ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬೆಂಡೆ

ವಿಕಿಸೋರ್ಸ್ದಿಂದ

ಬೆಂಡೆ ಮಾಲ್ವೇಸೀ ಕುಟುಂಬಕ್ಕೆ ಸೇರಿದ ದ್ವಿದಳ ಸಸ್ಯ. ಇದರ ವೈಜ್ಞಾನಿಕ ಹೆಸರು ಹೈಬಿಸ್ಕಸ್ ಎಸ್ಕ್ಯುಲೆಂಟಸ್ ಅಥವಾ ಅಬಲ್‍ಮಾಸ್ಕಸ್ ಎಸ್ಕ್ಯುಲೆಂಟಸ್. ಇದನ್ನು ಹಿಂದಿಯಲ್ಲಿ ಬಿಂಡಿ. ಇಂಗ್ಲಿಷಿನಲ್ಲಿ ಲೇಡಿಸ್ ಫಿಂಗರ್ ಮತ್ತು ಸ್ಪ್ಯಾನಿಷ್ ಭಾಷೆಯಲ್ಲಿ ಗೂಂಬೊ ಎಂದು ಕರೆಯುತ್ತಾರೆ. ಬೆಂಡೆಯ ಉಗಮಸ್ಥಾನ ಆಫ್ರಿಕಾ ಖಂಡದ ಉಷ್ಣವಲಯವೆಂದು ಸಸ್ಯ ವಿಜ್ಞಾನಿಗಳ ಅಭಿಪ್ರಾಯ. 1216ಕ್ಕಿಂತ ಪೂರ್ವದಲ್ಲಿ ಯೂರೊಪಿಯನ್ನರು ಇದನ್ನು ಬೆಳೆಸುತ್ತಿದ್ದರು. ಅಲ್ಲಂದೀಚೆಗೆ ಇದನ್ನು ಉಷ್ಣವಲಯ ಮತ್ತು ಸಮಶೀತೋಷ್ಣವಲಯಗಳೆರಡರಲ್ಲೂ ಬೆಳೆಸಲಾಗುತ್ತದೆ. ಇದು ಸುಮಾರು 2 ಮೀ. ಎತ್ತರದವರೆಗೆ ಬೆಳೆಯುತ್ತದೆ. ಸಾಮಾನ್ಯವಾಗಿ ಕವಲೊಡೆಯದಿರದ ಉದ್ದನೆಯ ನೀಳವಾದ ಕಾಂಡ ಮತ್ತು ತಾಯಿ ಬೇರು ಸಮೂಹ ಇರುವುವು. ಕಾಂಡದ ಮೇಲೆ ಸಣ್ಣ ರೋಮಗಳಿವೆ. ಕಾಂಡದಲ್ಲಿ ಸರಳವಾದ ಮತ್ತು ಅಂಗೈಯಾಕೃತಿ ಹೋಲುವ ಅನೇಕ ಎಲೆಗಳಿವೆ. ಎಲೆಯ ಅಲಗು ಭಾಗದಲ್ಲಿ ರೆಟಿಕ್ಯುಲೇಟ್ ನಾಳವಿನ್ಯಾಸ ಇದೆ.

ಸಸ್ಯ ಚೆನ್ನಾಗಿ ಬೆಳೆದ ಬಳಿಕ ಎಲೆಯ ಕಂಕುಳಲ್ಲಿ ಅಥವಾ ಕಾಂಡದ ತುದಿಯಲ್ಲಿ ಬಿಡಿ ಬಿಡಿಯಾಗಿ ಹೂ ಬಿಡುತ್ತದೆ. ಈ ಮಾದರಿಯ ಹೂವಿಗೆ ಸಾಲಿಟರಿ ಸೈರ್ಮ ಎಂದು ಹೆಸರು. ಪ್ರತಿಯೊಂದು ಹೂವಿನಲ್ಲೂ ಪುಷ್ಪ ಪಾತ್ರೆ, ಪುಷ್ಪದಳ ಮಂಡಲ, ಪುಂಕೇಸರ ಮಂಡಲ ಮತ್ತು ಸ್ತ್ರೀ ಭಾಗ ಎಂಬ ನಾಲ್ಕು ಮುಖ್ಯ ಭಾಗ ಉಂಟು. ಎಂದೇ ಇದು ಪೂರ್ಣ ಪುಷ್ಪ. ಇದುದ್ವಿಲಿಂಗ ಪುಷ್ಪ. ಇದರಲ್ಲಿ ಆಕ್ಟಿನೋಮಾರ್ಫಿಕ್ ಸಿಮೆಟ್ರಿ ಇದೆ. ಪಾತ್ರೆಯಲ್ಲಿ ಎಪಿಕೇಲಿಕ್ಸ್ ಉಂಟು. ಪಾತ್ರೆ ಹೂವಿನ ಹೊರವಲಯ. ಇದು ಒಟ್ಟಿಗೆ ಕೂಡಿಕೊಂಡಿರುವ ಐದು ಪುಷ್ಪ ಪತ್ರಗಳಿಂದಾಗಿದೆ. ದಳಗಳು ಕೆಳಭಾಗದಲ್ಲಿ ಕೂಡಿಕೊಂಡೊ ಮೇಲ್ಭಾಗದಲ್ಲಿ ಬಿಡಿಬಿಡಿಯಾಗಿಯೂ ಇವೆ. ಇವುಗಳಿಗೆ ಆಕರ್ಷಣೀಯ ಬಣ್ಣ ಇದೆ. ಪುಷ್ಪ ಪತ್ರಗಳು ಮತ್ತು ಪುಷ್ಪದಳಗಳು ಕ್ರಮವಾಗಿ ವಾಲ್ವೇಟ್ ಮತ್ತು ಟ್ವಿಸ್ಟಡ್ ಈಸ್ಟೈವೇಷನ್ನನ್ನು ಪ್ರದರ್ಶಿಸಿತ್ತವೆ.

