ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬೂರ್ಬನ್

ವಿಕಿಸೋರ್ಸ್ದಿಂದ

ಬೂರ್ಬನ್ 9ನೆಯ ಶತಮಾನದಲ್ಲಿ ಆರಂಭವಾದ ಫ್ರೆಂಚ್ ರಾಜಮನೆತನ. ಯೂರೊಪಿನ ಚರಿತ್ರೆಯಲ್ಲಿ ಇದು ಪ್ರಸಿದ್ಧವಾಗಿದೆ. ಇತರ ಅನೇಕ ದೇಶಗಳ ರಾಜಮನೆತನಗಳಿಗೆ ಇದು ಮೂಲವಾಗಿ ಪರಿಣಮಿಸಿತು. ಸ್ಪೇನ್, ನ್ಯಾವ್ಯಾರ್, ನೇಪಲ್ಸ್, ಸಿಸಿಲಿ, ಪಾರ್ಮ, ಇಟ್ರುರಿಯಗಳನ್ನು ಈ ಮನೆತನದಿಂದ ಬಂದವರು ಆಳಿದರು. 300-400 ವರ್ಷಗಳ ಕಾಲ ಈ ದೊರೆಗಳ ಪರಂಪರೆ ರಾಜ್ಯವಾಳುತ್ತಿತ್ತು. ಒಂದು ವಂಶದಿಂದ ಮತ್ತೊಂದು ವಂಶವು ಕವಲೊಡೆದಿತ್ತು. ಒಂದಕ್ಕೂ ಇನ್ನೊಂದಕ್ಕೂ ವಿವಾಹ ಸಂಬಂಧಗಳು ಬೆಳೆದಿದ್ದುವು.

ಫ್ರಾನ್ಸಿನ ಬೂರ್ಬನರು: ಫ್ರಾನ್ಸಿನಲ್ಲಿ ಬೂರ್ಬನ್ ವಂಶದ ಮೊದಲನೆಯ ಶ್ರೀಮಂತ ಅಡೆಮಾರ್ ಅಥವಾ ಐಮಾರ್ ಎಂಬುವನು ಎಂದು ಹೇಳಲಾಗಿದೆ. ಇವನು 9ನೆಯ ಶತಮಾನದಲ್ಲಿ ಬೂರ್ಬನೇಗೆ ಅಧಿಪತಿಯಾಗಿದ್ದ. ಈ ವಂಶಜಳಾದ ಮಟಿಲ್ಡ ಎಂಬುವಳು 1196ರಲ್ಲಿ ಡಾಂಪೀರ್ ಗೈ ಎಂಬವನೊಡನೆ ಮದುವೆಯಾಗಿ ರಾಜ್ಯವನ್ನು ದೊಡ್ಡದು ಮಾಡಿದಳು. 1272ರಲ್ಲಿ ಐಮಾರ್‍ನ ವಂಶಜಳಾದ ಬೀಟ್ರಿಕ್ಸ್ ಎಂಬುವಳು ಫ್ರಾನ್ಸಿನ ದೊರೆ 9ನೆಯ ಲೂಯಿಯ 6ನೆಯ ಮಗನಾದ ರಾರ್ಬಟ್ ಎಂಬ, ಕ್ಲೆಮಾಂಟ್ ಶ್ರೀಮಂತರನ್ನು ಮದುವೆಯಾದಳು. ಈ ಲೂಯಿ ಕ್ಯಾಪೆ ಎಂಬ ಮತ್ತೊಂದು ವಂಶದ ದೊರೆ. ಈ ರೀತಿಯಾಗಿ ಬೂರ್ಬನ್ನರ ರಾಜ್ಯಗಳೂ ಬಿರುದುಗಳೂ ಕ್ಯಾಪೇ ವಂಶದವರಿಗೆ ರಾಬರ್ಟಿನ ಮೂಲಕ ಸೇರಿದುವು.

