಯನ್ನರ ಹಾಗೂ ರಷ್ಯನ್ನರ ನಡುವೆ ನಡೆದ ಏಳು ವಾರಗಳ ಯುದ್ಧದ ಮೂಲಕ ನಗರದ ಹೆಚ್ಚು ಕಡಿಮೆ ಎಲ್ಲ ಕಟ್ಟಡಗಳೂ ನಾಶವಾದವು. ಯುದ್ಧದ ಅನಂತರ ಬೂಡಪೆಸ್ಟ್ ನಗರವನ್ನು ಮತ್ತೆ ನಿರ್ಮಾಣ ಮಾಡಲಾಯಿತಾದರೂ 1956ರಲ್ಲಿ ರಷ್ಯದ ವಿರುದ್ಧ ಎದ್ದ ದಂಗೆಗಳಲ್ಲಿ ಮತ್ತೆ ಬಹಳಷ್ಟು ನಷ್ಟ ಅನುಭವಿಸಿತು.

ಎರಡನೆಯ ಮಹಾಯುದ್ಧದ ಅಂತ್ಯದ ತನಕವೂ ಹಿಟ್ಟುಮಾಡುವುದೇ ಮುಂತಾದ ಆಹಾರದ ಕೈಗಾರಿಕೆಗಳೇ ಬೂಡಪೆಸ್ಟಿನಲ್ಲಿ ಅಧಿಕವಾಗಿದ್ದುವು. 20ನೆಯ ಶತಮಾನದ ಆದಿಯಲ್ಲಿ ಭಾರಿ ಕೈಗಾರಿಕೆಗಳು ಹುಟ್ಟಿಕೊಂಡವು. ಎರಡನೆಯ ಮಹಾಯುದ್ಧದಿಂದೀಚೆಗೆ ಎಲೆಕ್ಟ್ರಾನಿಕ್ಸ್ ಮತ್ತು ನಿರ್ವಾಯು ಯಂತ್ರಗಳ ಉತ್ಪಾದನೆ ಅಧಿಕವಾಗಿದೆ. ಇಲ್ಲಿಯ ಅನೇಕ ಸಣ್ಣ ಪ್ರಮಾಣದ ಕೈಗಾರಿಕೆಗಳು ಉತ್ಪನ್ನಗಳು ಅಂತಾರಾಷ್ಟ್ರೀಯ ಬಳಕೆಯುಳ್ಳವು.

ಹಂಗೆರಿಯ ಸಾರಿಗೆ ಮತ್ತು ಸಂಪರ್ಕ ವ್ಯವಸ್ಥೆಯಲ್ಲಿ ಬೂಡಪೆಸ್ಟಿಗೆ ಮಹತ್ತ್ವದ ಸ್ಥಾನವಿದೆ. ನಗರ ಪ್ರಮುಖ ರಸ್ತೆ ಮತ್ತು ರೈಲು ದಾರಿಗಳ ನಾಭಿಸ್ಥ ಕೇಂದ್ರವಾಗಿದ್ದು ಡ್ಯಾನ್ಯೂಬ್ ನದಿಯ ಜಲಮಾರ್ಗ ಅದರ ಕೇಂದ್ರೀಯ ಸ್ಥಾನದ ಮಹತ್ತ್ವವನ್ನು ಇನ್ನಷ್ಟು ಹೆಚ್ಚಿಸಿದೆ. ನಗರದಲ್ಲಿ ರಾಜ್ಯದ ಅತಿ ದೊಡ್ಡ ರೈಲು ನಿಲ್ದಾನಗಳಿದ್ದು ರೈಲ್ವೆ ಸೌಕರ್ಯವಿದೆ. ಬಸ್ ಮತ್ತು ಟ್ರಾಲಿ ಬಸ್ಸುಗಳು ಕೆಲಮಟ್ಟಿಗೆ ಪ್ರಯಾಣ ಸೌಲಭ್ಯ ಒದಗಿಸುತ್ತವೆ.

ಬೂಡಪೆಸ್ಟ್ ಸಾಂಸ್ಕøತಿಕ, ವೈಜ್ಝಾನಿಕ ಮತ್ತು ಕಲಾ ಕೇಂದ್ರವೂ ಆಗಿದೆ. ದಿ ಹಂಗೇರಿಯನ್ ಅಕಾಡೆಮಿ ಆಫ್ ಸೈನ್ಸಸ್ ಇಲ್ಲಿದ್ದು ಅದರ ಎಲ್ಲ ಸಂಶೋಧನಾ ಸಂಸ್ಥೆಗಳ ಕಾರ್ಯಕಲಾಪಗಳು ಇಲ್ಲಿಯೇ ನಡೆಯುತ್ತದೆ. ಅನೇಕ ನಾಟಕ ಗೃಹಗಳು, ಗಾನಗೋಷ್ಠಿ ಸಭಾಂಗಣಗಳು ಇವೆ. ಹಂಗೇರಿಯ ಪ್ರಸಿದ್ಧ ಬೂಡಪೆಸ್ಟ್ ವಿಶ್ವವಿದ್ಯಾಲಯ, ಕೃಷಿ ಮತ್ತು ಆರ್ಥಿಕ ವಿಜ್ಝಾನಗಳ ಕಾಲೇಜುಗಳಿವೆ. ಆಧುನಿಕ ನಗರ ಸೌಕರ್ಯಗಳೆಲ್ಲ ಇರುವ ಈ ನಗರದಲ್ಲಿ ಹಿಂದಿನ ರಾಜರಕೋಟೆ, ಅನೇಕ ಅರಮನೆಗಳೂ, ಚರ್ಚುಗಳೂ ಮತ್ತು ಕೆಲವು ಜಗತ್ಪ್ರಸಿದ್ಧ ಕಟ್ಟಡಗಳೂ ಇವೆ. (ಜಿ.ಕೆಯು.)