ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬೂರುಗ

ವಿಕಿಸೋರ್ಸ್ದಿಂದ

ಬೂರುಗ ಬಾಂಬಕೇಸೀ ಕುಟುಂಬಕ್ಕೆ ಸೇರಿದ ಉಪಯುಕ್ತ ಮರ (ಸಿಲ್ಕ್ ಕಾಟನ್ ಟ್ರೀ). ಕೆಂಪು ಬೂರುಗ, ಮುಳ್ಳುಬೂರುಗ ಪರ್ಯಾಯ ನಾಮಗಳು. ಸಾಲ್ಮಾಲಿಯ ಮಲಬಾರಿಕ, ಬಾಂಬ್ಯಾಕ್ಸ್ ಸೈಬ ಅಥವಾ ಬಾಂಬ್ಯಾಕ್ಸ್ ಮಲಬಾರಿಕಮ್ ಇದರ ಸಸ್ಯ ವೈಜ್ಞಾನಿಕ ಹೆಸರುಗಳು.

ಉಷ್ಣ ಹಾಗೂ ಉಪೋಷ್ಣ ವಲಯಗಳ ದೇಶಗಳಲ್ಲೆಲ್ಲ ಕಾಣಬರುವ ಇದು ಭಾರತ ಹಾಗೂ ಅಂಡಮಾನ್ ದ್ವೀಪಗಳಲ್ಲಿ ವ್ಯಾಪಕವಾಗಿ ಬೆಳೆಯುತ್ತದೆ. ಮೈದಾನ ಸೀಮೆಗಳಲ್ಲಿ ಹಾಗೂ 1500ಮೀ ವರೆಗಿನ ಬೆಟ್ಟಪ್ರದೇಶಗಳಲ್ಲಿ ಇದನ್ನು ಕಾಣಬಹುದು. ಹಿಮಾಲಯದ ಸೆರಗಿನ ಪ್ರದೇಶಗಳ ಹಾಗೂ ಕೆಳ ಕಣಿವೆಗಳ ಮಿಶ್ರಪರ್ಣಪಾತಿ ಕಾಡುಗಳಲ್ಲಿ, ನದೀ ದಡಗಳ ಬಳಿಯಲ್ಲಿ ಪಶ್ಚಿಮಬಂಗಾಳ ಹಾಗೂ ಅಸ್ಸಾಮ್‍ಗಳ ಮಿಶ್ರ ನಿತ್ಯಹರಿದ್ವರ್ಣ ಕಾಡುಗಳಲ್ಲಿ ಇದು ಬೆಳೆಯುತ್ತದೆ. ಆಳವಾದ ಮರಳು ಮಿಶ್ರಿತ ಗೋಡುನೆಲ, ಕಣಿವೆಗಳ ಮೆಕ್ಕಲು ಮಣ್ಣು, ಬೆಟ್ಟಗಳ ಇಳಿಜಾರಿನ ಭೂಮಿ ಇದರ ಬೆಳವಣಿಗೆಗೆ ಅತ್ಯುತ್ತಮ. ಹೆಚ್ಚು ಕಡಿಮೆ ವರ್ಷವಿಡೀ ಹರಡಿದಂತೆ ವರ್ಷಕ್ಕೆ 75-460 ಸೆಂಮೀ ಮಳೆ ಬೀಳುವ, ಬಿಸಿಲು ಸಮೃದ್ಧವಾಗಿರುವ ಪ್ರದೇಶಗಳಲ್ಲಿ ಇದು ಹುಲುಸಾಗಿ ಬೆಳೆಯುತ್ತದೆ. ಶುಷ್ಕತೆಯನ್ನು ಕೊಂಚ ಮಟ್ಟಿಗೆ ಸಹಿಸುತ್ತದಾದರೂ ಕಡುಚಳಿ ಇದಕ್ಕೆ ಹಿಡಿಸದು.

