ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬೂಬಿ

ವಿಕಿಸೋರ್ಸ್ದಿಂದ

ಬೂಬಿ ಪೆಲಿಕಾನಿಫಾರ್ಮೀಸ್ ಗಣ ಸೂಲಿಡೀ ಕುಟುಂಬಕ್ಕೆ ಸೇರಿದ ಕಡಲ ಹಕ್ಕಿ. ಉಷ್ಣವಲಯಗಳ ಕರಾವಳಿಗಳಲ್ಲಿ ಕಾಣದೊರೆಯುತ್ತದೆ. ಜಾತಿಯ ವೈಜ್ಞಾನಿಕ ಹೆಸರು ಸೂಲ. ಇದರಲ್ಲಿ ಮಾಸ್ಕ್‍ಡ್, ಕೆಂಪುಕಾಲಿನ, ಕಂದುಬಣ್ಣದ, ನೀಲಿಕಾಲಿನ, ಪೆರೂವಿಯನ್, ಹಾಗೂ ಅಬ್ಬಟ್ ಬೂಬಿಗಳೆಂದು ಆರು ವಿಧಗಳುಂಟು. ಇವುಗಳ ಪೈಕಿ ಮೊದಲ ಮೂರು ವಿಧಗಳು ಪ್ರಪಂಚಾದ್ಯಂತ ಕಾಣಸಿಗುವುವಾದರೂ ನೀಲಿಕಾಲಿನ ಮತ್ತು ಪೆರೂವಿಯನ್ ಬೂಬಿಗಳು ಅಮೆರಿಕ ಖಂಡಗಳ ಪಶ್ಚಿಮ ಕರಾವಳಿಗಳಲ್ಲೂ ಅಬ್ಬಟ್ ಬೂಬಿ ಇಂಡಿಯನ್ ಸಾಗರದ ಪ್ರದೇಶಗಳಲ್ಲೂ ವಾಸಿಸುವುವು.

ಬೂಬಿ ಎಂದರೆ ಪೆದ್ದ ಎಂದು ಅರ್ಥ. ಈ ಹಕ್ಕಿಯ ರೂಪ ಮತ್ತು ಸ್ವಭಾವದಲ್ಲಿ ಈ ಪೆದ್ದುತನ ಸುವ್ಯಕ್ತವಾಗುವುದರಿಂದ ಬೂಬಿ ಎಂಬ ಹೆಸರು ಅನ್ವರ್ಥವಾಗಿದೆ. ಮನುಷ್ಯ ತನ್ನ ಶತ್ರು ಎಂಬ ಅರಿವೇ ಇಲ್ಲದೆ ಹಡಗುಗಳ ಹಗ್ಗ, ಕಂಬಿಗಳ ಮೇಲಿ ಕುಳಿತು ನಾವಿಕರ ಬಾಯಿಗೆ ಬಲಿಯಾಗುತ್ತದೆ. ಗೂಡು ಕಟ್ಟುವ ಪ್ರದೇಶಗಳ ಬಳಿಯೂ ಇದೇ ಮೂರ್ಖತೆಯ ಪ್ರದರ್ಶನ. ಆದರೆ ಇದು ಮನುಷ್ಯ ಎಟುಕದ ಪ್ರಪಾತಗಳಲ್ಲಿಯೂ ಹೋಗದ ದ್ವೀಪಗಳಲ್ಲಿಯೂ ಗೂಡುಕಟ್ಟುವುದರಿಂದ ಇದರ ಸಂತತಿ ನಶಿಸಿಹೋಗಿಲ್ಲ.

ಬೂಬಿ ಸುಮಾರು 80 ಸೆಂಮೀ ಉದ್ದದ ಹಕ್ಕಿ. ಮೈಬಣ್ಣ ಬಿಳಿ ಇಲ್ಲವೆ ಕಂದು, ರೆಕ್ಕೆಗಳು ಕರಿಯ ಬಣ್ಣದವು. ಕಾಲು ಹಳದಿ, ನೀಲಿ, ಕೆಂಪು ಇತ್ಯಾದಿ ವೈವಿಧ್ಯಮಯ, ಹಾರುವ ಮೀನುಗಳು ಇದರ ಅಚ್ಚುಮೆಚ್ಚಿನ ಆಹಾರ. ಕಡಲಿನಲ್ಲಿ ಸಾಗುವ ಹಡಗುಗಳ ಸುತ್ತಮುತ್ತ ಹಾರಾಡುತ್ತಿದ್ದು, ಹಡಗುಗಳ ಚಲನೆಯಿಂದ ಕ್ಷೋಭೆಗೊಂಡು ನೀರಿನಿಂದ ಮೇಲಕ್ಕೆ ಹಾರುವ ಮೀನುಗಳ ಮೇಲೆ ಎರಗಿ ಅವನ್ನು ಹಿಡಿದು ನುಂಗುತ್ತದೆ.