ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬೂದು ಕರಡಿ

ವಿಕಿಸೋರ್ಸ್ದಿಂದ

ಬೂದು ಕರಡಿ - ಸ್ತನಿವರ್ಗದ ಕಾರ್ನಿವೊರ ಗಣದ ಅರ್ಸಿಡೀ ಕುಟುಂಬಕ್ಕೆ ಸೇರಿದ ಮಾಂಸಾಹಾರಿ ಪ್ರಾಣಿ (ಗ್ರೇಬೇರ್). ಕಂದು, ಕೆಂಪು, ಬೆಳ್ಳಿ ಕರಡಿ ಎಂದು ಕೂಡ ಕರೆಯುವುದಿದೆ. ಅರ್ಸಸ್ ಇಸಾಬೆಲಿನಸ್ ಶಾಸ್ತ್ರೀಯ ಹೆಸರು. ಭಾರತದ ಗಢವಾಲ ಹಾಗೂ ಬಿಶಹರ್‍ನಿಂದ ಪಶ್ಚಿಮ ಕಾಶ್ಮೀರದ ವರೆಗಿನ ದಟ್ಟ ಕಾಡುಗಳಲ್ಲಿ ಇದರ ವಾಸ. ಇದು ಸಾಧ್ಯವಾದಷ್ಟು ಮನುಷ್ಯನ ದೃಷ್ಟಿಯಿಂದ ದೂರವಿರುತ್ತದೆ. ಆಗೊಮ್ಮೆ ಈಗೊಮ್ಮೆ ಕಾಡಿನಿಂದ ಹೊರಬಿದ್ದು ಸಮೀಪದ ತೋಟಗಳಿಗೆ ದಾಳಿಯಿಡುವುದುಂಟು. ಮಾಂಸಾಹಾರಿ ಪ್ರಾಣಿಗುಂಪಿಗೆ ಸೇರಿದೆಯಾದರೂ ಶುದ್ಧ ಮಾಂಸಹಾರಿ ಪ್ರಾಣಿಯಲ್ಲ. ಇದರ ಆಹಾರ ಮಿಶ್ರ ಬಗೆಯದು. ಗೆಡ್ಡೆ ಗೆಣಸು ಹಣ್ಣು ಹುಲ್ಲು ಮುಂತಾದ ಸಸ್ಯಜನ್ಯ ಆಹಾರವನ್ನೂ ಕೀಟ ಸರೀಸೃಪ ಇತ್ಯಾದಿ ಪ್ರಾಣಿ ಆಹಾರವನ್ನೂ ಇದು ತಿನ್ನುತ್ತದೆ. ಇದರ ಘ್ರಾಣೇಂದ್ರಿಯ ಬಹಳ ಸೂಕ್ಷ್ಮ ತೆರನಾದ್ದು. ಸುಮಾರು ಒಂದು ಕಿಲೊಮೀಟರ್ ದೂರದ ವೈರಿಗಳ ಇರವನ್ನು ವಾಸನೆಯಿಂದಲೇ ಪತ್ತೆಮಾಡಬಲ್ಲದು ಎಂದು ಹೇಳಲಾಗಿದೆ. ದೃಷ್ಟಿ ಮಾತ್ರ ಬಲು ಮಂದ. ಬೇರೆ ಕರಡಿಗಳಂತೆಯೇ ಇದು ಕೂಡ ಶಿಶಿರಸ್ವಾಪವನ್ನು ತೋರುತ್ತದೆ.

ಇದರ ಸಂತಾನವೃದ್ಧಿ ಶ್ರಾಯ ಸಾಮಾನ್ಯವಾಗಿ ಆಗಸ್ಟ್ ತಿಂಗಳು. ಸುಮಾರು 9 ತಿಂಗಳ ಕಾಲ ಗರ್ಭಧರಿಸುವ ಹೆಣ್ಣು ಒಂದು ಸೂಲಿಗೆ ಎರಡು ಮರಿಗಳನ್ನು ಈಯುತ್ತದೆ. ಆಗತಾನೇ ಜನಿಸಿದ ಮರಿ 9.5-9.75 ಕೆಜಿ ತೂಗುತ್ತದೆ. ವಯಸ್ಕ ಕರಡಿಯಾದರೂ ಸುಮಾರು 750 ಕೆಜಿ ತೂಗುವುದುಂಟು. ಬೂದು ಕರಡಿಯ ಆಯಸ್ಸು 30-35 ವರ್ಷಗಳು. (ಎಸ್.ಎನ್.ಎಚ್.)