ಮೂರನೆಯ ವಲಯವಾದ ಪುಂಕೇಸರ ಮಂಡಲ ಹೂವಿನ ಗಂಡು ಭಾಗ. ಇದು ಅನೇಕ ಪುಂಕೇಸರ ಗಳಿಂದಾಗಿದೆ. ಪ್ರತಿಯೊಂದು ಪುಂಕೇಸರದಲ್ಲಿಯೂ ಪರಾಗಕೋಶ ಮತ್ತು ಪುಂಕೇಸರದಂಡವಿದ್ದು ಎಲ್ಲ ದಂಡಗಳೂ ಒಟ್ಟಿಗೆ ಕೂಡಿಕೊಂಡು ಪುಂಕೇಸರ ನಳಿಕೆಯಾಗಿವೆ. ಇದಕ್ಕೆ ಮಾನಡಲ್ಫಸ್ ಸ್ಥಿತಿ ಎಂದು ಹೆಸರು. ಪರಾಗಕೋಶಗಳಿಗೆ ಹುರುಳಿ ಬೀಜದ ಆಕಾರವಿದೆ. ಪ್ರತಿಯೊಂದೂ ಬಿಡಿ ಬಿಡಿಯಾಗಿದ್ದು ಅನೇಕ ಪರಾಗರೇಣುಗಳನ್ನು ಉತ್ಪತ್ತಿ ಮಾಡುತ್ತವೆ.

ಸ್ತ್ರೀ ಭಾಗ ಪುಷ್ಪದ ಮಧ್ಯಭಾಗದಲ್ಲಿದೆ. ಇದರಲ್ಲಿ ಅಂಡಾಶಯ, ಶಲಾಕೆ ಮತ್ತು ಶಲಾಕಾಗ್ರ ಎಂಬ ಮೂರು ಮುಖ್ಯ ಭಾಗ ಉಂಟು. 5 ರಿಂದ 10 ಕಾರ್ಪೆಲುಗಳಿಂದಾಗಿರುವುದು. ಎಲ್ಲ ಕಾರ್ಪೆಲುಗಳೂ ಕೂಡಿ ಕೊಂಡಿರುವುವು ಈ ಸ್ಥಿತಿಗೆ ಸಿನ್‍ಕಾರ್ಪಸ್ ಎಂದು ಹೆಸರು. ಹೂವಿನಲ್ಲಿ ಅಂಡಾಶಯ ಉಚ್ಛ್ರಾಯ ಸ್ಥಿತಿಯಲ್ಲಿವೆ.

