ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬೆಂಡು

ವಿಕಿಸೋರ್ಸ್ದಿಂದ

ಬೆಂಡು

 ಫ್ಯಾಬೇಸೀ ಕುಟುಂಬದ ಪ್ಯಾಪಿಲಿಯೋನೇಸೀ ಉಪಕುಟುಂಬಕ್ಕೆ ಸೇರಿದ ಮೂಲಿಕೆ ಸಸ್ಯ (ಸೋಲ ಪಿತ್).  ಕೆರೆ ಬೆಂಡು, ಅಲಗಿನಗಿಡ, ತನಕಲಿ ಪರ್ಯಾಯ ನಾಮಗಳು.  ಎಸ್ಕೈನೋಮೀನ್ ಆಸ್ಪರ ಇದರ ಸಸ್ಯ ವೈಜ್ಞಾನಿಕ ಹೆಸರು.  ಇದು ಸುಮಾರು 2-4 ಮೀ ಎತ್ತರಕ್ಕೆ ಬೆಳಯುವ ಜಲಸಸ್ಯ.  ಕೆರೆಕೊಳಗಳ ಅಂಚುಗಳಲ್ಲಿಯೂ ಜೌಗುಭೂಮಿಗಳಲ್ಲಿಯೂ ಬೆಳೆಯುತ್ತದೆ.  ಕಾಂಡದ ತುಂಬ ಹಗುರ ಬೆಂಡು ಇರುವುದರಿಂದ ಕಾಂಡ ನೀರಿನ ಮೇಲೆ ತೇಲುತ್ತದೆ.  ಎಲೆಗಳು ಸಂಯುಕ್ತ ಮಾದರಿಯವು; ಗರಿ ರೂಪಗಳಲ್ಲಿವೆ.  ಎಲೆಗಳ ಕಕ್ಷೆಗಳಲ್ಲೊ ರೆಂಬೆಗಳ ತುದಿಯಲ್ಲೋ ರೆಸೀಮ್ ಮಾದರಿಯ ಹೂಗೊಂಚಲು ಮೂಡುವುವು.  ಹೂಗಳು ದ್ವಿಲಿಂಗಿಗಳು, ಹಳದಿ ಇಲ್ಲವೆ ನೇರಿಳೆ ಬಣ್ಣದವು.  ಪ್ರತಿಹೂವಿನಲ್ಲಿ 5 ಪುಷ್ಪ ಪತ್ರಗಳು, 5 ದಳಗಳು, 10 ಕೇಸರಗಳು ಹಾಗೂ ಒಂದೇ ಕಾರ್ಪೆಲಿನಿಂದ ರಚಿತವಾದ ಉಚ್ಚಸ್ಥಾನದ ಅಂಡಾಶಯ ಉಂಟು.  ಕಾಯಿ 2-10 ಖಂಡಗಳುಳ್ಳ ಲೊಮೆಂಟಮ್ ಎಂಬ ಬಗೆಯದು.  

ಬೆಂಡು ಪಶ್ಚಿಮ ಬಂಗಾಳ, ಅಸ್ಸಾಮ್, ಬರ್ಮಗಳಲ್ಲೂ ದಕ್ಷಿಣ ಭಾರತದಲ್ಲೂ ಕಾಣದೊರೆಯುತ್ತದೆ. (ಕೆ.ಎನ್.ಜಿ.)