ಬೂರುಗವನ್ನು ಬೀಜ, ಕಾಂಡತುಂಡು ಇಲ್ಲವೆ ಮೋಟುಕಾಂಡಗಳ ಮೂಲಕ ವೃದ್ಧಿಸಬಹುದು. ಬೀಜಗಳನ್ನು ನೇರವಾಗಿ ಆಯ್ಕೆಮಾಡಿದ ಸ್ಥಳಗಳಲ್ಲೊ ಒಟ್ಲುಪಾತಿಗಳಲ್ಲೊ ಬಿತ್ತುವುದುಂಟು. ಒಟ್ಲು ಪಾತಿಗಳಲ್ಲಿ ಬಿತ್ತಿದ ಬೀಜಗಳು ಮೊಳೆತು ಸಸಿಗಳಾದ 1-2 ವರ್ಷಗಳ ಅನಂತರ ಇವನ್ನು ಬೇರೆಡೆಗೆ ನಾಟಿಮಾಡಲಾಗುತ್ತದೆ. ಬೂರುಗವನ್ನು ಶುದ್ಧ ಬೆಳೆಯಾಗಿ ಅಥವಾ ದೊಡ್ಡಮರ, ಕಾಚು, ಶಿರೀಷ, ಕೂಲಿ, ನಂದಿ ಮುಂತಾದವುಗಳೊಂದಿಗೆ ಮಿಶ್ರ ಬೆಳೆಯಾಗಿ ಬೆಳೆಸುವುದಿದೆ.

ಬೂರುಗ ಸುಮಾರು 40 ಮೀ ಎತ್ತರಕ್ಕೆ ಬೆಳೆಯುವ ಬೃಹತ್ ಗಾತ್ರದ ಪರ್ಣಪಾತಿಮರ. ಇದರ ಬುಡದ ಸುತ್ತಳತೆಯೇ ಸುಮಾರು 6ಮೀ ಇರುವುದುಂಟು. ಇಂಥ ಮರದಲ್ಲಿ 24-30ಮೀ ಎತ್ತರದವರೆಗೆ ಅಡ್ಡರೆಂಬೆಗಳೇ ಇರುವುದಿಲ್ಲ. ಈ ಎತ್ತರದ ಮೇಲ್ಪಟ್ಟು ಹಾರಿಜವಾಗಿ ಹರಡಿದಂತೆ ರೆಂಬೆಗಳು ಜೋಡಣೆಗೊಂಡಿರುವುವು. ಎಳೆಯ ಮರದ ತೊಗಟೆ ಹಸುರು ಬಣ್ಣಕ್ಕಿದ್ದರೆ ಬಲಿತ ಮರದ್ದು ಬೂದು. ಕೆಲವು ಬಗೆಗಳಲ್ಲಿ ಕಾಂಡದ ಮೇಲೆ ದಪ್ಪ ಚೂಪು ಮುಳ್ಳುಗಳುಂಟು. ಎಲೆಗಳು ಸಂಯುಕ್ತ ಬಗೆಯವು. ದೊಡ್ಡವು, ಹಸ್ತಾಕಾರದವು. ಪ್ರತಿ ಎಲೆಯಲ್ಲಿ 10-20 ಸೆಂಮೀ ಉದ್ದದ ಐದರಿಂದ ಏಳು ಕಿರುಎಲೆಗಳಿವೆ. ಕಿರುರೆಂಬೆಗಳ ತುದಿಯಲ್ಲಿ ದೊಡ್ಡ ಗಾತ್ರದ, ಅನೇಕ ಹೂಗಳು ಅರಳುವುವು. ಹೂಗಳ ಬಣ್ಣ ಕೆಂಪು, ಹಳದಿ, ಕಿತ್ತಳೆ-ಹೀಗೆ ವೈವಿಧ್ಯಮಯ, ಹೂದಳಗಳು ಮಾಂಸಲ. ಕೇಸರಗಳು 60ಕ್ಕೂ ಹೆಚ್ಚು ಸಂಖ್ಯೆಯಲ್ಲಿವೆ; ಸಾಧಾರಣವಾಗಿ ತಲಾ 12 ರಂತೆ ಐದು ಗುಂಪುಗಳಾಗಿ ಕೂಡಿಕೊಂಡಿರುವುವು. ಕಾಯಿ ಸಂಪುಟ ಮಾದರಿಯದು. ಅಂಡಾಕಾರದ್ದಾಗಿರುವ ಇದರ ಸಿಪ್ಪೆ ದಪ್ಪ, ದಾರುಮಯ. ಒಳಗೆ ಕರಿಯ ಬಣ್ಣದ ಅಸಂಖ್ಯ ಬೀಜಗಳಿವೆ. ಸಿಪ್ಪೆಯ ಒಳಮುಖದಿಂದ ರೇಷ್ಮೆಯಂತೆ ಮೃದುವಾದ ಕಂದು ಮಿಶ್ರಿತ ಹಳದಿ ಬಣ್ಣದ ಅರಳೆಯ ಎಳೆಗಳು ಹುಟ್ಟಿದ್ದು ಬೀಜಗಳನ್ನು ಆವರಿಸಿರುವುವು. ಈ ಎಳೆಗಳೇ ಬೂರುಗದ ಹತ್ತಿ (ಸಿಲ್ಕ್ ಕಾಟನ್).

