ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬೂನಿನ್, ಇವಾನ್ ಅಲೆಕ್ಸಿಯೇವಿಚ್

ವಿಕಿಸೋರ್ಸ್ದಿಂದ

ಬೂನಿನ್, ಇವಾನ್ ಅಲೆಕ್ಸಿಯೇವಿಚ್ 1870-1953. ರಷ್ಯದ ಕವಿ ಮತ್ತು ಕಥೆಗಾರ. ನೊಬೆಲ್ ಪಾರಿತೋಷಿಕ ವಿಜೇತ (1933). ಪ್ರತೀಕಮಾರ್ಗಕ್ಕೆ ಸೇರಿದಾತ ಗಾರ್ಕಿಯ ಜ್ಞಾನ ಪಂಥದವ. ತನ್ನ ತಲೆಮಾರಿನ ಶ್ರೇಷ್ಠ ಕತೆಗಾರ. ಪುಪ್ಕಿನನ ಸಂಪ್ರದಾಯದಲ್ಲಿ ಕವನಗಳನ್ನು ಬರೆದ. ಅನಂತರ ಗದ್ಯಕ್ಕೆ ತಿರುಗಿದ. ಇವನಿಗೆ ಕೀರ್ತಿ ತಂದ ದಿ ವಿಲೇಜ್‍ನಲ್ಲಿ (ಹಳ್ಳಿ-1910) ಹಿಂದಿನ ಕೃತಿಗಳ ಭಾವಗೀತಾತ್ಮಕ ವಿಧಾನ ತ್ಯಜಿಸಿ, ಹೊಸ ರೀತಿ ಅನುಸರಿಸಿದ. ರಷ್ಯದ ಗ್ರಾಮೀಣ ಜೀವನದ ಆರ್ಥಿಕ ಮತು ಸಂಸ್ಕøತಿಕ ರಿಕ್ತತೆ ಪಾಶವೀಯತೆಗಳನ್ನು ಇಬ್ಬರು ಸಹೋದರರ ಜೀವನದ ಮೂಲಕ ನಿರೂಪಿಸುವ ಈ ಕೃತಿ ರಷ್ಯನ್ ಸಾಹಿತ್ಯದಲ್ಲಿ ಅತ್ಯಂತ ಕಟುವಾದ, ಕಹಿಯಾದ ಕಾರಿರುಳಿನ ಕೃತಿಗಳಲ್ಲಿ ಒಂದೆಂದು ಹೇಳಲಾಗಿದೆ. 1897ರಲ್ಲಿ ಪ್ರಕಟವಾದ ಈತನ ಸಣ್ಣಕತೆಗಳ ಸಂಗ್ರಹ ಎಲ್ಲರ ಪ್ರಶಂಸೆ ಪಡೆಯಿತು. 1903ರಲ್ಲಿ ಈತ ಪ್ರಕಟಿಸಿದ ಲಾಂಗ್ ಫೆಲೋನ, ಸಾಂಗ್ ಆಫ್ ಹೈವಾತಾದ ಅನುವಾದಕ್ಕೆ ರಷ್ಯನ್ ಅಕೆಡೆಮಿ ಪುಷ್ಕಿನ್ ಪ್ರಶಸ್ತಿ ನೀಡಿತು. ದಿ ಜಂಟಲ್‍ಮನ್ ಫ್ರಮ್ ಸ್ಯಾನ್‍ಫ್ರಾನ್ಸಿಕ್ಕೊ (1915) ಈತನ ಮಹಾಕೃತಿ. ಈತನ ಬಹುತೇಕ ಕಾದಂಬರಿಗಳು ವಾಸ್ತವಿಕತೆಗೆ ಹತ್ತಿರವಿದ್ದ ರಷ್ಯದ ಪ್ರಾಚೀನ ವೈಭವದ ಚಿತ್ರಣಗಳು. ಪ್ಯಾರಿಸಿನಲ್ಲಿ ಮರಣ (1953).

       (ಎಲ್.ಎಸ್.ಎಸ್.)