ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬೂತುಗ

ವಿಕಿಸೋರ್ಸ್ದಿಂದ

ಬೂತುಗ ಗಂಗ ವಂಶದ ಅರಸ (936-61). ಎಡಗಂಗನ (886-920) ಮೂವರು ಮಕ್ಕಳಲ್ಲಿ ಕಿರಿಯವ. ರಾಷ್ಟ್ರಕೂಟ ಮುಮ್ಮುಡಿ ಅಮೋಘ ವರ್ಷನ ಮಗಳು ರೇಚಕ ನಿಮ್ಮ್ಮಡಿಯನ್ನು ವಿವಾಹವಾದ. ಇದರಿಂದ ರಾಷ್ಟ್ರಕೂಟರ ಬೆಂಬಲ ದೊರಕಿತು. ಅಣ್ಣ ರಾಚಮಲ್ಲನನ್ನು ಕೊಂದು ರಾಜ್ಯ ವಶಪಡಿಸಿಕೊಂಡ.

ಇವನ ಕಾಲದಲ್ಲಿ ಗಂಗ ಮತ್ತು ರಾಷ್ಟ್ರಕೂಟರ ಸಂಬಂಧ ಮಧುರವಾಗಿ ಬೆಳೆಯಿತು. ರಾಷ್ಟ್ರಕೂಟ 3ನೆಯ ಕೃಷ್ಣನ ಅನೇಕ ಯುದ್ಧಗಳಲ್ಲಿ ಬೂತುಗ ಸಹಕರಿಸಿದ. 949ರಲ್ಲಿ ತಕ್ಕೋಲಮ್ ಎಂಬಲ್ಲಿ ನಡೆದ ತೀವ್ರ ಕದನದಲ್ಲಿ ಇವನು ಚೋಳ ಯುವರಾಜ ರಾಜಾದಿತ್ಯನನ್ನು ಕೊಂದು ರಾಷ್ಟ್ರಕೂಟದ ಪ್ರತಿಷ್ಠೆ ಹೆಚ್ಚಿಸಿದ. ಈ ಕದನದಲ್ಲಿ ತೋರಿದ ಅಪಾರ ಸಾಹಸಕ್ಕಾಗಿ ಶೂದ್ರಕ, ಸಗರ ತ್ರಿಣೇತ್ರ ಎಂಬ ಬಿರುದುಗಳನ್ನು ನೀಡಿ ರಾಷ್ಟ್ರಕೂಟ ಚಕ್ರವರ್ತಿ ಗೌರವಿಸಿದ; ಮತ್ತು ಬನವಾಸಿ 12000ದ ಪ್ರಾಂತ್ಯಧಿಕಾರವನ್ನೂ ನೀಡಿದ. ಚೋಳರೊಂದಿಗಿನ ಯುದ್ಧದ ಅನಂತರ ಹಿಂದಿರುಗುವಾಗ ಬೂತುಗ ಗಂಗ ರಾಜ್ಯದ ಶತ್ರುಗಳಾಗಿದ್ದ ಕೆಲವು ಸಾಮಂತ ಕುಲದವರನ್ನು ಸೋಲಿಸಿ ಅವರ ಪ್ರಾಂತ್ಯಗಳನ್ನೂ ವಶಪಡಿಸಿಕೊಂಡ. ಇವನ ಕಾಲದಲ್ಲಿ ಗಂಗರ ಪ್ರತಿಷ್ಠೆ ದ್ವಿಗುಣವಾಗಿ ರಾಜ್ಯ ವಿಸ್ತಾರಗೊಂಡಿತು. ಇವನು ಯುದ್ಧಕುಶಲಿ, ಗಂಗ ನಾರಾಯಣ, ಗಂಗ ಗಾಂಗೇಯ, ನನ್ನಿಯ ಗಂಗ ಎಂಬ ಬಿರುದುಗಳನ್ನೂ ಧರಿಸಿದ್ದ.