14 ಮತ್ತು 15ನೆಯ ಶತಮಾನಗಳಲ್ಲಿ ರಾಬರ್ಟನ ತರುವಾಯ ಕೆಲವು ದೊರೆಗಳು ಆಳಿದರು. ಅವರು ಅಷ್ಟು ಪ್ರಸಿದ್ಧರಾಗಿರಲಿಲ್ಲ. ಕೊನೆಗೆ 1488ರಲ್ಲಿ ರಾಜ್ಯವೆಲ್ಲ 11ನೆಯ ಲೂಯಿಯ ಅಳಿಯನಾದ ಪೀರ್‍ನ ಕೈಸೇರಿತು. ಈತ 1503ರಲ್ಲಿ ಕಾಲವಾದ. ಇವನಿಗೆ ಗಂಡು ಮಕ್ಕಳಿಲ್ಲದುದರಿಂದ 1505ರಲ್ಲಿ ಇವನ ಮಗಳಾದ ಸುeóÁನಳ ಗಂಡ ಚಾಲ್ರ್ಸ್‍ಗೆ ರಾಜ್ಯ ದೊರಕಿತು. ಮದುವೆಯ ಅನಂತರ ಇವನು ಬೂರ್ಬನ್ ದೊರೆ ಎಂದು ಬಿರುದು ತೆಗೆದುಕೊಂಡ. ಈ ದೊರೆ ಪ್ರಸಿದ್ಧ ಯೋಧನಾಗಿದ್ದ. ಇವನಾದ ಮೇಲೆ 1548ರಲ್ಲಿ ಈ ವಂಶದ ಜೀನ್ ಎಂಬವಳು ವಂಡೋಮ್‍ನ ಲೂಯಿಯನ್ನು ಮದುವೆಯಾದಳು. 1554 ಈ ಲೂಯಿ ನ್ಯಾದ್ಯಾರ್‍ನ ರಾಜನಾದ. ಇವರ ಮಗ 4ನೆಯ ಹೆನ್ರಿ ಎಂಬ ಹೆಸರಿನಿಂದ ಫ್ರಾನ್ಸಿಗೆ 1589ರಲ್ಲಿ ದೊರೆಯಾದ, ಇವನ ಅನಂತರ ಇವನ ಮಗ 13ನೆಯ ಲೂಯಿ ದೊರೆಯಾದ. ಅವನ ಮಕ್ಕಳು 14ನೆಯ ಲೂಯಿ ಮತ್ತು ಫಿಲಿಪ್ (ಆರ್ಲಿಯನ್ಸ್ ದೊರೆ) ಮಕ್ಕಳು.

ಆರ್ಲಿಯನ್ಸ್‍ಗೆ ಸೇರಿದ ಬೂರ್ಬನ್ ವಂಶ 1830ರಲ್ಲಿ ಒಂದು ಕ್ರ್ರಾಂತಿಯ ಫಲವಾಗಿ ಮುಂದುವರಿಯಿತು. ಆಗ ಲೂಯಿ ಫಿಲಿಪ್ ಎಂಬ ದೊರೆ ಪಟ್ಟಕ್ಕೆ ಬಂದ. ಮತ್ತೆ 1848ರಲ್ಲಿ ನಡೆದ ಕ್ರ್ರಾಂತಿಯ ಪರಿಣಾಮವಾಗಿ ಅವನು ರಾಜ್ಯಭ್ರಷ್ಟನಾದ. 1850ರಲ್ಲಿ ಈತ ಮೃತನಾದ. ಈ ವಂಶ ಅನಂತರವೂ ಮುಂದುವರಿಯಿತು.