ಬೆಂಡೆ ಸಸ್ಯದಲ್ಲಿ ಕೀಟಗಳಿಂದ ಪರಕೀಯ ಪರಾಗಸ್ಪರ್ಶ ನಡೆಯುತ್ತದೆ. ಈ ವಿಧಾನಕ್ಕೆ ಎಂಟಮೋಫಿಲಿ ಎಂದು ಹೆಸರು. ಬೆಂಡೆ ಸಸ್ಯ ದ್ವಿಲಿಂಗ ಪುಷ್ಪಗಳನ್ನು ಬಿಟ್ಟರೂ ಇದರಲ್ಲಿ ಸ್ವಕೀಯ ಪರಾಗಸ್ಪರ್ಶ ನಡೆಯುವುದಿಲ್ಲ. ಕಾರಣ ಹೂವಿನ ಗಂಡು ಮತ್ತು ಹೆಣ್ಣು ಭಾಗಗಳು ಬೇರೆ ಬೇರೆ ಕಾಲದಲ್ಲಿ ಬಲಿಯುತ್ತದೆ. ಇಲ್ಲಿ ಮೊದಲು ಪುಂಕೇಸರಗಳು ಬಲಿಯುವುದರಿಂದ ಈ ಸ್ಥಿತಿಗೆ ಪ್ರಿಟ್ಯಾಂಡ್ರಿ ಎಂದು ಹೆಸರು. ಪರಾಗ ಸ್ಪರ್ಶ ಕ್ರಿಯೆ ಆದಮೇಲೆ ಪರಾಗರೇಣುಗಳು ಬೆಳವಣಿಗೆ ಹೊಂದಿ ಒಂದೊಂದು ಎರಡೆರಡು ಗಂಡು ಬೀಜಾಣುಗಳನ್ನು ಉತ್ಪತ್ತಿ ಮಾಡುತ್ತವೆ. ಇವು ಗರ್ಭಧಾರಣೆಯಲ್ಲಿ ಭಾಗವಹಿಸುತ್ತವೆ. ಈ ಕ್ರಿಯೆ ಓವ್ಯೂಲಿನಲ್ಲಿ ನಡೆಯುತ್ತದೆ. ಗರ್ಭಧರಿಸಿದ ಓವ್ಯೂಲಿಗೆ ಬೀಜ ಎಂದು ಹೆಸರು. ಬೀಜಕ್ಕೆ ಕವಚ ಮತ್ತು ಭ್ರೂಣ ಇವೆ. ಸಾಮಾನ್ಯವಾಗಿ ಬೀಜಗಳಲ್ಲಿ ಭ್ರೂಣಾಹಾರ ಇರುವುದಿಲ್ಲ. ಬಲಿತ ಅಂಡಾಶಯಕ್ಕೆ ಹಣ್ಣು ಎಂದು ಹೆಸರು.

ಬೆಂಡೆಕಾಯಿ (ಹಣ್ಣು) ಸರಳ ಮತ್ತು ಶುಷ್ಕ ಫಲ. ಇದಕ್ಕೆ ಕ್ಯಾಪುಲಾರ್ ಫ್ರೊಟ್ ಎಂಬುದು ಸರಿಯಾದ ಹೆಸರು. ಎಳೆಯ ಬೆಂಡೆ ಕಾಯಿಯಲ್ಲಿ ಲೋಳೆ ವಸ್ತು ಇರುವುದು. ಕಾಯಿಗಳನ್ನು ಮೇಲೋಗರ ಮಾಡಲು ಹಸಿರು ತರಕಾರಿಯಾಗಿ ಉಪಯೋಗಿಸುತ್ತಾರೆ. ಬಲಿತ ಕಾಂಡ ಮತ್ತು ಹಣ್ಣುಗಳಿಂದ ನಾರು ತೆಗೆಯುತ್ತಾರೆ. ಆದರೆ ಗಣನೀಯ ಪ್ರಮಾಣದಷ್ಟು ನಾರು ಪಡೆಯಲು ಸಾಧ್ಯವಾಗದು. ಅಲ್ಪ ಪ್ರಮಾಣದಲ್ಲಿ ದೊರೆಯುವ ಈ ನಾರನ್ನು ಕಾಗದ ಮತ್ತು ಬಟ್ಟೆ ತಯಾರಿಕೆಯಲ್ಲಿ ಬಳಸುತ್ತಾರೆ. ಬೆಂಡೆಗಿಡ ಹತ್ತಿ ಬೆಳೆಯುವ ಹವೆ ಮತ್ತು ಮಣ್ಣಿನಲ್ಲಿ ಚೆನ್ನಾಗಿ ಬೆಳೆಯುತ್ತದೆ. ಇದರ ಬೆಳೆವಣಿಗೆಗೆ ಕಪ್ಪು ಮಣ್ಣು ಹಾಗೂ ಅಲ್ಯೂಮಿನಿಯಮ್ ಮಣ್ಣು ಪ್ರಶಸ್ತವಾದುದು. ಇಂಥ ಮಣ್ಣು ಇದ್ದು ವಾರ್ಷಿಕವಾಗಿ 75 ರಿಂದ 250 ಸೆಂ.ಮೀ. ಮಳೆ ಮತ್ತು 21 ಯಿಂದ 45 ಉಷ್ಣತೆ ಇರುವ ಪ್ರದೇಶಗಳಲ್ಲಿ ಬೆಂಡೆ ಹುಲುಸಾಗಿ ಬೆಳೆದು ಹೆಚ್ಚಿನ ಇಳುವರಿ ಕೊಡುತ್ತದೆ. (ಎ.ಎನ್.ಕೆ.ಜಿ.)