ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬೂದಿಕೋಟೆ

ವಿಕಿಸೋರ್ಸ್ದಿಂದ

ಬೂದಿಕೋಟೆ ಕರ್ನಾಟಕ ರಾಜ್ಯ ಕೋಲಾರಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ಒಂದು ಊರು. ಇದೇ ಹೆಸರಿನ ಹೋಬಳಿ ಕೇಂದ್ರ. ಬಂಗಾರ ಪೇಟೆಯಿಂದ ನೈಋತ್ಯಕ್ಕೆ 11 ಕಿಮೀ ದೂರದಲ್ಲಿ ಮಾರ್ಕಂಡೇಯ ನದಿಯ ಎರಡು ಕವಲುಗಳ ಸಂಗಮಸ್ಥಾನದಲ್ಲಿದೆ. ಜನಸಂಖ್ಯೆ 2,155 (1971). ಇಲ್ಲಿ ಪ್ರಾಥಮಿಕ, ಪ್ರೌಢಶಾಲೆಗಳೂ, ಪ್ರಾಥಮಿಕ ಆರೋಗ್ಯ ಕೇಂದ್ರ, ಅಂಚೆ ಮತ್ತು ತಂತಿ ಕಚೇರಿಗಳೂ ಇವೆ.

ಪ್ರಾಚೀನ ಕಾಲದಲ್ಲಿ ನಡೆದ ಮಹತ್ತಾದ ಪೂರ್ಣಾಹುತಿಯ ಪರಿಣಾಮವಾಗಿ ಈ ಸ್ಥಳಕ್ಕೆ ಬೂದಿ ಕೋಟೆ (ಸಂಸ್ಕøತದಲ್ಲಿ ವಿಭೂತಿಪುರ) ಎಂದು ಹೆಸರು ಬಂದಿರಬಹುದೆಂದು ಊಹಿಸಲಾಗಿದೆ. ಇಲ್ಲಿ 8ನೆಯ ಶತಮಾನದ ಬಾಣರ ಶಾಸನವಿದೆ. 17ನೆಯ ಶತಮಾನದಲ್ಲಿ ಇದು ಶಿರಾದ ಸುಭೇದಾರನ ಕೆಳಗೆ ಪೌಜುದಾರನಾಗಿ ನೇಮಕಗೊಂಡಿದ್ದ ಫತೆ ಮಹಮ್ಮದನ ಜಹಗೀರಿಯಾಗಿತ್ತು. ಅವನ ಮಗ ಹೈದರ್ ಆಲಿ ಜನಿಸಿದ್ದು ಇಲ್ಲಿಯೇ. ಗ್ರಾಮದಲ್ಲಿ ಶಿಥಿಲವಾದ ಕೋಟೆಯ ಅವಶೇಷಗಳಿವೆ. ಕೋಟೆಯ ಒಳಭಾಗದಲ್ಲಿ ವೇಣುಗೋಪಾಲಸ್ವಾಮಿಯ ದೇವಾಲಯವೂ ಹೊರಭಾಗದಲ್ಲಿ ವೆಂಕಟೇಶ್ವರ ದೇವಾಲಯವೂ ಇವೆ. ಊರಿನ ವಾಯುವ್ಯಕ್ಕೆ ಸುಮಾರು 1.5 ಕಿ.ಮೀ. ದೂರದಲ್ಲಿ ಸೋಮೇಶ್ವರ ದೇವಾಲಯವಿದೆ.