14ನೆಯ ಲೂಯಿಯ ಮಗ ತಂದೆಗೆ ಮೊದಲೇ ಸತ್ತುಹೋದ. ಆದರೆ ಅವನಿಗೆ ಮೂವರು ಗಂಡು ಮಕ್ಕಳಿದ್ದರು. ಇವರಲ್ಲಿ ಬರ್ಗಂಡಿಯ ಲೂಯಿ ಎಂಬವನಿಗೆ ಉಳಿದುಕೊಂಡ ಒಬ್ಬನೇ ಮಗ 15ನೆಯ ಲೂಯಿ. 14ನೆಯ ಲೂಯಿ ಇನ್ನೊಬ್ಬ ಮೊಮ್ಮಗ ಆನ್ ಜೋವಿನ ಡ್ಯೂಕ್. ಇವನು ಸ್ಪೇನ್ ದೇಶದ ಬೂರ್ಬನ್ ದೊರೆಯಾದ. 15ನೆಯ ಲೂಯಿಯ ಮೊಮ್ಮಗನಾದ 16ನೆಯ ಲೂಯಿ ಫ್ರಾನ್ಸಿನ ಕ್ರಾಂತಿಯ ಕಾಲದ ದೊರೆ. ಇವನು ಪ್ರಜೆಗಳ ದುಃಖವನ್ನು ಅರಿತುಕೊಳ್ಳದೆ, ಅವರನ್ನು ಬಿಗಿಯಿಂದ ಆಳಲೂ ಶಕ್ತಿಯಿಲ್ಲದೆ, 1793ರಲ್ಲಿ ಕ್ರ್ರಾಂತಿಕಾರರಿಂದ ವಧಿಸಲ್ಪಟ್ಟ. ಇವನ ಅನಂತರ ಇವನ ತಮ್ಮ 18ನೆಯ ಲೂಯಿಯೂ ಆಮೇಲೆ ಅವನ ತಮ್ಮ 10ನೆಯ ಚಾಲ್ರ್ಲನೂ ದೊರೆಗಳಾದರು. ಆರ್ಲಿಯನ್ಸ್ ವಿಭಾಗದ ಲೂಯಿ ಫಿಲಿಪ್‍ನ ಮೊಮ್ಮಗ ಇನ್ನೊಬ್ಬ ಲೂಯಿ ಫಿಲಿಪ್ (1838-94) ಫ್ರಾನ್ಸಿನ ಈ ವಂಶದ ದೊರೆಯಾದ. ಇವನು 7ನೆಯ ಫಿಲಿಪ್. ಇವನ ಮಗ 8ನೆಯ ಫಿಲಿಪ್. ಅನಂತರ ಫ್ರಾನ್ಸಿನ ಬೂರ್ಬನ್ ರಾಜವಂಶ ಕೊನೆಗೊಂಡಿತು.

ಸ್ಪೇನಿನ ಬೂರ್ಬನರು: 14ನೆಯ ಲೂಯಿಯ ಮೊಮ್ಮಗ 5ನೆಯ ಫಿಲಿಪ್ ಸ್ಪೇನ್ ದೇಶದ ಬೂರ್ಬನ್ ವಂಶದ ಮೊದಲನೆಯ ದೊರೆಯಾದ (1700). ಇವನ ತರುವಾಯ ಇವನ ಮಗ 6ನೆಯ ಫರ್ಡಿನಾಂಡ್ ಆಳಿದ. ಇವನು 1759ರಲ್ಲಿ ಗಂಡುಮಕ್ಕಳಿಲ್ಲದೆ ಸತ್ತ. ಆದ್ದರಿಂದ ಇವನ ತಮ್ಮ 3ನೆಯ ಚಾಲ್ರ್ಸ್ ಪಟ್ಟಕ್ಕೆ ಬಂದ (1759-88). ಇವನೇ 1734ರಿಂದ 1759ರ ತನಕ ಬೂರ್ಬನ್ನರ ನೇಪಲ್ಸ್ ಮತ್ತು ಸಿಸಿಲಿಗೆ ದೊರೆಯಾಗಿದ್ದ. ಇವನ ಹಿರಿಯ ಮಗನೇ 4ನೆಯ ಚಾಲ್ರ್ಸ್. ಇವನು 1788ರಲ್ಲಿ ಸ್ಪೇನಿನಲ್ಲಿ ಪಟ್ಟಕ್ಕೆ ಬಂದ. ನೆಪೋಲಿಯನ್ 1808ರಲ್ಲಿ ಇವನನ್ನು ಸಿಂಹಾಸನದಿಂದ ತಳ್ಳಿಹಾಕಿದ. ಆದರೆ ಇವನ ಮಗ 7ನೆಯ ಫರ್ಡಿನಾಂಡ್ ಮತ್ತೆ 1814ರಲ್ಲಿ ನೆಪೋಲಿಯನ್ನನ ಪತನದ ತರುವಾಯ ರಾಜ್ಯಕ್ಕೆ ಬಂದ (1814-33). ಇವನ ಮಗಳು 2ನೆಯ ಇಸಬೆಲ 1870ರ ತನಕ ರಾಜ್ಯವಾಳಿ ತನ್ನ ಮಗನಾದ 12ನೆಯ ಆಲ್‍ಫಾನ್ಸೋಗೆ ರಾಜ್ಯವನ್ನು ಬಿಟ್ಟುಕೊಟ್ಟಳು. ಈತ 1885ರಲ್ಲಿ ಮೃತನಾದ. ಇವನ ಮಗ 13ನೆಯ ಆಲ್‍ಫಾನ್‍ಸೋ ರಾಜನಾಗಿ 1931ರ ತನಕ ಪದವಿಯಲ್ಲಿದ್ದ. ಆ ವರ್ಷ ಜನರಲ್ಲಿ ಬಹಳ ಅಶಾಂತಿಯೂ ದಂಗೆಯೂ ಉಂಟಾದುದರಿಂದ ರಾಜ್ಯವನ್ನು ತೊರೆದು ದೇಶಾಂತರ ಹೋದ.