ಈ ಹತ್ತಿಗಾಗಿ ಮತ್ತು ಚೌಬೀನೆಗಾಗಿ ಬೂರುಗ ಪ್ರಸಿದ್ಧವಾಗಿದೆ. ಬೆಂಕಿ ಪೆಟ್ಟಿಗೆ, ಟೀ ಪೆಟ್ಟಿಗೆ, ಹಣ್ಣಿನ ಪೆಟ್ಟಿಗೆ, ಚಾವಣಿಗೆ ಅಳವಡಿಸಲು ಬಳಸುವ ಹಲಗೆ, ಮರದಹೆಂಚು, ಆಟಿಗೆ, ಕುಂಚದ ಹಿಡಿ, ಶವಪೆಟ್ಟಿಗೆ ಮುಂತಾದ ಸಾಮಗ್ರಿಗಳ ತಯಾರಿಕೆಯಲ್ಲಿ ಚೌಬೀನೆ ಉಪಯುಕ್ತ. ಬೂರುಗದ ಹತ್ತಿ ಹಗುರ, ಮೃದು ಮತ್ತು ಜಲವಿರೋಧಿ ಆಗಿರುವುದರಿಂದ, ಹಾಸಿಗೆ, ಮೆತ್ತೆ, ದಿಂಬು, ಜೀವರಕ್ಷಕ ಪಟ್ಟಿ ಮುಂತಾದವುಗಳಿಗೆ ಬಳಕೆಯಾಗುತ್ತದೆ.

ಬೂರುಗದಿಂದ ಪಡೆಯಲಾಗುವ ಗೋಂದಿಗೆ ಬಂಧಕ, ಉತ್ತೇಜಕ, ಶಕ್ತಿವರ್ಧಕ, ತಂಪುಕಾರಕ ಮುಂತಾಗಿ ಔಷಧೀಯ ಗುಣಗಳುಂಟು. ಬೀಜಗಳಿಂದ ದೊರೆಯುವ ಎಣ್ಣೆ ಖಾದ್ಯಯೋಗ್ಯವಾಗಿದೆ. ಬೂರುಗದ ಎಳೆಯ ಬೇರುಗಳನ್ನೂ ಚಿಗುರು, ಮೊಗ್ಗು, ಪುಪ್ಪಪತ್ರಗಳನ್ನೂ ತರಕಾರಿಯಾಗಿ ಬಳಸುವುದಿದೆ. ಬೇರನ್ನು ಬೆಂಕಿಯಲ್ಲಿ ಸುಟ್ಟು ಗೆಣಸಿನಂತೆ ತಿನ್ನುವುದುಂಟು. ಹೂವನ್ನು ಗಸಗಸೆ, ಸಕ್ಕರೆ, ಆಡಿನ ಹಾಲುಗಳೊಂದಿಗೆ ಕುದಿಸಿ ಮಿಠಾಯಿ ತಯಾರಿಸುವುದೂ ಇದೆ. ಎಲೆಗಳು ದನಗಳಿಗೆ ಒಳ್ಳೆಯ ಮೇವು. ತೊಗಟೆ, ಬೇರು, ಹೂಗಳಿಗೆ ಔಷಧೀಯ ಮಹತ್ತ್ವವೂ ಉಂಟು. (ಎಂ.ಎಚ್.ಎಂ.)