ಪಾರ್ಮ ಮತ್ತು ಪ್ಯಾಚೆನ್ಸದ ಬೂರ್ಬನರು: 1748ರಲ್ಲಿ ಸ್ಪೇನಿನ 5ನೆಯ ಫಿಲಿಪ್‍ನ ಎರಡನೆಯ ಮಗನಾದ ಫಿಲಿಪ್‍ಗೆ ಪಾರ್ಮ ಮತ್ತು ಪ್ಯಾಚೆನ್ಸ ಪ್ರಾಂತ್ಯಗಳ ಆಧಿಪತ್ಯ ದೊರೆಯಿತು. ಈ ದೊರೆತನ ಅವನ ತಾಯಿಯ ಹಕ್ಕಿನಿಂದಾಗಿ ದೊರೆಯಿತು. 1748ರ ಏ-ಲಾ-ಷಪೆಲ್ ಕೌಲಿನ ಪ್ರಕಾರ ಈ ಹಕ್ಕು ಸ್ಥಿರಪಟ್ಟಿತು. 1765ರಲ್ಲಿ ಈತನ ಮಗ ಫರ್ಡಿನಾಂಡ್ ಪಟ್ಟಕ್ಕೆ ಬಂದ. ಅದೇ ವರ್ಷದಲ್ಲಿ ಫರ್ಡಿನಾಂಡನ ಮಗ ಲೂಯಿ ಇಟ್ರುರಿಯದ ದೊರೆಯಾದ್ದರಿಂದ 1801ರಲ್ಲಿ ಪಾರ್ಮ ಪ್ರಾಂತ್ಯವನ್ನು ಫ್ರಾನ್ಸಿಗೆ ಕೊಡಲಾಯಿತು. ಆದರೆ 1802ರಲ್ಲಿ ಫರ್ಡಿನಾಂಡ್ ಸತ್ತಮೇಲೆಯೇ ಇದು ಫ್ರಾನ್ಸಿಗೆ ಸೇರಿದ್ದು. ಲೂಯಿಯ ಮಗ ಚಾಲ್ರ್ಸ್‍ಲೂಯಿ 1807ರಲ್ಲಿ ಇಟ್ರುರಿಯವನ್ನು ಫ್ರಾನ್ಸಿಗೆ ಬಿಟ್ಟು ಕೊಡಬೇಕಾಯಿತು. ಇದಕ್ಕೆ ಬದಲಾಗಿ 1815ರಲ್ಲಿ ವಿಯೆನ್ನ ಕಾಂಗ್ರೆಸ್ ಕೌಲಿನಂತೆ ಇವನಿಗೆ ಲೂಕ ಪ್ರಾಂತ್ಯ ಸೇರಿತು. 1847ರಲ್ಲಿ ಪಾರ್ಮ ಮತ್ತು ಪ್ಯಾಚನ್ಸ ಪ್ರಾಂತ್ಯಗಳು 2ನೆಯ ಚಾಲ್ರ್ಸ್ ಲೂಯಿಗೆ ಸೇರಿದುವು. ಇದೇ ಸಮಯದಲ್ಲಿ ಲೂಕ ಪ್ರಾಂತ್ಯ ಕೈಬಿಟ್ಟುಹೋಗಿ ಟಸ್ಕೆನಿಗೆ ಸೇರಿತು. 1849ರಲ್ಲಿ ಚಾಲ್ರ್ಸ್ ತನ್ನ ಮಗ 3ನೆಯ ಚಾಲ್ರ್ಸ್‍ಗೆ ರಾಜ್ಯವನ್ನು ಬಿಟ್ಟುಕೊಟ್ಟ. 3ನೆಯ ಚಾಲ್ರ್ಸ್ 5 ವರ್ಷಗಳ ಕಾಲ ಆಳಿದ. 1854ರಲ್ಲಿ ಇವನು ಕೊಲ್ಲಲ್ಪಟ್ಟ. ಇವನ ಮಗ ರಾಬರ್ಟ್ 5 ವರ್ಷ ಆಳಿದ. 1860ರಲ್ಲಿ ಈ ಪ್ರಾಂತ್ಯಗಳನ್ನು ಇಟಲಿಯ ವಿಕ್ಟರ್ ಇಮಾನ್ಯುಯೆಲ್ ದೊರೆ ಹೊಸ ಇಟಲಿ ರಾಜ್ಯದ ಪ್ರಾಂತ್ಯಗಳಾಗಿ ಸೇರಿಸಿ ಕೊಂಡ. ಅಲ್ಲಿಗೆ ಬೂರ್ಬನ್ನರ ಈ ವಿಭಾಗದ ಆಡಳಿತ ಕೊನೆಗೊಂಡಿತು.

ನೇಪಲ್ಸ್ ಮತ್ತು ಸಿಸಿಲಿಯ ಬೂರ್ಬನ್ನರು: ಇವರ ಪೈಕಿ ಮೊದಲನೆಯವನು ಸ್ಪೇನಿನ ದೊರೆ 3ನೆಯ ಚಾಲ್ರ್ಸ್ (1734-59). ಇವನು 1759ರಲ್ಲಿ ಸ್ಪೇನಿನ ಬೂರ್ಬನ್ನರಿಗೆ ದೊರೆಯಾದ. ಇವನ 3ನೆಯ ಮಗ ಫರ್ಡಿನಾಂಡ್ ಈ ರಾಜ್ಯಗಳಿಗೆ ದೊರೆಯಾದ. ನೆಪೋಲಿಯನ್ ಇವನನ್ನು ರಾಜ್ಯ ಭ್ರಷ್ಟನನ್ನಾಗಿ ಮಾಡಿದ. ಆದರೆ 1816ರಲ್ಲಿ ಮತ್ತೆ 1ನೆಯ ಫರ್ಡಿನಾಂಡ್ ಎಂಬ ಬಿರುದಿನಿಂದ ರಾಜ್ಯ ಸಂಪಾದಿಸಿದ. 1825ರಲ್ಲಿ ಇವನ ಮಗ ಫ್ರಾನ್ಸಿನ ದೊರೆಯಾದ. 1830ರಲ್ಲಿ ಆತನ ಮಗ 2ನೆಯ ಫರ್ಡಿನಾಂಡ್ ರಾಜನಾದ. 1859ರಲ್ಲಿ ಇವನು ಕಾಲವಾದ ಮೇಲೆ ಇವನ ಮಗ 2ನೆಯ ಫ್ರಾನ್ಸಿಸ್ ಪಟ್ಟಕ್ಕೆ ಬಂದ. ಆದರೆ ಮರು ವರ್ಷವೇ ಗಾರಿಬಾಲ್ಡಿಯ ಕ್ರಾಂತಿಕಾರಕ ಸೈನ್ಯಗಳು ರಾಜ್ಯವನ್ನು ಕಸಿದು ಕೊಂಡವು. ಅದು ಸಂಯುಕ್ತ ಇಟಲಿಯ ಭಾಗವಾಯಿತು.

(ಬಿ.ಎಸ್.ಎನ್.)